Homeಮುಖಪುಟತಾಜ್ ಮಹಲ್, ಕೆಂಪು ಕೋಟೆ ಕೆಡವಿಬಿಡಿ: ನಟ ನಾಸಿರುದ್ದೀನ್ ಶಾ ಬೇಸರ

ತಾಜ್ ಮಹಲ್, ಕೆಂಪು ಕೋಟೆ ಕೆಡವಿಬಿಡಿ: ನಟ ನಾಸಿರುದ್ದೀನ್ ಶಾ ಬೇಸರ

ತರ್ಕ ಅಥವಾ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದಿದ್ದಾಗ ದ್ವೇಷ ಮತ್ತು ತಪ್ಪು ಮಾಹಿತಿಗಳು ಪ್ರವರ್ಧಮಾನಕ್ಕೆ ಬರುತ್ತವೆ. ಹಾಗಾಗಿ ಇಂದಿನ ಸಮಸ್ಯೆಗಳಿಗೆ ಮೊಘಲರನ್ನು ದೂಷಿಸಲಾಗುತ್ತಿದೆ.

- Advertisement -
- Advertisement -

ಭಾರತದಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶವಿಲ್ಲ ಎಂದು ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 3 ರಂದು ZEE5 ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ‘ತಾಜ್ – ಡಿವೈಡೆಡ್ ಬೈ ಬ್ಲಡ್’ ವೆಬ್ ಸೀರಿಸ್ ನಲ್ಲಿ ಅವರು ರಾಜ ಅಕ್ಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಅವರನ್ನು ಮಾತಿಗೆಳೆದಿದೆ.

ಇಂದು ಏನೇ ತಪ್ಪುಗಳು ನಡೆದರೂ ಆ ಎಲ್ಲಾ ತಪ್ಪುಗಳಿಗೆ ಮೊಘಲರ ಆಡಳಿತವೇ ಕಾರಣ ಎಂದು ನಂಬುವ ಜನರಿರುವ ದೇಶವನ್ನು ನೀವು ಹೇಗೆ ನೋಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಜನರು ಅಕ್ಬರ್ ಮತ್ತು ನಾದರ್ ಶಾ ಅಥವಾ ಬಾಬರ್‌ನ ಮುತ್ತಜ್ಜ ತೈಮೂರ್‌ನಂತಹ ಆಕ್ರಮಣಕಾರರ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಿಲ್ಲ. ಇದೆಲ್ಲ ನೋಡಿದರೆ ನಗು ಬರುತ್ತದೆ, ಏಕೆಂದರೆ ಈ ಪ್ರಶ್ನೆಗಳೇ ಹಾಸ್ಯಾಸ್ಪದವಾಗಿವೆ” ಎಂದಿದ್ದಾರೆ.

”ಈ ದೇಶಕ್ಕೆ ಎಲ್ಲರೂ ಲೂಟಿ ಮಾಡಲು ಬಂದರು. ಆದರೆ ಮೊಘಲರು ಲೂಟಿ ಮಾಡಲು ಇಲ್ಲಿಗೆ ಬಂದಿಲ್ಲ. ಅವರು ಇದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳಲು ಇಲ್ಲಿಗೆ ಬಂದರು ಮತ್ತು ಅದನ್ನೇ ಅವರು ಮಾಡಿದರು. ಅವರ ಕೊಡುಗೆಯನ್ನು ಯಾರಾದರೂ ನಿರಾಕರಿಸಬಹುದೆ?” ಎಂದು ಶಾ ಪ್ರಶ್ನಿಸಿದ್ದಾರೆ.

