Homeಮುಖಪುಟ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

- Advertisement -
- Advertisement -

‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ನುಡಿಗಟ್ಟು ಕೆಳಸಮುದಾಯಗಳನ್ನು ನಿಕೃಷ್ಟವಾಗಿ ಕಂಡಿದೆ. ಭೂತಗಳು ಕೆಳಜಾತಿ ಆರಾಧ್ಯ ದೈವ. ಅಂತ ದೈವಗಳು ಕನಿಷ್ಟ, ಭಗವದ್ಗೀತೆ ಶ್ರೇಷ್ಟ ಎಂಬಂತೆ ಬಿಂಬಿಸಿಕೊಂಡು ಬಂದಿರುವುದನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಭೂತಗಳು ಬಹುಜನರ ರಕ್ಷಕರು. ಈ ಕಾರಣಕ್ಕಾಗಿಯೇ ಭೂತದ ಬಾಯಲ್ಲಿ ಭಗವದ್ಗೀತೆ ನುಡಿಗಟ್ಟು ಹುಟ್ಟಿಕೊಂಡಂತಿದೆ. ಸಹಜವಾಗಿಯೇ ಇಂತಹ ನುಡಿಗಟ್ಟನ್ನು ಎಲ್ಲರೂ ಅಪ್ರಜ್ಞಾಪೂರ್ವಕವಾಗಿ ಬಳಸುವುದು ರೂಢಿಯಲ್ಲಿದೆ. ಹಾಗಾಗಿಯೇ ನಾನು ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ ಎಂಬುದಾಗಿ ಹೇಳುತ್ತೇನೆ. ಕೊಲ್ಲುವ ಕ್ರೂರಿಗಳು ಬದಲಾಗುತ್ತಾರೆ. ಮಾನಸಿಕ ಕ್ರೂರಿಗಳು ನಿತ್ಯವೂ ಕೊಲ್ಲುತ್ತಾರೆ. ಮಾನಸಿಕ ಕ್ರೂರಿಗಳು ಬದಲಾಗುವುದಿಲ್ಲ. ಮಾನಸಿಕ ಕ್ರೌರ್ಯತ್ವ ಸತ್ತರೂ ಅದರ ಶನಿಸಂತಾನ ಹಾಗೆ ಉಳಿದುಹೋಗುತ್ತದೆ.

ಕರ್ಮಠವಾದಿ ಆರ್‌ಎಸ್‍ಎಸ್ ನೀತಿಗಳೇ ದ್ವಂದ್ವ. ಅದರ ಮುಖ್ಯಸ್ಥರು ಇದರಿಂದ ಹೊರತಲ್ಲ. ನುಡಿದಂತೆ ನಡೆಯದ, ನಡೆದಂತೆ ನುಡಿಯದ ಮನಸ್ಥಿತಿ ಅವರದ್ದು. ಅವರಲ್ಲಿ ನಡೆಗೂ ನುಡಿಗೂ ಸಾಮ್ಯತೆಯನ್ನು ಕಾಣಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಸಂಸ್ಕೃತಿ ವಕ್ತಾರರಂತೆ ಕಂಡರೂ ಆಳದಲ್ಲಿ ಅವರು ಆಗಿಲ್ಲ. ‘ವಸುದೈವಂ ಕುಟುಂಬಕಂ’ ಎಂದು ಉಚ್ಚರಿಸಿದರೂ ಹಾಗೆ ನಡೆಯಲೊಲ್ಲರು. ವಿಭಜಕ ಪ್ರವೃತ್ತಿ, ಅರಾಜಕತೆ ಸೃಷ್ಟಿಸುವುದನ್ನೇ ವೃತ್ತಿ ಪ್ರವೃತ್ತಿಯಾಗಿಸಿಕೊಂಡಿರುವ ಆರ್‌ಎಸ್‍ಎಸ್ ಮುಖಂಡರಿಗೆ ಮಾನವೀಯತೆ ಪರಿಕಲ್ಪನೆಯೇ ಗೊತ್ತಿಲ್ಲ ಎಂದು ಹೇಳಬಹುದು.

