Homeಮನರಂಜನೆನಾವು ನೋಡಿದ ನಾಟಕ; ’ವಿ ದ ಪೀಪಲ್ ಆಫ್ ಇಂಡಿಯಾ’: ಬಾಬಾಸಾಹೇಬರ ಆಶಯಗಳಿಗೆ ಸೃಜನಶೀಲತೆಯ ಸ್ಪರ್ಶ

ನಾವು ನೋಡಿದ ನಾಟಕ; ’ವಿ ದ ಪೀಪಲ್ ಆಫ್ ಇಂಡಿಯಾ’: ಬಾಬಾಸಾಹೇಬರ ಆಶಯಗಳಿಗೆ ಸೃಜನಶೀಲತೆಯ ಸ್ಪರ್ಶ

- Advertisement -
- Advertisement -

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹಲವು ರೀತಿಯ ತಂತ್ರಗಾರಿಕೆ ಹೆಣೆಯುತ್ತಿರುವ ದಿನಗಳಲ್ಲಿ ಸಂವಿಧಾನದ ಮಹತ್ವ ಮತ್ತು ಜರೂರತೆಯನ್ನು ಸಾರುವ ’ವಿ ದ ಪೀಪಲ್ ಆಫ್ ಇಂಡಿಯಾ’
ನಾಟಕ ಈ ಕಾಲಕ್ಕೆ ಅಗತ್ಯವಾದ ಮತ್ತು ಬಹಳ ಮಹತ್ವವಾದ ಪ್ರಯೋಗವಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ನಾಟಕವನ್ನು ಜನ ಅಷ್ಟೇ ಆಪ್ತವಾಗಿ ಅಪ್ಪಿಕೊಳ್ಳುತ್ತಿದ್ದಾರೆ.

ಸಂವಿಧಾನದ ಪ್ರಸ್ತಾವನೆಯ ’ಭಾರತೀಯ ಪ್ರಜೆಗಳಾದ ನಾವು’ ಎಂಬ ಮೊದಲ ಸಾಲನ್ನೇ ನಾಟಕದ ಹೆಸರನ್ನಾಗಿಟ್ಟುಕೊಂಡು ಸಂವಿಧಾನದ ರಚನೆಯ ಸಂದರ್ಭದಲ್ಲಿ ನಡೆದ ಅಂಬೇಡ್ಕರ್‌ರವರ ಆಶಯಗಳು, ಚರ್ಚೆಗಳು, ವಾಗ್ವಾದಗಳು ಮತ್ತು ಸಂವಿಧಾನ ಜಾರಿಯಾದ ನಂತರವೂ ಅವುಗಳನ್ನು ಮರೆಮಾಚಲು ನಡೆಸುತ್ತಿರುವ ಹುನ್ನಾರಗಳನ್ನು ಈ ನಾಟಕದ ಮೂಲಕ ಹೇಳಲು ಹೊರಟಿದ್ದಾರೆ ನಾಟಕದ ರಚನಕಾರರಾದ ರಾಜಪ್ಪ ದಳವಾಯಿಯವರು. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ರಂಗದ ಮೇಲೆ ತಂದಿದ್ದಾರೆ ಯುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮಣ್ ಕೆ.ಪಿ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಸ್ತಾವನೆಯಲ್ಲೇ ಸಂವಿಧಾನದ ಆಶಯಗಳನ್ನು ಒಳಗೊಂಡು ಸಾರಿದ್ದಾರೆ. ಭಾರತೀಯ ಪ್ರಜೆಗಳಾದ ನಾವು ಎಂಬ ಮೊದಲ ಮಾತೇ ಅದನ್ನು ಧ್ವನಿಸುತ್ತದೆ. ಈ ಸಾಲುಗಳನ್ನು ಓದಿದಾಗ ಅಥವಾ ಕೇಳಿದಾಗ ನಿಜವಾದ ದೇಶಪ್ರೇಮಿಗಳಿಗೆ ರೋಮಾಂಚನ, ಪುಳಕ ಉಂಟಾಗುತ್ತದೆ. ಬಹುತ್ವದ, ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಅನುಸರಿಸುವ ಭಾರತೀಯರನ್ನು ಒಂದೆಂಬಂತೆ ಭಾವಿಸಲು, ಒಗ್ಗೂಡಿಸಲು ಅದು ಪ್ರೇರಣೆ ನೀಡುತ್ತದೆ. ಸಮಾನತೆ, ಸಹಬಾಳ್ವೆ, ಸಹೋದರತೆ ಮತ್ತು ಸ್ವಾತಂತ್ರ್ಯದ ಭಾವಗಳನ್ನು ಹೊಮ್ಮಿಸುತ್ತದೆ.

