Homeಮುಖಪುಟತಸ್ತೀಕ್ ಹಣ ಮರಳಿಸುವಂತೆ ಹಿರೇಮಗಳೂರು ಕಣ್ಣನ್‌ಗೆ ನೋಟಿಸ್; ವಿರೋಧದ ನಂತರ ಆದೇಶ ವಾಪಸ್

ತಸ್ತೀಕ್ ಹಣ ಮರಳಿಸುವಂತೆ ಹಿರೇಮಗಳೂರು ಕಣ್ಣನ್‌ಗೆ ನೋಟಿಸ್; ವಿರೋಧದ ನಂತರ ಆದೇಶ ವಾಪಸ್

- Advertisement -
- Advertisement -

ಈವರೆಗೆ ಪಾವತಿಸಿರುವ ತಸ್ತೀಕ್ ಹಣ ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಹಣ ಹಿಂದಿರುಗಿಸುವಂತೆ ‘ಕನ್ನಡದ ಪೂಜಾರಿ’ ಎಂದು ಕರೆಸಿಕೊಳ್ಳುವ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿದ್ದು, ವಿರೋಧ ಹೆಚ್ಚಾದ ನಂತರ ತನ್ನ ಆದೇಶ ವಾಪಸ್ ಪಡೆದಿದೆ.

‘ತಸ್ತೀಕ್ ಹಣ ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ₹4.75 ಲಕ್ಷ ಹಣವನ್ನು ಇಲಾಖೆಗೆ ಮರಳಿಸಬೇಕು’ ಎಂದು ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿತ್ತು.

‘ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡ ರಾಮಚಂದ್ರ ದೇಗುಲಕ್ಕೆ 2013-14ನೇ ಸಾಲಿನಿಂದ ಈವರೆಗೆ 5.10 ಲಕ್ಷ ಸಂಗ್ರಹವಾಗಿದೆ. ಅದೇ ಅವಧಿಯಲ್ಲಿ ತಮಗೆ ತಸ್ತೀಕ್ ಮೊತ್ತವಾಗಿ ಒಟ್ಟು 8.10 ಲಕ್ಷ ಪಾವತಿಸಲಾಗಿದೆ. ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚ ಜಾಸ್ತಿ ಇದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತಕ್ಕಿಂತ ಹೆಚ್ಚುವರಿ ತಮ್ಮ ಖಾತೆಗೆ ಜಮಾ ಮಾಡಲಾಗಿದೆ. ಆದ್ದರಿಂದ ಬಾಕಿ 4.74 ಲಕ್ಷ ಹಿಂದಿರುಗಿಸಬೇಕು’ ಎಂದು ಇಲಾಖೆಯ ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಕಣ್ಣನ್ ಬೇಸರ:

ತಾವು ಪೂಜೆ ಸಲ್ಲಿಸುವ ದೇವಾಲಯದಲ್ಲಿ ಹೆಚ್ಚಿನ ಆದಾಯವಿಲ್ಲದ ಕಾರಣಕ್ಕೆ ವೇತನದ ಒಂದಷ್ಟು ಭಾಗವನ್ನು ಹಿಂತಿರುಗಿಸಬೇಕೆಂದು ನೀಡಿದ್ದ ಇಲಾಖೆ ನೋಟಿಸಿಗೆ ಹೀರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಮುಜರಾಯಿ ಇಲಾಖೆ ಮೂಲಕ ದೇವಾಲಯಗಳನ್ನು ಸಂರಕ್ಷಿಸಬೇಕು. 44 ವರ್ಷದಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆಹಿಡಿದು, ನೀಡಿದ್ದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ. ಜಿಲ್ಲಾಡಳಿತದ ಈ ನಡೆ ಅಚ್ಚರಿ ಮತ್ತು ಬೇಸರ ತರಿಸಿದೆ’ ಎಂದು ಕಣ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ:

ಕಣ್ಣನ್ ಅವರಿಗೆ ನೀಡಿದ್ದ ನೋಟಿಸ್ ವಿಚಾರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ‘ಹಿರೇಮಗಳೂರು ಕಣ್ಣನ್ ಅವರು ನೋಟಿಸ್ ನಿಂದ ದೃತಿಗೆಡುವುದು ಬೇಡ.. ಇದು ತಹಶೀಲ್ದಾರ್ ತಪ್ಪಿನಿಂದಾಗಿದ್ದು, ಹಣ ಪಾವತಿಸುವಂತೆ ಅವರಿಗೆ ನೋಟಿಸ್ ಜಾರಿ ಮಾಡುತ್ತೇವೆ. ತಹಶೀಲ್ದಾರ್ ಅವರು ಹೆಚ್ಚುವರಿ ಹಣ ಪಾವತಿಸಿ ಸಮಸ್ಯೆ ಸೃಷ್ಟಿಸಿದ್ದಾರೆ. ಬೇರೆ ಯಾವುದೇ ಮುಜರಾಯಿ ದೇಗುಲದಲ್ಲಿ ಈ ಸಮಸ್ಯೆ ಆಗಿಲ್ಲ. ಹೀಗಾಗಿ, ಸ್ಥಳೀಯ ತಹಶೀಲ್ದಾರ್ ಗೆ ಹಣ ಪಾವತಿಸುವಂತೆ ನೋಟಿಸ್ ನೀಡುತ್ತೇವೆ. ಈ ಸಮಸ್ಯೆಯನ್ನು ನಾನು ಕೂಡಲೇ ಬಗೆಹರಿಸುತ್ತೇನೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ:

