ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.
ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ನಿತೀಶ್ ಕುಮಾರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ತಮ್ಮ ಸಚಿವ ಸಂಪುಟದ ಕೊನೆಯ ಸಭೆ ನಡೆಸಿದ ನಿತೀಶ್ ಕುಮಾರ್, ಸಂಪುಟ ವಿಸರ್ಜನೆಗೆ ಶಿಫಾರಸು ಮಾಡಿದರು. ಇದು ರಾಜೀನಾಮೆ ಸಲ್ಲಿಸುವ ಮುನ್ನ ಅನುಸರಿಸಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ.
ಉಪ ಮುಖ್ಯಮಂತ್ರಿಯಾಗಿದ್ದ ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.
ಈ ಮೂಲಕ ಬಿಹಾರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರು ಬಹುಶಃ ನಾಳೆ (ಏಪ್ರಿಲ್ 15, 2026) ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
2005ರಿಂದ ಸುಮಾರು ಎರಡು ದಶಕಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರ ಆಡಳಿತವು ಇಂದಿನ ರಾಜೀನಾಮೆಯೊಂದಿಗೆ ಕೊನೆಗೊಂಡಿದೆ.
ಇತ್ತೀಚೆಗೆ (ಮಾರ್ಚ್ 16, 2026) ರಾಜ್ಯಸಭೆಗೆ ಆಯ್ಕೆಯಾಗಿರುವ ನಿತೀಶ್ ಕುಮಾರ್ ಅವರು, ಏಪ್ರಿಲ್ 11ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.


