ಅಸ್ಸಾಂ: ಇದ್ದದ್ದು 90 ಮತಗಳು, ಚಲಾವಣೆಯಾಗಿದ್ದು 181, ಪ್ರಕರಣದಲ್ಲಿ 6 ಅಧಿಕಾರಿಗಳ ಅಮಾನತು

| ಗುರುಪ್ರಸಾದ್ ಡಿ.ಎನ್ |

ಅಧ್ಯಕ್ಷೀಯ ಮಾದರಿಯ ಎರಡು ನಾಯಕರ ನಡುವಿನ ಮಹಾಸಮರ ಎಂಬಂತೆ ಬಿಂಬಿಸುವಂತಹ ಚುನಾವಣಾ ಮಾದರಿಯನ್ನು ರಾಜ್ಯ ಸರ್ಕಾರಗಳ ಚುನಾವಣೆಯ ಜೊತೆಗೆ ತಳುಕು ಹಾಕುವ ಈ ರಣತಂತ್ರ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಧಿಕಾರವನ್ನು -ಬಲವನ್ನು ಕುಂದಿಸುವ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಜನರ ಕಾಳಜಿಗಳನ್ನು ಕೃತಕವಾಗಿ ಅಳಿಸಿಹಾಕುವ ಅತಿ ದೊಡ್ಡ ಹುನ್ನಾರವಾಗಿದೆ.

ನರೇಂದ್ರ ಮೋದಿ ಎರಡನೆ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನಂತರವೂ ಅಪಾಯಕಾರಿ ಐಡಿಯಾಗಳ ಜೊತೆಗೆ ತಮ್ಮ ಪ್ರಯೋಗಗಳನ್ನು ಮುಂದುವರೆಸಿದ್ದಾರೆ. ದೇಶದ ಆರ್ಥಿಕತೆಯನ್ನು ನೆಲ ಕಚ್ಚಿಸಿದ, 45 ವರ್ಷಗಳಲ್ಲಿ ಹಿಂದೆಂದೂ ಕಾಣದಂತಹ ನಿರುದ್ಯೋಗ ಪರಿಸ್ಥಿತಿಯನ್ನು ಸೃಷ್ಟಿಸಿದ ಡಿಮಾನೆಟೈಸೇಶನ್ ನಡೆಯಾಗಲೀ, ಸರಿಯಾಗಿ ಜಾರಿ ಮಾಡದೆ ಜಿಎಸ್‍ಟಿ ಹೇರಿಕೆಯು ಸಣ್ಣ ವ್ಯಾಪಾರಿಗಳ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮಗಳಿಂದಾಗಲಿ ಮೋದಿಯವರು ವಿಚಲಿತರಾದಂತೆ ಕಾಣುತ್ತಿಲ್ಲ. ಲೋಕಸಭಾ ಚುನಾವಣೆಯ ಬಹುಮತದ ಗೆಲುವು ಮತ್ತು ಅಂತಹ ಗೆಲುವಿನ ಹಿಂದೆ ಹೆಣೆದ ತಂತ್ರವನ್ನು ಈಗ ಎಲ್ಲೆಡೆಗೆ ವಿಸ್ತರಿಸಲು ಹವಣಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಈಗಾಗಲೇ ಬಲಹೀನಗೊಳಿಸಲು ಮಾಡಿರುವ ಪ್ರಯತ್ನಗಳೇ ಸಾಕು ಎನ್ನುವ ಪರಿಸ್ಥಿತಿಯಲ್ಲಿ ನಾವಿರುವಾಗ ಗಾಯದ ಮೇಲೆ ಬರೆ ಎಳೆಯಲು ‘ಒಂದು ದೇಶ ಒಂದು ಚುನಾವಣೆ’ ಎಂಬ ಕಪಟದ ಮಂತ್ರವನ್ನು ಪಠಿಸಲು ಪ್ರಾರಂಭಿಸಿದ್ದಾರೆ. ಇದರ ಅಪಾಯವನ್ನು ಜನಸಾಮಾನ್ಯರಿಗೆ ಮನಗಾಣಿಸದೆ ಹೋದರೆ, ಡಿಮಾನೆಟೈಸೇಶನ್‍ಗಿಂತಲೂ ದೊಡ್ಡ ಪ್ರಪಾತದ ನಡೆಯಾದೀತು ಇದು.

