ಎಲೆಮರೆಯಾಗಿ ಕೆಲಸ ಮಾಡಿ ಸಾವಿರಾರು ಜನರು ನೆಮ್ಮದಿಯ, ಗೌರವದ ಬದುಕು ಕಟ್ಟಿಕೊಳ್ಳಲು ಕಾರಣವಾದ ಸಾಮಾಜಿಕ ಹೋರಾಟಗಾರರಲ್ಲಿ ಜಾಗೃತ ಮಹಿಳಾ ಸಂಘಟನೆಯ ಚಿನ್ನಮ್ಮ ಕೂಡ ಒಬ್ಬರು. ತಮ್ಮ ನೋವುಗಳನ್ನು ದಾಟಿ, ಮತ್ತೊಬ್ಬರ ನೋವಿಗೆ ಕಿವಿಯಾಗುವ ಇವರ ಬದುಕು, ಕೆಲಸ ಮತ್ತೊಬ್ಬರಿಗೂ ಸ್ಫೂರ್ತಿದಾಯಕ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರ ಕಿರು ಪರಿಚಯ ಇಲ್ಲಿದೆ.
ರಾಯಚೂರು ಜಿಲ್ಲೆಯಲ್ಲಿ ಕೃಷಿ, ಕೂಲಿಕಾರ, ಬಡ-ದಲಿತ ಮಹಿಳೆಯರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳಿಗಾಗಿ, ಗೌರವದ ಬದುಕಿಗಾಗಿ ಹೋರಾಟ ನಡೆಸುವ ಜಾಗೃತ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಿನ್ನಮ್ಮ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಇವರ ಊರು.. ದೇವದಾಸಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥೆ.. ಬಾಲ್ಯ ವಿವಾಹಕ್ಕೆ ಸಿಲುಕಿ ಬಾಲ್ಯವನ್ನು ಕಳೆದುಕೊಂಡವರು ಚಿನ್ನಮ್ಮ. ಬಡತನ, ಜಾತಿ ವ್ಯವಸ್ಥೆಯ ಕಹಿ ಅನುಭವಗಳನ್ನು ಅನುಭವಿಸುತ್ತಾ ಬೆಳೆದವರು. ಅದರಲ್ಲೂ ದಲಿತ ಹೆಣ್ಣು ಮಗಳಾಗಿ ತನ್ನ ಸುತ್ತಲಿನ ಜನರ ನೋವನ್ನು ಕಾಣುತ್ತಾ, ಸಹಿಸುತ್ತಾ ಬೆಳೆದವರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ
ಜಾತಿ ಕಾರಣಕ್ಕೆ ಪುರುಷನಿಗಿಂತ ಮಹಿಳೆ ಅನುಭವಿಸುವ ಕಷ್ಟ ಕಂಡ ಇವರು ಮಹಿಳೆಯರ ಜೊತೆ ಸೇರಿ ಮಹಿಳಾ ಗುಂಪುಗಳನ್ನು ಕಟ್ಟಿದವರು. ಮನೆಯ ಗಂಡಸರು, ಊರ ಮುಖಂಡರು, ಪುಂಡ ಪೋಕರಿಗಳ ಮಾತಿಗೆ ತಲೆಕೆಡಿಸಿಕೊಳ್ಳದೆ ತನ್ನ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡಿದವರು.
ಝಾನ್ಸಿ ರಾಣಿ ಮಹಿಳಾ ಸಂಘದ ಮೂಲಕ ತನ್ನ ಊರಿನ ರಸ್ತೆಗಳ ನಿರ್ಮಾಣಕ್ಕೆ ಕೈಹಾಕಿ ಸೈ ಎನಿಕೊಂಡಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ಬೇರೆಯವರ ಮುಂದೆ ನಿಂತು ಹೆಣ್ಣು ಎಂಬ ಕಾರಣಕ್ಕೆ ತಾವು ಅನುಭವಿಸಿದ್ದ ಅವಮಾನಗಳಿಂದ ಹೊರ ಬರಲು, ಗೌರವದ ಬದುಕು ಕಟ್ಟಿಕೊಳ್ಳಲು ಸ್ವಂತ ಉದ್ಯಮ ಸ್ಥಾಪಿಸಲು ನಿರ್ಧರಿಸಿ, ಸಹಾಯ ಬೇಡಿ ಪೋತ್ನಾಳ ಗ್ರಾಮದಲ್ಲಿ ಬೇವಿನ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸಿದವರು ಚಿನ್ನಮ್ಮ.
ತಮ್ಮ ಸಮುದಾಯದ ಮಹಿಳೆಯರು ಅನಾರೋಗ್ಯದಿಂದ ಆಸ್ಪತ್ರೆಗೆ ಹೋದರೆ, ಆಸ್ಪತ್ರೆಗಳ ವೈದ್ಯರು ಜಾತಿಯ ಕಾರಣಕ್ಕೆ ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದದ್ದನ್ನು ಗಮನಿಸಿದ ಚಿನ್ನಮ್ಮ, ತಾವೇ ಮಹಿಳೆಯರ ಜೊತೆ ಸೇರಿ ಗಿಡಮೂಲಿಕೆ ಔಷಧಿಗಳನ್ನು ನೀಡುವುದನ್ನು ಕಲಿತಿದ್ದಾರೆ.
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!
ಮಹಿಳೆಯರ ಆರೋಗ್ಯ ಜಾಗೃತಿಗಾಗಿ ಬರಿಗಾಲಲ್ಲಿ ಹಳ್ಳಿ ಹಳ್ಳಿಗೂ ನಡೆದು, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಗಿಡಮೂಲಿಕೆ ಔಷಧಿಗಳನ್ನು ಬಳಸುವುದನ್ನು ಹೇಳಿಕೊಟ್ಟಿದ್ದಾರೆ. ಇಂದಿಗೂ ಹೆಣ್ಣು ಮಕ್ಕಳ ಹಲವಾರು ಕಾಯಿಲೆಗಳಿಗೆ ಚಿನ್ನಮ್ಮನ ಬಳಿ ಔಷಧಿಗಳಿವೆ. ನಗರ ಪ್ರದೇಶಗಳಿಂದಲೂ ಇವರ ಬಳಿ ಚಿಕಿತ್ಸೆ ಪಡೆಯಲು ಬರುತ್ತಾರೆ.

ರಾಯಚೂರಿನ ಪೋತ್ನಾಳ ಗ್ರಾಮದಲ್ಲಿ ಬೇವಿನ ಬೀಜದ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸಿ ನೂರಾರು ಮಹಿಳೆಯರಿಗೆ ಕೆಲಸ ನೀಡಿದ ಚಿನ್ನಮ್ಮನಿಗೆ ದಕ್ಷಿಣ ಭಾರತದ ಯಶಸ್ವಿ ಕಿರು ಉದ್ಯಮಿ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ಅಂತರಾಷ್ಟ್ರೀಯ ಸಂಸ್ಥೆಗಳಾದ ಸಿಟಿ ಗ್ರೂಪ್, UNDP, UNCDF ಸಂಯುಕ್ತವಾಗಿ ಪ್ರಶಸ್ತಿ ನೀಡಿ ಗೌರವಿಸಿವೆ.

ನಿರ್ದಿಷ್ಟವಾಗಿ ದಲಿತ ಮಹಿಳೆಯರನ್ನು ಸಂಘಟಿಸುವಲ್ಲಿನ ನಾಯಕತ್ವಕ್ಕಾಗಿ ಮತ್ತು ದಲಿತ ಮಹಿಳೆಯರ ಹಕ್ಕುಗಳಿಗಾಗಿ ಅವರು ಮಾಡಿದ ಕಾರ್ಯಕ್ಕಾಗಿ ರಾಷ್ಟ್ರಮಟ್ಟದ ಗೌರವವನ್ನು ನೀಡಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಮಾರ್ಚ್ 21, 2013 ರಂದು ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.
ಚಿನ್ನಮ್ಮ ಅವರ ಕೆಲಸವನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರ್ಕಾರವು 2013 ರ ಮಾರ್ಚ್ 8 ರಂದು ಬೆಂಗಳೂರಿನಲ್ಲಿ ‘ಕಿತ್ತೂರು ಚಿನ್ನಮ್ಮ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಸಕ್ತ ವರ್ಷದ ಸೈರೋಸ್ ಕರ್ನಾಟಕ ಸಂಸ್ಥೆ ನೀಡುವ ಪ್ರಶಸ್ತಿಗೂ ಚಿನ್ನಮ್ಮ ಭಾಜನರಾಗಿದ್ದಾರೆ.
ಕೃಷಿ ಕೂಲಿಕಾರ ಬಡ ದಲಿತ ಮಹಿಳೆಯರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳಿಗಾಗಿ, ಗೌರವದ ಬದುಕಿಗಾಗಿ ಹೋರಾಟ ನಡೆಸುವ ಪೋತ್ನಾಳದ ಜಾಗೃತ ಮಹಿಳಾ ಸಂಘಟನೆಯ ಅಧ್ಯಕ್ಷೆಯಾಗಿ, ತನ್ನ ತಾಲೂಕಿನಲ್ಲಿ ಬಡ ಜನರ ಹಕ್ಕುಗಳಿಗಾಗಿ ಹೋರಾಡುತ್ತಾರೆ.
credit: Jagrutha Mahila Sanghatan
ಜನಾಧಿಕಾರ, ತಾಯಿ ಮಗು ಆರೋಗ್ಯದ ಹಕ್ಕೊತ್ತಾಯ, ಉದ್ಯೋಗದ ಹಕ್ಕು (ನರೇಗಾ) ಇವುಗಳ ಅನುಷ್ಠಾನಕ್ಕಾಗಿ ಮಹಿಳೆಯರನ್ನು, ಊರಿನ ಜನರನ್ನು ಒಗ್ಗೂಡಿಸಿ ಪ್ರತಿಭಟಿಸುತ್ತಾರೆ. ದಲಿತ ಬಾಲಕಿ ಅಂಬಿಕಾ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ ಪ್ರಮುಖ ಸಂಘಟನೆ ಜಾಗೃತ ಮಹಿಳಾ ಸಂಘಟನೆಯಾಗಿದೆ. ಮಹಿಳೆಯರ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳಿಗಾಗಿ, ಗೌರವದ ಬದುಕಿಗಾಗಿ ಹೋರಾಟ ನಡೆಸುತ್ತಿರುವ ಈ ಸಂಘಟನೆಯ ಮುಖ್ಯ ಆಧಾರವಾಗಿ ಮುಂದಿನ ಪೀಳಿಗೆಗೆ ದಾರಿ ದೀಪವಾಗಿದ್ದಾರೆ ಚಿನ್ನಮ್ಮ.
ಇದನ್ನೂ ಓದಿ: ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ



?