Homeಕರ್ನಾಟಕಕನ್ನಡ ಸಂಶೋಧನಾ ಲೋಕದ ಶ್ರಮಜೀವಿ ರಹಮತ್ ತರೀಕೆರೆ

ಕನ್ನಡ ಸಂಶೋಧನಾ ಲೋಕದ ಶ್ರಮಜೀವಿ ರಹಮತ್ ತರೀಕೆರೆ

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಿ ಬರೆಯಲಾಗಿದೆ)

ಕನ್ನಡದ ಇಂದಿನ ಸಂಶೋಧಕರಲ್ಲಿ ಪ್ರೊ. ರಹಮತ್ ತರೀಕೆರೆಯವರದು ಪ್ರಮುಖ ಹೆಸರು. ಯಾಕೆಂದರೆ ಸದ್ಯದ ಮಟ್ಟಿಗೆ ಅವರ ಹಾಗೆ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುವವರು ಕಡಿಮೆ. ನಮ್ಮ ತಲೆಮಾರಿನ ಬಹುತೇಕ ಸಂಶೋಧಕರು, ಬರೆಹಗಾರರು ಈಗಾಗಲೇ ಲಭ್ಯವಿರುವ ಆಕರಗಳನ್ನು ನೆಚ್ಚಿಕೊಂಡಿರುವುದೇ ಹೆಚ್ಚು. ನಮ್ಮ ಹಿಂದಿನ ತಲೆಮಾರಿನ ಅನೇಕ ವಿದ್ವಾಂಸರು ವ್ಯಾಪಕ ಕ್ಶೇತ್ರಕಾರ್‍ಯವನ್ನು ಮಾಡುತ್ತಿದ್ದರು. ವಸಾಹತುಶಾಹಿ ಯೋಜನೆಯ ಜೊತೆಗೆ ಆರಂಭವಾದ ಕ್ಶೇತ್ರಕಾರ್‍ಯ ಆ ನಂತರದಲ್ಲಿ ವ್ಯಾಪಕವಾಗಿ ನಡೆಯಿತು. ಇದನ್ನು ದೇಶೀಯ ವಿದ್ವಾಂಸರೂ ಮುಂದುವರಿಸಿದರು. ಕ್ಶೇತ್ರಕಾರ್‍ಯದ ಮೂಲಕ ಹೊಸ ಆಕರಗಳನ್ನು ರೂಪಿಸಿದರು. ಚರಿತ್ರೆಕಾರರು, ಸಾಹಿತ್ಯ, ಚರಿತ್ರೆಕಾರರು, ಭಾಶಾವಿಜ್ಞಾನಿಗಳು, ಜಾನಪದ ವಿದ್ವಾಂಸರು, ಮಾನವಶಾಸ್ತ್ರಜ್ಞರು, ಸಮಾಜ ವಿಜ್ಞಾನಿಗಳು ಹೀಗೆ ವಿವಿಧ ಕ್ಶೇತ್ರಗಳ ತಜ್ಞರು ವ್ಯಾಪಕವಾಗಿ ಕ್ಶೇತ್ರಕಾರ್‍ಯ ಮಾಡುತ್ತಿದ್ದರು.

ಸಮಾಜ ವಿಜ್ಞಾನದಲ್ಲಿ ಈಗಲೂ ಇದು ಮುಂದುವರಿದಿದೆ. ಆದರೆ ಸಾಹಿತ್ಯ ಅಧ್ಯಯನದಲ್ಲಿ ಇದನ್ನು ಇತ್ತೀಚೆಗೆ ಮುಖ್ಯವೆಂದು ಭಾವಿಸಿದಂತೆ ಕಾಣುತ್ತಿಲ್ಲ. ಆದರೆ ರಹಮತ್ ತರೀಕೆರೆಯವರು ನಮ್ಮ ಹಿಂದಿನ ತಲೆಮಾರಿನ ಸಂಶೋಧಕರಂತೆ ’ಕ್ಶೇತ್ರಕಾರ್‍ಯ’ವನ್ನು ಒಂದು ಪ್ರಮುಖ ಸಂಶೋಧನಾ ವಿಧಾನವನ್ನಾಗಿ ಬಳಸುತ್ತಿದ್ದಾರೆ. ಕ್ಶೇತ್ರಕಾರ್‍ಯದ ಮೂಲಕ ಜನರ ಜೊತೆಗೆ ಒಡನಾಡಿ ’ಅರಿವು’ ಪಡೆಯುತ್ತಿದ್ದಾರೆ. ಆ ಅರಿವನ್ನು ಸಾಂಸ್ಕೃತಿಕ ಕಥನವಾಗಿಸುತ್ತಿದ್ದಾರೆ. ಈ ನೆಲೆಯಿಂದ ನೋಡಿದಾಗ ರಹಮತ್ ತರೀಕೆರೆಯವರ ಸಂಶೋಧನಾ ಮಾರ್‍ಗವು ನಮ್ಮ ತಲೆಮಾರಿನ ಇತರರಿಗಿಂತ ಹೇಗೆ ಭಿನ್ನವೆಂದು ತಿಳಿಯುತ್ತದೆ. ಅವರ ಅಧ್ಯಯನದ ವಿಶಿಶ್ಟ ದರ್ಶನವೂ ಆಗುತ್ತದೆ.