ಇಂತಹ ಏಕಕಾಲದ ಚುನಾವಣೆಗೆ ಮೋದಿ ಮತ್ತವರ ಪಡೆ ನೀಡುತ್ತಿರುವ ಮುಖ್ಯ ಕಾರಣಗಳು ಎರಡು. ಮೊದಲನೆಯದು ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಚುನಾವಣೆಗಳು ನಡೆದರೆ ಸುಮಾರು ಐದುಸಾವಿರ ಕೋಟಿ ಹಣ ಉಳಿತಾಯ ಆಗುತ್ತದೆ. ಎರಡನೆಯದು: ಐದು ವರ್ಷಗಳ ಅವಧಿಯಲ್ಲಿ ನಡೆಯುವ ಒಂದು ಲೋಕಸಭೆ, 29 ರಾಜ್ಯಗಳ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಚುನಾವಣೆಯಲ್ಲಿ ಭಾಗವಹಿಸುವುದರಿಂದ ಪರಿಣಾಮಕಾರಿಯಾದ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ ಎಂಬ ಮೊಸಳೆ ಕಣ್ಣೀರಿನ ವಾದ. ಈ ವಾದಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಈ ಲೇಖನ ಪ್ರಕಟಗೊಳ್ಳುವ ಹೊತ್ತಿಗೆ ಈ ಸಭೆಯಲ್ಲಿ ಇಂತಹದೊಂದು ಐಡಿಯಾಗೆ ತೀವ್ರ ವಿರೋಧ ಬರುತ್ತದೆ ಎಂಬ ಆಶಾಭಾವನೆ ಇದ್ದರೂ, ಈ ವಾದವನ್ನು ಇನ್ನೈದು ವರ್ಷಗಳ ಕಾಲ ಚಾಲ್ತಿಯಲ್ಲಿಟ್ಟು, ಅದನ್ನು ಅಭಿವೃದ್ಧಿಗೆ ತಳುಕು ಹಾಕಿ ಮಧ್ಯಮವರ್ಗದ ಜನರ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ರಣತಂತ್ರವಾಗಿ, ಇಂತಹ ಕೊಳ್ಳಿಯಿಟ್ಟು ಬಿಜೆಪಿ ಮೈಕಾಯಿಸಿಕೊಳ್ಳುವ ಲಕ್ಷಣಗಳಂತೂ ಎದ್ದು ಕಾಣುತ್ತಿವೆ.

PC : Times Of India

ನಮ್ಮ ಸಂವಿಧಾನ ರೂಪುಗೊಂಡಿರುವ ರೀತಿಯೇ ಒಕ್ಕೂಟ ವ್ಯವಸ್ಥೆಯನ್ನು ಬಲಶಾಲಿಯಾಗಿ ಕಟ್ಟುವುದಕ್ಕಾಗಿದೆ. ಎಲ್ಲಾ ರಾಜ್ಯಗಳಿಗೂ ಸಾಮಾನ್ಯವಾಗಿರುವ ಕೆಲವು ವಲಯಗಳನ್ನು ವಹಿಸಿಕೊಂಡು, ಉಳಿದಂತೆ ರಾಜ್ಯಗಳಿಗೆ ಸಂಬಂಧಿಸಿದ ಕಾರ್ಯನೀತಿಗಳಿಗೆ ಸಹಕಾರಿಯಾಗಲು ರೂಪುಗೊಂಡಿರುವುದು ಒಕ್ಕೂಟ ಸರ್ಕಾರ (ಇಂಗ್ಲಿಷಿನಲ್ಲಿ ಯೂನಿಯನ್ ಎಂದು ಬಳಸಲಾಗಿದೆ). ಇಂತಹ ವ್ಯವಸ್ಥೆಯ ಸುಂದರತೆ ಇರುವುದೇ ಕೇಂದ್ರದಲ್ಲಿ ಮತ್ತು ಆಯಾ ರಾಜ್ಯಗಳಲ್ಲಿ ಸರ್ಕಾರ ಸ್ಥಾಪಿಸುವ ಸಲುವಾಗಿ ಹಲವು ಪಕ್ಷಗಳು, ಆಯಾ ರಾಜ್ಯದ ಸಮಸ್ಯೆಗಳ ಆಧಾರದ ಮೇಲೆ ಜನಸಾಮಾನ್ಯರ ಮುಂದೆ ಹೋಗುವ ಸಂಸದೀಯ ಮಾದರಿಯ ಚುನಾವಣಾ ವ್ಯವಸ್ಥೆ. ಇಂತಹ ವ್ಯವಸ್ಥೆಯನ್ನು ಅಮೆರಿಕಾದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯ ಮಾದರಿಗೆ (ಒಬ್ಬ ವ್ಯಕ್ತಿಯನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡು) ತಿರುಗಿಸುವ ತಂತ್ರವನ್ನು ಬಿಜೆಪಿ ಬಳಸಿ ಲೋಕಸಭಾ ಚುನಾವಣೆ ಗೆದ್ದಿದೆ. ಹಲವು ರಾಜ್ಯಗಳಿಂದ ಆಯ್ಕೆಯಾದ ಎಷ್ಟೋ ಜನ ಸಂಸದರು ನಾವು ಮೋದಿಯಿಂದಲೇ ಗೆದ್ದಿದ್ದು ಎಂಬಂತಹ ಮಾತುಗಳನ್ನು ಘಂಟಾಘೋಷವಾಗಿ ಹೇಳಿದ್ದಾರೆ. ಈಗ ಇಂತಹ ಅಧ್ಯಕ್ಷೀಯ ಮಾದರಿಯ ಎರಡು ನಾಯಕರ ನಡುವಿನ ಮಹಾಸಮರ ಎಂಬಂತೆ ಬಿಂಬಿಸುವಂತಹ ಚುನಾವಣಾ ಮಾದರಿಯನ್ನು ರಾಜ್ಯ ಸರ್ಕಾರಗಳ ಚುನಾವಣೆಯ ಜೊತೆಗೆ ತಳುಕು ಹಾಕುವ ಈ ರಣತಂತ್ರ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಧಿಕಾರವನ್ನು -ಬಲವನ್ನು ಕುಂದಿಸುವ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಜನರ ಕಾಳಜಿಗಳನ್ನು ಕೃತಕವಾಗಿ ಅಳಿಸಿಹಾಕುವ ಅತಿ ದೊಡ್ಡ ಹುನ್ನಾರವಾಗಿದೆ.

ರಾಜ್ಯಗಳಲ್ಲಿ ಚುನಾವಣೆಗಳು ಸಾಮಾನ್ಯವಾಗಿ ನಡೆಯುವುದು ಜಲ, ಕೃಷಿ ಸಮಸ್ಯೆಗಳು, ಪ್ರಾದೇಶಿಕ ಶಿಕ್ಷಣ, ಆರೋಗ್ಯ ಸುಧಾರಣೆ, ಹಿಂದುಳಿದ ವರ್ಗದ ಏಳಿಗೆ, ಭಾಷೆಯ ಅಳಿವು-ಉಳಿವು, ಪ್ರಾದೇಶಿಕ ಜನರ ಉದ್ಯೋಗ ಖಾತ್ರಿ ಇಂತಹ ವಿಷಯಗಳ ಮೇಲೆ. ಸಾಮಾನ್ಯವಾಗಿ ರಾಜ್ಯ ಚುನಾವಣೆಗಳಲ್ಲಿ ರಾಷ್ಟ್ರೀಯ ಭದ್ರತೆ, ಕಾಶ್ಮೀರ ಸಮಸ್ಯೆ, ರಾಷ್ಟ್ರೀಯತೆ, ಬಾಹ್ಯಾಕಾಶ ಸಂಶೋಧನೆ ಇಂತಹ ಇತ್ಯಾದಿ ವಿಷಯಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಈ ಸಮಸ್ಯೆಗಳನ್ನೇ ಜನರ ಮೂಲಭೂತ ಸಮಸ್ಯೆಗಳು ಎಂಬಂತೆ ಬಿಂಬಿಸಿ ಜನರನ್ನು ಮರುಳು ಮಾಡಿ ಬಿಜೆಪಿ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಅಭೂತಪೂರ್ವವಾಗಿ ಗೆದ್ದಿದೆ. ಆದರೆ ರಾಜ್ಯದ ವಿಧಾನಸಭಾ ಚುನಾವಣೆ ನಡೆಯುವಾಗ ನಮಗೆ ಬರ ಪರಿಹಾರ, ರೈತರ ಆತ್ಮಹತ್ಯೆಗಳ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳು ರಾಷ್ಟ್ರೀಯ ಭದ್ರತೆಗಿಂತಲೂ ಅತಿ ಹೆಚ್ಚು ಬಾಧಿಸುವ ಸಮಸ್ಯೆಗಳಾಗಬೇಕು. ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಜನರು ರಾಷ್ಟ್ರೀಯ ಭದ್ರತೆಯ ಸಮಕ್ಕೆ ಈ ಪ್ರಶ್ನೆಗಳನ್ನು ಜನ ತಮ್ಮನ್ನು ಪ್ರತಿನಿಧಿಸುವ ಮುಖಂಡರಲ್ಲಿ ಕೇಳಲೇಬೇಕು. ಆದರೆ ಬಿಜೆಪಿ ಪಕ್ಷ ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳೊಂದಿಗೆ ಸೇರಿಕೊಂಡು ತಾನು ಮುಂದು ಮಾಡುವ ಹಿಂದೂ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಭದ್ರತೆಯ ಪಾಠವನ್ನೇ ಪುನರಾವರ್ತಿಸಿಕೊಂಡು ಜನರನ್ನು ಮರಳು ಮಾಡಿದ್ದು ದುರಂತ. ಇಂತಹ ಪರಿಸ್ಥಿತಿಯಲ್ಲಿ ಲೋಕಸಭೆ ಮತ್ತು ವಿದಾನಸಭೆ ಚುನಾವಣೆಗಳು ಒಟ್ಟಿಗೆ ನಡೆದರೆ, ಮತದಾರರಿಗೆ ಗೊಂದಲಗಳು ಹೆಚ್ಚಾಗುವುದು ಖಂಡಿತಾ. ಇಂತಹ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಮಾಧ್ಯಮಗಳ ಪ್ರಚಾರದೊಂದಿಗೆ ಸದ್ಯಕ್ಕೆ ಆರ್ಥಿಕವಾಗಿ ಅತಿ ಹೆಚ್ಚು ಸದೃಢವಾಗಿರುವ ಬಿಜೆಪಿ ಪಕ್ಷ ತನ್ನಿಚ್ಚೆಯ ಮುಖ್ಯಮಂತ್ರಿಗಳನ್ನು ಗೊಂಬೆಗಳಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೂರಿಸಿಕೊಳ್ಳುವ ಹುನ್ನಾರಕ್ಕೆ ಮುಂದಾಗಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷವಾಗಲಿ ಬಿಜೆಪಿ ಪಕ್ಷವಾಗಲಿ, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹೆಚ್ಚು ಜನಪ್ರಿಯವಾದಾಗ, ಆ ಮುಖಂಡರ ಕಾರ್ಯನೀತಿಗಳು ಹೆಚ್ಚು ಜನಬೆಂಬಲ ಪಡೆದಾಗ, ಕೇಂದ್ರ ಸರ್ಕಾರದ ಜನಪ್ರಿಯತೆಗೆ ಕಂಟಕದಂತೆ ತೋರಿದಾಗ, ಕೇಂದ್ರ ಸರ್ಕಾರಗಳ ತಪ್ಪು ಕೆಲಸಗಳನ್ನು ಪ್ರಶ್ನೆ ಮಾಡಿದಾಗ, ಅಂತಹ ಮುಖ್ಯಮಂತ್ರಿಗಳನ್ನು ಕೆಳಗಿಳಿಸುವ ಅಥವಾ ಆರ್ಟಿಕಲ್ 356 ದುರ್ಬಳಕೆ ಮಾಡಿ ಇಡೀ ಸರ್ಕಾರಗಳನ್ನೇ ವಜಾ ಮಾಡಿ ರಾಷ್ಟ್ರಪತಿ ಅಧಿಕಾರ ಹೇರುವ ದರ್ಪವನ್ನು ತೋರಿಸಿವೆ. ಇಂತಹ ಎಷ್ಟೋ ಪ್ರಕರಣಗಳಲ್ಲಿ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದ್ದು ಇದೆ. 2015ರಲ್ಲಿ ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸಚಿವ ಸಂಪುಟ ಅಲ್ಲಿನ ಸರ್ಕಾರವನ್ನು ವಜಾ ಮಾಡಿದ್ದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ಎಚ್ಚರಿಕೆ ಕೊಟ್ಟು ಮತ್ತೆ ಅಲ್ಲಿನ ರಾಜ್ಯ ಸರ್ಕಾರವನ್ನು ಮರುಸ್ಥಾಪಿಸಿದ ಉದಾಹರಣೆ ಇತ್ತೀಚಿನದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರದ ತತ್ವದ ಅಡಿ ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಳ್ಳಬೇಕು ಮತ್ತು ಗಟ್ಟಿಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ತನ್ನ ಅಧಿಕಾರದ ಎಲ್ಲೆಯನ್ನು ಮೀರಿದರೆ ಚುನಾಯಿತ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಎಚ್ಚರಿಸುತ್ತಾರೆ. ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರವಾಗಲಿ ಅದನ್ನು ಮುನ್ನಡೆಸುವ ಮುಖಂಡನಾಗಲಿ ಸರ್ವಾಧಿಕಾರಿಯಾಗಿ ಬೆಳೆಯದಂತೆ ನೋಡಿಕೊಳ್ಳುವ ಅಡೆತಡೆಗಳನ್ನು ಸೃಷ್ಟಿಸುವುದು ರಾಜ್ಯ ಸರ್ಕಾರಗಳು ಮತ್ತು ಅಲ್ಲಿಗೆ ಚುನಾಯಿತರಾದ ಜನಪ್ರತಿನಿದಿಗಳು. ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸುವ, ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಭರವಸೆಯಿಂದ ಚುನಾಯಿತರಾಗುವ ಸ್ವಂತಂತ್ರ ಪ್ರಾದೇಶಿಕ ಪಕ್ಷಗಳ ಅಥವಾ ರಾಷ್ಟ್ರೀಯ ಪಕ್ಷಗಳ ರಾಜ್ಯದ ಮುಖಂಡರ ತಂಡದ ಕೆಲಸ ಈ ನಿಟ್ಟಿನಲ್ಲಿ ಪ್ರಮುಖ, ಹೆಚ್ಚಿನ ಜವಾಬ್ದಾರಿ ವಿಕೇಂದ್ರಿಕರಣಗೊಂಡು, ಈ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇವತ್ತಿಗೆ ನಮ್ಮ ಮುಂದೆ ದೊಡ್ಡದಿದೆ.

PC: Sanjay Kanojia/AFP

ಇಂತಹ ತಾತ್ವಿಕ ನೆಲೆಗಟ್ಟಿನ ಒಕ್ಕೂಟ ವ್ಯವಸ್ಥೆಯಲ್ಲಿ ಹಣಕಾಸಿನ ಉಳಿತಾಯದ ನೆಪವೊಡ್ಡಿ ಇಂತಹ ಮೂಲಭೂತ ಬದಲಾವಣೆಗೆ ಕರೆಕೊಟ್ಟಿರುವುದು ಹೊಣೆಗೇಡಿತನವೇ ಸರಿ. ನಿಜಕ್ಕೂ ಹಣ ಉಳಿತಾಯ ಮಾಡಬೇಕೆಂದರೆ ಕೇಂದ್ರ ಸರ್ಕಾರಕ್ಕೆ ಇನ್ನು ಹಲವು ಮಾರ್ಗಗಳಿವೆ. ಒಂದೇ ಒಂದು ವಿಗ್ರಹವನ್ನು ನಿರ್ಮಿಸದೇ ಹೋದರೆ ಮೂರುಸಾವಿರ ಕೋಟಿ ಹಣ ಉಳಿದೀತು. ಸರ್ಕಾರದ ಸಾಧನೆಯ ಪ್ರಚಾರದ ವ್ಯಯವನ್ನು ಸ್ವಲ್ಪ ಕಡಿತಗೊಳಿಸಿದರು ನೂರಾರು ಕೋಟಿ ಹಣ ಉಳಿದೀತು. ತಮ್ಮ ವಿತ್ತ ನೀತಿಯಲ್ಲಿ ಇಂತಹ ಶಿಸ್ತುಗಳನ್ನು ತಂದುಕೊಂಡು ಮಾಡಬೇಕಿರುವ ಕೆಲಸ ಬೆಟ್ಟದಷ್ಟು ಇರಬೇಕಾದರೆ ಇಂತಹ ದುರುದ್ದೇಶಪೂರಿತ ಚರ್ಚೆಯನ್ನು ಚುನಾವಣಾ ಗೆದ್ದು ಒಂದು ತಿಂಗಳೊಳಗೆ ಮುಂದುಮಾಡಿರುವುದು ಅಚ್ಚರಿ ಹುಟ್ಟಿಸಿದೆ. ಪ್ರಾದೇಶಿಕತೆಯ ಅನನ್ಯತೆಯನ್ನು ಉಳಿಸಿಕೊಳ್ಳಲು ‘ಒಂದು ದೇಶ ಒಂದು ಚುನಾವಣೆ’ಯ ಯೋಚನೆಯನ್ನು ರಾಜ್ಯಗಳ ಚುನಾಯಿತ ಪ್ರತಿನಿಧಿಗಳು ವಿರೋಧಿಸಬೇಕಿರುವ ತುರ್ತು ಒಂದು ಕಡೆಗಿದ್ದರೆ, ನಾಗರಿಕ ಸಮಾಜವನ್ನು ಈ ನಿಟ್ಟಿನಲ್ಲಿ ಎಚ್ಚರಗೊಳಿಸುವ ಅಗತ್ಯವೂ ಒದಗಿಬಂದಿದೆ.

