Homeಮುಖಪುಟಒಬಿಸಿಗಳಿಗೆ ರಾಜಕೀಯ ಮೀಸಲಾತಿ ನೀಡಿಯೇ ಚುನಾವಣೆಗೆ ಹೋಗುತ್ತೇವೆ: ಯೋಗಿ ಆದಿತ್ಯನಾಥ್

ಒಬಿಸಿಗಳಿಗೆ ರಾಜಕೀಯ ಮೀಸಲಾತಿ ನೀಡಿಯೇ ಚುನಾವಣೆಗೆ ಹೋಗುತ್ತೇವೆ: ಯೋಗಿ ಆದಿತ್ಯನಾಥ್

- Advertisement -
- Advertisement -

“ಉತ್ತರ ಪ್ರದೇಶ ರಾಜ್ಯವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲಿದೆ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅಡಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

“ಸಮೀಕ್ಷೆ ಮತ್ತು ಮೀಸಲಾತಿ ನೀಡುವ ಮೊದಲು ಚುನಾವಣೆ ನಡೆಸುವುದಿಲ್ಲ. ಅಗತ್ಯ ಬಿದ್ದರೆ ರಾಜ್ಯವು ತಕ್ಷಣವೇ ಚುನಾವಣೆ ಅಧಿಸೂಚನೆಗೆ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಲಿದೆ” ಎಂದಿದ್ದಾರೆ.

“ನಾವು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಆಧಾರದ ಮೇಲೆ ಒಬಿಸಿಗಳ ಸಮೀಕ್ಷೆ ನಡೆಸುವ ಆಯೋಗವನ್ನು ರಚಿಸುತ್ತೇವೆ. ಒಬಿಸಿಗಳಿಗೆ ಮೀಸಲಾತಿ ನೀಡದೆ ನಾವು ಚುನಾವಣೆಗೆ ಹೋಗುವುದಿಲ್ಲ. ಅಗತ್ಯವಿದ್ದರೆ, ಹೈಕೋರ್ಟ್ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ” ಎಂದು ಆದಿತ್ಯನಾಥ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಒಬಿಸಿಗಳಿಗೆ ಮೀಸಲಾತಿ ಹಂಚದೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಹೊರಡಿಸಲಾಗಿದ್ದ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ, ಸೌರವ್ ಲಾವಾನಿಯಾ ಅವರ ವಿಭಾಗೀಯ ಪೀಠವು ಒಬಿಸಿಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಮೀಸಲಾತಿ ನೀಡಬೇಕೆಂದು ಹೇಳಿದೆ. ಡಿಸೆಂಬರ್ 5 ರ ರಾಜ್ಯದ ಕರಡು ಅಧಿಸೂಚನೆಯನ್ನು ವಜಾಗೊಳಿಸಿದೆ.

ರಾಜ್ಯದ 17 ಮುನ್ಸಿಪಲ್ ಕಾರ್ಪೊರೇಷನ್‌ಗಳ ಮೇಯರ್‌ಗಳು, 200 ಮುನ್ಸಿಪಲ್ ಕೌನ್ಸಿಲ್‌ಗಳು ಮತ್ತು 545 ನಗರ ಪಂಚಾಯತ್‌ಗಳ ಅಧ್ಯಕ್ಷರಿಗೆ ಮೀಸಲಾತಿ ಸ್ಥಾನಗಳ ತಾತ್ಕಾಲಿಕ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತು. 2017ರ ಚುನಾವಣೆಗಳಲ್ಲಿ ಒದಗಿಸಿದಂತೆ ಸುಮಾರು 30 ಪ್ರತಿಶತದಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು.