ಬುದ್ಧನ ಸಂದೇಶಗಳಿಂದ ಪ್ರಭಾವಿತರಾದ ಬಾಬಾಸಾಹೇಬರು ಯಾವ ತತ್ವಗಳ ಅಡಿಪಾಯದ ಮೇಲೆ ಈ ದೇಶ ರೂಪಿತವಾದರೆ ಭವಿಷ್ಯದಲ್ಲಿ ಸಮಸಮಾಜ ನಿರ್ಮಾಣವಾಗುತ್ತದೆ, ದೀನ ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಘನತೆ – ಗೌರವದ ಬದುಕು ಸಿಗುತ್ತದೆ ಎಂಬುದನ್ನು ಆಶಿಸಿದ್ದರು ಮತ್ತು ಅದನ್ನು ವೈಜ್ಞಾನಿಕ ವಿಧಾನದ ಅಳವಡಿಸಲು ಮುಂದಾಗಿದ್ದರು ಎಂಬುದನ್ನು ಈ ನಾಟಕ ಮನದಟ್ಟು ಮಾಡಿಕೊಡುತ್ತದೆ.

ಒಂದು ಕಡೆ ನೆಲೆ ನಿಲ್ಲದೆ ಊರೂರು ಅಲೆಯುತ್ತಾ, ಪದ ಹೇಳುತ್ತಾ ಭಿಕ್ಷೆ ಬೇಡಿ ಬದುಕು ಸಾಗಿಸುವ ಅಲೆಮಾರಿಗಳ ಮೂಲಕ ಈ ನಾಟಕದಲ್ಲಿ ಕತೆ ಹೇಳಲೊರಟಿರುವುದು ಮಾರ್ಮಿಕವಾಗಿದೆ. ನಾಟಕ ಆರಂಭವಾಗುವುದೇ ಕಲಾವಿದರು ಪ್ರೇಕ್ಷಕರ ನಡುವಿನಿಂದಲೇ ಹಾಡು ಹೇಳಿಕೊಂಡು ಭಿಕ್ಷೆ ಬೇಡುವುದರಿಂದ. ಇದು ನೋಡುಗರು ಮತ್ತು ನಟರು ಇಬ್ಬರೂ ಸಮಾಜದಂತೆ, ಈ ಸಮಾಜದ ನಡುವಿನಿಂದ ಬರುವ ಕಲಾವಿದರು ಸಮಾಜದ ಪ್ರತಿನಿಧಿಗಳು ಎಂಬಂತೆ ಭಾಸವಾಗುತ್ತದೆ. ಅಲ್ಲದೆ ಈ ಅಲೆಮಾರಿಗಳನ್ನೂ ಒಳಗೊಂಡಂತೆ ಒಟ್ಟು ಸಮಾಜಕ್ಕೆ ಸಂವಿಧಾನದ ಬಗ್ಗೆ ಸಂಪೂರ್ಣ ಅರಿವಿಲ್ಲ. ಆದಷ್ಟು ಬೇಗ ಅದನ್ನು ಅರಿತುಕೊಳ್ಳುವಂತೆ ಮಾಡುಬೇಕು ಎಂಬುದು ನಾಟಕದ ಉದ್ದೇಶವಾಗಿದೆ.

