Homeಮುಖಪುಟಸಾರ್ವಜನಿಕ ಸ್ಥಳಗಳಲ್ಲಿನ ನಮಾಜ್‌ ಅನ್ನು ಸಹಿಸುವುದಿಲ್ಲ: ಹರಿಯಾಣ ಸಿಎಂ

ಸಾರ್ವಜನಿಕ ಸ್ಥಳಗಳಲ್ಲಿನ ನಮಾಜ್‌ ಅನ್ನು ಸಹಿಸುವುದಿಲ್ಲ: ಹರಿಯಾಣ ಸಿಎಂ

- Advertisement -
- Advertisement -

ಗುರುಗಾವ್‌ನಲ್ಲಿನ ತೆರೆದ ಸಾರ್ವಜನಿಕ ಸ್ಥಳಗಳಲ್ಲಿನ ನಮಾಜ್‌ ಮಾಡುವುದನ್ನು ಸಹಿಸುವುದಿಲ್ಲ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ. ಈ ಮೊದಲು ಅಲ್ಲಿನ ಹಲವಾರು ಸ್ಥಳಗಳಲ್ಲಿ ನಮಾಜ್ ಮಾಡಲು ಸ್ಥಳೀಯ ಆಡಳಿತ ಅವಕಾಶ ಮಾಡಿಕೊಟ್ಟಿದ್ದನ್ನು ವಾಪಸ್ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತಿ ಶುಕ್ರವಾರ ಗುರುಗಾವ್‌ನ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಹಿಂದಿನಿಂದಲೂ ಮುಸ್ಲಿಮರು ನಮಾಜ್ ಮಾಡುತ್ತಾ ಬಂದಿದ್ದರು. ಆದರೆ ಹಿಂದುತ್ವ ಸಂಘಟನೆಗಳ ಆಕ್ಷೇಪ ಮತ್ತು ತಡೆಯಿಂದಾಗಿ ಕೆಲ ತಿಂಗಳುಗಳಿಂದ ಇಲ್ಲಿ ನಮಾಜ್ ಮಾಡಲು ಅಡ್ಡಿಪಡಿಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಟ್ಟರ್ “ಈ ಸಮಸ್ಯೆಯನ್ನು ಬಗೆಹರಿಸುವಂತೆ ಡೆಪ್ಯುಟಿ ಕಮಿಷನರ್ ಮತ್ತು ಪೊಲೀಸರಿಗೆ ಸೂಚಿಸಿದ್ದೇನೆ. ಎಲ್ಲರೂ ತಮ್ಮ ಸ್ವಂತ ಸ್ಥಳಗಳಲ್ಲಿ ಪ್ರಾರ್ಥನೆ, ಪೂಜೆ, ನಮಾಜ್ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಧಾರ್ಮಿಕ ಕೇಂದ್ರಗಳನ್ನು ಅದಕ್ಕಾಗಿಯೇ ಸ್ಥಾಪಿಸಿದ್ದು ಅಲ್ಲಿಯೇ ಹೋಗಿ ಪ್ರಾರ್ಥನೆ ಮಾಡತಕ್ಕದ್ದು. ಆದರೆ ತೆರೆದ ಸಾರ್ವಜನಿಕ ಸ್ಥಳಗಳಲ್ಲಿನ ನಮಾಜ್‌ ಮಾಡುವುದನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಹಿಂದುತ್ವ ಸಂಘಟನೆಗಳು ಮುಸ್ಲಿಮರ ಪ್ರ್ರಾರ್ಥನೆಗೆ ಅಡ್ಡಿಪಡಿಸುತ್ತಿವೆ. ಸೆಕ್ಟರ್ 37 ರ ಸೈಟ್‌ನಲ್ಲಿ ಡಿಸೆಂಬರ್ 10 ರಂದು ಸಹ ಪ್ರಾರ್ಥನೆಗೆ ಅಡ್ಡಿಪಡಿಸಲಾಗಿದೆ. ಅಲ್ಲಿಗೆ ದೊಡ್ಡ ದೊಡ್ಡ ಲಾರಿಗಳು ಮತ್ತು ವಾಹನಗಳನ್ನು ತಂದು ನಿಲ್ಲಿಸಿದ್ದಲ್ಲದೆ ಜೈಶ್ರೀರಾಂ ಘೋಷಣೆ ಕೂಗಲಾಗಿದೆ. ಇಲ್ಲಿ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಜನರಲ್ ಬಿಪಿನ್ ರಾವತ್‌ರವರ ಸ್ಮರಣಾ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.

