ಈಗಾಗಲೆ ಇಂಧನ ದರಗಳು ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಈ ಬೆಲೆ ಏರಿಕೆ ಪದೇ ಪದೇ ನಿರಾತಂಕವಾಗಿ ಏರುತ್ತಲೆ ಇದೆ. ಸಾಮಾನ್ಯ ಜನರು ಒಕ್ಕೂಟ ಸರ್ಕಾರದ ವಿರುದ್ದ ಆಕ್ರೋಶ ಪಡಿಸುತ್ತಿದ್ದರೂ ಆಡಳಿತ ಪಕ್ಷದ ನಾಯಕರು ದರ ಇಳಿಕೆಯ ಬಗ್ಗೆ ಸರಿಯಾದ ಮಾತುಗಳನ್ನು ಆಡದೆ, ಬೇಜವಾಬ್ದಾರಿ ಮೆರೆಯುತ್ತಲೆ ಇದ್ದಾರೆ.
ಈ ಮಧ್ಯೆ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡಿ, ‘ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಆಗುತ್ತದೆ’ ಎಂದು ಹೇಳಿದ್ದಾರೆ.
ಶನಿವಾರ ದಾವಣಗೆರೆಯಲ್ಲಿ, ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಸೈಕಲ್‌ನಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, “ಸೈಕಲ್ ಮೇಲೆ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ, ಹೀಗಾಗಿ ದರಗಳು ಹೆಚ್ಚಾಗಿದೆ. ಕೊರೊನಾ ಮುಗಿದ ಬಳಿಕ ಪೆಟ್ರೋಲ್ ರೇಟ್ ಕಡಿಮೆಯಾಗುತ್ತದೆ. ದರ ಕಡಿಮೆಯಾಲು ಪ್ರಧಾನಿ ಮೋದಿ ಸರ್ವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಸಿದ್ದೇಶ್ವರ ಅವರು ಉಡಾಫೆಯಿಂದ ಉತ್ತರಿಸಿದ್ದಾರೆ.
ಇದನ್ನೂ ಓದಿ: ‘ಕಷ್ಟಗಳಿದ್ದರೆ ಸುಖದ ಬೆಲೆ ತಿಳಿಯುತ್ತದೆ’ – ಪೆಟ್ರೋಲ್ ದರ ಏರಿಕೆಗೆ ಬಿಜೆಪಿ ಸಚಿವನ ಸಮರ್ಥನೆ!
ಸಿದ್ದೇಶ್ವರ ಅವರ ಈ ಹೇಳಿಕೆಗೆ ಕಾಂಗ್ರೆಸ್ ಸೋಮವಾರ ಪ್ರತಿಕ್ರಿಯಿಸಿದ್ದು, ಮೂರ್ಖರೆಲ್ಲ ಸೇರಿ ಬಿಜೆಪಿ ಪಕ್ಷವಾಗಿದೆಯೇ ಅಥವಾ ಬಿಜೆಪಿಗೆ ಸೇರಿದ ಮೇಲೆ ಮೂರ್ಖರಾಗುವರೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಮೂರ್ಖರೆಲ್ಲ ಸೇರಿ ಬಿಜೆಪಿ ಪಕ್ಷವಾಗಿದೆಯೇ ಅಥವಾ ಬಿಜೆಪಿಗೆ ಸೇರಿದ ಮೇಲೆ ಮೂರ್ಖರಾಗುವರೇ? ಎಂಬುದೇ ಯಕ್ಷಪ್ರಶ್ನೆ! ಇಂಧನ ತೈಲಗಳ ಬೆಲೆ ಏರಿಕೆಗೆ ಸೈಕಲ್ ತುಳಿದರೆ ವ್ಯಾಯಾಮ ಆಗುತ್ತದೆ ಎಂಬುದು ಸಂಸದ ಜಿಎಂ ಸಿದ್ದೇಶ್ವರ್ ಅವರ ಬಾಲಿಶ ಸಮರ್ಥನೆ! ಸಂಸದರೇ ತಾವು ದಾವಣಗೆರೆಯಿಂದ ಬೆಂಗಳೂರಿಗೆ ಸೈಕಲ್ ತುಳಿದು ಪ್ರಯಾಣಿಸಿ ವ್ಯಾಯಾಮ ಮಾಡುವಿರಾ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇಂಧನ ಬೆಲೆಗಳ ಏರಿಕೆಯ ವಿರುದ್ದ ತೀವ್ರ ಆಕ್ರೋಶಗಳು ಹೆಚ್ಚುತ್ತಿದ್ದರೂ, ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 34 ರಿಂದ 43 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 28 ರಿಂದ 36 ಪೈಸೆಯಷ್ಟು ಹೆಚ್ಚಳ ಕಂಡಿದೆ.
ಇದನ್ನೂ ಓದಿ: ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎರಡು ತಿಂಗಳಲ್ಲಿ ಶೇ.10 ರಷ್ಟು ಹೆಚ್ಚಳ!