Homeಕರ್ನಾಟಕಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

- Advertisement -
- Advertisement -

Tಹಳಿಯಾಳದ ಸಕ್ಕರೆ ಕಾರ್ಖಾನೆ ತಮ್ಮ ಭಾಗ್ಯದ ಬಾಗಿಲನ್ನೇ ತೆರೆಯಲಿದೆಯೆಂದು ಸ್ಥಳೀಯ ಕಬ್ಬು ಬೆಳೆಗಾರರು ಕನಸು ಕಂಡಿದ್ದರು. ಆದರೆ ಹಳಿಯಾಳ, ದಾಂಡೇಲಿ, ಮುಂಡಗೋಡ ಸೀಮೆಯಲ್ಲಿ ಕಬ್ಬು ಬೆಳೆಯುವ ರೈತರ ಪಾಲಿಗೆ ಈ ಸಕ್ಕರೆ ಕಾರ್ಖಾನೆ ಘೋರ ಶಾಪವಾಗಿ ಈಗ ಪರಿಣಮಿಸಿದೆ! ಒಂದು ದಶಕದ ಹಿಂದೆ ಹಳಿಯಾಳದಲ್ಲಿ ಶುರುವಾದ ಸಕ್ಕರೆ ಕಾರ್ಖಾನೆಯ ಹಿಂದೆ ರೈತರ ಬಹುದೊಡ್ಡ ಹೋರಾಟದ ಇತಿಹಾಸವೇ ಇದೆ. ಸಹಕಾರ ತತ್ವದ ಒಂದು ಸಕ್ಕರೆ ಕಾರ್ಖಾನೆ ತಮ್ಮೂರಲ್ಲಿ ಸ್ಥಾಪನೆ ಆಗಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಆದರೆ ದೀರ್ಘ ಕಾಲದಿಂದ ಹಳಿಯಾಳವನ್ನು ಆಳುತ್ತಿದ್ದ ಬಲಾಢ್ಯ ರಾಜಕಾರಣಿಯ ತಂಡಕ್ಕದು ಬೇಡವಾಗಿತ್ತು. ಸಹಕಾರಿ ರಂಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾದರೆ ರೈತರು ರಾಜಕೀಯ ಮತ್ತು ಆರ್ಥಿಕವಾಗಿ ಸಬಲರಾಗಿ ತಮ್ಮ ಮಂಕು ಬೂದಿ ರಾಜಕಾರಣಕ್ಕೆ ಸವಾಲಾಗುತ್ತಾರೆಂಬ ದೂ(ದು)ರಾಲೋಚನೆ ಪಟ್ಟಭದ್ರರದಾಗಿತ್ತು.

PC : Public TV, (ಆರ್.ವಿ ದೇಶಪಾಂಡೆ)

ಚುನಾವಣೆ ಎದುರಾದಾಗ ಸ್ಥಳೀಯ ಶಾಸಕ ಕಮ್ ರಾಜ್ಯದ ಪ್ರಭಾವಿ ರಾಜಕಾರಣಿ ಪಟು ಆರ್.ವಿ ದೇಶಪಾಂಡೆ ಸಕ್ಕರೆ ಕಾರ್ಖಾನೆ ತೆರೆಯುವ ಮಾತಾಡುತ್ತಿದ್ದರು; ಫ್ಯಾಕ್ಟರಿಗೆ ಅಡಿಗಲ್ಲನ್ನು ಯಾವ್ಯಾವುದೋ ಸ್ವಾಮಿ ಮುಖಂಡರ ಕರೆತಂದು ಹಾಕಿಸುತ್ತಿದ್ದರು. ಎಲೆಕ್ಷನ್ ಮುಗಿದ ಮೇಲೆ ಸಕ್ಕರೆ ಕಾರ್ಖಾನೆ ಕೆಲಸ ಕಾಮಗಾರಿ ಮುಂದಕ್ಕೆ ಹೋಗುತ್ತಿರಲಿಲ್ಲ! ಈ ನಾಟಕದ ಹಿಂದಿನ ಹಿಕಮತ್ತು ರೈತರಿಗೆ ಅರ್ಥವಾದಾಗ ರೋಚಕ ಹೋರಾಟ ಚಳವಳಿಗಳೇ ಆಗಿಹೋದವು. ಅನಿವಾರ್ಯವಾಗಿ ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕಾಗಿ ಬಂತು. ಆದರದು ರೈತರ ಇಚ್ಛೆಯ ಸಹಕಾರಿ ಕಾರ್ಖಾನೆ ಆಗಿರಲಿಲ್ಲ ಬದಲಿಗೆ ಬಂಡವಾಳಶಾಹಿಗಳ ಖಾಸಗಿ ಫ್ಯಾಕ್ಟರಿಯಾಗಿತ್ತು. ಜೆಎಂಆರ್ ಗ್ರೂಪ್ ಹುಲ್ಲಟ್ಟಿ ಗ್ರಾಮದಲ್ಲಿ ಬರೋಬ್ಬರಿ 250 ಎಕರೆ ಭೂಮಿಯನ್ನು 60 ರೈತರಿಂದ ತೀರಾ ಅಗ್ಗಕ್ಕೆ ಖರೀದಿಸಿ ಕಾರ್ಖಾನೆ ನಿರ್ಮಿಸಿತ್ತು.