ತರ್ಕ ಅಥವಾ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದಿದ್ದಾಗ ದ್ವೇಷ ಮತ್ತು ತಪ್ಪು ಮಾಹಿತಿಗಳು ಪ್ರವರ್ಧಮಾನಕ್ಕೆ ಬರುತ್ತವೆ. ಹಾಗಾಗಿಯೆ ಬಹುಶಃ ಭಾರತದ ಒಂದಷ್ಟು ಜನರ ಗುಂಪು ಭೂತಕಾಲದ ಮೇಲೆ ಅದರಲ್ಲೂ ಮೊಘಲ್ ಸಾಮ್ರಾಜ್ಯವನ್ನು ದೂಷಿಸುತ್ತಿದೆ. ಇದು ನನಗೆ ಕೋಪಕ್ಕಿಂತ ಹೆಚ್ಚಾಗಿ ನಗು ತರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೊಘಲರು ಕೇವಲ ದುಷ್ಕೃತ್ಯಗಳನ್ನೇ ನಡೆಸಿದ್ದಾರೆ ಎಂಬ ಕಲ್ಪನೆಯು ದೇಶದ ಇತಿಹಾಸದ ಬಗ್ಗೆ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಇತಿಹಾಸದ ಪುಸ್ತಕಗಳಲ್ಲಿ ಭಾರತದ ಸ್ಥಳೀಯ ಸಂಸ್ಕೃತಿಗಿಂತ ಮೊಘಲರ ವೈಭವೀಕರಣ ಮಾಡಿರುವುದು ನಿಜ. ಆದರೆ ಇತಿಹಾಸದಲ್ಲಿ ಮೊಘಲ್ ಕಾಲವನ್ನು ದುರಂತವೆಂದು ನಾವು ತಿರಸ್ಕರಿಸಬಾರದು ಎಂದು ಅವರು ಹೇಳಿದ್ದಾರೆ.

”ದುರದೃಷ್ಟವಶಾತ್ ಶಾಲೆಯ ಇತಿಹಾಸದ ಪುಸ್ತಕಗಳಲ್ಲಿ ಮುಖ್ಯವಾಗಿ ಮೊಘಲರು ಅಥವಾ ಬ್ರಿಟಿಷರ ಬಗ್ಗೆ ಹೆಚ್ಚು ತಿಳಿಸಿಕೊಡಲಾಗುತ್ತದೆ. ನಮಗೆ ಲಾರ್ಡ್ ಹಾರ್ಡಿ, ಲಾರ್ಡ್ ಕಾರ್ನ್‌ವಾಲಿಸ್ ಮತ್ತು ಮೊಘಲ್ ಚಕ್ರವರ್ತಿಗಳ ಬಗ್ಗೆ ತಿಳಿದಿದೆ. ಆದರೆ ನಮಗೆ ಗುಪ್ತ ರಾಜವಂಶದ ಬಗ್ಗೆ ಅಥವಾ ಮೌರ್ಯ ಸಾಮ್ರಾಜ್ಯದ ಬಗ್ಗೆ ಅಥವಾ ವಿಜಯನಗರ ಸಾಮ್ರಾಜ್ಯದ ಬಗ್ಗೆ, ಅಜಂತಾ ಗುಹೆಗಳ ಇತಿಹಾಸ ಅಥವಾ ಈಶಾನ್ಯದ ಬಗ್ಗೆ ಹೆಚ್ಚು ತಿಳಿದಿಲ್ಲ. ನಾವು ಈ ಯಾವುದೇ ವಿಷಯಗಳನ್ನು ಓದಲಿಲ್ಲ ಏಕೆಂದರೆ ಇತಿಹಾಸವನ್ನು ಇಂಗ್ಲಿಷ್ ಅಥವಾ ಆಂಗ್ಲರು ಬರೆದಿದ್ದಾರೆ ಮತ್ತು ಇದು ನಿಜವಾಗಿಯೂ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಆದ್ದರಿಂದ ಜನರು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ನಿಜ. ಇತಿಹಾಸ ಪಠ್ಯದಲ್ಲಿ ಮೊಘಲರನ್ನು ವೈಭವೀಕರಿಸಲಾಗಿದೆ. ಆದರೆ ಅವರನ್ನು ವಿಲನ್ ಮಾಡುವ ಅಗತ್ಯವಿಲ್ಲ. ಮೊಘಲ್ ಸಾಮ್ರಾಜ್ಯವು ತುಂಬಾ ರಾಕ್ಷಸತನದಿಂದ ಕೂಡಿತ್ತು ಎಂದು ಅದನ್ನು ವಿರೋಧಿಸುವವರು, ಮೊಘಲರು ನಿರ್ಮಿಸಿದ ಸ್ಮಾರಕಗಳನ್ನು ಏಕೆ ಕೆಡವುವುದಿಲ್ಲ? ಅವರು ಮಾಡಿದ್ದೆಲ್ಲವೂ ಭಯಾನಕವಾಗಿದ್ದರೆ, ತಾಜ್ ಮಹಲ್ ಕೆಡವಿ, ಕೆಂಪು ಕೋಟೆಯನ್ನು ಕೆಡವಿ, ಕುತುಬ್ ಮಿನಾರ್‌ನ್ನು ಕೆಡವಿ. ಬದಲಿಗೆ ನಾವು ಕೆಂಪು ಕೋಟೆಯನ್ನು ಏಕೆ ಪವಿತ್ರವೆಂದು ಪರಿಗಣಿಸುತ್ತೇವೆ? ಇದನ್ನು ಮೊಘಲರು ನಿರ್ಮಿಸಿದರು. ನಾವು ಅವರನ್ನು ವೈಭವೀಕರಿಸುವ ಅಗತ್ಯವಿಲ್ಲ, ಆದರೆ ಅವರನ್ನು ನಿಂದಿಸುವ ಅಗತ್ಯವೂ ಇಲ್ಲ ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.