ಭಾರತ ಗಣರಾಜ್ಯ ಸ್ವರೂಪದ ಒಟ್ಟಾರೆ ತಾತ್ವಿಕತೆಯ ಕಾರಣದಿಂದ ಈ ನಡೆ ದುರುದ್ದೇಶಪೂರಿತ ಎಂಬುದು ಮನದಟ್ಟಾದರೂ, ಒಂದು ವೇಳೆ ಅದು ಕಾರ್ಯರೂಪಕ್ಕೆ ಪರಿಗಣಿತವಾಗಿ ಚಾಲ್ತಿಗೆ ಬಂದರೂ ಪ್ರಾಯೋಗಿಕವಾಗಿ ಇದು ಬಹಳ ಕಷ್ಟದ್ದು ಕೂಡ. ಈಗ ಏನೋ ಒಂದು ಒಪ್ಪಂದದ ಮೇರೆಗೆ ಎಲ್ಲ ರಾಜ್ಯಸರ್ಕಾರಗಳು ವಿಸರ್ಜನೆಯಾಗಿ 2024ಕ್ಕೆ ಏಕಕಾಲಕ್ಕೆ, ಲೋಕಸಭೆಯ ಚುನಾವಣೆಯ ಜೊತೆಗೆ ರಾಜ್ಯ ಚುನಾವಣೆಗಳು ನಡೆಯುತ್ತವೆ ಅಂದುಕೊಳ್ಳೋಣ. ಸರಿ, ನಂತರ ಯಾವುದೋ ಒಂದು ರಾಜ್ಯದಲ್ಲೋ ಅಥವಾ ಎರಡರಲ್ಲೋ ಒಂದೆರಡು ವರ್ಷಗಳ ನಂತರ ಸರ್ಕಾರ ಬಿದ್ದು ಹೋದರೆ ಏನು ಮಾಡುವುದು? ರಾಷ್ಟ್ರಪತಿ ಆಡಳಿತ ಪ್ರಜಾಸತ್ತಾತ್ಮಕವಲ್ಲ. ಅದು ಜನಸಾಮಾನ್ಯರ ಅಪೇಕ್ಷೆಗೆ ಮಾರಕವಾದದ್ದು. ಅಂದರೆ ಒಂದು ಸಾರ್ತಿ ಚುನಾಯಿತರಾಗಿ ಸರ್ಕಾರ ರಚಿಸಿಬಿಟ್ಟರೆ ಮುಗಿಯಿತು ಅದು ಐದು ವರ್ಷ ಆಡಳಿತ ನಡೆಸಲೇಬೇಕು ಎಂಬ ನಿಯಮ ರೂಪಿಸಿಕೊಳ್ಳಬೇಕೆ? ಸಂಪೂರ್ಣ ಬಹುಮತವೇ ಬರದೆ, ಬಹುಪಕ್ಷಗಳು ಕೂಡಿ ರಚಿಸಿದ ಸರ್ಕಾರವಾದರೆ ಅಥವಾ ಯಾವುದೋ ಪಕ್ಷದ ಬಾಹ್ಯ ಬೆಂಬಲದೊಂದಿಗೆ ರಚಿಸಿದ ಸರ್ಕಾರ ಆದರೆ ಅದು ಬೆಂಬಲ ಹಿಂದೆ ತೆಗೆದುಕೊಳ್ಳುವ ಸೌಲಭ್ಯವೇ ಇರದೇ ಹೋದೀತೇ? ಯಾವ ಕೂಡಿಕೆಯೂ ಸಾಧ್ಯವಾಗದೆ ಸರ್ಕಾರ ರಚಿಸಲು ಯಾವ ಪಕ್ಷಕ್ಕೂ ಬಹುಮತವೆ ಇಲ್ಲದೆ ಹೋದರೆ? ಇನ್ನು ಕೇಂದ್ರ ಸರ್ಕಾರವೇ ಪತನವಾಗಿ ಹೋದರೆ? ಇಂತಹ ತೊಂದರೆಗಳಿಗೆ ಹುಡುಕಿಕೊಳ್ಳುವ ಯಾವುದೇ ಪರಿಹಾರವು ಮೇಲ್ನೋಟಕ್ಕೆ ಅಸಂವಿಧಾನಿಕವಾಗಿರುತ್ತವೆ ಎಂದು ಸ್ಪಷ್ಟವಾಗಿ ಯಾರಿಗಾದರು ತಿಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ವ್ಯವಸ್ಥೆಯೇ, ಮೋದಿ ಮತ್ತು ಬಳಗ ಮುಂದುಮಾಡುತ್ತಿರುವ ವ್ಯವಸ್ಥೆಗಿಂತ ಚೊಕ್ಕವಾಗಿ ಕೆಲಸ ಮಾಡುತ್ತಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.

ಇನ್ನು 31 ವಿಧಾನಸಭಾ ಚುನಾವಣೆಗಳು ಅಂದರೆ ಐದು ವರ್ಷದಲ್ಲಿ ಸರಾಸರಿಯಂತೆ ಎರಡು ತಿಂಗಳಿಗೆ ಒಂದರಂತೆ ಚುನಾವಣಾ ನಡೆದರೆ ಆಡಳಿತ ನಡೆಸುವುದು ಕಷ್ಟವಾಗುತ್ತದೆ ಎಂಬ ಕಾರಣದಲ್ಲಿ ಕೂಡ ಯಾವುದೇ ಸತ್ವವಿಲ್ಲ. ಪ್ರತಿ ಪಕ್ಷವೂ ಪ್ರಾದೇಶಿಕವಾಗಿ ಹಲವು ನಾಯಕರನ್ನು ಹೊಂದಿರುತ್ತದೆ. ಮತ್ತು ಸೈದ್ಧಾಂತಿಕವಾಗಿ ಆ ನಾಯಕರಷ್ಟೇ ಆ ಚುನಾವಣೆಗಳ ಸಿದ್ಧತೆಯಲ್ಲಿ ಹಾಗು ಮತ ಕೇಳಲು ಪ್ರಚಾರದಲ್ಲಿ ಭಾಗಿಯಾಗಬೇಕು, ವಿಕೇಂದ್ರೀಕರಣದ ಸಫಲತೆ ಹೆಚ್ಚಾದಂತೆ ಆಯಾಯ ಪ್ರಾದೇಶಿಕ ನಾಯಕರು ತಾವು ಪ್ರತಿನಿಧಿಸುವ ಜನರ ಆಕಾಂಕ್ಷೆ ಅಪೇಕ್ಷೆಗಳನ್ನು ಅರಿತು ಅವರ ಜೊತೆಗೆ ಪರಿಣಾಮಕಾರಿಯಾಗಿ ವ್ಯವಹರಿಸಬಲ್ಲರು. ಸಂಸತ್ತಿನಲ್ಲಿರುವ ತಮ್ಮ ಪಕ್ಷದ ನಾಯಕರ ಕೆಲಸ, ಧೋರಣೆಗಳನ್ನು ವಿವರಿಸಬಲ್ಲರು. ಚಾಮರಾಜನಗರದಲ್ಲಿ ನಡೆಯುವ ಚುನಾವಣೆಗೆ ಮೋದಿ ಬಂದು ಪ್ರಚಾರ ಮಾಡಿ ಅವರ ಆಡಳಿತದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಕಾದ ಸನ್ನಿವೇಶ ಇರುವುದೇ ಇಲ್ಲ. ಅಂತಹ ಉತ್ತಮ ವ್ಯವಸ್ಥೆಯನ್ನು ಕಟ್ಟುವತ್ತ ಪ್ರತಿ ನಾಯಕನು ಅಪೇಕ್ಷೆ ಪಡಬೇಕಷ್ಟೇ. ಅದು ದೂರದೃಷ್ಟಿತನ. ಅದು ಬಿಟ್ಟು ತನ್ನ ಹೆಸರಿನಲ್ಲಿ, ತಾನು ಮಾಡುವ ಪ್ರಚಾರದ ಭರಾಟೆಯಲ್ಲಿ ತನ್ನ ಪಕ್ಷದ ಎಲ್ಲ ಮುಖಂಡರೂ ಗೆಲ್ಲಬೇಕು ಅದೇ ನಿಜವಾದ ಪ್ರಜಾತಂತ್ರ ಎಂದು ಎಣಿಸುವುದು ಮೂರ್ಖತನವಾದೀತು.

ಹಲವು ಸಂಸ್ಕೃತಿಗಳಿಂದ, ಹಲವು ಊಟ ಉಪಚಾರಗಳಿಂದ, ಹಲವು ಊರುಗಳಿಂದ, ಹಲವು ಜಿಲ್ಲೆಗಳಿಂದ, ಹಲವು ನಗರಗಳಿಂದ, ಹಲವು ರಾಜ್ಯಗಳಿಂದ ರೂಪುಗೊಂಡಿರುವುದು ಭಾರತ ದೇಶ. ಇದನ್ನು ತಿರುಗಮುರುಗ ಮಾಡಿ ತಿಳುವಳಿಕೆಯನ್ನು ಕಟ್ಟಿಕೊಳ್ಳಲು ಬರುವುದಿಲ್ಲ. ಆದುದರಿಂದ ಒಂದು ದೇಶದಲ್ಲಿ ಎಲ್ಲವು ಏಕರೂಪತೆಯಿಂದ ನಡೆಯಬೇಕು ಎಂಬ ವಾದವೇ ತಪ್ಪು ಮತ್ತು ವಿಕ್ಷಿಪ್ತ ಕಲ್ಪನೆಯಿಂದ ಕೂಡಿದ್ದು. ಇಂತಹ ವಾದವನ್ನು ಯಾವುದೇ ಕಾರಣಕ್ಕೂ ನಮ್ಮ ಮನಸ್ಸಿನ ಒಳಕ್ಕೆ ಬಿಟ್ಟುಕೊಳ್ಳಬಾರದು. ನಮ್ಮ ಸಂವಿಧಾನ ಭಾರತ ಎಂಬ ಗಣರಾಜ್ಯಕ್ಕೆ ಕೊಡುವ ಸಾರ್ವಭೌಮತೆಯನ್ನು ಪ್ರತಿ ರಾಜ್ಯಕ್ಕೂ ನೀಡಿದೆ. ಆದುದರಿಂದ ಪ್ರತಿ ರಾಜ್ಯವು ವಿಶಿಷ್ಟ. ಪ್ರತಿ ರಾಜ್ಯದ ಅನನ್ಯತೆಯಂತೆ ಪ್ರತಿ ರಾಜ್ಯದ ಸಮಸ್ಯೆಗಳು ಬೇರೆ ಬೇರೆ. ಆ ಅನನ್ಯತೆ ಕಾಯ್ದುಕೊಳ್ಳುವುದು ಮತ್ತು ನಮಗೆ ಹತ್ತಿರವಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು, ಅಂತಾದಕ್ಕೆ ಒತ್ತುನೀಡುವ ಜನಪ್ರತಿನಿಧಿಗಳನ್ನು, ಅಂತಹ ಪಕ್ಷಗಳನ್ನು ಆಯ್ಕೆ ಮಾಡುವ ಮತ್ತು ಬೇಕಿದ್ದಲ್ಲಿ ಬದಲಿಸುವ ಅವಕಾಶ ರಾಜ್ಯಕ್ಕೆ ರಾಜ್ಯದ ಜನತೆಗೆ ಇರಬೇಕು, ಮತ್ತು ಆ ಕೆಲಸಕ್ಕೆ ಅಗತ್ಯವಾದ ಸಮಯ ಮತ್ತು ಕಾಲವೂ ಅಗತ್ಯ. ಇದನ್ನು ಕಸಿಯುವ ಹುನ್ನಾರವೇ ಒಂದು ದೇಶ – ಒಂದು ಚುನಾವಣೆಯ ರಣತಂತ್ರ. ಈ ಲೇಖನ ಅಚ್ಚಾಗುವ ಹೊತ್ತಿಗೆ ನಡೆಯುವ ಸರ್ವಪಕ್ಷಗಳ ಸಭೆಯಲ್ಲಿ ಈ ಐಡಿಯಾವನ್ನು ಪ್ರಾದೇಶಿಕತೆಯನ್ನು ಬೆಂಬಲಿಸುವ ಪಕ್ಷಗಳು ಪ್ರಶ್ನಿಸಿ ಮುಲಾಜಿಲ್ಲದೆ ತಿರಸ್ಕರಿಸುತಿರುತ್ತವೆ ಎಂಬ ನಂಬಿಕೆ ನಮಗಿದೆ. ಅದೇ ರೀತಿ ಇದೊಂದು ಮಧ್ಯಮ ವರ್ಗದ ಜನತೆ ಅಪೇಕ್ಷಿಸುವ ನೀತಿಯಾಗಿ ಸುಳ್ಳು ಸುಳ್ಳು ಪ್ರಚಾರಿದಿಂದ ಮುನ್ನಲೆಗೆ ಬಂದು ಈಗಿರುವ ಪೋಲರೈಸೆಶನ್‍ಅನ್ನು ಇನ್ನಷ್ಟು ಹೆಚ್ಚಿಸುವ ಕುತಂತ್ರವಾಗದೆ ಜನಸಾಮಾನ್ಯರ ವಿವೇಕ ಇದನ್ನು ಸೋಲಿಸುತ್ತದೆ ಎಂಬ ನಂಬಿಕೆಯೂ-ಆಶಾವಾದವೂ ಈ ಹೊತ್ತಿನಲ್ಲಿ ನಮ್ಮ ಜೊತೆಗಿರಲಿ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ. ಎನ್
+ posts

1 COMMENT

  1. ಎಂಪಿ, ಎಂಎಲ್ಎ,ಜಿ.ಪಂ,ತಾಪಂ,ಗ್ರಾಪಂಗಳು ಹಳ್ಳಿಗಳಲ್ಲಾದರೆ,
    ಎಂಪಿ,ಎಂಎಲ್ಎ, ಕಾರ್ಪೋರೇಷನ್/ಸಿಎಂಸಿ/ಟಿಎಂಸಿ…ಗಳಿಗೆ ಎಲೆಕ್ಷನ್ಗಳು ಸರಾಸರಿ ವರುಶಕೊಮ್ಮೆ ಬರುತ್ತಿವೆ.ಇದರಿಂದ ಆಡಳಿತದ ಮೇಲೆ ಅಡ್ಡ ಪರಿಣಾಮ ಆಗುತ್ತಿದೆ.
    ಹಾಗಾಗಿ, ಲೋಕಸಬೆಗೆ ಒಂದುಸಾರಿ,
    ರಾಜ್ಯಗಳಲ್ಲಿ ಎಂಎಲ್ಎ, ಮತ್ತಿತರ ಲೋಕಲ್ ಬಾಡಿಗಳಿಗೆ ಒಂದೇ ಸಲ ಎಲೆಕ್ಶನ್ ಮಾಡುವುದೊಳಿತು.

LEAVE A REPLY

Please enter your comment!
Please enter your name here