Homeಮುಖಪುಟಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

ಪ್ರಜಾಪ್ರಭುತ್ವದ ಮೂಲತತ್ವಗಳನ್ನು ನೆನಪಿಸಿದ ಸುಪ್ರೀಂ ಕೋರ್ಟ್ ಪೆಗಸಸ್ ತೀರ್ಪು

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯವು ಪೆಗಸಸ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಈಗಿನ ಡಿಜಿಟಲ್ ಯುಗದಲ್ಲಿ ಖಾಸಗಿತನಕ್ಕೆ ಇರಬೇಕಾದ ಮಹತ್ವವನ್ನು ಪುನರುಚ್ಚರಿಸಿದೆ ಹಾಗೂ ಸರಕಾರವು ಪೆಗಸಸ್ ಎಂಬ ಮ್ಯಾಲ್‌ವೇರ್‌ಅನ್ನು ಖರೀದಿಸಿತ್ತೆ ಮತ್ತು ಅದನ್ನು ಭಾರತೀಯ ನಾಗರಿಕರಿನ್ನು ಗುರಿ ಮಾಡಲು ಬಳಸಲಾಗಿತ್ತೆ ಎಂಬುದನ್ನು ಸ್ಪಷ್ಟಪಡಿಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ರವೀಂದ್ರನ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದೆ.

ಈ ಆದೇಶವನ್ನು ಹಿರಿಯ ವಕೀಲ ದುಷ್ಯಂತ್ ದವೆ ಸ್ವಾಗತಿಸುತ್ತ, ಅದನ್ನು ’ಅಸಾಮಾನ್ಯವಾದದ್ದು ಹಾಗೂ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವವಾದ ಆದೇಶವಾಗಿದೆ’ ಎಂದಿದ್ದಾರೆ. ಹಿರಿಯ ಪತ್ರಕರ್ತ ಎಂ.ಕೆ. ವೇಣು, ಭಾರತವು ಮತ್ತೆ ಪ್ರಜಾಪ್ರಭುತ್ವವನ್ನು ಉಸಿರಾಡಲು ಅನುವು ಮಾಡುವ ಸಾಮರ್ಥ್ಯವನ್ನು ಈ ಆದೇಶ ಹೊಂದಿದೆ ಎಂದಿದ್ದಾರೆ.

ಪೆಗಸಸ್ ಎಂಬುದು ಒಂದು ಸ್ಪೈವೇರ್, (ಒಂದು ರೀತಿಯ ಕಳ್ಳತನ ಮಾಡುವ ಸಾಫ್ಟ್‌ವೇರ್), ಇದನ್ನು ಜಗತ್ತಿನ ಯಾವುದೇ ಭಾಗದಿಂದ ಒಬ್ಬ ವ್ಯಕ್ತಿಯ ಫೋನ್‌ನಲ್ಲಿ ಅಥವಾ ಡಿಜಿಟಲ್ ಸಾಧನದಲ್ಲಿ ಅಳವಡಿಸಬಹುದಾಗಿದೆ. ಈ ಸಾಫ್ಟ್‌ವೇರ್‌ನಿಂದ ಆ ಡಿಜಿಟಲ್ ಸಾಧನದ ಎಲ್ಲಾ ಮಾಹಿತಿಯನ್ನು ನೋಡಬಹುದು ಹಾಗೂ ಪೆಗಸಸ್‌ಅನ್ನು ಅಳವಡಿಸಿ ಬೇಹುಗಾರಿಕೆ ಮಾಡುತ್ತಿರುವ ಸಂಸ್ಥೆಗೆ ಆ ಎಲ್ಲಾ ಮಾಹಿತಿಯನ್ನು ಕಳುಹಿಸಬಹುದು. ಈ ಅತ್ಯಂತ ಸಾಮರ್ಥ್ಯವುಳ್ಳ ಮಿಲಿಟರಿ ಮಟ್ಟದ ಸಾಫ್ಟ್‌ವೇರ್‌ಅನ್ನು ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಸೃಷ್ಟಿಸಿದೆ ಹಾಗೂ ಈ ಎನ್‌ಎಸ್‌ಒ ಪ್ರಕಾರ ಈ ಸಾಫ್ಟ್‌ವೇರ್‌ಗಳನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಸಿಟಿಜನ್ ಲ್ಯಾಬ್ ಜೊತೆಗೂಡಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು ಪೆಗಸಸ್ ಎಂಬ ಈ ಸಾಫ್ಟ್‌ವೇರ್ ಬಳಸಿ ವಿಶ್ವಾದ್ಯಂತ್ಯ 50,000ಕ್ಕೂ ಹೆಚ್ಚು ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸುದ್ದಿಯನ್ನು ಬಯಲು ಮಾಡಿತು, ಅದರಲ್ಲಿ ಭಾರತೀಯರ ಹೆಸರುಗಳೂ ಇದ್ದವು. ಆಗ ಸ್ವಾಭಾವಿಕವಾಗಿಯೇ ಉದ್ಭವಿಸಿದ ಪ್ರಶ್ನೆಯೆಂದರೆ, ಭಾರತೀಯ ನಾಗರಿಕರ ಮೇಲೆ ಬೇಹುಗಾರಿಕೆ ಮಾಡುತ್ತಿರುವವರು ಯಾರು ಎಂಬುದು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರ ವ್ಯಕ್ತಿಗಳ ಫೋನ್‌ಗಳೂ ಈ ಬೇಹುಗಾರಕೆಗೆ ಒಳಗಾಗಿದ್ದವು. ಡಿಜಿಟಲ್ ವಿಧಿವಿಜ್ಞಾನದಿಂದ ನಮಗೆ ಈಗ ತಿಳಿದಿರುವುದೇನೆಂದರೆ, ರೋಣಾ ವಿಲ್ಸನ್ ಮತ್ತು ಸುರೇಂದ್ರ ಗಾಡ್ಲಿಂಗ್ ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಹಾಗೂ ಅದರ ಮೂಲಕ ಆ ಕಂಪ್ಯೂಟರ್‌ಗಳಲ್ಲಿ ಫೈಲ್‌ಗಳನ್ನು ಇರಿಸಲಾಗಿತ್ತು. ಇದು ಸೂಚಿಸುವುದೇನೆಂದರೆ, ಈ ಕಾರ್ಯಾಚರಣೆ ಕೇವಲ ಬೇಹುಗಾರಿಕೆಯದ್ದಷ್ಟೇ ಅಲ್ಲದೇ, ಸುಳ್ಳು ಸಾಕ್ಷ್ಯಗಳನ್ನು ಕಂಪ್ಯೂಟರ್‌ಗಳಲ್ಲಿ ಮತ್ತು ಇತರ ಡಿಜಿಟಲ್ ಉಪಕರಣಗಳಲ್ಲಿ ಸೇರಿಸುವುದುಕ್ಕೂ ಬಳಸಲಾಗಿತ್ತು ಎಂಬುದು ಹಾಗೂ ಇದು ಭಾರತೀಯರೆಲ್ಲರೂ ಆತಂಕ ಪಡುವಂತೆ ಮಾಡಿತು.

ಈ ಸ್ಪೈವೇರ್‌ನಿಂದ ಗುರಿ ಮಾಡಲಾದ ವ್ಯಕ್ತಿಗಳು ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿ, ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದಾಗ, ಒಕ್ಕೂಟ ಸರಕಾರವು ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ. ಸರಕಾರವು ತನ್ನ ಮೇಲೆ ಹೊರಿಸಿದ ಆರೋಪವು ತಪ್ಪು ಎಂದು ನಿರಾಕರಿಸಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಪೆಗಸಸ್‌ಅನ್ನು ಸರಕಾರ ಖರೀದಿ ಮಾಡಿತ್ತೆ ಎಂಬ ಪ್ರಶ್ನೆಯನ್ನು ಪದೇಪದೇ ಕೇಳಿದಾಗ, ಸರಕಾರ ಅದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಉತ್ತರಿಸಿತು.

ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಒಕ್ಕೂಟ ಸರಕಾರದ ’ರಾಷ್ಟ್ರೀಯ ಭದ್ರತೆ’ಯ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ’ರಾಷ್ಟ್ರೀಯ ಭದ್ರತೆ’ಯ ಭೀತಿಯನ್ನು ಮುಂದಿರಿಸಿ, ಸರಕಾರ ಪ್ರತಿ ಸಲ ’ಫ್ರೀ ಪಾಸ್’ ತೆಗೆದುಕೊಳ್ಳಲಿ ಆಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಹಾಗೂ ’ಸರಕಾರವು ರಾಷ್ಟ್ರೀಯ ಭದ್ರತೆಯನ್ನು ಕೇವಲ ಉಲ್ಲೇಖಿಸುವುದರಿಂದ ನ್ಯಾಯಾಲಯವನ್ನು ಮೂಕಪ್ರೇಕ್ಷಕನನ್ನಾಗಿಸಲು ಆಗುವುದಿಲ್ಲ’ ಎಂತಲೂ ಹೇಳಿದೆ.

ಕಾನೂನನ್ನು ಈ ರೀತಿ ಒತ್ತಿ ಒತ್ತಿ ಹೇಳುವುದು ತುಂಬಾ ಮುಖ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಖಾಸಗಿತನ ಎಂಬುದು ಒಂದು ಅತ್ಯಗತ್ಯ ಹಕ್ಕು ಆಗಿದ್ದು, ಭಾರತದ ಎಲ್ಲಾ ನಾಗರಿಕರನ್ನು ಖಾಸಗಿತನದ ಉಲ್ಲಂಘನೆಯಿಂದ ರಕ್ಷಿಸಬೇಕು ಎಂದು ಕೋರ್ಟ್ ಹೇಳಿದೆ. ನಾಗರಿಕರಿಕರಿಗೆ ತಮ್ಮ ಖಾಸಗಿತನದ ಹಕ್ಕನ್ನು ರಕ್ಷಿಸಲಾಗಿದೆ, ಖಾತ್ರಿಪಡಿಸಲಾಗಿದೆ ಎಂದು ಗೊತ್ತಿದ್ದಾಗ ಮಾತ್ರ ಅವರು ತಮ್ಮ ’ಆಯ್ಕೆ ಮತ್ತು ಸ್ವಾತಂತ್ರದ’ ಹಕ್ಕನ್ನು ಚಲಾಯಿಸಬಹುದು.

ಆದರೆ ಅದರ ಜೊತೆಗೆ ನ್ಯಾಯಾಲಯವು ಇದನ್ನೂ ಹೇಳಿದೆ, ’ಮೂರು ಷರತ್ತುಗಳನ್ನು ಅನ್ವಯಿಸುವಂತೆ ನೋಡಿಕೊಂಡಾಗ ಪ್ರಭುತ್ವವು ಒಬ್ಬ ವ್ಯಕ್ತಿಯ ಖಾಸಗಿತನದ ಹಕ್ಕನ್ನು ನಿರ್ಬಂಧಿಸಬಹುದು. ಮೊದಲನೆಯದಾಗಿ, ಖಾಸಗಿತನದ ಹಕ್ಕಿನ ನಿರ್ಬಂಧನೆಯು ಕಾನೂನಿನಿಂದ ಸಮ್ಮತಿ ಪಡೆದಿರಬೇಕು, ಎರಡನೆಯದಾಗಿ ಅದು ಒಂದು ನ್ಯಾಯಸಮ್ಮತವಾದ ಉದ್ದೇಶ ಹೊಂದಿರಬೇಕು ಹಾಗೂ ಕೊನೆಯದಾಗಿ ಆ ನಿರ್ಬಂಧನೆಯು ಒಂದು ಸೂಕ್ತ ಪ್ರಮಾಣಕ್ಕೆ ಅನುಗುಣವಾಗಿರಬೇಕು.

ಈಗ ಆಗಿರುವುದನ್ನು ಮೂರು ಷರತ್ತುಗಳ ಪರೀಕ್ಷೆಗಳಿಗೆ ಅನ್ವಯಿಸಿದಾಗ ತಿಳಿಯುವುದೇನೆಂದರೆ, ಪೆಗಸಸ್ ಕಾನೂನಿನಿಂದ ಒಪ್ಪಿಗೆ ಪಡೆಯದೆ ಇರುವುದಷ್ಟೆ ಅಲ್ಲದೇ, ಇದು ಮಾಹಿತಿ ತಂತ್ರಜ್ಞಾನದ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಮಾಹಿತಿ ತಂತ್ರಜ್ಞಾನದ ಕಾಯಿದೆ ಡಿಜಿಟಲ್ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಮತ್ತು ಯಾವುದೇ ವ್ಯಕ್ತಿಯ ಮಾಹಿತಿಯನ್ನು ಅಕ್ರಮವಾಗಿ ತಿದ್ದುವುದನ್ನು ನಿಷೇಧಿಸುತ್ತದೆ. ರಾಷ್ಟ್ರೀಯ ಭದ್ರತೆಯ ಕಾರಣದಿಂದ ರಾಜಕಾರಣಿಗಳ, ಕಾರ್ಯಕರ್ತರ, ವಿದ್ಯಾರ್ಥಿಗಳ ಮತ್ತು ಪತ್ರಕರ್ತರ ಸಾಧನಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಸಾಬೀತುಮಾಡಲು ಸರಕಾರಕ್ಕೆ ಕಷ್ಟವಾಗಲಿದೆ. ಕೊನೆಯದಾಗಿ, ಈ ವ್ಯಕ್ತಿಗಳ ಮೇಲೆ ಮಾಡಲಾದ ಆರ್ವೆಲಿಯನ್ (ಜಾರ್ಜ್ ಆರ್ವೆಲ್‌ನ ’1984’ ಎಂಬ ಕಾದಂಬರಿಯಿಂದ ಪ್ರೇರಿತವಾದ ನುಡಿಗಟ್ಟು) ಬೇಹುಗಾರಿಕೆ ಯಾವುದೇ ರೀತಿಯಲ್ಲಿ ಸೂಕ್ತ ಪ್ರಮಾಣದ ಪ್ರತಿಕ್ರಿಯೆ ಎಂದು ತೋರಿಸುವುದು ಸರಕಾರಕ್ಕೆ ಸುಲಭವಾಗುವುದಿಲ್ಲ.

ಈ ಎಲ್ಲ ಸಂಗತಿಗಳ ಕಾರಣದಿಂದ ನ್ಯಾಯಾಲಯವು ವಿನಂತಿಸಿದಂತೆ ವಿವರವಾದ ಅಫಿಡವಿಟ್ ಸಲ್ಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬರುವಂತೆ ಮಾಡಿರಬಹುದು ಹಾಗೂ ಅದರ ಬದಲಿಗೆ ’ರಾಷ್ಟ್ರೀಯ ಭದ್ರತೆ’ಯ ಭಾಷೆಯ ಉದ್ಧಟತನವನ್ನು ಪ್ರದರ್ಶಿಸಿರಬಹುದು. ಅದೃಷ್ಟವಷಾತ್ ನ್ಯಾಯಾಲಯವು ಒಕ್ಕೂಟ ಸರಕಾರದ ವಾದವನ್ನು ಬೊಗಳೆ ಎಂದು ಪರಿಗಣಿಸಿದೆ.

ಇದರಿಂದ ತಪ್ಪಿಸಿಕೊಳ್ಳಲು ಸರಕಾರವು ತನ್ನ ಕೊನೆಯ ದಾರಿಯಾಗಿ, ಈ ವಿಷಯದ ವಿಚಾರಣೆ ಮಾಡಲು ತಾನೊಂದು ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ನ್ಯಾಯಾಲಯದ ಎದುರು ಇಡುವ ಯೋಜನೆ ಮಾಡಿತ್ತು. ಆದರೆ ನ್ಯಾಯಾಲಯವು ಈ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಸರಕಾರವು ರಚಿಸಿದ ಸಮಿತಿಯು ಇದರ ತನಿಖೆ ಮಾಡುವುದು ’ಪಕ್ಷಪಾತದ ವಿರುದ್ಧದ ನ್ಯಾಯಾಂಗವು ಇರಿಸಿದ ತತ್ವದ ಉಲ್ಲಂಘನೆ’ ಆಗುತ್ತದೆ ಎಂದು ಹೇಳಿದ್ದಲ್ಲದೆ, ’ನ್ಯಾಯ ಒದಗಿಸುವುದಷ್ಟೇ ಅಲ್ಲ ಆದರೆ ನ್ಯಾಯ ಒದಗಿಸಿದಂತೆ ಕಾಣಿಸಲೂಬೇಕು’ ಎಂದು ಹೇಳಿತು.