ಅಂದು ಬಲಾಢ್ಯ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದ ದೇಶಪಾಂಡೆ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದರೆಂಬ ಪುಕಾರು ಇವತ್ತಿಗೂ ರೈತ ಸಮುದಾಯದಲ್ಲಿದೆ. ಬಡ ರೈತರಿಂದ ದುಗ್ಗಾಣಿ ಕಾಸಿಗೆ ಅಮೂಲ್ಯ ಜಾಗವನ್ನು ಜೆಎಂಆರ್ ಕಂಪನಿಗೆ ಕೊಡಿಸಿದ್ದ ರಾಜಕಾರಣಿ ತಾವೂ ಸಕ್ಕರೆ ಕಾರ್ಖಾನೆಯ ರಹಸ್ಯ ಪಾಲುದಾರಿಕೆ ಪಡೆದುಕೊಂಡಿದ್ದರು! ಭೂಮಿ ಕೊಟ್ಟ ರೈತ ಪರಿವಾರಕ್ಕೆ ಕಾರ್ಖಾನೆಯಲ್ಲಿ ನೌಕರಿ ಕೊಡಿಸುವ ಆಸೆಯೂ ತೋರಿಸಲಾಗಿತ್ತು. ಅದು ಇವತ್ತಿಗೂ ಈಡೇರಿಲ್ಲ! ಈ ಒಳ ಮಸಲತ್ತುಗಳೇನೇ ಇರಲಿ, ಸ್ಥಳೀಯ ಕಬ್ಬು ಬೆಳೆಗಾರರು ಮಾತ್ರ ಕಾರ್ಖಾನೆಯಿಂದ ತಮ್ಮ ಕಷ್ಟ ಕರಗಬಹುದೆಂದೇ ನಂಬಿಕೊಂಡಿದ್ದರು. ಆರಂಭದಲ್ಲಿ ಜೆಎಂಆರ್ ಕಂಪನಿಯೂ ರೈತರಿಗೆ ಅನುಕೂಲಕರವಾದ ಒಂದಿಷ್ಟು ಕಾರ್ಯಕ್ರಮ ಹಾಕಿಕೊಂಡಿತ್ತು.

