Homeಮುಖಪುಟರಾಜಸ್ಥಾನ: ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಭುಗಿಲೆದ್ದ ಹಿಜಾಬ್‌ ವಿವಾದ

ರಾಜಸ್ಥಾನ: ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಭುಗಿಲೆದ್ದ ಹಿಜಾಬ್‌ ವಿವಾದ

- Advertisement -
- Advertisement -

ಕರ್ನಾಟಕದಲ್ಲಿ ಬಸವರಾಜ್‌ ಬೊಮ್ಮಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಜಾಬ್‌ ವಿವಾದ ಸೃಷ್ಟಿಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಲೂ ಹಿಜಾಬ್‌ ವಿವಾದ ಭುಗಿಲೆದ್ದಿದೆ. ರಾಜಸ್ಥಾನದಲ್ಲಿ ಬಿಜೆಪಿಯ ಭಜನ್​ಲಾಲ್​ ಶರ್ಮಾ ಅಧಿಕಾರಕ್ಕೇರಿದ ಬಳಿಕ ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಶಾಲೆಗಳು ಮತ್ತು ಮದರಸಾಗಳಲ್ಲಿಯೂ ಹಿಜಾಬ್‌ನ್ನು ನಿಷೇಧಿಸಬೇಕು ಎಂದು ರಾಜಸ್ಥಾನದ ಹಿರಿಯ ಸಚಿವ ಕಿರೋರಿ ಲಾಲ್ ಮೀನಾ ಹೇಳಿದ್ದಾರೆ.

ಸಚಿವ ಕಿರೋರಿ ಲಾಲ್ ಮೀನಾ ಈ ಕುರಿತು ಮಾತನಾಡಿದ್ದು, ಶಾಲೆಗಳಲ್ಲಿ ಹಿಜಾಬ್ ಧರಿಸುವುದು ತಪ್ಪಾಗಿದೆ. ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಚಾರವನ್ನು ಬಿಜೆಪಿ ಶಾಸಕರು ಸರಿಯಾಗಿ ಪ್ರಸ್ತಾಪಿಸಿರುವುದರಿಂದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಶಾಲೆಯಲ್ಲಿ ಎರಡು ಡ್ರೆಸ್ ಕೋಡ್‌ಗಳ ಬಗ್ಗೆ ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ವಿಚಾರಣೆ ನಡೆಸಿರುವುದರ ವಿರುದ್ಧ ಜೈಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಚಿವ ಕಿರೋರಿ ಲಾಲ್ ಮೀನಾ ಈ ಹೇಳಿಕೆಯನ್ನು ನೀಡಿದ್ದಾರೆ.

ಶಾಲೆಗಳಲ್ಲಿ ಡ್ರೆಸ್ ಕೋಡ್‌ನ್ನು ಅನುಸರಿಸಬೇಕು, ಇಲ್ಲದಿದ್ದರೆ ಶಾಲೆಗಳಲ್ಲಿ ಯಾವುದೇ ಶಿಸ್ತು ಇರುವುದಿಲ್ಲ. ಡ್ರೆಸ್ ಕೋಡ್ ಅನುಸರಿಸದಿದ್ದರೆ ಪೊಲೀಸರೂ ಸಹ ಒಂದು ದಿನ ಧೋತಿಯಲ್ಲಿ ಬರಬಹುದು. ಅನೇಕ ದೇಶಗಳಲ್ಲಿ ಹಿಜಾಬ್‌ಗಳನ್ನು ನಿಷೇಧಿಸಲಾಗಿದೆ. ಮುಸ್ಲಿಮರ ಮೂಲಭೂತವಾದಿ ಧೋರಣೆ ಮತ್ತು ಕಾಂಗ್ರೆಸ್‌ನ ಮುಸ್ಲಿಮರ ಓಲೈಕೆ ನೀತಿ ಸಮುದಾಯವನ್ನು ಹಿಂದುಳಿದಂತೆ ಮಾಡಿದೆ. ಮುಸ್ಲಿಮರಲ್ಲಿ ಶಿಕ್ಷಣ ಮತ್ತು ಪ್ರಗತಿಪರ ