Homeಮುಖಪುಟಮೋದಿ ವಿರುದ್ಧ ಸ್ಪರ್ಧಿಸುವ ಎರಡನೇ ಸುಳಿವು ಕೊಟ್ಟ ಪ್ರಿಯಾಂಕಾ ಗಾಂಧಿ!

ಮೋದಿ ವಿರುದ್ಧ ಸ್ಪರ್ಧಿಸುವ ಎರಡನೇ ಸುಳಿವು ಕೊಟ್ಟ ಪ್ರಿಯಾಂಕಾ ಗಾಂಧಿ!

- Advertisement -
ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜೂನಿಯರ್ ಇಂದಿರಾ ಗಾಂಧಿ ಎಂತಲೇ ಪ್ರಸಿದ್ಧರಾಗಿರುವ ಪ್ರಿಯಾಂಕಾ ಗಾಂಧಿ ಈ ಚುನಾವಣೆಯಲ್ಲಿ ವಾರಣಾಸಿಯಿಂದ ಪ್ರಧಾನಿ ಮೋದಿಯವರ ವಿರುದ್ಧ ಕಣಕ್ಕಿಳಿಯುವ ಸೂಚನೆ ರವಾನಿಸಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸಿರುವ ಕೇರಳದ ವಯನಾಡ್‍ನಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ “ನೀವು ವಾರಣಾಸಿಯಿಂದ ಸ್ಪರ್ಧಿಸುತ್ತೀರಿ ಎಂಬ ಸುದ್ದಿ ಇದೆ. ಇದು ನಿಜವಾ?” ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿರುವ ಪ್ರಿಯಾಂಕ “ಒಂದುವೇಳೆ ಕಾಂಗ್ರೆಸ್ ಅಧ್ಯಕ್ಷರು ಸ್ಪರ್ಧಿಸಲು ಹೇಳಿದರೆ, ನಾನು ಖುಷಿಯಿಂದ ಸ್ಪರ್ಧಿಸುತ್ತೇನೆ” ಎಂದಿದ್ದಾರೆ. ಆ ಮೂಲಕ ಮೋದಿ ವಿರುದ್ಧದ ತನ್ನ ಸೆಣೆಸಾಟದ ನಿರ್ಧಾರವನ್ನು ಅಣ್ಣ ರಾಹುಲ್ ಗಾಂಧಿಯ ಅಂಗಳಕ್ಕೆ ತಳ್ಳಿದ್ದಾರೆ.
ತಮ್ಮ ಕುಟುಂಬದ ಭದ್ರ ಕೋಟೆಗಳಾದ ಅಮೇಥಿ, ರಾಯ್‍ಬರೇಲಿ ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಷ್ಟೇ ಸೀಮಿತವಾಗಿದ್ದ ಪ್ರಿಯಾಂಕಾ ಗಾಂಧಿಯವರು ಈ ವರ್ಷದ ಫೆಬ್ರವರಿಯಲ್ಲಷ್ಟೆ ಪೂರ್ವ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿರಿಸಿದ್ದಾರೆ. ಆದರೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ, ಇಲ್ಲವಾ ಎಂಬ ಬಗ್ಗೆ ಯಾವ ಸ್ಪಷ್ಟ ಮಾಹಿತಿಯೂ ಇಲ್ಲ. ಆ ಕಾರಣಕ್ಕೆ ಅವರ ಸ್ಪರ್ಧೆಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಲೇ ಇವೆ.
ಕಳೆದ ತಿಂಗಳಷ್ಟೇ ತಮ್ಮ ತಾಯಿ ಸೋನಿಯಾ ಗಾಂಧಿಯವರು ಸ್ಪರ್ಧಿಸಲಿರುವ ರಾಯ್‍ಬರೇಲಿಯಿಂದ ನೀವು ಸ್ಪರ್ಧಿಸುತ್ತೀರಾ? ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ “ರಾಯ್‍ಬರೇಲಿಯೇ ಯಾಕೆ, ವಾರಣಾಸಿಯಿಂದ ಯಾಕಾಗಬಾರದು?” ಎಂಬ ಮರುಪ್ರಶ್ನೆ ಎಸೆದು ಅಚ್ಚರಿ ಮೂಡಿಸಿದ್ದರು. ಈ ಕುರಿತು ಚರ್ಚೆಗಳು ಶುರುವಾದ ನಂತರ ಪಕ್ಷ ಬಯಸುವ ಯಾವುದೇ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧ ಎಂಬರ್ಥದಲ್ಲಿ ಹೇಳಿದ್ದೆ ಎಂದು ಸ್ಪಷ್ಟೀಕರಣ ಕೊಟ್ಟಿದ್ದರು.