ಆದರೆ ಬರಬರುತ್ತ ಜೆಎಂಆರ್ ಕಂಪನಿ ಕಾರ್ಖಾನೆ ನಡೆಸುವ ಆಸಕ್ತಿ ಕಳೆದುಕೊಂಡಿತ್ತು. ಸ್ಥಳೀಯ ಪ್ರಚಂಡ ಪುಢಾರಿಗಳು ಕಾರ್ಖಾನೆ ಆಡಳಿತದಲ್ಲಿ ಕೈಯ್ಯಾಡಿಸುತ್ತಿದ್ದುದು ಜೆಎಂಆರ್ ಕಂಪನಿಯವರಲ್ಲಿ ಜಿಗುಪ್ಸೆ ಮೂಡಿಸಿತ್ತು. ಬಚಾವಾಗಲು ಜೆಎಂಆರ್ ಪಾಲುದಾರ ಕಂಪನಿಗಾಗಿ ಹುಡುಕಾಡತೊಡಗಿತು. ಈ ಐಡಿ ಪ್ಯಾರಿ ಶುಗರ್ ಲಿಮಿಟೆಡ್ ಪಾಲುದಾರಿಕೆಗೆ ಸೇರಿಕೊಂಡಿತು. ಕೊನೆಗೊಂದು ದಿನ ಜೆಎಂಆರ್ ಕಂಪನಿಯವರು ಪ್ಯಾರಿ ಶುಗರ್ಸ್‌ಗೆ ಕಾರ್ಖಾನೆ ಮಾರಾಟಮಾಡಿ ಹೋದರು! ಆಗ ಆರಂಭವಾದ ರೈತರ ಗೋಳು ಇನ್ನೂ ಮುಗಿದಿಲ್ಲ. ಪ್ಯಾರಿ ಕಂಪನಿಯವರದು ಪಕ್ಕಾ ಲಾಭಬಡುಕ ನೀತಿ-ನಿಯಮ! ರೈತರನ್ನು ಶೋಷಿಸುವುದು ಮತ್ತು ವಂಚಿಸುವುದು ನಡೆಯುತ್ತಲೇ ಇದೆ ಎಂಬ ಆರೋಪಗಳಿಗೆ ಕೊನೆಯೇ ಇಲ್ಲ. ಪ್ಯಾರಿ ಕಂಪನಿಯ ಕರಾಮತ್ತಿನ ಆಡಳಿತದಿಂದ ರೋಸತ್ತು ಹೋಗಿರುವ ರೈತರು ಆರೋಪಿಸುತ್ತಲೇ ಹೇಳುತ್ತಿದ್ದಾರೆ.

ದುರಂತ ಎಂದರೆ, ಸುದೀರ್ಘ ಕಾಲದ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ಎಂಎಲ್‌ಸಿ ಎಸ್.ಎಲ್ ಘೋಟನೇಕರ್ ಮತ್ತು ಮಾಜಿ ಶಾಸಕ ಬಿಜೆಪಿಯ ಸುನಿಲ್ ಹೆಗಡೆಯಂಥ ಘಟಾನುಘಟಿಗಳು ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ರೈತರು ತಮಗಾಗುತ್ತಿರುವ ಅನ್ಯಾಯ ಪ್ರತಿಭಟಿಸಿ ಬಂದ್, ರ್‍ಯಾಲಿ, ಸಭೆ, ಹೋರಾಟ ನಡೆಸುತ್ತಿದ್ದರೂ ಇವರ್‍ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ರೈತ ಪರ ಪೋಸು ಕೊಡುತ್ತಾರೆಯೇ ಹೊರತು ಪ್ಯಾರಿ ಶುಗರ್ಸ್ ಸರದಾರರಿಗೆ ಮೂಗುದಾರ ಹಾಕಲು ಯೋಚಿಸುತ್ತಿಲ್ಲ. ಸಕ್ಕರೆ ಧಣಿಗಳು ಎಲೆಕ್ಷನ್ ಫಂಡ್ ಪುಷ್ಕಳವಾಗಿ ಕೊಡುವುದೇ ಇದಕ್ಕೆಲ್ಲ ಕಾರಣವೆಂಬ ವಾದವೂ ಬಲವಾಗಿದೆ. ಬೇಡಿಕೆ ಈಡೇರಿಕೆಗೆ ರೈತರು ಸೊಲ್ಲೆತ್ತಿದ್ದರೆ ಕ್ರಿಮಿನಲ್ ಕೇಸ್ ಹಾಕಿ ಹಣಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ! ಕಷ್ಟ-ನಷ್ಟಕ್ಕೆ ಎದೆಯೊಡ್ಡಿ ರೈತರು ಹೋರಾಡುತ್ತಲೇ ಇದ್ದಾರೆ.