‘ಪ್ರಭು ಶ್ರೀರಾಮನನ್ನು ಬಹಿಷ್ಕರಿಸಿದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ರಾಮ ಭಕ್ತರ ಸಂಭ್ರಮಾಚರಣೆಗೆ ನಿರ್ಬಂಧ ಹೇರಿತು. ಇದೀಗ ರಾಜ್ಯದ ಅರ್ಚಕರಿಂದ ಸಂಬಳ ವಾಪಸ್ಸಾತಿಗೆ ನೋಟಿಸ್ ನೀಡಿ ತುಘಲಕ್ ದರ್ಬಾರ್ ನಡೆಸಿದೆ’ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಬಿಜೆಪಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ‘ಅರ್ಚಕ, ಕನ್ನಡ ಪಂಡಿತರಾದ ಹಿರೇಮಗಳೂರು ಕಣ್ಣನ್ ಅವರು, 50 ವರ್ಷದಿಂದ ಕೋದಂಡರಾಮ ದೇವಾಲಯದಲ್ಲಿ ಹಿರಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮನ ವಿರುದ್ಧ ಸಿದ್ದರಾಮಯ್ಯ ಅವರ ಸರ್ಕಾರ ದ್ವೇಷ ಸಾಧಿಸಲು, ಇದೀಗ ಕೋದಂಡರಾಮ ದೇವಾಲಯದ ಹಿರಿಯ ಅರ್ಚಕ ಕಣ್ಣನ್ ಅವರಿಂದ 10 ವರ್ಷದ ಸಂಬಳವನ್ನು ವಾಪಸ್ ಕೇಳಿ ನೋಟಿಸ್ ಕೊಟ್ಟು ಸೇಡು ತೀರಿಸಿಕೊಳ್ಳಲು ಹೊರಟಿದೆ. ಕಾರಣ ಕಾಂಗ್ರೆಸ್ಸಿಗರ ಇಚ್ಛೆಯಂತೆ ಗೋಧ್ರಾದಂತಹ ಘಟನೆ ನಡೆಯಲಿಲ್ಲ ಎನ್ನುವುದು ಇರಬಹುದು’ ಎಂದು ಬಿಜೆಪಿ ಕಿಡಿಕಾರಿದೆ.

‘ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿ ನಡೆದಿದೆ, ಹಿಂದೂ ಧರ್ಮಿಯರ ಧಾರ್ಮಿಕ ಕ್ಷೇತ್ರದಲ್ಲಿಯೂ ಆದಾಯ ಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು ಹಿರೇಮಗಳೂರು ಕಣ್ಣನ್ ಅವರಂತಹ ನಾಡಿನ ಶ್ರೇಷ್ಠ ಕನ್ನಡ ವಿದ್ವಾಂಸ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ನೋಟಿಸ್ ನೀಡಿರುವ ಕ್ರಮ ಅತ್ಯಂತ ಹಾಸ್ಯಾಸ್ಪದ ಹಾಗೂ ಖಂಡನೀಯ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಹಿಂದೂ ಆಚಾರ-ವಿಚಾರ ಹಾಗೂ ಧಾರ್ಮಿಕ ಕೇಂದ್ರಗಳನ್ನೇ ಗುರಿಯನ್ನಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಆಗಾಗ ಸರಣೀ ರೂಪದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಧರ್ಮನಿಷ್ಠರ ಸಹನೆಯನ್ನು ಕೆಣಕುವಂತಿದೆ. ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಅನ್ನು ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಿ ಸರ್ಕಾರ ವಾಪಸ್ ಪಡೆಯಬೇಕು, ಇಂಥಾ ಅಸಂಬದ್ಧ ನೋಟಿಸ್ ನೀಡಿದ ಅವಿವೇಕಿ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಲಿ’ ಎಂದು ಆಗ್ರಹಿಸಿದ್ದಾರೆ.

‘ಸಿಎಂ ಸಿದ್ದರಾಮಯ್ಯ ಅವರ ಹಿಂದೂ ದ್ವೇಷ ಯಾವ ಪರಾಕಾಷ್ಠೆಗೆ ತಲುಪಿದೆ ಎಂದರೆ 10 ವರ್ಷಗಳ ಸಂಬಳ ವಾಪಸ್ಸು ನೀಡುವಂತೆ ಚಿಕ್ಕಮಗಳೂರಿನ ರಾಮನ ದೇವಸ್ಥಾನದ ಆಚರ್ಕರಿಗೆ ನೋಟಿಸ್ ಕೊಡಿಸಿದ್ದಾರೆ. 7 ತಿಂಗಳಲ್ಲೇ ರಾಜ್ಯದ ಬೊಕ್ಕಸವನ್ನ ಬರಿದು ಮಾಡಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ದೇವಸ್ಥಾನದ ಅರ್ಚಕರಿಗೆ ನೀಡುವ ಸಂಬಳಕ್ಕೂ ಕತ್ತರಿ ಹಾಕುತ್ತಿದ್ದಾರೆ. ಹಿಂದೂಗಳನ್ನ ಕಂಡರೆ, ಹಿಂದೂಗಳ ದೇವಸ್ಥಾನಗಳನ್ನ ಕಂಡರೆ, ಅಲ್ಲಿ ಪೂಜೆ ಮಾಡುವವರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ ಸಿಎಂ ಸಿದ್ದರಾಮಯ್ಯನವರೇ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ; ರಾಮಮಂದಿರದ ಉದ್ಘಾಟನೆಯಲ್ಲಿ ಮೋದಿ: ಕಳವಳ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ 22 ಅನಿವಾಸಿ ಸಂಸ್ಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read