ನಾಲ್ಕು ಮೇಯರ್ ಸ್ಥಾನಗಳು (ಅಲಿಗಢ್, ಮಥುರಾ-ವೃಂದಾವನ, ಮೀರತ್ ಮತ್ತು ಪ್ರಯಾಗ್ರಾಜ್) ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾಗಿತ್ತು. ಅಲ್ಲದೆ, 200 ಮುನಿಸಿಪಲ್ ಕೌನ್ಸಿಲ್‌ಗಳಲ್ಲಿ ಅಧ್ಯಕ್ಷ ಸ್ಥಾನಗಳು ಒಬಿಸಿಗಳಿಗೆ, 545 ನಗರ ಪಂಚಾಯತ್‌ಗಳಲ್ಲಿ 147 ಅಧ್ಯಕ್ಷ ಸ್ಥಾನಗಳನ್ನು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕಡ್ಡಾಯ ಸಮೀಕ್ಷೆಯಿಲ್ಲದೆ ಒಬಿಸಿಗಳಿಗೆ ಮೀಸಲಾತಿ ನೀಡುವ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ ಸರ್ಕಾರದ ನಡೆಯನ್ನು ಟೀಕಿಸಿವೆ.

ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಸೂತ್ರವನ್ನು ಅನುಸರಿಸಬೇಕು ಮತ್ತು ಮೀಸಲಾತಿ ನಿಗದಿಪಡಿಸುವ ಮೊದಲು ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಆಯೋಗವನ್ನು ರಚಿಸಬೇಕು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಇದನ್ನೂ ಓದಿರಿ: ತೀರ್ಥಹಳ್ಳಿ: ನಾಡಗೀತೆ ತಿರುಚಿದ ವ್ಯಕ್ತಿಯಿಂದ ಕುವೆಂಪು ಕುರಿತು ಉಪನ್ಯಾಸ; ಕಾರ್ಯಕ್ರಮ ನಡೆಸದಂತೆ ಜನರ ಎಚ್ಚರಿಕೆ

ಒಬಿಸಿ ಕೋಟಾದ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸುವ ಮೊದಲು ಒಬಿಸಿಗಳ ಕುರಿತು ಸಮಕಾಲೀನ ಡೇಟಾವನ್ನು ಹೊಂದಲು ರಾಜ್ಯಗಳು ‘ಟ್ರಿಪಲ್ ಟೆಸ್ಟ್ ಸಮೀಕ್ಷೆ’ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ರಾಜಕೀಯ ಕೋಟಾದ ಮಾನದಂಡವು ಉದ್ಯೋಗ ಮತ್ತು ಶಿಕ್ಷಣದ ಮಾನದಂಡಕ್ಕಿಂತ ಭಿನ್ನವಾಗಿದೆ. ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಮಾದರಿಗಳನ್ನು ಸರಿಪಡಿಸಲು ಸಮೀಕ್ಷೆಯ ಅಗತ್ಯವಿದೆ ಎಂದು ವಾದಿಸಲಾಗಿತ್ತು.

ತ್ರಿವಳಿ ಪರೀಕ್ಷಾ ಸೂತ್ರದ ಪ್ರಕಾರ ರಾಜ್ಯಗಳು ಆಯೋಗವನ್ನು ನೇಮಿಸಬೇಕು, ಸಮುದಾಯದ ಮೇಲೆ ಪ್ರಮಾಣೀಕರಿಸಬಹುದಾದ ಡೇಟಾವನ್ನು ಸಂಗ್ರಹಿಸಬೇಕು ಮತ್ತು ಪ್ರತಿ ಸೀಟಿನಲ್ಲಿ ಒಟ್ಟು ಮೀಸಲಾತಿ ಶೇಕಡಾ 50 ಕ್ಕಿಂತ ಹೆಚ್ಚಿಲ್ಲದ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹಂಚಬೇಕು.

ತ್ರಿವಳಿ ಪರೀಕ್ಷಾ ಸೂತ್ರದಂತೆ ಕ್ಷಿಪ್ರ ಸಮೀಕ್ಷೆ ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಡಿದ್ದ ವಾದವನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಳ್ಳಿ ಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...