ಇಷ್ಟೆಲ್ಲ ಹೇಳಲು ಕಾರಣವಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಆಡಿರುವ ಮಾತುಗಳು ಸುಳ್ಳಿಗೆ ಹಿಡಿದ ಕನ್ನಡಿಯಾಗಿವೆ. ‘ಗುಂಪು ಹತ್ಯೆ’ ಪಾಶ್ಚಿಮಾತ್ಯ ದೇಶದ ಪರಿಕಲ್ಪನೆ. ನಮ್ಮ ನೀತಿಶಾಸ್ತ್ರಗಳಲ್ಲಿ ಇಂತಹ ಗುಂಪುಹತ್ಯೆಗಳಿಗೆ ಅವಕಾಶವಿಲ್ಲ. ಆದರೆ ದೇಶವನ್ನು ಕೆಣಕಲು ಭಾರತೀಯ ಸಂದರ್ಭದಲ್ಲಿ ಇದನ್ನು ಬಳಸಬಾರದು. ಗುಂಪುಹತ್ಯೆ ಪ್ರತ್ಯೇಕ ಧಾರ್ಮಿಕ ಪಠ್ಯದಿಂದ ಬಂದಿದೆ. ಅದನ್ನು ಭಾರತೀಯರ ಮೇಲೆ ಹೇರಬಾರದು’ ಎಂದು ಹೇಳಿದ್ದಾರೆ. ಅಂದರೆ ದೇಶದಲ್ಲಿ ಗುಂಪು ಹತ್ಯೆ ನಡೆಯುತ್ತಿರುವಾಗ ಬಂದ ಇಂತಹ ಮಾತುಗಳು ಹಸಿ ಸುಳ್ಳನ್ನೇ ವಿಜೃಂಭಿಸಿದೆ.

ಬ್ರಾಹ್ಮಣರ ಮಾತನ್ನು ಕೇಳಿಯೇ ರಾಮ ವಾಲಿಯನ್ನು ಕೊಂದಿದ್ದು, ಶಂಭೂಕನನ್ನು ಹತ್ಯೆಗೈದಿದ್ದು. ರಾವಣನ ಮೇಲೆ ಯುದ್ದ ಸಾರಿದ್ದು, ಅಣ್ಣತಮ್ಮಂದಿರಲ್ಲಿ ದ್ವೇಷವನ್ನು ಹುಟ್ಟು ಹಾಕಿದ್ದು, ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲ ಕೃಷ್ಣ ಹತ್ತು ಅವತಾರಗಳನ್ನು ಎತ್ತಿದ್ದು, ಎಲ್ಲಿ ಭೂಸುರರಾದ ಬ್ರಾಹ್ಮಣರಿಗೆ ಅಡ್ಡಿಯಾದಾಗ ಮಾತ್ರ ಧರ್ಮಕ್ಕೆ ಚ್ಯುತಿ ಬಂತು. ಇಂತಹ ಸಂದರ್ಭಗಳಲ್ಲಿ ಬಹುಜನರ ನಂಬಿಕೆಗಳಿಗೆ ಬೆಲೆ ಕೊಡಲೇ ಇಲ್ಲ. ಇಂತಹದ್ದೇ ಮಾತುಗಳ ಮೋಹನ್ ಭಾಗವತ್ ಅವರಿಂದ ಬರುತ್ತವೆ. ಆರ್‌ಎಸ್‍ಎಸ್ ಹಿಡೆನ್ ಅಜೆಂಡಾಗಳಿಗೆ ಪ್ರತಿರೋಧ ಕೇಳಿಬಂದಾಗ ಇದು ನಮ್ಮದಲ್ಲ ಎಂಬ ಸಂಸ್ಕೃತಿ ಅವರಿಗೆ ನೆನಪಾಗುತ್ತದೆ. ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಕೆಳ ಜಾತಿಗಳ ಜನರ ಹತ್ಯೆಗಳಿಗೆ ಶ್ರೇಷ್ಟತೆಯ ಲಕ್ಷಣಗಳೇ ಕಾರಣವಾಗಿದ್ದರೂ ಅವನ್ನು ಸುತಾರಾಂ ಒಪ್ಪಲು ಭಾಗವತ್ ಸಿದ್ದರಿಲ್ಲ.