ಅವರು ವರ್‍ತಮಾನದಲ್ಲಿ ಜನರು ಜೀವಿಸುತ್ತಿರುವ ಬಗೆಗಳನ್ನು, ’ಲಿವಿಂಗ್ ಕಲ್ಚರ್’ಗಳನ್ನು ಮುಖಾಮುಖಿಯಾಗುವ ಮೂಲಕ ’ಕರ್ನಾಟಕದ ಸಂಸ್ಕೃತಿ’ಯನ್ನು ನಿರೂಪಿಸುತ್ತಿರುವುದನ್ನು ಗಮನಿಸಬಹುದು. ಈ ದಾರಿಯಲ್ಲಿ ಸಾಗಿ ಸಾವಿರಾರು ಜನರನ್ನು ಎದುರುಗೊಂಡಿದ್ದಾರೆ. ಅವರ ಜೊತೆಗೆ ಒಡನಾಡಿದ್ದಾರೆ. ಅವರಿಂದ ಕಲಿತು ಅದನ್ನು ನಾಡಿನ ಜನರಿಗೂ ಉಣಿಸುತ್ತಿದ್ದಾರೆ. ಅಂತಹ ಒಡನಾಟದ ಫಲಿತವಾಗಿಯೇ ಅವರ ’ಕರ್ನಾಟಕದ ನಾಥಪಂಥ’, ’ಕರ್ನಾಟಕದ ಸೂಫಿಗಳು’, ’ಕರ್ನಾಟಕದ ಮೊಹರಂ’, ’ಶಾಕ್ತಪಂಥ’, ’ಕರ್ನಾಟಕದ ಗುರುಪಂಥ’ದಂತಹ ಕೃತಿಗಳು ರೂಪುಗೊಂಡಿವೆ. ’ಕರ್ನಾಟಕದ ಧಮ್ಮಪಂಥ’ ಕೃತಿ ಇನ್ನಶ್ಟೇ ಹೊರಬರಬೇಕಿದೆ. ಈ ಕೃತಿಗಳ ಅನುಬಂಧಗಳಲ್ಲಿ ಅವರು ಒಡನಾಡಿರುವ ಜನರ ಉದ್ದನೆಯ ಪಟ್ಟಿ ನೀಡಿದ್ದಾರೆ. ಇದನ್ನು ಗಮನಿಸಿದರೆ ಅವರು ನಾಡಿನ ಉದ್ದಗಲಕ್ಕೂ ಅಡ್ಡಾಡಿರುವುದನ್ನು ಕಾಣಬಹುದು. ಬಹುಶಃ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲ ತಾಲೂಕುಗಳನ್ನು ಸುತ್ತಿದ್ದಾರೆ. ಅಲ್ಲಿನ ಜನರ ಮಾತುಕತೆ ಊಟೋಪಚಾರಗಳ ಸವಿಯನ್ನು ಉಂಡಿದ್ದಾರೆ. ಕರ್ನಾಟಕದ ’ಸಂಕರ ಸಂಸ್ಕೃತಿ’ಯ ಪರಿಚಯವನ್ನು ಖುದ್ದಾಗಿ ಕಂಡಿದ್ದಾರೆ. ನಾಡನ್ನು ಅವರಶ್ಟು ಸುತ್ತಿದವರು ಸದ್ಯದ ಕನ್ನಡದ ಸಂಶೋಧಕರಲ್ಲಿ ಬೇರೆ ಯಾರೂ ಇಲ್ಲವೆಂದೇ ಹೇಳಬೇಕು.

ನಮ್ಮ ರಾಜ್ಯವನ್ನು ಮಾತ್ರವಲ್ಲದೆ ಮೇಲೆ ಹೆಸರಿಸಿದ ಪಾಂಥಿಕ ಅಧ್ಯಯನಕ್ಕಾಗಿ ದೇಶದ ವಿವಿಧ ಮೂಲೆಗಳನ್ನು ಸುತ್ತಿದ್ದಾರೆ. ಕನ್ನಡ ಸಂಶೋಧನೆಗೆಂದೇ ಹುಟ್ಟಿದ ಕನ್ನಡ ವಿಶ್ವವಿದ್ಯಾಲಯ ಕಲ್ಪಿಸಿದ ಮುಕ್ತ ಅವಕಾಶವನ್ನು ಬಳಸಿಕೊಂಡು ವ್ಯಾಪಕವಾದ ಕ್ಶೇತ್ರಕಾರ್‍ಯವನ್ನು ನಡೆಸಿದ್ದಾರೆ. ಕ್ಶೇತ್ರಕಾರ್‍ಯದ ಮೂಲಕ ಪಂಥೀಯ ಅಧ್ಯಯನಗಳಿಗೆ ಬೇಕಾದ ಆಕರಗಳನ್ನು ರೂಪಿಸಿದ್ದಾರೆ. ಆ ಮೂಲಕ ಮರೆವಿಗೆ ಇಲ್ಲವೇ ಉಪೇಕ್ಶೆಗೆ ಒಳಗಾಗಿದ್ದ ಸಮುದಾಯಗಳ ಧಾರ್ಮಿಕ, ಆಧ್ಯಾತ್ಮಿಕ ಜೀವನ ಕ್ರಮಗಳು ಮತ್ತು ಲೋಕದೃಶ್ಟಿಗಳನ್ನು ವಿವರಿಸಿಕೊಡಲು ಪ್ರಯತ್ನಿಸಿದ್ದಾರೆ. ದುಡಿವ ಜನವರ್ಗಗಳ ಜೀವನಮೀಮಾಂಸೆಯನ್ನು ಮರುನಿರೂಪಿಸುವ ಕೆಲಸ ಮಾಡಿದ್ದಾರೆ. ಅವರ ಶ್ರಮದ ಪರಿಣಾಮವಾಗಿ ಮೇಲಿನ ಕೃತಿಗಳು ಸಿದ್ದಗೊಂಡಿವೆ. ಲೇಖಕರಾಗಿ ಅವರ ಸಿದ್ದಿ ಸಾಧನೆಗಳಿರುವುದೇ ಈ ಅಧ್ಯಯನಗಳಲ್ಲಿ ಎಂಬುದು ಬಹುತೇಕರ ಗ್ರಹಿಕೆ.