ಪ್ಯಾರಿ ಶುಗರ್ಸ್‌ನ ಪ್ರತಿ ನೀತಿ ನಿಯಮವೂ ಕಬ್ಬು ಬೆಳೆಗಾರರಿಗೆ ಕಂಟಕಕಾರಿಯಾಗಿದೆ. 2017ರಿಂದ ರೈತರಿಗೆ ಪ್ಯಾರಿಯವರು 20 ಕೋಟಿಯಷ್ಟು ಪ್ರೋತ್ಸಾಹಧನ ಕೊಡದೆ ಕಾಡುತ್ತಿದ್ದಾರೆ! ಪ್ರತಿ ವರ್ಷ ಕಬ್ಬು ನುರಿಯುವ ಹಂಗಾಮಿನ ಶುರುವಿನಲ್ಲಿ ಕಬ್ಬಿಗೆ ಬೆಲೆ ಕಾರ್ಖಾನೆಯವರು ನಿರ್ಧರಿಸಬೇಕೆಂಬ ಕಟ್ಟು ನಿಟ್ಟಿನ ನಿಯಮವಿದೆ. ಆದರೆ ಪ್ಯಾರಿ ಆಡಳಿತಗಾರರು ಬೇಕಂತಲೇ ಕಬ್ಬಿನ ಬೆಲೆ ನಿಗದಿಸದೇ ರೈತರಿಗೆ ಮೋಸ ಮಾಡಲು ಹವಣಿಸುತ್ತಾರೆ. ರಾಜ್ಯದ ಬೇರೆ ಬೇರೆ ಸಕ್ಕರೆ ಫ್ಯಾಕ್ಟರಿಯವರು ಪ್ರತಿ ಟನ್ ಕಬ್ಬಿಗೆ ಕಟ್ಟುವ ದರಕ್ಕೆ ಹೋಲಿಸಿದರೆ ಪ್ಯಾರಿಯವರದ್ದು ತೀರಾ ಕಮ್ಮಿ. ಮೊದಲ ಆದ್ಯತೆಯ ಮೇರೆಗೆ ಸ್ಥಳೀಯರ ಕಬ್ಬನ್ನು ಪ್ಯಾರಿ ಕೊಳ್ಳಬೇಕೆಂಬುದು ಕರಾರಿನ ಷರತ್ತು. ಆದರೆ ಪ್ಯಾರಿ ಸ್ಥಳೀಯ ರೈತರಿಗೆ ವಂಚನೆ ಮಾಡಿ ಪಕ್ಕದ ಧಾರವಾಡ, ಕಲಘಟಗಿ, ಅಳ್ನಾವರ, ಖಾನಾಪುರ ಮತ್ತು ಬೈಲಹೊಂಗಲದಿಂದ ಕಬ್ಬನ್ನು ಪ್ರಥಮ ಆದ್ಯತೆಯಲ್ಲಿ ತರಿಸಿಕೊಳ್ಳುತ್ತಿದೆ. ಹಳಿಯಾಳ ಸುತ್ತಮುತ್ತಲಿನಲ್ಲಿ ಸಾಕಷ್ಟು ಕಬ್ಬು ಇಳುವರಿ ಇದ್ದರೂ ಬೇರೆಡೆಯಿಂದ ಕಬ್ಬು ಖರೀದಿಸಿ ಸ್ಥಳೀಯ ರೈತರಿಗೆ ನಷ್ಟವುಂಟು ಮಾಡುತ್ತಿದೆ.

PC : The Hindu, (ಶಿವರಾಮ ಹೆಬ್ಬಾರ್)