ಆದರೆ ವಯನಾಡ್‍ನಲ್ಲಿ ಕೊಟ್ಟಿರುವ ಈ ಹೇಳಿಕೆಯನ್ನು ಹಳೆಯ ಹೇಳಿಕೆಗಿಂತ ಗಂಭೀರವಾಗಿ ಪರಿಗಣಿಸಲು ಒಂದು ಕಾರಣವಿದೆ. ಒಂದು ತಿಂಗಳ ಹಿಂದಿನ ಪ್ರಿಯಾಂಕ ಹೇಳಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕೇಳಿದಾಗ “ಅದು ಪ್ರಿಯಾಂಕ ಅವರ ಇಷ್ಟಕ್ಕೆ ಬಿಟ್ಟ ವಿಚಾರ” ಎಂದು ಹೇಳಿದ್ದರು. ಆದರೆ ಪ್ರಿಯಾಂಕರವರ ಈ ಹೊಸ ಹೇಳಿಕೆ ಹೊರಬೀಳುವುದಕ್ಕು ಒಂದು ವಾರ ಮುನ್ನ ಮತ್ತೆ ತೂರಿಬಂದ ವಾರಣಾಸಿ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ವಾರಾಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ ಸ್ಪರ್ಧಿಸುವ ವಿಚಾರದಲ್ಲಿ “ಕುತೂಹಲವನ್ನು ಜೀವಂತವಾಗಿಟ್ಟುಕೊಳ್ಳುವುದರಲ್ಲಿ ನಷ್ಟವೇನೂ ಇಲ್ಲ ತಾನೆ?” ಎಂದು ರಾಹುಲ್ ಪ್ರತಿಕ್ರಿಯಿಸಿದ್ದರು. ಅದಾದ ಒಂದು ವಾರಕ್ಕೆ ಪ್ರಿಯಾಂಕರಿಂದ ಈ ಹೇಳಿಕೆ ಹೊರಬಿದ್ದಿರೋದು ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಹುಟ್ಟುಹಾಕಿದೆ.
ನೋಡುವುದಕ್ಕಷ್ಟೇ ಇಂದಿರಾ ಗಾಂಧಿಯವರನ್ನು ಹೋಲದೆ, ಜನರ ಜೊತೆ ಆತ್ಮೀಯವಾಗಿ ಬೆರೆಯುವ ನಡವಳಿಕೆಯಲ್ಲೂ ಇಂದಿರಾ ಗಾಂಧಿಯವರ ಗುಣವನ್ನೇ ಹೋಲುವ, ಅವರ ಮೊಮ್ಮಗಳು ಪ್ರಿಯಾಂಕ ಗಾಂಧಿಯವರಿಗೆ ದೊಡ್ಡ ಅಭಿಮಾನಿ ಬಳಗವಿದೆ. 2014ರಲ್ಲೇ ಆಕೆ ಸಕ್ರಿಯ ಚುನಾವಣಾ ರಾಜಕಾರಣಕ್ಕೆ ಧುಮುಕ್ಕಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಕಾಂಗ್ರೆಸ್‍ನ ಹಲವು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ, 2014ರಲ್ಲಿ ಮೋದಿ ವಿರುದ್ಧ ವಾರಣಾಸಿಯಿಂದ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸುಮಾರು ಎರಡು ಲಕ್ಷಗಳಷ್ಟು ಮತ ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸೋತರೂ ಅರವಿಂದ್ ಕೇಜ್ರಿವಾಲ್ ಅವರಿಗೆ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದ ಲೀಡರ್ ಎಂಬ ಇಮೇಜು ಬಂದಿತ್ತು. ಅದಾದ ನಂತರವೇ ಅವರ ಆಪ್ ಪಕ್ಷ ದಿಲ್ಲಿಯಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿದ್ದು.
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 22ರಿಂದ 29ರವರೆಗೆ ಕಾಲಾವಕಾಶವಿದ್ದು, ಮೇ 19ರಂದು ಅಂದರೆ ಕೊನೆಯ ಹಂತದಲ್ಲಿ ಚುನಾವಣೆ ನಡೆಯಲಿದೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...