ಅವುಗಳೇ ಅವರ ಹೆಸರನ್ನು ಕನ್ನಡದ ಸಂಶೋಧನೆಯ ಜಗತ್ತಿನಲ್ಲಿ ಹೆಚ್ಚುಕಾಲ ಜೀವಂತವಾಗಿ ಉಳಿಸುವುದು. ಯಾಕೆಂದರೆ ಕ್ಶೇತ್ರಕಾರ್‍ಯ ಮತ್ತು ಸುತ್ತಾಟಗಳ ಬೆವರಿನಿಂದಲೇ ಈ ಕೃತಿಗಳು ಹುಟ್ಟಿವೆ. ಹಾಗಾಗಿ ಇವು ಕರ್ನಾಟಕದ ’ಜನಸಂಸ್ಕೃತಿ’ಯನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಆಕರಗ್ರಂಥಗಳಾಗಿ ರೂಪುಗೊಂಡಿವೆ. ಈ ಪಂಥಗಳ ಮೇಲಿನ ಇದುವರೆಗಿನ ಅಧ್ಯಯನವು ಚದುರಿದಂತೆ ಇತ್ತು. ಸದ್ಯ ಅವುಗಳ ಅಧ್ಯಯನಕ್ಕೆ ಬೇಕಾದ ಗಟ್ಟಿಯಾದ ತಾತ್ವಿಕ ಭೂಮಿಕೆಯನ್ನು ತಮ್ಮ ಅಧ್ಯಯನಗಳಿಂದ ರೂಪಿಸಿದ್ದಾರೆ. ಈ ಪಂಥಗಳ ಬಗೆಗಿನ ಮುಂದಿನ ಅಧ್ಯಯನಗಳಿಗೆ ಈ ಸಂಶೋಧನಾ ಕೃತಿಗಳು ತೋರುದೀಪಗಳಾಗಿ ಕೆಲಸ ಮಾಡಿವೆ. ಈ ಮಹತ್ವವನ್ನು ಕನ್ನಡದ ಓದುಗರು ಈಗಾಗಲೇ ಮನನ ಮಾಡಿಕೊಂಡಿದ್ದಾರೆ. ಈ ಪಂಥೀಯ ಅಧ್ಯಯನದ ಬರೆಹಗಳ ಸಾಧ್ಯತೆ ಮತ್ತು ಸಮಸ್ಯೆಗಳ ಬಗೆಗೆ ಆ ಕ್ಶೇತ್ರದಲ್ಲಿ ಪರಿಣತರಾದವರು ಬೆಳಕು ಚೆಲ್ಲಬೇಕಾಗಿದೆ.

ಅವರ ಮತ್ತೊಂದು ಪ್ರಮುಖ ಕ್ಶೇತ್ರವೆಂದರೆ ಸಾಹಿತ್ಯ ವಿಮರ್ಶೆ. ’ಪ್ರತಿಸಂಸ್ಕೃತಿ’, ’ಮರದೊಳಗಣ ಕಿಚ್ಚು’, ’ಕತ್ತಿಯಂಚಿನ ದಾರಿ’, ’ಚಿಂತನೆಯ ಪಾಡು’, ’ನೇತುಬಿದ್ದ ನವಿಲು’, ’ಬಾಗಿಲ ಮಾತು’ ಮುಂತಾದ ಕೃತಿಗಳಿವೆ. ತಮ್ಮ ಕಾಲದ ಮಹತ್ವದ ಲೇಖಕರು ಮತ್ತು ಕೃತಿಗಳನ್ನು ಕುರಿತು ವಿಮರ್ಶೆ ಬರೆದಿದ್ದಾರೆ. ಈ ವಿಮರ್ಶೆಗೆ ಸಾಂಸ್ಕೃತಿಕ ವಿಮರ್ಶೆಯ ವಿಧಾನವನ್ನು ಅನುಸರಿಸಿದ್ದಾರೆ. ಕೆಲವು ಸಾರಿ ವಿಚಾರದ ಬೆನ್ನೇರಿದ ಪರಿಣಾಮವಾಗಿ ವಿಮರ್ಶೆ ವಿಚಾರ ಸಾಹಿತ್ಯದ ದಾರಿಗೂ ಹೊರಳಿಕೊಂಡಿದೆ. ಅವರ ವಿಮರ್ಶೆಯು ಕನ್ನಡ ಸಾಹಿತ್ಯವನ್ನು ಓದುವ ಬಗೆಗೆ ಹಲವು ಒಳನೋಟಗಳನ್ನು ನೀಡಿದೆ. ವಿಮರ್ಶೆಯ ಪೆಡಸು ಭಾಶೆಯನ್ನು ಬದಲಿಸಿ ಅದನ್ನು ಸುಲಲಿತವಾಗಿಸಿದ್ದಾರೆ. ಯಾರೂ ಬೇಕಾದರೂ ಕೂಡ ಅವರ ವಿಮರ್ಶೆಯ ಬರೆಹಗಳನ್ನು ಓದಿಕೊಳ್ಳಬಹುದಾಗಿದೆ. ಆದರೆ ವಿಮರ್ಶೆಯಲ್ಲಿ ವಿವಿಧ ಮಾದರಿಗಳನ್ನು ಅನುಸರಿಸದ ಕಾರಣ ಅವರ ವಿಮರ್ಶೆಯ ಬರೆಹಗಳು ಏಕತಾನತೆಯಲ್ಲಿ ಬಳಲಿವೆ. ಅಲ್ಲದೆ ಇಲ್ಲಿ ತೀವ್ರ ಗುದ್ದಾಟದ ಗುಣವನ್ನು ಬಿಟ್ಟುಕೊಡಲಾಗಿದೆ. ತಾತ್ವಿಕವಾದ ವಿಚಾರಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ಕೈಗೆತ್ತಿಕೊಳ್ಳದ ಕಾರಣ ಅವರ ವಿಮರ್ಶೆ ವಿವರಣೆಯ ದಾರಿಯಲ್ಲಿಯೇ ಸಾಗಿದೆ. ಈ ಬಗೆಗೆ ಆಳವಾದ ಅಧ್ಯಯನ ನಡೆದು ಅಲ್ಲಿನ ಸಮಸ್ಯೆಗಳನ್ನು ಗುರುತಿಸಿಕೊಳ್ಳಬೇಕಿದೆ.

ಅವರು ಕನ್ನಡದ ಒಬ್ಬ ಪ್ರಮುಖ ಲೇಖಕರಾಗಿ ವರ್‍ತಮಾನವನ್ನು ಬಾಧಿಸುವ ಸಮಸ್ಯೆಗಳ ಬಗೆಗೆ ನಿರಂತರವಾಗಿ ಬರೆಹ ಮಾಡಿದ್ದಾರೆ. ಅಂಥ ಪ್ರಯತ್ನದ ಭಾಗವಾಗಿಯೇ ’ಧರ್ಮಪರೀಕ್ಶೆ’, ’ನೆತ್ತರ ಸೂತಕ’ ಮುಂತಾದ ಪುಸ್ತಕಗಳು ಹೊರಬಂದಿವೆ. ಕೋಮುವಾದ, ಮೂಲಭೂತವಾದ, ಪ್ರಭುತ್ವದ ದಬ್ಬಾಳಿಕೆಗಳು ಮುಂತಾದಗಳ ಬಗೆಗೆ ಬರೆದಿದ್ದಾರೆ. ಈ ಕೃತಿಗಳಲ್ಲಿರುವ ವಿವಿಧ ಲೇಖನಗಳು ಆಯಾಕಾಲದ ಒತ್ತಡಗಳಿಗೆ ಪ್ರತಿಕ್ರಿಯಿಸಿದ ಬರೆಹಗಳಾಗಿವೆ. ಇವಲ್ಲದೆ ಅವರ ’ನಡೆದಶ್ಟು ನಾಡು’, ’ಕದಳಿ ಹೊಕ್ಕುಬಂದೆ’ ’ಅಂಡಮಾನ್ ಕನಸು’ ತರಹದ ಕೃತಿಗಳೂ ಸೃಶ್ಟಿಯಾಗಿವೆ. ಇವು ಅವರ ಕ್ಶೇತ್ರಕಾರ್‍ಯದ ಅನುಭವಗಳ ಕಥನ ಮತ್ತು ಪ್ರವಾಸದ ಅನುಭವಗಳ ಕಥನಗಳಾಗಿವೆ. ’ಹಿತ್ತಲ ಜಗತ್ತು’ ತರಹದ ಕೃತಿಗಳಲ್ಲಿ ಲಲಿತ ಪ್ರಬಂಧದ ಮಾದರಿಯ ಜನಪ್ರಿಯ ಬರೆಹಗಳು ಕಟ್ಟುಗೊಂಡಿವೆ. ’ಅಮೀರ್ ಬಾಯಿ ಕರ್ನಾಟಕಿ’ ಕೃತಿಯಲ್ಲಿ ತೆರೆಮರೆಗೆ ಸರಿದಿದ್ದ ನಟಿ ಗಾಯಕಿ ಅಮೀರ್ ಬಾಯಿ ಅವರ ವ್ಯಕ್ತಿತ್ವ ನಿರೂಪಿಸಲು ಪ್ರಯತ್ನಿಸಲಾಗಿದೆ.

ಹೀಗೆ ಸಂಶೋಧನೆ, ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಅಂಕಣ ಬರೆಹಗಳು, ಜೀವನ ಚರಿತ್ರೆ, ಮತ್ತು ಲಲಿತ ಪ್ರಬಂಧದ ಮಾದರಿಯ ಬರೆಹಗಳನ್ನು ತರೀಕೆರೆ ಅವರು ಮಾಡಿದ್ದಾರೆ. ಅವರ ಈ ಎಲ್ಲ ಬರೆಹಗಳಿಗೆ ಅಪಾರ ಪ್ರಮಾಣದ ಓದುಗರಿದ್ದಾರೆ. ಆದರೆ ಈ ಓದುಗರು ಅವರ ಬರೆಹಗಳನ್ನು ಓದಿ ತಾತ್ವಿಕವಾಗಿ ಮಂಥನ ನಡೆಸಿದ್ದು ಕಡಿಮೆ. ಅಲ್ಲದೆ ಅವರ ಬರೆಹಗಳಿಂದ ಕನ್ನಡ ಜಗತ್ತು ಯಾವ ದರ್ಶನವನ್ನು, ವಿಚಾರಧಾರೆಯನ್ನು ಇಲ್ಲವೇ ತಾತ್ವಿಕತೆಯನ್ನು ಪಡೆಯಬಹುದೆಂಬುದರ ಬಗೆಗೆ ನಿರ್ದಿಶ್ಟವಾದ ಚರ್ಚೆಗಳಾಗಿಲ್ಲ. ಹಾಗೆಯೇ ಅವರ ವಿಮರ್ಶೆಯ ಬರೆಹಗಳಿಂದ ಹೊರತೆಗೆದು ಬಳಸಬಹುದಾದ ವಿಮರ್ಶೆಯ ಪರಿಕರಗಳು ಯಾವುವು? ಎಂಬುದು ಖಚಿತವಾಗಿಲ್ಲ. ಅಂದರೆ ಅವರ ವಿಸ್ತಾರವಾದ ಮತ್ತು ವೈವಿಧ್ಯಮಯ ಬರೆಹಗಳಲ್ಲಿ ಮಂಡಿತವಾಗಿರುವ ತಾತ್ವಿಕವಾದ ವಿಚಾರಗಳು ಮತ್ತು ವಿಮರ್ಶೆಯ ಪರಿಕರಗಳು ಯಾವುವು? ಕನ್ನಡ ಜಗತ್ತು ಯಾವುದನ್ನು ಮುಂದುವರಿಸಬೇಕಾಗಿದೆ? ಎಂಬುದರ ಬಗೆಗೆ ಹೆಚ್ಚು ಅಧ್ಯಯನಗಳಾಗಿಲ್ಲ. ಅಂತಹ ಅಧ್ಯಯನಗಳಾಗದೆ ಅವರ ಚಿಂತನೆಗಳನ್ನು ಮುಂದುವರಿಸುವುದು ಸಾಧ್ಯವಿಲ್ಲ. ಹಾಗಾಗಿ ಅವರ ಬರೆಹಗಳ ಆಶಯ ಮತ್ತು ವಿಚಾರಧಾರೆಯ ಸ್ವರೂಪವನ್ನು ಇನ್ನಶ್ಟೇ ಕಂಡುಕೊಳ್ಳಬೇಕಿದೆ.

ಒಟ್ಟಾರೆ ಅವರ ಬರೆಹಗಳ ಓದಿನ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಇಲ್ಲಿ ಚುಟುಕಾಗಿ ಮಂಡಿಸಬಹುದೆನಿಸುತ್ತದೆ. ಒಂದು. ಕರ್ನಾಟಕವನ್ನು ನಡೆದು ನೋಡಿರುವ ಅವರು ಇಲ್ಲಿನ ವೈವಿಧ್ಯಗಳನ್ನು ಕಂಡು ’ಕರ್ನಾಟಕ ಸಂಸ್ಕೃತಿ’ಯನ್ನು ’ಸಂಕರ ಸಂಸ್ಕೃತಿ’ ಎಂದು ಕರೆದಿದ್ದಾರೆ. ಆರಂಭದಲ್ಲಿ ವೈದಿಕ ಅವೈದಿಕ ಎಂಬ ಬೈನರಿ ನೆಲೆಯಲ್ಲಿ ನೋಡುತ್ತಿದ್ದ ಅವರು ನಂತರ ಅದನ್ನು ಬಿಟ್ಟುಕೊಟ್ಟು ಕರ್ನಾಟಕದ ಸಂಸ್ಕೃತಿಯ ಹಲವು ಸಂಸ್ಕೃತಿಗಳು ಕೂಡಿ ರಚನೆಗೊಂಡಿರುವ ’ಸಂಕರ ಸಂಸ್ಕೃತಿ’ ಎಂಬ ತೀರ್ಮಾನಕ್ಕೆ ಬಂದಿರುವಂತೆ ಕಾಣಿಸುತ್ತದೆ. ಹಾಗಾಗಿಯೇ ಅವರು ಆರಂಭದಲ್ಲಿ ಬಳಸಿದ ’ಪ್ರತಿಸಂಸ್ಕೃತಿ’ ಪರಿಕಲ್ಪನೆಯನ್ನು ನಂತರದಲ್ಲಿ ಬಿಟ್ಟುಕೊಟ್ಟರು. ಆದರೆ ’ಸಂಕರ ಸಂಸ್ಕೃತಿ’ ಪರಿಕಲ್ಪನೆಯನ್ನು ತಮ್ಮ ಅಧ್ಯಯನದ ಅನುಭವದ ಆಧಾರದ ಮೇಲೆ ತಾತ್ವೀಕರಿಸಿ ಸೂತ್ರ ರೂಪದಲ್ಲಿ ಹೇಳಿಲ್ಲ. ಪ್ರಾಸಂಗಿಕವಾಗಿ ಅಲ್ಲಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಅವರು ಇನ್ನಶ್ಟೇ ಸೂತ್ರೀಕರಿಸಿ ಹೇಳಬೇಕಿದೆ. ಹಾಗೆ ಸೂತ್ರೀಕರಿಸಿ ಹೇಳುವ ಶಕ್ತಿ ವಿದ್ವತ್ತು ಅನುಭವ ಅವರಿಗಿದೆ. ಅಂದರೆ ಸೈದ್ಧಾಂತಿಕ ಬರೆಹಗಳ ಮೂಲಕ ಅವರ ಸಂಶೋಧನೆಯ ’ಅಮೃತಫಲ’ ಇನ್ನಶ್ಟೇ ಹೊರಬರಬೇಕಿದೆ. ಅಂದರೆ ಕರ್ನಾಟಕದ್ದು ’ಸಂಕರ ಸಂಸ್ಕೃತಿ’ ಎಂಬ ತೀರ್ಮಾನಕ್ಕೆ ಬಂದಿದ್ದರೆ ಆ ಬಗೆಗೆ ಒಂದು ಪ್ರಮೇಯ ರೂಪದ ತಾತ್ವಿಕವಾದ ಬರೆಹವನ್ನು ಮಾಡಬೇಕಿದೆ.

ಎರಡು. ತಮ್ಮ ಸಂಶೋಧನೆ, ಸಾಹಿತ್ಯ ವಿಮರ್ಶೆಯ ಬರೆಹಗಳು, ರಾಜಕೀಯ ಸಾಂಸ್ಕೃತಿಕ ಬರೆಹಗಳನ್ನು ಒಳಗೊಂಡಂತೆ ಅವರ ಒಟ್ಟು ಬರೆಹಗಳ ಆಶಯದಲ್ಲಿ ಒಂದು ಸಮಾಜವಾದಿ ಸಮಾಜವನ್ನು ಕಟ್ಟಿಕೊಳ್ಳಲು ಬೇಕಾದ ಚಿಂತನೆಯನ್ನು ರೂಪಿಸಲು ಬಯಸಿರುವ ಕಳಕಳಿ ಎದ್ದು ಕಾಣಿಸುತ್ತದೆ. ಅದನ್ನು ಅವರು ಪ್ರಾಸಂಗಿಕವಾಗಿ ಮಾತ್ರ ಹೇಳಿದ್ದಾರೆ. ಮತ್ತು ಅವರ ಬರೆಹಗಳನ್ನು ಓದಿದರೆ ಅದು ನಮ್ಮ ಅನುಭವಕ್ಕೂ ಬಾರದಿರದು. ಆದರೆ ಒಂದು ಸಮಾಜವಾದಿ ಸಮಾಜದ ನಿರ್ಮಾಣಕ್ಕೆ ಬೇಕಾದ ಸಾಹಿತ್ಯ ಮತ್ತು ಜೀವನ ಮೀಮಾಂಸೆಯನ್ನು ರೂಪಿಸುವ ಉದ್ದೇಶವಿದೆ. ಆದರೆ ಅದನ್ನು ಸೈದ್ಧಾಂತಿಕವಾಗಿ ಮಂಡಿಸಿದ್ದೇನೆಂದು ಅವರು ಎಲ್ಲೂ ಖಚಿತಪಡಿಸಿಲ್ಲ. ಆದರೆ ಸಮಾಜವಾದಿ ಸಾಹಿತ್ಯ ಮೀಮಾಂಸೆಯ ಬಗೆಗೆ ಅವರಿಗೆ ತಕರಾರಿಲ್ಲ. ಆದರೆ ಯಾಕೋ ಅದನ್ನು ತಾತ್ವೀಕರಿಸಿ ಹೇಳಲು ಮುಂದಾಗಿಲ್ಲ. ಅಂದರೆ ಯಾವುದೇ ವಿಚಾರಗಳನ್ನು ತಾತ್ವೀಕರಿಸಿ ಹೇಳದೇ ಹೋದರೆ ಹೊಸ ಸಿದ್ದಾಂತಗಳು ಜನ್ಮತಾಳುವುದಿಲ್ಲ. ಪಶ್ಚಿಮದ ದೇಶಗಳ ಬರೆಹಗಾರರು ಇಲ್ಲಿಯೇ ಗೆಲ್ಲುವುದು. ಅವರು ಯಾವುದೇ ವಿಚಾರಗಳನ್ನಾಗಲಿ ತಾತ್ವೀಕರಿಸಿ ಸಿದ್ದಾಂತವಾಗಿಸಿ ಸೂತ್ರ ರೂಪದಲ್ಲಿ ಮುಂದಿಡುತ್ತಾರೆ. ಅವು ಲೋಕವನ್ನು ಸೆಳೆಯುತ್ತವೆ. ಚರ್ಚೆಗೆ ಒಳಗಾಗಿ ಹೊಸ ಚರ್ಚೆಗಳನ್ನು ಹುಟ್ಟಿಹಾಕುತ್ತವೆ.