2018 ರಲ್ಲಿ ಇದೇ ರೀತಿಯ ಘರ್ಷಣೆಯಾಗಿ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಪ್ಪಂದ ನಡೆದು ಸೆಕ್ಟರ್ 37 ನಲ್ಲಿರುವ ಮೈದಾನವು ನಮಾಜ್‌ಗಾಗಿ ಮೀಸಲಿಡಲಾಗಿತ್ತು. ಅಂದು ಗೊತ್ತು ಪಡಿಸಲಾಗಿದ್ದ 29 ಸೈಟ್‌ಗಳಲ್ಲಿ ಇದೂ ಒಂದಾಗಿದೆ.

ಗುರ್ಗಾಂವ್‌ನ ಪಿಡಬ್ಲ್ಯೂಡಿ ವಿಶ್ರಾಂತಿ ಗೃಹದಲ್ಲಿ ಗುರುಗ್ರಾಮ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಜಿಎಂಡಿಎ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಟ್ಟರ್‌ರವರು, “ನಮಾಜ್‌ಗೆ ಅನುಮತಿ ನೀಡಬೇಕಾದ ಹಲವಾರು ಸ್ಥಳಗಳನ್ನು ಅವರು (ಮುಸ್ಲಿಂ ಸಮುದಾಯ) ಹೊಂದಿದ್ದಾರೆಂದು ಹೇಳಿದ್ದಾರೆ. ಅವರ ಕೆಲವು ಆಸ್ತಿಗಳು ಅಥವಾ ವಕ್ಫ್ ಬೋರ್ಡ್ ಅಡಿಯಲ್ಲಿ ಇರುವ ಆಸ್ತಿಗಳನ್ನು ಅತಿಕ್ರಮಿಸಲಾಗಿದೆ … ಅವು ವಾಪಸ್ ಅವರಿಗೆ ಹೇಗೆ ಲಭ್ಯವಾಗುವಂತೆ ಮಾಡಬಹುದು ಎಂಬುದನ್ನು ಚರ್ಚಿಸಲಾಗುತ್ತಿದೆ ಅಥವಾ ಅವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಸಮುದಾಯದವರೊಂದಿಗೆ ಚರ್ಚಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲಾಗುವುದು. ಬಹಿರಂಗವಾಗಿ ನಮಾಜ್ ಮಾಡುವುದರಿಂದ ಅಹಿತಕರ ಘಟನೆಗಳು ನಡೆಯುತ್ತವೆ, ನಾವು ಈ ಘರ್ಷಣೆಯನ್ನು ಮುಂದುವರಿಸಲು ಬಿಡುವುದಿಲ್ಲ. ಹಾಗಾಗಿ ಈ ಹಿಂದೆ ನಮಾಜ್‌ಗೆ ನೀಡಿದ್ದ ಅನುಮತಿಗಳನ್ನು ವಾಸಪ್ ಪಡೆದಿದ್ದೇವೆ. ಹೊಸದಾಗಿ ಮಾತುಕತೆ ನಡೆಯುತ್ತದೆ” ಎಂದು ಹೇಳಿದ್ದಾರೆ.

ನಮಾಜ್‌ಗೆ ಅಡ್ಡಿ ಹಿನ್ನೆಲೆಯಲ್ಲಿ ಹರಿಯಾಣ-ದೆಹಲಿ ಗಡಿಯಲ್ಲಿರುವ 5 ಸಿಖ್ ಗುರುದ್ವಾರಗಳ ಮೇಲ್ವಿಚಾರಣ ಸಮಿತಿಯು ತಮ್ಮ ಗುರುದ್ವಾರಗಳನ್ನು ಮುಸ್ಲಿಮರು ನಮಾಜ್ ಮಾಡಲು ಬಳಸಬಹುದು ಎಂದು ಆಹ್ವಾನ ನೀಡಿದೆ. ಬಹಳಷ್ಟು ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಹ ಸಲ್ಲಿಸಿದ್ದಾರೆ.

ಅಲ್ಲದೆ ಗುರುಗ್ರಾಮದ ಸೆಕ್ಟರ್‌ 12 ರಲ್ಲಿ ಕಿರಾಣಿ ಅಂಗಡಿ ನಡೆಸುವ ಅಕ್ಷಯ್ ಯಾದವ್ ಎಂಬುವವರು ನಮಾಜ್‌ಗಾಗಿ ತಮ್ಮ ಅಂಗಡಿ ಸ್ಥಳವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದು ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಬಹುದು ಎಂದು ಆಹ್ವಾನ ನೀಡಿದ್ದಾರೆ. ಒಂದು ಬಾರಿಗೆ 15 ಜನ ನಮಾಜ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಗುರುಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಲು ಹಿಂದುತ್ವ ಸಂಘಟನೆಗಳ ಅಡ್ಡಿ: ನಮ್ಮಲ್ಲಿಗೆ ಬನ್ನಿ ಎಂದ ಸಿಖ್ ಗುರುದ್ವಾರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read