ಅಲೆಮಾರಿಗಳ ರೀತಿಯಲ್ಲಿ ಸಂವಿಧಾನದ ಬಗ್ಗೆ ಲಾವಣಿ ಪದಗಳು, ತತ್ವ ಪದಗಳನ್ನು ಕಟ್ಟಿ ಹಾಡಿದರೆ ಸಂವಿಧಾನದಲ್ಲಿರುವ ವಿಚಾರಗಳು ಜನಸಾಮಾನ್ಯರ ನಾಡಿಮಿಡಿತದಲ್ಲಿ ಮಿಳಿತವಾಗುತ್ತವೆ. ಸಂವಿಧಾನ ಉಳಿದು ನೊಂದವರ, ಅವಮಾನಿತರ, ಹಿಂದುಳಿದವರ ಏಳಿಗೆಗೆ ಬೆಳಕಾಗುವುದು ಹೀಗೆ ಎನ್ನುವುದು ನಾಟಕ ನೋಡಿದಾಗ ಮನದಟ್ಟಾಗುತ್ತದೆ. ಅಂಬೇಡ್ಕರ್ ರಚಿತ ಸಂವಿಧಾನವನ್ನು ನಿಷ್ಠೆಯಿಂದ ಕಾಪಿಟ್ಟುಕೊಳ್ಳಬೇಕು. ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ನಿರ್ದೇಶಕರು ಇಲ್ಲಿ ಸಾರಿ ಹೇಳಿದ್ದಾರೆ.

ಸ್ವಾತ್ರಂತ್ರ ಬಂದು ನಮ್ಮದೇ ಆದ ಸಂವಿಧಾನ ರಚಿಸಿಕೊಂಡ ಮೇಲೆಯೂ ಭಾರತದ ದುಡಿಯುವ ವರ್ಗಕ್ಕೆ ದಕ್ಕಿದ್ದು ರಾಜಕೀಯ ಸ್ವಾತ್ರಂತ್ರ್ಯ ಮಾತ್ರ. ಇದು ಒಂದು ಮತ ಒಂದು ಮೌಲ್ಯ ಎನ್ನುವುದನ್ನು ಹೇಳಿತು. ಆದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ, ಇದನ್ನು ನಾವು ಆದಷ್ಟು ಬೇಗ ಬಗಹರಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ನಾವೇ ಕಟ್ಟಿದ ಈ ಸಂವಿಧಾನವನ್ನು ನಮ್ಮ ಜನರೆ ಸ್ಫೋಟಿಸುತ್ತಾರೆ ಎನ್ನುವ ಅಂಬೇಡ್ಕರ್ ಮಾತುಗಳು ನಾಟಕದಲ್ಲಿ ಎದ್ದು ಕಾಣುತ್ತವೆ.

ನಾಟಕ ಸಾಗುತ್ತಾ ಸದ್ಯದ ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗುತ್ತದೆ. ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ನಾನು ಒಟ್ಟಾರೆ ಆ ಸಮಾಜದ ಪ್ರಗತಿಯನ್ನು ಅಳೆಯುತ್ತೇನೆ ಎಂದಿದ್ದರು ಅಂಬೇಡ್ಕರ್. ಆದರೆ ಇಂದಿಗೂ ಭಾರತದಲ್ಲಿ ಮಹಿಳೆಯರು ಸ್ಥಿತಿಗತಿ ಹೇಗಿದೆ? ನಿತ್ಯ ನಿರಂತರ ದೌರ್ಜನ್ಯಗಳು ಮುಂದುವರೆಯಲು ಕಾರಣವೇನು? ಮಹಿಳಾ ಮೀಸಲಾತಿ ಕೇವಲ ಕಾಗದದ ಮೇಲಿರುವುದು ಏಕೆ? ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳಿಗೆ ಕೊನೆಯೆಂದು? ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆತ್ಮಗೌರವ ಸಿಗುವ ಹಾಗೆ ಮಾಡಲು ನಡೆಸಬೇಕಾದ ಹೋರಾಟದ ಕುರಿತು ನಾಟಕದಲ್ಲಿ ಚರ್ಚೆಯಾಗಿ ಮೂಡಿಬಂದಿದೆ.

ದಳವಾಯಿಯವರ ನಾಟಕ ’ವಿ ದ ಪೀಪಲ್ ಆಫ್ ಇಂಡಿಯಾ’ ಸಂವಿಧಾನದ ಆಶಯಗಳನ್ನು ಸರಳವಾಗಿ, ನೇರವಾಗಿ, ತೆಳು ಹಾಸ್ಯದ ಮೂಲಕ ನೋಡುಗರ ಮನಮುಟ್ಟುತ್ತದೆ. ನಿರ್ದೇಶಕರು ನೋಡುಗರನ್ನು ತಲುಪಲು ಆಯ್ಕೆ ಮಾಡಿಕೊಂಡ ನಿರೂಪಣೆಯ ದಾರಿ ಯಶಸ್ವಿಯಾಗಿದೆ. ರಂಗಾಯಣದ ನಟರು ಸಹಜವೆಂಬಂತೆ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಪ್ರಸಾಧನ, ರಂಗಸಜ್ಜಿಕೆ, ಹಾಡುಗಳು ನಾಟಕದ ಸಿರಿವಂತಿಕೆಯನ್ನು ಹೆಚ್ಚಿಸಿವೆ.