ಸ್ಥಳೀಯ ಕಬ್ಬು ಕಟಾವುದಾರರಿಗೆ (ತೋಡ್ನಿ) ಅವಕಾಶ ಕೊಡದೆ, ಪ್ಯಾರಿ ಆಡಳಿತಗಾರರು ಮಹಾರಾಷ್ಟ್ರದ ಬೀಡ, ಸತಾರ ಮತ್ತು ರಾಜ್ಯದ ಬಳ್ಳಾರಿ ಕಡೆಯಿಂದ ಕೂಲಿಗಳನ್ನು ಕರೆಸಿಕೊಳ್ಳುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ “ನೀವ್ಯಾರು ಕೇಳೋದಕ್ಕೆ. ಫ್ಯಾಕ್ಟರಿ ನಮ್ದು. ನಮ್ಮ ಖುಷಿ” ಎಂಬ ಅಧಿಕ ಪ್ರಸಂಗದ ಉತ್ತರ! ತಾಲ್ಲೂಕಿನ ರೈತರ ಕಬ್ಬು ಸಾಗಿಸುವ ವಾಹನಗಳಿಗೆ ದಿನದಲ್ಲಷ್ಟೇ ಫ್ಯಾಕ್ಟರಿ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿದೆ. ಇದರಿಂದ ಹಳಿಯಾಳ ಪಟ್ಟಣದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿ ದಿನ ಕಬ್ಬು ತುಂಬಿದ ವಾಹನಗಳು ಸಾಲುಗಟ್ಟಿ ಪ್ಯಾರಿ ಪ್ರವೇಶಕ್ಕೆ ಕಾದು ನಿಲ್ಲುವಂತಾಗಿದೆ. ಈ ಎಡವಟ್ಟಿನಿಂದ ಹಳಿಯಾಳದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸಿದೆ. ಪ್ಯಾರಿಯಿಂದ ಪರಿಸರ ಮಾಲಿನ್ಯವೂ ನಿರಂತರವಾಗಿ ಆಗುತ್ತಿದೆ. ಕಾರ್ಖಾನೆಯಿಂದ ಹೊರಬರುವ ಅಪಾಯಕಾರಿ ಹೊಗೆಯಿಂದ ವಾಯುಮಾಲಿನ್ಯ ಉಂಟಾಗಿ ಹಳಿಯಾಳ ಸುತ್ತಲಿನ ಹಲವು ಹಳ್ಳಿಗಳ ಆರೋಗ್ಯ ಹಾಳಾಗುತ್ತಿದೆ. ಫ್ಯಾಕ್ಟರಿಯ ಸಾಮಾಜಿಕ ಹೊಣೆಗಾರಿಕಾ ನಿಧಿಯನ್ನು ತಾಲ್ಲೂಕಿನ ಮೂಲಸೌಕರ್ಯ ಅಭಿವೃದ್ಧಿ ಪರಿಸರ ನಿರ್ವಹಣೆಗೆಗೂ ಬಳಸದ ಪ್ಯಾರಿ ಆಡಳಿತಗಾರರು ಸ್ಥಳೀಯರಿಗೆ ಉದ್ಯೋಗವನ್ನೂ ಕೊಡುತ್ತಿಲ್ಲ ಎಂಬ ಆರೋಪ ಇದೆ.

ಪ್ಯಾರಿ ಕಂಪನಿಯಿಂದ ಎದುರಾಗಿರುವ ಸಂಕಷ್ಟದ ಬಗ್ಗೆ ಮೊನ್ನೆಮೊನ್ನೆವರೆಗೂ ಸಕ್ಕರೆ ಸಚಿವರಾಗಿದ್ದ ಹಳಿಯಾಳದ ಪಕ್ಕದ ಕ್ಷೇತ್ರ ಶಾಸಕರೂ ಆಗಿರುವ ಶಿವರಾಮ ಹೆಬ್ಬಾರ್‌ಗೆ ರೈತರು ದೂರಿದ್ದರು. ಹೆಬ್ಬಾರ್ ಅದ್ಯಾಕೋ ಇದೆಲ್ಲ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಸಾರಾಸಗಟಾಗಿ ಕಡೆಗಣಿಸಿ ಕೂತಿದ್ದರು! ನ್ಯಾಯಕ್ಕಾಗಿ ಹೋರಾಟ ಪ್ರತಿಭಟನೆ ವರ್ಷಾನುಗಟ್ಟಲೆಯಿಂದ ಮುಂದುವರೆಸುತ್ತಲೇ ಇರುವ ಕಬ್ಬು ಬೆಳೆಗಾರರು ಸಹನೆಗೆಡುವ ಮೊದಲೇ ಸಂಬಂಧಿಸಿದವರು ಎಚ್ಚತ್ತುಕೊಳ್ಳಬೇಕಿದೆ. ಅಭೂತಪೂರ್ವ ಚಳವಳಿಯಿಂದ ಸಕ್ಕರೆ ಕಾರ್ಖಾನೆ ಪಡೆದಿದ್ದ ಹಳಿಯಾಳದ ರೈತರಿಗೆ ಅದೇ ಕಾರ್ಖಾನೆ ನೆಮ್ಮದಿಗೆಡಿಸಿರುವುದು ದುರಂತ!


ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...