ಮೂರು. ಶ್ರಮಜೀವಿಗಳ-ದುಡಿವ ವರ್ಗಗಳ ಲೋಕದೃಶ್ಟಿ, ಆಧ್ಯಾತ್ಮ ಮತ್ತು ಧಾರ್ಮಿಕ ಚಹರೆಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇಲ್ಲಿಯೂ ಕೂಡ ದುಡಿವ ವರ್‍ಗಗಳ ಜೀವನಮೀಮಾಂಸೆಯ ಸ್ವರೂಪವನ್ನು ಒಂದು ಸಿದ್ದಾಂತವಾಗಿ ಮಂಡಿಸಿಲ್ಲ. ಅಂದರೆ ತಮ್ಮ ಅಧ್ಯಯನಗಳ ಮೂಲಕ ಲೋಕವನ್ನು ವಿವರಿಸುವ ಪ್ರಯತ್ನವನ್ನು ಹೆಚ್ಚು ಮಾಡಿದ್ದಾರೆ. ಆದರೆ ಅದನ್ನು ಒಂದು ತಾತ್ವಿಕ ಚೌಕಟ್ಟಿನಲ್ಲಿಟ್ಟು ಚರ್ಚಿಸಲು ಹಿಂಜರಿದಂತೆ ಕಾಣುತ್ತಿದೆ. ಹಾಗಾಗಿಯೇ ಅವರ ಬರೆಹ ಆತ್ಯಂತಿಕ ಮತ್ತು ನಿರ್ಣಾಯಕ ಹಂತದಲ್ಲಿ ಕೈಚೆಲ್ಲಿಬಿಡುತ್ತದೆ. ಹೀಗೆ ಕೈಚೆಲ್ಲಿಬಿಟ್ಟಿರುವ ಕಾರಣಕ್ಕೆ ಅನೇಕ ಸಂದರ್ಭದಲ್ಲಿ ಸೈದ್ಧಾಂತಿಕವಾಗಿ ಜಗಳವನ್ನೂ ಆಡಲಾಗದ ಸ್ಥಿತಿ ಸೃಶ್ಟಿಯಾಗಿದೆ. ಸಾಮಾನ್ಯವಾಗಿ ಅವರಿಗೆ ಎಲ್ಲ ವಿಶಯಗಳ ಬಗೆಗೂ ಒಂದು ಖಚಿತ ತಾತ್ವಿಕ ನಿಲುವು ಇರುತ್ತದೆ.

ಅದನ್ನು ತಮ್ಮ ವೈಯಕಿಕ್ತ ಜೀವನದಲ್ಲಿ ಪಾಲಿಸುತ್ತಾರೆ. ಆದರೆ ಬರೆಹಗಳಲ್ಲಿ ತಮ್ಮ ತಿಳುವಳಿಕೆಯನ್ನು ಸೈದ್ಧಾಂತಿಕವಾಗಿ ಮಂಡಿಸುವ ರಿಸ್ಕನ್ನು ತೆಗೆದುಕೊಂಡಿಲ್ಲ. ಯಾವುದೇ ಸಿದ್ದಾಂತಗಳಿಗೆ ಅವುಗಳದೇ ಆದ ಒಂದು ಮಿತಿಯಿರುತ್ತದೆ. ಆದರೆ ಅಂತಹ ಒಂದು ಸಿದ್ದಾಂತದ ಆಸರೆಯನ್ನು ಪಡೆದುಕೊಳ್ಳದೆ ಸಾಗಿದರೆ ಒಟ್ಟು ಬರೆಹವೇ ದುರ್ಬಲವಾಗಿಬಿಡುವ ಅಪಾಯವೂ ಇದೆ. ಹೀಗೆ ಒಂದು ಸೈದ್ಧಾಂತಿಕ ನಿಲುವನ್ನು ತೆಗೆದುಕೊಂಡು ದಿಟ್ಟವಾಗಿ ವಿಚಾರವನ್ನು ಮಂಡಿಸದ ಕಾರಣಕ್ಕಾಗಿಯೇ ಅವರ ಅನೇಕ ಬರೆಹಗಳು ಸಾಧಾರಣ ಬರೆಹಗಳಂತೆ ಕಾಣಿಸುತ್ತವೆ. ಅವರ ಆರಂಭ ಕಾಲದ ’ಪ್ರತಿಸಂಸ್ಕೃತಿ’ ’ಮರದೊಳಗಣ ಕಿಚ್ಚು’ ಕೃತಿಗಳಲ್ಲಿರುವ ಗುದ್ದಾಟದ ಗುಣ ನಂತರದ ಬರೆಹಗಳಲ್ಲಿ ಮುಂದುವರೆಯಲಿಲ್ಲ. ಇದರಿಂದ ಅವರ ಬರೆಹ ತೀವ್ರತೆಯನ್ನು ಕಳೆದುಕೊಂಡಿತು ಮತ್ತು ಸೈದ್ದಾಂತಿಕವಾಗಿ ದುರ್ಬಲವೂ ಆಯಿತು ಎನ್ನಿಸುತ್ತದೆ.

