Homeಮುಖಪುಟಒರಿಸ್ಸಾ ಸಿಎಂ ಪಟ್ನಾಯಕ್‌ ಪತ್ರ : NPR ಮುಂದೂಡಲು ಕೇಂದ್ರದ ಚಿಂತನೆ?

ಒರಿಸ್ಸಾ ಸಿಎಂ ಪಟ್ನಾಯಕ್‌ ಪತ್ರ : NPR ಮುಂದೂಡಲು ಕೇಂದ್ರದ ಚಿಂತನೆ?

ಎನ್‌ಪಿಆರ್‌ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವೇ ನವೀನ್‌ ಪಟ್ನಾಯಕ್‌ರವರಿಗೆ ಹೇಳಿ ಪತ್ರ ಬರೆಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

- Advertisement -
- Advertisement -

ಕೊರೊನಾ ಮುನ್ನೆಚ್ಚರಿಕೆಯ ಸಮಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿಯನ್ನು ನಿಲ್ಲಿಸಬೇಕು ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ. ಇದೇ ವಿಷಯವಾಗಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು ಎನ್‌ಪಿಆರ್‌ ಮುಂದೂಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ, ಏಪ್ರಿಲ್ 1 ರಿಂದ ಹಲವು ರಾಜ್ಯಗಳಲ್ಲಿ ಪ್ರಾರಂಭವಾಗಬೇಕಿದ್ದ, ಎನ್‌ಪಿಆರ್ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿ ಕಾಲ ಮುಂದೂಡಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಪ್ರಧಾನಿಯವರಿಗೆ ಪತ್ರ ಬರೆದಿದ್ದ ನವೀನ್ ಪಟ್ನಾಯಕ್ ಅವರು “ಸದ್ಯಕ್ಕೆ ನಾವೆಲ್ಲ ಕೊರೊನಾ ಸಾಂಕ್ರಾಮಿಕವನ್ನು ತಡೆಯುವುದಕ್ಕೆ ಹೋರಾಟದಲ್ಲಿ ನಿರತರಾಗಿದ್ದೇವೆ. ಈ ಸಮಯದಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಎಲ್ಲ ಚಟುವಟಿಕೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವುದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಚಟುವಟಿಕೆಗಳನ್ನು ಮುಂದೂಡಬೇಕು” ಎಂದು ಹೇಳಿದ್ದರು.

ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರ ಹೊಸ ನಾಗರಿಕ ತಿದ್ದುಪಡಿ ಕಾಯ್ದೆಗೆ (ಸಿಎಎ)  ಒಪ್ಪಿಗೆ ಸೂಚಿಸಿದ್ದರೂ, 2020ರ ಎನ್‌ಪಿಆರ್ ಪ್ರಕ್ರಿಯೆಯಲ್ಲಿ, ಕೇಳಲಿದ್ದ ತಂದೆ-ತಾಯಿಯರ ಹುಟ್ಟಿದ ದಿನಾಂಕ ಮತ್ತು ಜನ್ಮ ಸ್ಥಳಗಳ ಮಾಹಿತಿ ಬಗೆಗಿನ ಪ್ರಶ್ನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

2020ನೇ ಜನಗಣತಿ ಮತ್ತು ಎನ್‌ಪಿಆರ್ ಪ್ರಕ್ರಿಯೆ ನಡೆಸಲು ಜನಸಂಪನ್ಮೂಲವನ್ನು ರಾಜ್ಯ ಸರ್ಕಾರಗಳೇ ಒದಗಿಸಬೇಕಾಗಿರುವ ಸಂದರ್ಭ ಇರುವುದರಿಂದ, ಕೊರೊನ ಭೀತಿಯ ಈ ಸಮಯದಲ್ಲಿ ಇದು ಹೆಚ್ಚಿನ ಸಮಸ್ಯೆ ಒಡ್ಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಸಾಮಾನ್ಯವಾಗಿ ಜನಗಣತಿ ಮಾಡಲು ಶಾಲಾಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಾಲಾ ಶಿಕ್ಷಕ ಶಿಕ್ಷಕಿಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡುವುದು ವಾಡಿಕೆ. ಈಗ ಕೊರೊನಾ ಸಾಂಕ್ರಾಮಿಕ ಭೀತಿಯಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಈ ಕೆಲಸ ಮಾಡುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯಲಾಗಿದೆ.

ಪಟ್ನಾಯಕ್ ಅವರು ಬರೆದ ಪತ್ರದಲ್ಲಿ “ದೇಶದ ಮೊದಲ ಹಂತದ ಜನಗಣತಿಯಲ್ಲಿ ಸುಮಾರು 30 ಲಕ್ಷ ಜನ ಮನೆ ಮನೆಗೆ ತೆರಳಬೇಕಿದೆ. ಅವರಿಗೆಲ್ಲಾ ವಿಸ್ತೃತ ತರಬೇತಿ ನೀಡಬೇಕಿದೆ” ಆದುದರಿಂದ ಈ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.

ಜನಗಣತಿಗೆ ಎಲ್ಲ ರಾಜ್ಯಗಳು ಸಹಕರಿಸಲೇಬೆಕಿದೆ. ಆದರೆ ಎನ್‌ಪಿಆರ್‌ಗೆ ಆ ನಿರ್ಬಂಧ ಇಲ್ಲ. ಈಗಾಗಲೇ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಚತ್ತೀಸ್ ಘಡ ಮತ್ತು ಪುದುಚೆರಿ ವಿಧಾನಸಭೆಗಳಲ್ಲಿ ಎನ್‌ಪಿಆರ್ ಪ್ರಕ್ರಿಯೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಎನ್‌ಪಿಆರ್ ಪ್ರಕ್ರಿಯೆ ಅನಿರ್ಧಿಷ್ಟ ಕಾಲಾವಧಿಯವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಇನ್ನೊಂದೆಡೆ ಎನ್‌ಪಿಆರ್‌ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವೇ ನವೀನ್‌ ಪಟ್ನಾಯಕ್‌ರವರಿಗೆ ಹೇಳಿ ಪತ್ರ ಬರೆಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...