Homeಮುಖಪುಟನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

- Advertisement -
- Advertisement -

‘ಸ್ಪೋರ್ಟ್ಸ್ ಡ್ರಾಮಾ’ ಎಂಬ ಜಾನರ್‌ನಲ್ಲಿ ನಾವು ಸಾಕಷ್ಟು ಸಿನಿಮಾಗಳನ್ನು ಈವರೆಗೆ ನೋಡಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಕ್ರೀಡೆಯನ್ನು ಮುಖ್ಯವಾಗಿಟ್ಟುಕೊಂಡು ಬಂದಿರುವ ಹಲವು ಸಿನಿಮಾಗಳು ಪ್ರಚಂಡ ಯಶಸ್ಸನ್ನೂ ಗಳಿಸಿವೆ. ಆದರೆ ಈ ಕ್ರೀಡಾ ಜಗತ್ತಿನ ಸುತ್ತಲಿನ ಅಸ್ಪೃಶ್ಯ ಜಗತ್ತನ್ನು ಮುಟ್ಟಿದವರು ತೀರಾ ಕಡಿಮೆ.

ಅಮೆಜಾ‌ನ್‌ ಪ್ರೈಮ್‌ನಲ್ಲಿ ತೆರೆಕಂಡ ಪ.ರಂಜಿತ್‌ ನಿರ್ದೇಶನದ ‘ಸರ್ಪಟ್ಟ ಪರಂಬರೈ’ ಕ್ರೀಡಾ ಕಥನಕ್ಕೆ ಹೊಸ ರೂಪ ನೀಡಿತ್ತು. ಈ ನೆಲದ ಬೇರುಗಳನ್ನು ಸ್ಪರ್ಶಿಸಲು ಯತ್ನಿಸಿತ್ತು. ಸರ್ಪಟ್ಟ ಸಿನಿಮಾ ನೋಡುತ್ತಿದ್ದರೆ ಬಾಕ್ಸಿಂಗ್ ನಂತಹ ಕ್ರೀಡೆಯೊಳಗೆ ಪ್ರೇಕ್ಷಕನೂ ಪೆಟ್ಟು ತಿನ್ನುವುದು, ಪೆಟ್ಟು ಕೊಡುವುದು ಸಾಗುತ್ತದೆ. ಬಹುಶಃ ಶ್ರಮಸಂಸ್ಕೃತಿಯೊಂದಿಗೆ ಬೆರೆತ ನೆಲಮುಖಿ ಕ್ರೀಡೆಗಳಿಗೆ ಮಾತ್ರ ಈ ಥರದ ಅನುಭವ ತರಲು ಸಾಧ್ಯವೆನಿಸುತ್ತದೆ. ಅಲ್ಲೂ ಪಿತೂರಿಗಳಿವೆ, ಕ್ರೀಡಾ ಮನೋಭಾವವಿದೆ, ಮನುಷ್ಯನ ಪ್ರತಿಷ್ಟೆ ಇದೆ, ರಾಜಕೀಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಟೆ ಹೊರುವವನ ಶ್ರಮವನ್ನೂ ಪ್ರತಿನಿಧಿಸುವ ಕ್ರೀಡಾಕ್ಷೇತ್ರವಿದೆ. ಇದು ಪ.ರಂಜಿತ್‌ ಕಟ್ಟಿಕೊಟ್ಟ ಲೋಕ. ಬೇರೆ ಯಾರೋ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಪ.ರಂಜಿತ್ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಇರುವ ವ್ಯತ್ಯಾಸ.

ಪ.ರಂಜಿತ್‌ ನೀಡಿದ ಈ ಸುಮಧುರ ಅನುಭವದ ಬಳಿಕ ನಾಗರಾಜ್‌ ಮಂಜುಳೆಯವರು ನಿರ್ದೇಶಿಸಿರುವ ‘ಝುಂಡ್‌’ (ಹಿಂದಿ) ಸಿನಿಮಾ ಅಂಥದ್ದೇ ಕಥನವನ್ನು ಹೊತ್ತು ತಂದಿದೆ. ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

ಒಲಿಂಪಿಕ್ಸ್‌, ಫುಟ್ಬಾಲ್‌ ವರ್ಡ್‌ಕಪ್‌ ನಡೆದಾಗಲೆಲ್ಲ- ಭಾರತವೇಕೆ ಈ ಕ್ಷೇತ್ರದಲ್ಲಿ ಪ್ರಜ್ವಲಿಸುವುದಿಲ್ಲ, ಸಣ್ಣಪುಟ್ಟ ರಾಷ್ಟ್ರಗಳೇ ಹಲವು ಚಿನ್ನದ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಮುಡಿಗೇರಿಸಿಕೊಳ್ಳುವಾಗ, 130 ಕೋಟಿ ಜನಸಂಖ್ಯೆಯ ಭಾರತವೇಕೆ ಪದಕಗಳನ್ನು ಗೆಲ್ಲುವುದಿಲ್ಲ? ನಾವೇಕೆ ಸಾಕರ್‌ನಂತಹ ವಿಶ್ವವಿಖ್ಯಾತ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿಲ್ಲ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಭಾರತದ ಜಾತಿ ವ್ಯವಸ್ಥೆಗೂ ಕ್ರೀಡೆಯಲ್ಲಿ ಭಾರತ ಹಿಂದುಳಿದಿರುವುದಕ್ಕೂ ಇಲ್ಲಿನ ರೋಗಗ್ರಸ್ತ ವ್ಯವಸ್ಥೆಗೂ ಕಾರಣಗಳಿರುವುದನ್ನು ಢಾಳಾಗಿ ಶೋಧಿಸುತ್ತದೆ ‘ಝುಂಡ್’.

ಇದನ್ನೂ ಓದಿರಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

‘ಸ್ಲಮ್‌ ಸಾಕರ್‌ ಇನ್‌ ಇಂಡಿಯಾ’ ಸ್ಥಾಪಕರಾದ ಸಾಮಾಜಿಕ ಕಾರ್ಯಕರ್ತ ವಿಜಯ್ ಬರ್ಸೆ ಅವರ ಜೀವನದಿಂದ ಪ್ರೇರಿತವಾದ ‘ಝುಂಡ್‌’ ವಿಜಯ್ ಬರ್ಸೆಯವರ ಜೀವನ ಕಥೆಯಾಗಿಯಷ್ಟೇ ಉಳಿಯುವುದಿಲ್ಲ. ಪೂರ್ಣ ಪ್ರಮಾಣದ ಕ್ರೀಡಾ ಕಥನವೂ ಅಲ್ಲ. ಭಾರತ ಸಾಮಾಜಿಕ ವ್ಯವಸ್ಥೆಯನ್ನು ಕ್ರೀಡೆಯ ನೆಪದಲ್ಲಿ ‘ಝುಂಡ್‌’ ಹೇಳಲು ಯತ್ನಿಸಿದೆ. ಪ್ರತಿಭೆಗಂಟಿರುವ ಅಸ್ಪೃಶ್ಯ ಜಗತ್ತನ್ನು ಬಿಚ್ಚಿಡುತ್ತದೆ.

ಫುಟ್‌ಬಾಲ್‌ ಕೋಚ್‌ ವಿಜಯ್‌ ಬರ್ಸೆ ಒಂದು ದಿನ ನಡೆದು ಹೋಗುತ್ತಿದ್ದಾಗ ಸ್ಲಮ್‌ ಹುಡುಗರು ಖಾಲಿ ಡಬ್ಬವನ್ನೇ ಫುಲ್‌ಬಾಲ್‌ ಮಾಡಿಕೊಂಡು ಆಟವಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಹುಡುಗರು ಶಾಲಾ, ಕಾಲೇಜು ಮೆಟ್ಟಿಲೇರಿದವರಲ್ಲ. ಗಾಂಜಾ ಸೇವನೆ, ಮದ್ಯಪಾನ, ಧೂಮಪಾನ- ಹೀಗೆ ಹಲವು ಚಟಗಳ ದಾಸರಾದವರು. ಚಿಲ್ಲರೆ ಕಳ್ಳತನ ಮಾಡುವವರು. ಹೀಗೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಹುಡುಗರಲ್ಲಿ ಫುಲ್‌ಬಾಲ್‌ ಕೋಚ್‌ ಭಾರತದ ಭವಿಷ್ಯವನ್ನು ಕಾಣುತ್ತಾರೆ. ಮಾರನೇ ದಿನ ಫುಟ್‌ಬಾಲ್‌ ತಂದು, ತಾನೇ ದುಡ್ಡು ಕೊಟ್ಟು ಆಟವಾಡಿಸುತ್ತಾರೆ. ಹೀಗೆ ಕೆಲವು ದಿನ ದುಡ್ಡು ಕೊಟ್ಟು ಆಡವಾಡಿಸಿ, ಫುಟ್‌ಬಾಲ್‌ನ ರುಚಿಯನ್ನು ಆ ಹುಡುಗರಿಗೆ ಹತ್ತಿಸುತ್ತಾರೆ. ಒಂದು ದಿನ, “ನನ್ನ ಬಳಿ ದುಡ್ಡಿಲ್ಲ” ಎಂದು ಕೋಚ್‌ ಮನೆ ಬಾಗಿಲ ಹಾಕಿದಾಗ, “ನೀವು ದುಡ್ಡು ಕೊಡದಿದ್ದರೆ ಪರವಾಗಿಲ್ಲ, ಫುಲ್‌ಬಾಲ್‌ ಕೊಡಿ” ಎಂದು ಸ್ಲಮ್‌ ಹುಡುಗರು ಕೇಳುವಲ್ಲಿಗೆ ಮೊದಲ ಪರಿವರ್ತನೆ ಆರಂಭವಾಗುತ್ತದೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ಸ್ಲಮ್‌ ಪಕ್ಕದಲ್ಲಿಯೇ ಕಾಲೇಜು. ಆ ಕಾಲೇಜಿಗೆ ದೊಡ್ಡದಾದ ಕಾಂಪೌಂಡ್‌. ಶುಚಿಯಾಗಿರುವ ಅಂಗಳ. ಸ್ಮಮ್‌ ಕಾಣದಂತೆ ಎತ್ತರವಾದ ಕಟ್ಟಡ. ಸ್ಲಮ್‌ ಹಾಗೂ ಕಾಲೇಜಿನ ಅಂಗಳವನ್ನು ಒಂದೇ ಫ್ರೇಮ್‌ನಲ್ಲಿ ಹಿಡಿಯುವ ಹಲವು ದೃಶ್ಯಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಒಂದು ಅಂಬಾನಿ ಭಾರತವಾದರೆ ಮತ್ತೊಂದು ಅಸ್ಪೃಶ್ಯ ಭಾರತ. ಸ್ಲಮ್‌ನಲ್ಲಿರುವ ಒಂದಿಷ್ಟು ಜಾಗದಲ್ಲೇ ಹುಡುಗರು ಫುಟ್‌ಬಾಲ್ ಆಡುತ್ತಾರೆ. ಯಾವುದೇ ಸರಿಯಾದ ತರಬೇತಿ ಇಲ್ಲದ ಸ್ಲಮ್‌ ಹುಡುಗರು, ಸಾಕರ್‌ ತರಬೇತಿ ಪಡೆದ ಹುಡುಗರನ್ನು ಸೋಲಿಸುವಲ್ಲಿಗೆ ಎರಡನೇ ಅಧ್ಯಾಯ ಆರಂಭವಾಗುತ್ತದೆ. ಆ ಸ್ಲಮ್‌ ಹುಡುಗರ ಒಡಲ ಸಂಕಟವೂ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ.

ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಲ್ಲಿ ಇಡೀ ಸ್ಲಮ್‌ ಕುಣಿದು ಕುಪ್ಪಳಿಸುವ ದೃಶ್ಯವನ್ನು ನಾಗರಾಜ್‌ ಮಂಜುಳೆ ಚಿತ್ರಿಸಿದ್ದಾರೆ. ಬಾಲಿವುಡ್‌ ಸಿನಿಮಾ ಲೋಕದಲ್ಲಿ ಈವರೆಗೆ ಗಣಪತಿ ಜಯಂತಿ, ಶಿವಾಜಿ ಜಯಂತಿಯನ್ನು ನೋಡುತ್ತಿದ್ದೆವು. ಇದೇ ಮೊದಲ ಬಾರಿಗೆ ಅಂಬೇಡ್ಕರ್‌‌ ಜಯಂತಿಯನ್ನು ನಾಗರಾಜ್‌ ಮಂಜುಳೆ ಪ್ರದರ್ಶಿಸಿದ್ದಾರೆ ಎಂದು ಅನೇಕರು ಪ್ರಶಂಸಿಸಿದ್ದಾರೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ರಾಷ್ಟ್ರಮಟ್ಟದ ಸ್ಲಮ್‌ ಟೂರ್ನಿಮೆಂಟ್‌ ನಡೆಸುವುದು ಹಾಗೂ ಸ್ಲಮ್‌ ಹುಡುಗರು ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗೆ ಆಯ್ಕೆಯಾಗುವುದರ ಕುರಿತು ಸಿನಿಮಾದ ದ್ವಿತಿಯಾರ್ಧ ಸಾಗುತ್ತದೆ. ಸಣ್ಣಪುಟ್ಟ ಕ್ರೈಮ್‌ನಲ್ಲಿ ಸಿಲುಕಿರುವ ಈ ಹುಡುಗರು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಅದ್ಭುತವಾಗಿ ಫುಟ್ಬಾಲ್‌ ಕಲಿತ್ತಿದ್ದಕ್ಕಿಂತ ಇಂಟರ್‌ ನ್ಯಾಷನಲ್‌ ಟೂರ್ನಿಗೆ ಹೋಗುವುದಕ್ಕಾಗಿ ಈ ಹುಡುಗರು ಎದುರಿಸುವ ಸವಾಲೇ ಇಡೀ ಚಿತ್ರದ ನಿಜದ ಸಂದೇಶ. ಸರಿಯಾದ ದಾಖಲೆಗಳಿಲ್ಲ. ಅಧಿಕಾರಿ ವರ್ಗದ ಸಹಕಾರವಿಲ್ಲ. ಪ್ರೋತ್ಸಾಹ ದೊರಕುವುದಿಲ್ಲ. ಓಡುವ ಕಾಲಿಗೆ ಗುಂಡು ಕಟ್ಟಿದ ವ್ಯವಸ್ಥೆ ನಮ್ಮ ಕಣ್ಣೆದುರು ನಿಲ್ಲುತ್ತದೆ. ಈ ಸಮಸ್ಯೆಗಳ ಬೇರುಗಳು ಯಾವುವು? ಅದೇ ಜಾತಿ ವ್ಯವಸ್ಥೆ. ಭಾರತದ ಪ್ರಗತಿಯ ಕಾಲಿಗೆ ಕಟ್ಟಿದ ಗುಂಡು- ಈ ಜಾತಿ, ಅಸ್ಪೃಶ್ಯ ಸಮಾಜ. ನ್ಯಾಯಾಧೀಶರ ಮುಂದೆ ನಿಂತು ಕೋಚ್‌ ಹೇಳುತ್ತಾರೆ- “ತರಬೇತಿ ಶಾಲೆಯಷ್ಟೇ ಭಾರತವಲ್ಲ. ಅದರಾಚೆಯ ಭಾರತವಿದು.”

ಅಜಯ್‌ ಅತುಲ್‌ ಅವರ ಸಂಗೀತ ಸಿನಿಮಾ ಕಥೆಯ ತೂಕವನ್ನು ಹೆಚ್ಚಿಸಿದೆ. ಹೊಸ ಹುಡುಗರಿಂದ ಅಭಿನಯವನ್ನು ಹೊರತೆಗೆಯುವಲ್ಲಿ ನಾಗರಾಜ್‌ ಯಶಸ್ವಿಯಾಗಿದ್ದಾರೆ. ಸುಮಾರು ಮೂರು ಗಂಟೆ ಇರುವ ‘ಝುಂಡ್‌’ ಮೊದಲಾರ್ಧ ವೇಗವಾಗಿದ್ದು, ದ್ವಿತೀಯಾರ್ಧ ಸ್ವಲ್ಪ ನಿಧಾನವೆನಿಸಿದರೂ ವ್ಯವಸ್ಥೆಯನ್ನು ವಿಮರ್ಶೆಗೊಡ್ಡುತ್ತದೆ.


ಇದನ್ನೂ ಓದಿರಿ: ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...