ಆರ್‌ಎಸ್‍ಎಸ್ ಮೂಲ ಬೀಜವೇ ಒಡಕಿನದು. ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಪ್ರಗತಿಪರರನ್ನು ಮುಗಿಸುವುದೇ ಹಿಂದುತ್ವದ ಉದ್ದೇಶ. ಅಖಂಡರಾಷ್ಟ್ರದ ಪರಿಕಲ್ಪನೆಯಲ್ಲಿ ಈ ಮೂರು ವರ್ಗದ ಜನ ಹಿಂದೂತ್ವದ ಅಡಿಯಾಳಾಗಿರಬೇಕು ಎಂಬುದೇ ಆಗಿದೆ. ಪಾಶ್ಚಿಮಾತ್ಯರನ್ನು ಅನುಕರಣೆ ಮಾಡಿ ನಮ್ಮ ಸಂಸ್ಕೃತಿ ಹಾಳಾಗಿದೆ ಎಂದು ಬಿಂಬಿಸುವುದರ ಭಾಗವೇ ಇದಾಗಿದೆ. ಇಂಗ್ಲೀಷ್ ಕಲಿಯದಿದ್ದರೆ, ಇಲ್ಲಿಗೆ ಆಧುನಿಕತೆ ಕಾಲಿಡದೇ ಇದ್ದರೆ ಮೂಲನಿವಾಸಿಗಳು ಹಿಂದೂತ್ವವಾದಿಗಳ ಗುಲಾಮರಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

ಇಲ್ಲಿಯೇ ಹುಟ್ಟಿದ ಬೌದ್ಧಧರ್ಮವನ್ನು ಸಹಿಸದ ಆರ್‌‌ಎಸ್‍ಎಸ್ ಅದರ ಮೂಲೋತ್ಪಾಟನೆಗೆ ಶಪಥ ಮಾಡಿತು. ಅದರ ಮುಂದುವರಿದ ರೂಪ ಮುಸ್ಲಿಮರು ಮತ್ತು ದಲಿತರ ಮೇಲಿನ ದಾಳಿಯಾಗಿದೆ. ಇದರಿಂದ ಬೇಸತ್ತ ದಲಿತರು ಅನಿವಾರ್ಯವಾಗಿ ಬೌದ್ಧ ಧಮ್ಮ ಅನುಸರಿಸುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯಂಥ ಮಹನೀಯರ ಮಾರ್ಗದಲ್ಲಿ ನಡೆಯುತ್ತಿರುವ ಮೂಲನಿವಾಸಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಹುದ್ದೆಗಳನ್ನು ಹಿಡಿದಿದ್ದಾರೆ. ಇದನ್ನು ಸಹಿಸಲು ಭಾಗವತ್‍ಗೆ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಮೋಹನ್ ಭಾಗವತ್ ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಲಿಷ್ಠ ಭಾರತವಾಗಲು ಬಿಡುತ್ತಿಲ್ಲ. ಗುಂಪು ಹತ್ಯೆಯಂತಹ ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ’ ಎಂದು ಹಸೀ ಸುಳ್ಳು ಹೇಳುತ್ತಾರೆ.

ಹಿಂದೂಗಳೆಲ್ಲ ಒಂದು ಎಂದು ಹೇಳುತ್ತಲೇ ವರ್ಣಾಶ್ರಮ ವ್ಯವಸ್ಥೆಯನ್ನು ಮುಂದುವರಿಸುತ್ತಾ, ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರ್‌ಎಸ್‍ಎಸ್ ಅಧಿಕಾರ ಹಿಡಿದು ಈ ದೇಶದ ಜನರನ್ನು ಗುಲಾಮರನ್ನಾಗಿಸಿಕೊಳ್ಳಲು ಸುಳ್ಳುಗಳ ಜಾಲವನ್ನು ಹೆಣೆಯುತ್ತಿದೆ. ಇದನ್ನು ನಂಬುತ್ತಿರುವ ಯುವ ಸಮೂಹ ಗುಂಪು ಹಲ್ಲೆ, ಗುಂಪು ಹತ್ಯೆಯಲ್ಲಿ ತೊಡಗಿದೆ. ಬಲಪಂಥೀಯ ಸಂಘಟನೆಗಳ ಜನರೇ ನೇರವಾಗಿ ಗುಂಪು ಹತ್ಯೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಮೇಲಿನ ಆರೋಪ ತೊಡೆದುಕೊಳ್ಳಲು ಆರ್‌ಎಸ್‍ಎಸ್ ಗುಂಪು ಹತ್ಯೆಗಳಿಗೆ ಪ್ರೇರಣೆ ಪಾಶ್ಚಿಮಾತ್ಯರದ್ದು ಎಂದು ಹೇಳುತ್ತಿದೆ. ಇದನ್ನು ಮೂರ್ಖರು ನಂಬುಬೇಕು ಅಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...