Homeಕರ್ನಾಟಕಪ್ರತಿ ನಾಮಫಲಕ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರಿಯಲಿದೆ: ಟಿ.ಎ. ನಾರಾಯಣಗೌಡ

ಪ್ರತಿ ನಾಮಫಲಕ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರಿಯಲಿದೆ: ಟಿ.ಎ. ನಾರಾಯಣಗೌಡ

- Advertisement -
- Advertisement -

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ‘ಕಡ್ಡಾಯ ಕನ್ನಡ ನಾಮಫಲಕ’ ಅಭಿಯಾನ ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಬೆಂಗಳೂರು ನಗರ ಭಾಗ ಸೇರಿದಂತೆ ಹೊರ ವಲಯದ ವಿಮಾನ ನಿಲ್ದಾಣ ರಸ್ತೆಯಲ್ಲಿ ಕನ್ನಡ ಕಾರ್ಯಕರ್ತರು ಇಂದು ಇಂಗ್ಲಿಷ್ ನಾಮಫಲಕಗಳನ್ನು ಧ್ವಂಸಗೊಳಿಸಿದ್ದಾರೆ. ‘ಪ್ರತಿಯೊಂದು ನಾಮಫಲಕವೂ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರೆಯಲಿದೆ’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕಾಗಿ ನನ್ನೆಲ್ಲ ಸಮರ ಸೇನಾನಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ’ ಎಂದಿದ್ದಾರೆ.

‘ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ತಿರಸ್ಕಾರದಿಂದ ನೋಡುತ್ತಿದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟ ಸಂದೇಶ ನೀಡಿದೆ. ಕನ್ನಡಿಗರ ತಾಳ್ಮೆಯನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಇವತ್ತಿನ ಪ್ರತಿಭಟನೆ ಉದಾಹರಣೆ. ಕರ್ನಾಟಕ ರಕ್ಷಣಾ ವೇದಿಕೆಯ ಸಹಸ್ರಾರು ಕಾರ್ಯಕರ್ತರು ರಾಜ್ಯದ ಮೂಲೆಮೂಲೆಯಿಂದ ಹರಿದು ಬಂದು ಕನ್ನಡಿಗರ ಶಕ್ತಿಯನ್ನು ತೋರಿಸಿದ್ದಾರೆ. ಸಾವಿರಾರು ಕನ್ನಡೇತರ ನಾಮಫಲಕಗಳನ್ನು ಕಿತ್ತುಹಾಕಿದ್ದಾರೆ’ ಎಂದು ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಜಮಾಯಿಸಿದ್ದ ರಕ್ಷಣಾ ವೇದಿಕೆ ಕಾರ್ಯಕರ್ತರು. (ಚಿತ್ರ: ಅರುಣ್ ಜಾವಗಲ್)

‘ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿದೆ. ಕಾರ್ಯಕರ್ತರ ಗುರಿ ಕೇವಲ ಕನ್ನಡೇತರ ನಾಮಫಲಕಗಳೇ ಆಗಿದ್ದವೇ ವಿನಃ ವ್ಯಕ್ತಿಗಳು, ಸಂಸ್ಥೆಗಳು ಆಗಿರಲಿಲ್ಲ. ಹೀಗಾಗಿ ಯಾವುದೇ ರೀತಿಯ ಹಿಂಸಾತ್ಮಕ ಚಳವಳಿ ನಾವು ನಡೆಸಿರುವುದಿಲ್ಲ. ರಾಜ್ಯ ಸರ್ಕಾರ ಫೆ.28ರೊಳಗೆ ನಾಮಫಲಕಗಳನ್ನು ಕನ್ನಡೀಕರಿಸಲು ಆದೇಶಿಸಿದೆ. ಹೀಗಾಗಿ ನಾವು ಫೆ.28ರವರೆಗೆ ಕಾಯುತ್ತೇವೆ. ಆಗಲೂ ಈ ನೆಲದ ಕಾನೂನಿಗೆ, ಈ ನೆಲದ ಭಾಷೆಗೆ ಗೌರವ ನೀಡದವರ ವಿರುದ್ಧ ನಾವು ಇನ್ನೂ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಇವತ್ತಿನ ಚಳವಳಿಯ ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರಿಗೆ ಆಗಿರಬಹುದಾದ ಸಣ್ಣಪುಟ್ಟ ತೊಂದರೆಗಳಿಗೆ ನಮಗೆ ಬೇಸರವಿದೆ. ಆದರೆ, ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ಉಳಿಸಿಕೊಳ್ಳಲು ಇಂಥ ದೊಡ್ಡ ಪ್ರಮಾಣದ ಚಳವಳಿ ಅಗತ್ಯವಿತ್ತು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪೊಲೀಸ್ ಇಲಾಖೆ ಇವತ್ತಿನ ಹೋರಾಟದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹೂಡುವುದು, ಕಿರುಕುಳ ನೀಡುವುದನ್ನು ಮಾಡಕೂಡದು. ಅಂಥದ್ದೇನಾದರೂ ನಡೆದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಕನ್ನಡ ನಾಮಫಲಕ ಜಾಗೃತಿ ಆಂದೋಲನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲು ನಿರ್ಧರಿಸಿದ್ದು, ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ದೊಡ್ಡ ಮಟ್ಟದ ‘ಕನ್ನಡ ಯಾತ್ರೆ’ಯನ್ನು ನಡೆಸಲಿದ್ದೇನೆ. ರಾಜ್ಯದ ಪ್ರತಿಯೊಂದು ನಾಮಫಲಕವೂ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರೆಯಲಿದೆ’ ಎಂದು ಟಿ.ಎ. ನಾರಾಯಣಗೌಡ ಘೋಷಿಸಿದ್ದಾರೆ.

ಇದನ್ನೂ ಓದಿ; ಕಡ್ಡಾಯ ಕನ್ನಡ ನಾಮಫಲಕ ಅಭಿಯಾನ: ಬೆಂಗಳೂರಿನಲ್ಲಿ ತೀವ್ರಗೊಂಡ ಕನ್ನಡಪರ ಕಾರ್ಯಕರ್ತರ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...