ಈ ಕುರಿತು ಬೌದ್ಧಿಕ ಚರ್ಚೆಗೆ ಅವಕಾಶ ಇದೆಯೇ ಎಂಬ ಪ್ರಶ್ನೆಗೆ ನಾಸಿರುದ್ದೀನ್ ಶಾ ಖಂಡಿತ ಅಂತಹ ಪರಿಸ್ಥಿತಿ ಇಲ್ಲ. ಭಾರತದಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶವಿಲ್ಲ ಎಂದಿದ್ದಾರೆ. ಮುಂದುವರಿದು “ಟಿಪ್ಪು ಸುಲ್ತಾನ್‌ ಆಂಗ್ಲರನ್ನು ಭಾರತದಿಂದ ಓಡಿಸಲು ತನ್ನ ಪ್ರಾಣವನ್ನೇ ಕೊಟ್ಟ ವ್ಯಕ್ತಿ. ಆದರೆ ಅಂತಹ ವ್ಯಕ್ತಿಯನ್ನೇ ಇಂದು ತುಚ್ಚೀಕರಿಸಲಾಗುತ್ತಿದೆ. ‘ನಿಮಗೆ ಟಿಪ್ಪು ಸುಲ್ತಾನ್ ಬೇಕಾ ಅಥವಾ ರಾಮ ಮಂದಿರ ಬೇಕೇ?’ ಎಂದು ಪ್ರಶ್ನಿಸುತ್ತಿದ್ದಾರೆ. ಇದು ಯಾವ ರೀತಿಯ ತರ್ಕ? ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಭಾವಿಸಿದ್ದೇನೆ, ಏಕೆಂದರೆ ಅವರು ಎಂದಿಗೂ ನನ್ನ ದೃಷ್ಟಿಕೋನದಲ್ಲಿ ಯೋಚಿಸಲು ಮತ್ತು ನಾನು ಅವರ ದೃಷ್ಟಿಕೋನದಲ್ಲಿ ಯೋಚಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಆಳುವ ಸರ್ಕಾರದ ಮಂತ್ರಿಗಳು ನಿರಂತರವಾಗಿ ಮೊಘಲ್ ಯುಗವನ್ನು ನಿಂದಿಸುತ್ತಿದ್ದಾರೆ. ಮೊಘಲರ ಕಾಲದ ಹೆಸರುಗಳಿರುವ 40 ಹಳ್ಳಿಗಳ ಹೆಸರು ಬದಲಾಯಿಸಲು ಪ್ರಯತ್ನಿಸುವುದರಿಂದ ಹಿಡಿದು ಇತ್ತಿಚೇಗೆ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ಮೊಘಲ್ ಉದ್ಯಾನವನ್ನು ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡುವವರೆಗೆ ಇತಿಹಾಸವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಕಾಶಿ, ಕೇದಾರನಾಥ ಮತ್ತು ಬದರಿನಾಥ್ ಅಭಿವೃದ್ಧಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವವರು ಚುನಾವಣೆ ಎದುರಿಸುತ್ತಿದ್ದಾರೆ. ಇಬ್ಬರಲ್ಲಿ ಯಾರನ್ನು ಆರಿಸುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ನಾಸಿರುದ್ದೀನ್ ಶಾರವರ ಮೇಲಿನ ಮಾತುಗಳು ಬಹಳ ಮಹತ್ವ ಪಡೆಯುತ್ತವೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌

ಇದನ್ನೂ ಓದಿ: ಪರೇಶ್‌ ಮೇಸ್ತಾ ಹೆಸರಲ್ಲಿ ಗಲಭೆ; 112 ಜನರ ಮೇಲಿದ್ದ ಪ್ರಕರಣ ವಾಪಸ್‌ ಪಡೆದ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...