ಸರ್ವೋಚ್ಚ ನ್ಯಾಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಸಮಿತಿಯನ್ನು ರಚಿಸಿದೆ. ಆ ಸಮಿತಿಗೆ ತನ್ನ ಸ್ವಾತಂತ್ರ್ಯ ಮತ್ತು ಬದ್ಧತೆಗೆ ಹೆಸರುವಾಸಿಯಾದ ಒಬ್ಬ ನ್ಯಾಯಾಧೀಶ ಜಸ್ಟೀಸ್ ರವೀಂದ್ರನ್ ಅವರನ್ನು ಮುಖ್ಯಸ್ಥರನ್ನಾಗಿಸಿ, ಐಪಿಎಸ್ ಅಧಿಕಾರಿ ಆಲೋಕ್ ಜೋಷಿ ಮತ್ತು ಸೈಬರ್ ಭದ್ರತೆಯ ತಜ್ಞ ಸಂದೀಪ್ ಒಬೆರಾಯ್ ಅವರನ್ನು ಆ ಸಮಿತಿಯಲ್ಲಿ ಸೇರಿಸಿದೆ. ಹಾಗೂ ಜಸ್ಟಿಸ್ ರವೀಂದ್ರನ್ ಅವರಿಗೆ ಕಾನೂನು ತಜ್ಞರ, ತಾಂತ್ರಿಕ ತಜ್ಞರ ಹಾಗೂ ಹಾಲಿ ಅಧಿಕಾರಿಗಳ ಸಹಾಯವನ್ನು ಪಡೆಯುವ ಸ್ವಾತಂತ್ರ್ಯ ನೀಡಲಾಗಿದೆ.

ನ್ಯಾಯಾಲಯವು ನೇಮಿಸಿದ ಸಮಿತಿಗೆ ಪೆಗಸಸ್ ಬಳಕೆಯ ಹಿಂದೆ ಯಾರಿದ್ದರು ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂಬುದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವ ಅಧಿಕಾರ ಮತ್ತು ಉದ್ದೇಶ ನೀಡಲಾಗಿದೆ. ಒಂದು ವೇಳೆ ಒಕ್ಕೂಟ ಸರಕಾರವು ತನಿಖೆಯದಾರಿ ಸುಗಮವಾಗಲು ಸಹಕಾರ ನೀಡದಿದ್ದರೆ, ಸಮಿತಿಯು ಪ್ರತಿಕೂಲ ತೀರ್ಮಾನಗಳನ್ನು ಅಂದಾಜಿಸಿ, ತನ್ನದೇ ಆದ ನಿರ್ಣಯಕ್ಕೆ ಬರಬಹುದು. ಹಾಗೂ ಈ ಸಮಿತಿಯು ಇತರ ತಜ್ಞರು ನೀಡುವ ಮಾಹಿತಿಯನ್ನು ಬಳಸಿಕೊಳ್ಳಬಹುದು, ಅದರಿಂದ ಒಕ್ಕೂಟ ಸರಕಾರದ ನಿಲುವು ಏನೇ ಆಗಿರಲಿ, ತನಿಖೆ ಮುಂದುವರೆಸಿ ಪೆಗಸಸ್ ಹಗರಣದ ಬುಡಕ್ಕೆ ತಲುಪಬಹುದು.

ಕಾನೂನುಬಾಹಿರ ಬೇಹುಗಾರಿಕೆಯ ಮತ್ತು ಸಾಕ್ಷ್ಯಗಳನ್ನು ಸಾಧನಗಳಲ್ಲಿ ತೂರಿಸುವ ಅಪರಾಧಗಳನ್ನು ಬಯಲಿಗೆಳೆಯುವ ಮತ್ತು ಒಕ್ಕೂಟ ಸರಕಾದಿಂದ ಉತ್ತರದಾಯಿತ್ವವನ್ನು ಅಪೇಕ್ಷಿಸುವ ಸಾಧ್ಯತೆ ಈಗ ನಮ್ಮ ಮುಂದೆ ಇದೆ. ನಾಗರಿಕ ಸಮಾಜವು ಈ ಸಮಿತಿಯೊಂದಿಗೆ ತೊಡಗಿಸಿಕೊಂಡು, ಪೆಗಸಸ್‌ಅನ್ನು ಬಳಸಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಾಧನವಾಗಿ ಬಳಸಿರುವ ಸತ್ಯವನ್ನು ಹೊರಗೆಳೆಯಲು ಈ ಸಮಿತಿಯ ಬಲವರ್ಧನೆ ಮಾಡಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...