ಹೀಗೆ ಅನೇಕ ಸಂಗತಿಗಳನ್ನು ಅವರ ಇದುವರೆಗಿನ ಬರೆಹಗಳ ಆಧಾರ ಮೇಲೆ ಚರ್ಚಿಸಲು ಸಾಧ್ಯವಿದೆ. ಮತ್ತು ಇಂತಹ ಚರ್ಚೆಯೇ ಇಂದಿನ ಅಗತ್ಯವೂ ಆಗಿದೆ. ಅವರ ಒಟ್ಟು ಬರೆಹಗಳು ವಿವರಣೆಯ ಮಾದರಿಯಲ್ಲಿಯೇ ಹೆಚ್ಚು ಸಾಗಿವೆ. ಕೆಲವು ಕಡೆ ವಿಶ್ಲೇಶಣೆ ಮಾದರಿ ಕಂಡರೂ ಕೂಡ ಅಲ್ಲಿ ಅದು ಅಂತಿಮವಾಗಿ ತಾತ್ವೀಕರಣಗೊಳ್ಳುವುದಿಲ್ಲ. ಹಾಗಾಗಿ ಇವರ ಒಟ್ಟು ಧೋರಣೆಯೇನು ಎನ್ನುವುದನ್ನು ಓದುಗರು ಊಹಿಸಿಕೊಳ್ಳಬೇಕೆ ಹೊರತು ಅವರ ಬರೆಹಗಳಿಂದಲೇ ಎತ್ತಿ ತೋರಿಸಲು ಸಾಧ್ಯವಿಲ್ಲ. ಉದಾಹರಣೆಗೆ ’ಸಂಕರ ಸಂಸ್ಕೃತಿ’ ಮತ್ತು ’ಸಮಾಜವಾದಿ ಸಾಹಿತ್ಯ ಮೀಮಾಂಸೆ’ಯ ವಿಚಾರಗಳನ್ನು ಮಂಡಿಸುತ್ತಿದ್ದರೂ ಅದನ್ನು ಎಲ್ಲಿಯೂ ತಾತ್ವೀಕರಿಸಿ ಹೇಳುವುದಿಲ್ಲ. ಹಾಗಾಗಿ ಅದನ್ನೂ ಕೂಡ ಖಚಿತವಾಗಿ ಹೇಳಲಾಗುವುದಿಲ್ಲ. ಈ ಸಮಸ್ಯೆಯ ಬಗೆಗೆ ನಾವು ಕೆಲವು ಗೆಳೆಯರು ಅವರೊಟ್ಟಿಗೆ ಚರ್ಚಿಸಿದ್ದೇವೆ. ಅವರಿಗೂ ಅದು ಮನವರಿಕೆಯಾಗಿದೆ ಅನ್ನಿಸಿದೆ. ಈ ಸಮಸ್ಯೆಯನ್ನು ಮೀರುವ ಪ್ರಯತ್ನದ ಭಾಗವಾಗಿ ಮತ್ತೊಂದು ಕೃತಿಯನ್ನು ರೂಪಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ಅದು ಬೇಗ ಬರಲಿ ಅವರ ಚಿಂತನೆಗಳಿಗೆ ಒಂದು ಗಟ್ಟಿಯಾದ ತಾತ್ವಿಕ ಬುನಾದಿ ರೂಪುಗೊಳ್ಳಲಿ. ಕನ್ನಡದ ಓದುಗರು ಅಂತಹ ಚಿಂತನೆಯ ಲಾಭವನ್ನು ಪಡೆದುಕೊಳ್ಳಲಿ ಎಂಬ ಅಪೇಕ್ಶೆ ಇಲ್ಲಿನದು.

ರಂಗನಾಥ ಕಂಟನಕುಂಟೆ

ರಂಗನಾಥ ಕಂಟನಕುಂಟೆ
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ರಂಗನಾಥ ಕಂಟನಕುಂಟೆ ಹೊಸ ತಲೆಮಾರಿನ ಚಿಂತಕ ಮತ್ತು ಕವಿ. ಹಂಪಿ ವಿಶ್ವವಿದ್ಯಾಲಯದಿಂದ ಜನಭಾಷೆ ಮತ್ತು ಪ್ರಭುತ್ವದ ಬಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡಿದ್ದಾರೆ. ‘ಓದಿನ ಜಾಡು’, ‘ತೀರದ ನಡಿಗೆ’, ‘ಗೋಡೆಯ ಚಿತ್ರ ರಂಗನಾಥ ಅವರ ಕೆಲವು ಪುಸ್ತಕಗಳು.


ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...