Homeಕರ್ನಾಟಕ‘ಒಪಿಎಸ್ ಜಾರಿ ಸಾಧ್ಯವಿಲ್ಲ’: ಗೌರ್ಮೆಂಟ್ ನೌಕರರ ಗಾಯಕ್ಕೆ ಉಪ್ಪು ಸವರಿದ ಸರ್ಕಾರ

‘ಒಪಿಎಸ್ ಜಾರಿ ಸಾಧ್ಯವಿಲ್ಲ’: ಗೌರ್ಮೆಂಟ್ ನೌಕರರ ಗಾಯಕ್ಕೆ ಉಪ್ಪು ಸವರಿದ ಸರ್ಕಾರ

- Advertisement -
- Advertisement -

ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಸರ್ಕಾರ ನೌಕರರಿಗೆ ಸರ್ಕಾರ ಬರೆ ಎಳೆದಿದೆ.

“ಒಪಿಎಸ್ ಜಾರಿ ಸಾಧ್ಯವಿಲ್ಲ” ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ನೌಕರರ ಗಾಯಕ್ಕೆ ಉಪ್ಪು ಸವರಿದೆ. “ವೋಟ್ ಫಾರ್‌ ಒಪಿಎಸ್‌ (ಒಪಿಎಸ್ ಜಾರಿಗೊಳಿಸಿದವರಿಗೆ ನಮ್ಮ ಮತ)” ಎಂದಿರುವ ನೌಕರರು ಮುಂದೇನು ನಿಲುವು ತಾಳುತ್ತಾರೆಂಬುದು ಸದ್ಯದ ಕುತೂಹಲ.

“ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿ ತರುವ ಚಿಂತನೆ ಸರ್ಕಾರಕ್ಕಿಲ್ಲ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರಶ್ನೆಗೆ ಉತ್ತರಿಸಿರುವ ಬೊಮ್ಮಾಯಿ, “ಹಳೆ ಪಿಂಚಣಿ (ಒಪಿಎಸ್) ಜಾರಿ ತರುವ ಯೋಜನೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಹೊಸ ಪಿಂಚಣಿ ಯೋಜನೆಯ(ಎನ್‌ಪಿಎಸ್) ಸರ್ಕಾರಿ ನೌಕರರಿಗೆ ಹಣಕಾಸಿನ ಸಂಕಷ್ಟದ ಜೊತೆ, ಸಾಮಾಜಿಕ ಅಭದ್ರತೆಯನ್ನು ಸೃಷ್ಟಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎನ್.ಪಿ.ಎಸ್.ನಿಂದ ಅತ್ಯಲ್ಪ, ಪಿಂಚಣಿ ಪಡೆಯುತ್ತಿರುವ ಸಾವಿರಾರು ನೌಕರರ ಸ್ಥಿತಿ ಹಳೆಯ ಪಿಂಚಣಿ ಯೋಜನೆಯ ನೌಕರರಿಗಿಂತ ತೀರಾ ಭಿನ್ನವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಈ ತಾರತಮ್ಯ ಹೋಗಲಾಡಿಸಲು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಕೈಗೊಂಡ ಕ್ರಮಗಳೇನು?” ಎಂದು ರೇಣುಕಾಚಾರ್ಯ ಕೇಳಿದ್ದರು.

ಮುಂದುವರಿದು, ಹೊಸ ಪಿಂಚಣಿ ಅಳವಡಿಸಿಕೊಂಡಿರುವ ಪಂಜಾಬ್, ರಾಜಸ್ತಾನ, ಛತ್ತೀಸ್‌ಘಡ, ಜಾರ್ಖಂಡ್ ಹಾಗೂ ಮತ್ತಿತರ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸಿದ್ದು, ಈ ರಾಜ್ಯಗಳ ಮಾದರಿ ಅನುಸರಿಸಲು ಸರ್ಕಾರಕ್ಕೆ ಇರುವ ತೊಡಕುಗಳೇನು, ಈ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆಯೇ? ಹಾಗೂ ನೌಕರರ ನಿವೃತ್ತಿ ಜೀವನ ಉತ್ತಮಪಡಿಸುವಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆಯೇ; ಹಾಗಿದ್ದಲ್ಲಿ, ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು.

ಇದಕ್ಕುತ್ತರಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟು ನಿಧಿಯ ಆಧಾರ ಇಲ್ಲದಿರುವುದರಿಂದ ಹಾಗೂ ರಿಸರ್ವ್ ಬ್ಯಾಂಕ್‌ನವರು ರಚಿಸಿದ ಸಮಿತಿಯ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದಿನಾಂಕ 01-01-2004ರಿಂದ ಯೋಜನೆ ಜಾರಿಗೊಳಿಸಿರುತ್ತದೆ ಎಂದು ತಿಳಿಸಿದ್ದಾರೆ. ಅದರಂತೆಯೇ ಇತರೆ ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ, ಕರ್ನಾಟಕ ಕೂಡ ಸರ್ಕಾರದ ಆದೇಶ ಸಂಖ್ಯೆ: ಆಇ (ಎಸ್.ಪಿ.ಎಲ್.) 04 ಪಿಇಟಿ 2005, ದಿನಾಂಕ: 31.03.2006ರನ್ವಯ ದಿನಾಂಕ 01.04.2006 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುತ್ತದೆ. ಹೀಗಾಗಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ.

ops answer

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಡಿ.28ಕ್ಕೆ 10ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆಯೇ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಈ ಉತ್ತರವೀಗ ಓಪಿಎಸ್ ಜಾರಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸರ್ಕಾರಿ ನೌಕರರ ಹೋರಾಟಕ್ಕೆ ಹಿನ್ನಡೆಯುಂಟು ಮಾಡಿದೆ.

ಇತ್ತೀಚೆಗೆ ‘ನಾನುಗೌರಿ.ಕಾಂ/ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, “ಯಾವುದೇ ಸರ್ಕಾರಿ ನೌಕರರಲ್ಲಿ ಅಭದ್ರತೆಯನ್ನು ಉಂಟುಮಾಡುವುದೇ ಇವರ ನೀತಿಯಾಗಿದೆ. ಹೀಗಾಗಿಯೇ ಹೊರಗುತ್ತಿಗೆ ಎಂಬುದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರ್ಕಾರಿ ನೌಕರರನ್ನೂ ಹೊರಗುತ್ತಿಗೆ ನೌಕರರಂತೆ ನೋಡಿಕೊಳ್ಳಲಾಗುತ್ತಿದೆ” ಎಂದಿದ್ದರು.

ಇದನ್ನೂ ಓದಿರಿ: ’ವೋಟ್ ಫಾರ್ ಒಪಿಎಸ್’; ಸರ್ಕಾರಿ ನೌಕರರ ಕೂಗು ಆಲಿಸುವರೇ ಬೊಮ್ಮಾಯಿ?

“ಎನ್‌ಪಿಎಸ್ ವಿಚಾರವಾಗಿ ಆರಂಭದಲ್ಲಿ ನೌಕರರನ್ನು ನಂಬಿಸಲಾಯಿತು. ನೌಕರರು ಕೋಟ್ಯಾಧಿಪತಿಗಳಾಗುತ್ತಾರೆ, ಷೇರುಪೇಟೆಯಿಂದ ಕೋಟಿಕೋಟಿ ರೂಪಾಯಿ ಲಾಭವಾಗುತ್ತದೆ ಎಂದು ತಿಳಿಸಲಾಯಿತು. ವಾಸ್ತವ ಬೇರೆಯಾಗಿದೆ. ನನ್ನ ಬಳಿಯೇ ಇರುವ ಕೆಲವು ಅಧಿಕೃತ ಮಾಹಿತಿಯ ಪ್ರಕಾರ ಎನ್‌ಪಿಎಸ್‌ನಿಂದಾಗಿ ನಿವೃತ್ತರು 1000 ರೂಪಾಯಿ, ಕೆಲವರು 900 ರೂಪಾಯಿ, ಕೆಲವರು 700 ರೂಪಾಯಿ ಮಾಸಿಕವಾಗಿ ಪಡೆಯುತ್ತಿದ್ದಾರೆ” ಎಂದು ವಿಷಾದಿಸಿದ್ದರು.

“ಸರ್ಕಾರಿ ಸೇವೆ ಸಲ್ಲಿಸಿದವರಿಗೆ ಒಪಿಎಸ್ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಒಪಿಎಸ್‌ನಿಂದ ಆರ್ಥಿಕ ಹೊರೆಯಾಗುತ್ತದೆ ಎಂದು ಅನೇಕರು ವಾದಿಸುತ್ತಾರೆ. ಆದರೆ 1935ರಿಂದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿತ್ತು. ಎಂಟು ದಶಕಗಳಿಂದ ಆಗದ ಆರ್ಥಿಕ ಹೊರೆ ಈಗ ಆಗುತ್ತದೆ ಎಂಬುದಕ್ಕೆ ಅರ್ಥವೇ ಇಲ್ಲ” ಎಂದು ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಸರ್ಕಾರಿ ನೌಕರರ ದುಡಿಮೆಯ ಫಲದ ಶೇಕಡಾ 10%ನ್ನು ಜೂಜಾಟಕ್ಕೆ ಬಲಿ ಕೊಟ್ಟು …
    30ರಿಂದ 35ವರ್ಷದ ವೃತ್ತಿ ಜೀವನವನ್ನು ಸರ್ಕಾರಕ್ಕೆ ಮುಡಿಪಾಗಿಟ್ಟ ನೌಕರರ ಹಾಗೂ ಅವನ ಕುಟುಂಬವನ್ನು ಬೀದಿಪಾಲು ಮಾಡುತ್ತಿರುವ ನಿಮಗೆ ಮಾನವೀಯತೆ ಎಂಬ ಪದದ ಅರ್ಥ ಗೊತ್ತಿದೆಯೇ….,? NPS ಯೋಜನೆ ಕೇವಲ ಬಂಡವಾಳ ಶಾಹಿಗಳ ಉದ್ದಾರಕ್ಕೆ… ಹೊರತು ಸರ್ಕಾರ ಅಥವಾ ಸಾಮಾನ್ಯ ಜನರ ಅನುಕೂಲಕ್ಕಲ್ಲ ಎಂಬ ಸಾಮಾನ್ಯಜ್ಞಾನವೂ ನಿಮಗಿಲ್ಲವೇ…?

  2. MLA ಗಳಿಗೆ ತುಂಬಾ ಕಷ್ಟ ಇದೆ ಅವರಿಗೆ ಇದನ್ನು ಬುಟ್ಟರೆ ಅವರಿಗೆ ಗತಿ ಇಲ್ಲ ಇವಗ ತಿಂತೀರೋದು ಸಾಕು ಆಗಲ್ಲ ಅದಕ್ಕೆ OPS ಇವರಿ ಬೇಕು ಆದರೆ ಸರ್ಕಾರಿ ನೌಕರರಿಗೆ nps ಯಾಕೆ ಈರೀತಿ ಇಲ್ಲ ಅಂದ್ರೇ ಇದರ ಬಗ್ಗೆ ತಿದ್ದುಪಡಿ ಮಾಡಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...