Homeಕರ್ನಾಟಕಭೂಮಿ ಮತ್ತು ವಸತಿ ವಂಚಿತರ ಹೋರಾಟ; ಬೇಡಿಕೆಗಳನ್ನು ಈಡೇರಿಸಿ ಸಿದ್ದರಾಮಯ್ಯನವರಿಗೆ ಸಾಮಾಜಿಕ ನ್ಯಾಯದ ಹರಿಕಾರನಾಗುವ ಅವಕಾಶ!

ಭೂಮಿ ಮತ್ತು ವಸತಿ ವಂಚಿತರ ಹೋರಾಟ; ಬೇಡಿಕೆಗಳನ್ನು ಈಡೇರಿಸಿ ಸಿದ್ದರಾಮಯ್ಯನವರಿಗೆ ಸಾಮಾಜಿಕ ನ್ಯಾಯದ ಹರಿಕಾರನಾಗುವ ಅವಕಾಶ!

- Advertisement -
- Advertisement -

’ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು’ ಎಂಬ ಕವಿವಾಣಿಯ ಅನ್ವಯ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಒಂದು ಮಟ್ಟದ ಸಹಾಯ ಒದಗಿಸಬಲ್ಲ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಈ ಪಂಚ ಕಲ್ಯಾಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಸಲುವಾಗಿ ದಾಪುಗಾಲು ಇಟ್ಟಿದೆ.

ಆದರೆ ’ಅಂತ್ಯೋದಯ’ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಎಲ್ಲ ಸಮಸ್ಯೆಗಳೂ ಇಲ್ಲಿಗೆ ಬಗೆಹರಿಯಲಾಗಿಲ್ಲ. ಅವುಗಳಲ್ಲಿ ಬಹಳ ಮುಖ್ಯವಾದುದು ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ಸಂಬಂಧಿಸಿದ್ದು. ದಶಕಗಳಿಂದ ತುಂಡು ಭೂಮಿಯ ಮೇಲಿನ ಹಕ್ಕಿಗಾಗಿ, ತಲೆಯ ಮೇಲೊಂದು ಸೂರಿನ ಕನಸಿಗಾಗಿ, ಬಂದ ಸರ್ಕಾರಗಳನ್ನೆಲ್ಲ ಒತ್ತಾಯಿಸಿ ಅಲೆದಾಡಿ ಬಡವರು ದಣಿಯುತ್ತಿದ್ದಾರೆ. ಆದರೆ ಈ ದನಿಯಿಲ್ಲದವರ ದನಿಗೆ ಓಗೊಡುವ ಸರ್ಕಾರವೇ ಇಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವಾದರೂ ತಮ್ಮ ಆ ಜನ್ಮಸಿದ್ಧ ಹಕ್ಕನ್ನು ಕೈಗೂಡಿಸುವುದೇ ಎಂದು ಬಡಜನರು ಕಾಯುತ್ತಿದ್ದಾರೆ.

ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ’ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು 2016ರಿಂದ 2018ರ ತನಕ ಹಲವು ಸುತ್ತಿನ ಸುದೀರ್ಘ ಹೋರಾಟವನ್ನು ಕೈಗೊಂಡು ಬಡಜನರಿಗೆ ಆಗುತ್ತಿರುವ ಘೋರ ಅನ್ಯಾಯವನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸಲು ಸತತ ಪ್ರಯತ್ನ ಮಾಡಿತು. ಪರಿಣಾಮವಾಗಿ ಅಂದಿನ ಕಾಂಗ್ರೆಸ್ ಸರಕಾರದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲೇ 2018ರ ಜನವರಿ 28ರಂದು ಹೈಲೆವೆಲ್ ಮೀಟಿಂಗ್ ನಡೆಯಿತು. ಚಳವಳಿಯ ಎಲ್ಲಾ ಹಕ್ಕೊತ್ತಾಯಗಳು ನ್ಯಾಯಸಮ್ಮತವಾಗಿಯೂ ಕಾರ್ಯಸಾಧುವಾಗಿಯೂ ಇವೆ ಎಂದು ಆ ಸಭೆ ಒಪ್ಪಿಕೊಂಡಿತು. ಜನರನ್ನು ಎತ್ತಂಗಡಿ ಮಾಡಬಾರದು, ಭೂಮಿ ಹಕ್ಕಿಗಾಗಿ ಅರ್ಜಿ ಹಾಕಿದವರಿಗೆ ಇನ್ನೊಂದು ಅವಕಾಶವಾಗಿ ಫಾರಂ ನಂ 57ರ ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಭೂ ಮಂಜೂರಾತಿಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಹೋರಾಟ ಸಮಿತಿಯ ಇಬ್ಬರು ಸದಸ್ಯರನ್ನು ಒಳಗೊಂಡಂತೆ ’ಹೈಲೆವೆಲ್ ಕಮಿಟಿ’ಯನ್ನು ರಚಿಸಿತು. ಕೆಲಸಗಳು ಪ್ರಾರಂಭವಾದುವು. ರಾಜ್ಯದ 31 ಜಿಲ್ಲೆಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅವುಗಳನ್ನು ಅಕ್ರಮ ಸಕ್ರಮವಾಗಿ ವಿಂಗಡಿಸಿ ಹಾಗೂ ವಿಲೇವಾರಿಗೆ ಅರ್ಹವಾದವುಗಳನ್ನು ಕಾನೂನುಬದ್ಧಗೊಳಿಸಿ ಜಾರಿ ಮಾಡುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ಅಷ್ಟುಹೊತ್ತಿಗೆ ಚುನಾವಣೆಗಳು ನಡೆದು ರಾಜಕೀಯ ಅಸ್ಥಿರತೆ ಏರ್ಪಟ್ಟಿತು. ಅದರ ನಂತರ ’ಆಪರೇಷನ್ ಕಮಲ’ ನಡೆಸಿ ಬಿಜೆಪಿಯು ಅಧಿಕಾರಕ್ಕೆ ಬಂದಿತು. ಆಗ ಅಲ್ಲಿವರೆಗೆ ಕೊಂಚವಾದರೂ ಮುಂದೆ ಚಲಿಸುತ್ತಿದ್ದ ಬಡವರ ಈ ಕೆಲಸ ನಿಂತುಹೋಯಿತು.

ನಂತರ ನಡೆದದ್ದು- ಇದ್ದಬದ್ದ ಭೂಮಿಯನ್ನೆಲ್ಲಾ ಬಿಜೆಪಿ ಸರ್ಕಾರವು ತನಗೆ ಬೇಕಾದ ಮಠಮಾನ್ಯಗಳಿಗೆ, ಸಂಘಪರಿವಾರದ ಟ್ರಸ್ಟ್ ಮತ್ತು ಸಂಸ್ಥೆಗಳಿಗೆ, ಕಾರ್ಪೊರೆಟ್ ಕಂಪನಿಗಳಿಗೆ ಹಾಗೂ ಬಲಾಢ್ಯ ಪ್ಲಾಂಟರುಗಳಿಗೆ ಪರಭಾರೆ ಮಾಡಿಕೊಟ್ಟಿದ್ದು ಮಾತ್ರ. ಬಡವರ ಭೂಮಿಗೆ ಸಂಬಂಧಿಸಿದ ಯಾವ ಹಕ್ಕೂ ದಕ್ಕಲಿಲ್ಲ. ಬಿಜೆಪಿಯ ಈ ಜನದ್ರೋಹ ಹಾಗೂ ಅದು ಸ್ಫುರಿಸಿದ ದ್ವೇಷದ ಕಾರಣದಿಂದಲೇ ಅದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಮತ್ತು ಇಂದಿಗೂ ಬಿಜೆಪಿಯು ರಾಜ್ಯದಲ್ಲಿ ಒಬ್ಬ ಅಧಿಕೃತ ವಿರೋಧ ಪಕ್ಷದ ನಾಯಕನನ್ನು ನಿಯೋಜಿಸದೆ ಹೈಕಮಾಂಡಿನತ್ತ ನೋಡುತ್ತ ನಿಂತಿದೆ.

ಹೆಚ್.ಎಸ್. ದೊರೆಸ್ವಾಮಿ

ಪ್ರಸ್ತುತ ’ಅಂತ್ಯೋದಯ’ಕ್ಕೆ ಹಿಂದೆ ನಾಂದಿ ಹಾಡಿದ ಸಿದ್ದರಾಮಯ್ಯನವರ ಸರ್ಕಾರವೇ ಮತ್ತೆ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವುದು ಸರಿಯಷ್ಟೆ. ಬಡಜನರು ಇನ್ನಾದರೂ ತಮಗೆ ನ್ಯಾಯ ದೊರೆಯಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಅಷ್ಟು ಸುಲಭವಾಗಿ ಇದು ಆಗುವ ಕೆಲಸವಲ್ಲ ಎಂಬ ಆತಂಕವೂ ಅವರಲ್ಲಿದೆ. ಈ ಕಾರಣದಿಂದಾಗಿಯೇ ಸರಕಾರದ ಗಮನ ಸೆಳೆಯಲು ಮತ್ತು ಈ ಕಾರ್ಯಕ್ಕೆ ಮತ್ತೆ ಚಾಲನೆ ಪಡೆಯುವಂತೆ ಮಾಡಲು ಕಳೆದ ಆಗಸ್ಟ್ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ’ಬದುಕಿನ ಸ್ವಾತಂತ್ರ್ಯಕ್ಕಾಗಿ ಬಡವರ ಬರಿಹೊಟ್ಟೆ ಸತ್ಯಾಗ್ರಹ’ ಎಂದು ಬ್ಯಾನರ್ ಕಟ್ಟಿ ಸತ್ಯಾಗ್ರಹ ಕೂಡ ನಡೆಸಲಾಯಿತು. ಈ ಸತ್ಯಾಗ್ರಹದ ಹಕ್ಕೊತ್ತಾಯಗಳಲ್ಲಿ ಕೆಲವು:

  1. ಮುಖ್ಯಮಂತ್ರಿ, ಕಂದಾಯ ಮಂತ್ರಿ, ಅರಣ್ಯ ಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಮತ್ತು ಹೋರಾಟದ ಪ್ರತಿನಿಧಿಗಳು ಇರುವಂತೆ ’ಉನ್ನತ ಮಟ್ಟದ ಸಭೆ’ (ಹೈಲೆವೆಲ್ ಕಮಿಟಿ)ಯನ್ನು ಕರೆಯಬೇಕು.
  2. ಭೂಮಿ, ನಿವೇಶನ ಮತ್ತು ಮನೆಗಳ ಮಂಜೂರಾತಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಇದನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಇದಕ್ಕೆ ಒಬ್ಬರು ಸಂಪುಟ ದರ್ಜೆ ಸಚಿವರ ಉಸ್ತುವಾರಿ ಇರಬೇಕು.
  3. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಭೂ ಮಂಜೂರಾತಿ ಸಮಿತಿಗಳನ್ನು ಕೂಡಲೇ ರಚಿಸಬೇಕು. ಈ ಸಮಿತಿಯಲ್ಲಿ ಒಬ್ಬ ಹೋರಾಟಗಾರ ಪ್ರತಿನಿಧಿ ಕೂಡ ಇರಬೇಕು.
  4. ಅರ್ಜಿ ಸಲ್ಲಿಸಿ ಕೃಷಿ ಮಾಡುತ್ತಿರುವ ಭೂಮಿಗೆ ಹಾಗೂ ವಾಸಿಸುತ್ತಿರುವ ಮನೆಗೆ ವಿಳಂಬ ಮಾಡದೆ ಹಕ್ಕುಪತ್ರ ವಿತರಿಸಬೇಕು.
  5. ರೈತರು ಹೋರಾಟಗಾರರ ಮೇಲೆ ಅರಣ್ಯ ಇಲಾಖೆ, ಪೊಲೀಸರು ದಾಖಲಿಸಿರುವ ಕೇಸುಗಳನ್ನು ಬೇಷರತ್ತು ವಾಪಸ್ಸು ಪಡೆಯಬೇಕು.
  6. ಐದು ಎಕರೆಗಿಂತ ಕಡಿಮೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಅರ್ಜಿದಾರರ ಮನವಿಯನ್ನು ಅನಧಿಕೃತ ಎಂದು ಬಗೆದು ಅವರ ಒತ್ತುವರಿಯನ್ನು ತೆರವು ಮಾಡಬಾರದು.

ಇದನ್ನೂ ಓದಿ: ಭೂಮಿ, ವಸತಿ ಹಕ್ಕು ಸಿಗುವವರೆಗೂ ಹೋರಾಟ ನಿಲ್ಲದು: ದೊರೆಸ್ವಾಮಿ ಹೆಸರಿನಲ್ಲಿ ಭೂಮಿ ವಂಚಿತರಿಂದ ಪ್ರತಿಜ್ಞೆ

ಗಾಂಧಿವಾದಿ ಸ್ವಾತಂತ್ರ್ಯ ಸೇನಾನಿ ದಿವಂಗತ ಹೆಚ್.ಎಸ್. ದೊರೆಸ್ವಾಮಿಯವರ ಅನುಯಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊರೆಸ್ವಾಮಿಯವರ ಕನಸನ್ನು ಈಡೇರಿಸುವ ಒಂದು ಸದವಕಾಶ ಈಗ ಕೂಡಿಬಂದಿದೆ. ಈ ಒಂದು ಅವಕಾಶವನ್ನು ಆಗುಮಾಡುವ ಮೂಲಕ ದಶಕಗಳ ಹಿಂದೆ ನವಕರ್ನಾಟಕದ ನಿರ್ಮಾಪಕ, ಆಧುನಿಕ ಕರ್ನಾಟಕದ ಪ್ರಗತಿಪಥಕ್ಕೆ ನಾಂದಿಹಾಡಿದ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಡಿ.ದೇವರಾಜ ಅರಸು ಅವರ ಪರಂಪರೆಯನ್ನು ಮುಂದುವರೆಸುವ ಮೂಲಕ ಕರ್ನಾಟಕವನ್ನು ರಾಷ್ಟ್ರದ ಮಾದರಿ ರಾಜ್ಯವನ್ನಾಗಿ ಮಾಡಬಹುದು.

ಅರಸು ಅವರ ಅವಧಿಯಲ್ಲಿ ಆದ ಸುಧಾರಣೆಗಳು ಕರ್ನಾಟಕದ ಪ್ರಗತಿಯ ದಿಕ್ಕನ್ನೇ ಬದಲಿಸಿತು. ಪರಿಣಾಮವಾಗಿ, ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ವಿರೋಧಿಸಿ ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಹೋದರೂ ಅರಸು ಅವರ ಮುಂದಾಳತ್ವದ ಕಾಂಗ್ರೆಸ್(ಐ) 1978ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲು ಸಾಧ್ಯವಾಯಿತು.

1972ರಿಂದ 1980ರವರೆಗೆ ಸುಮಾರು ಎಂಟು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅರಸು ಅವರು ದೇಶದ ರಾಜಕೀಯಕ್ಕೆ ಮೌನಕ್ರಾಂತಿಯ ನಾಂದಿ ಹಾಡಿದ ಅಪ್ರತಿಮ ಸಾಹಸಿ ಎಂಬುದನ್ನು ಯಾರಾದರೂ ಒಪ್ಪಬೇಕು. ರಾಜ್ಯದ ಅಪಾರ ದೀನ ದಲಿತ ಜನಸಮೂಹದ ಪ್ರಶಂಸೆಗೆ ಅವರು ಪಾತ್ರರಾದರು. ಅರಸು ಆಡಳಿತದ ಅವಧಿಯೆಂದರೆ, ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಿದ ಹನ್ನೆರಡನೇ ಶತಮಾನದ ವಚನ ಚಳವಳಿಯನ್ನು ನೆನಪಿಗೆ ತರುವ ಸಂಘರ್ಷ ಪರ್ವ. ಅವರು ಕೈಗೆತ್ತಿಕೊಂಡ ಅನೇಕ ಪ್ರಗತಿಗಾಮಿ ಕಾರ್ಯಕ್ರಮಗಳು ರಾಜ್ಯದ ಮುನ್ನಡೆಗೆ ಕಾರಣವಾದವು. ದುರ್ಬಲ ವರ್ಗದವರು ಕೀಳರಿಮೆಯನ್ನು ತೊರೆದು ಆತ್ಮಾಭಿಮಾನದಿಂದ ಮುಂದಡಿಯಿಡುವಂತಾಯಿತು. ಜಡಗಟ್ಟಿದ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ ಸಮಾನತೆಯ ಕಾರ್ಯಸೂಚಿಗಳನ್ನು ಅನುಷ್ಠಾನಕ್ಕೆ ತಂದರು.

ದೇವರಾಜು ಅರಸು

ಭೂಸುಧಾರಣಾ ಶಾಸನ, ಜೀತಪದ್ಧತಿ ನಿಷೇಧ, ಸಾಲಮನ್ನಾ ಶಾಸನ, ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ, ಹಾವನೂರು ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದ ಮೀಸಲಾತಿ ಸೌಲಭ್ಯ ಮುಂತಾದ ಅನೇಕ ದೂರಗಾಮಿ ಹಾಗೂ ಪುರೋಗಾಮಿ ಶಾಸನಗಳನ್ನು ಅರಸು ಆಳ್ವಿಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಪಟ್ಟಿತು. ಆದರೆ, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮಶೆಟ್ಟರು ಅಭಿಪ್ರಾಯ ಪಡುವಂತೆ, ವ್ಯವಸ್ಥೆಯ ಪರವಾಗಿದ್ದ ಪತ್ರಿಕಾ ಪ್ರಪಂಚ ಅರಸು ಅವರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದಿರಲಿ, ’ಭ್ರಷ್ಟತೆಯನ್ನು ಹುಟ್ಟುಹಾಕಿದರು ಅರಸು’ ಎಂದು ಜಗಜ್ಜಾಹೀರು ಮಾಡಿತು. ಆದರೂ ’ಅರಸುಗಳಿಗಿದು ವೀರ’ ಎಂಬಂತೆ ಅವರು ಧೀರ ಗಂಭೀರವಾಗಿಯೇ ಮುನ್ನಡೆದರು. ಆ ದಿನ ಅವರು ಹಾಗೆ ನಡೆದುಕೊಳ್ಳದಿದ್ದರೆ ಅವರ ನಂತರದ ದಶಕದಲ್ಲಿ ಕೆಳ ವರ್ಗಗಳಿಂದ ಬಂದ ಬಂಗಾರಪ್ಪ, ವೀರಪ್ಪ ಮೊಯ್ಲಿ ಹಾಗೂ ದೇವೇಗೌಡರಂತಹ ಶೂದ್ರ ನಾಯಕರು ಉನ್ನತ ಪದವಿಗೇರಲು ಅವಕಾಶ ದೊರೆಯುತ್ತಿರಲಿಲ್ಲವೇನೋ? ಆ ಮಾತಿರಲಿ!

ಈ ಕಾರಣದಿಂದಲೇ ಕರ್ನಾಟಕದಲ್ಲಿ ದೇವರಾಜು ಅರಸು ಅವರು ಜಾರಿಗೊಳಿಸಿದ ಅನೇಕ ಕ್ರಾಂತಿಕಾರಿ ಶಾಸನಗಳನ್ನು ಉತ್ತರದ ಅನೇಕ ರಾಜ್ಯಗಳು ಜಾರಿಗೆ ತರಲು ಯತ್ನಿಸಿದವು. ಇದೇ ಮಾದರಿಯಲ್ಲಿ ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರವೂ ಸಹ ಈಗಾಗಲೇ ಪ್ರಗತಿಪರ ಪಂಚಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಗಳು ಕೇವಲ ಚುನಾವಣೆ ಗಿಮಿಕ್ಕು ಎಂದು ಕೆಲವರು ಆಡಿಕೊಳ್ಳುತ್ತಿದ್ದರೂ ನವಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಇಟ್ಟ ದಿಟ್ಟ ಹಜ್ಜೆ ಎನ್ನಲೇಬೇಕಾಗಿದೆ. ಇದರೊಟ್ಟಿಗೆ ಭೂಮಿ ಮತ್ತು ವಸತಿವಂಚಿತರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ಸುಗ್ರೀವಾಜ್ಞೆ ತಂದಾದರೂ ಭೂಮಿ ಮತ್ತು ವಸತಿ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಅರಸು ಅವರಂತೆ ಸಿದ್ದರಾಮಯ್ಯನವರೂ ಸಹ ಮೌನಕ್ರಾಂತಿಗೆ ಸಿದ್ಧರಾಗುವುದಾದರೆ ಇವರ ಹೆಸರೂ ಇತಿಹಾಸದಲ್ಲಿ ದಾಖಲಾಗುತ್ತದೆ.

ಈ ಸಂದರ್ಭದಲ್ಲಿ ಬಿ.ಆರ್.ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದ ಭಾಷಣದ ಈ ಮಾತುಗಳನ್ನು ನೆನೆಯುವುದು ಸೂಕ್ತ. ’ನಾವು ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಉಳಿಯಲಾರದು. ಮತ್ತೊಂದು ಮರೆಯಲಾರದ ಮಾತು. ಎಷ್ಟೇ ಒಳ್ಳೆಯ ಸಂವಿಧಾನವಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗಿರದಿದ್ದರೆ ಅದರ ಗುರಿ ಉದ್ದೇಶ ಈಡೇರುವುದಿಲ್ಲ. ಸಂವಿಧಾನ ಸರಿ ಇಲ್ಲದಿದ್ದರೂ, ಅದನ್ನು ಜಾರಿಗೊಳಿಸುವವರು ಸರಿಯಿದ್ದರೆ ಅದರ ಫಲಿತಾಂಶ ಉತ್ತಮವೇ ಆಗಿರುತ್ತದೆ’ ಎಂದಿದ್ದರು. ಈ ಮಾತುಗಳನ್ನು ಸಿದ್ದರಾಮಯ್ಯನವರು ನೆನಪಿಸಿಕೊಂಡರೆ ಒಳ್ಳೆಯದು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...