ನಾಟಕ ನೋಡಿ ಹೊರಬಂದ ಮೇಲೆಯೂ ಒಟ್ಟಾರೆ ನಾಟಕದ ಆಶಯ ಮನದಲ್ಲಿ ಉಳಿಯುತ್ತದೆ ಮತ್ತು ಗುನುಗುತ್ತಿರುತ್ತದೆ. ಜೊತೆಗೆ ಇನ್ನೊಂದಷ್ಟು ಸಂಗತಿಗಳನ್ನು ಹೇಳಬಹುದಿತ್ತೇನೋ ಅನಿಸದಿರದು. ಸಂವಿಧಾನ ರಚನಾ ಸಂದರ್ಭದಲ್ಲಿ ಬಾಬಾಸಾಹೇಬರು ಅನುಭವಿಸಿದ ಅಡೆತಡೆಗಳು, ಅವಮಾನಗಳು, ಸವಾಲುಗಳು, ಹಿಂದು ಬಿಲ್ ಕೋಡ್ ತಿರಸ್ಕೃತವಾದಾಗ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದು ಹೀಗೆ ಇನ್ನೂ ಕೆಲವನ್ನು
ಸೇರಿಸಬಹುದಿತ್ತೇನೊ ಎಂಬ ಆಶಯ ಕೊರತೆಯಾಗಿ ಕಾಣಿಸಿ ಉಳಿಯುತ್ತಾದರೂ, ರಂಗಭೂಮಿಯೂ ಕೋಮುವಾದಿಕರಣಗೊಂಡಿರುವ ಈ ಕಾಲದಲ್ಲಿ ಈ ನಾಟಕ ಮಹತ್ವದ್ದಾಗಿದೆ. ನಾಟಕ ರಚಿಸಿದ ರಾಜಪ್ಪ ದಳವಾಯಿ, ನಿರ್ದೇಶಿಸಿದ ಲಕ್ಷ್ಮಣ್ ಕೆ.ಪಿ ಮತ್ತು ಪ್ರಸ್ತುತಪಡಿಸಿದ ಶಿವಮೊಗ್ಗ ರಂಗಾಯಣಕ್ಕೆ ಅಭಿನಂದನೆಗಳು. ಇದು ಸಾವಿರಾರು ಪ್ರದರ್ಶನ ಕಾಣಲಿ.

ಎಂ.ವಿ ಕೃಷ್ಣ

ಎಂ.ವಿ ಕೃಷ್ಣ
ರಂಗಭೂಮಿ ಕಲಾವಿದರಾಗಿರುವ ಕೃಷ್ಣರವರು ಹಲವು ನಾಟಕ ಮತ್ತು ಸಾಕ್ಷರತಾ ಆಂದೋಲನದ ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪತ್ರಸಂಗಪ್ಪನ ಕೊಲೆ ಪ್ರಕರಣ ಎಂಬ ನಾಟಕ ಬರೆದು ನಿರ್ದೇಶಿಸಿದ್ದರು. ಪ್ರಾಂಶುಪಾಲರಾಗಿ ನಿವೃತ್ತರಾಗಿ ಮಳವಳ್ಳಿಯಲ್ಲಿ ನೆಲೆಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ...

ದಲಿತ ಹೋರಾಟಗಾರ-ಮುಖಂಡ ಜಿಗ್ನೇಶ್ ಮೇವಾನಿ ಗುಜರಾತಿನ ವಡಗಾಂ ಕ್ಷೇತ್ರದ ಶಾಸಕ. ಸದ್ಯಕ್ಕೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿರುವ ಅವರು ತಮ್ಮ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5ರಂದು ನಡೆಯುವ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ...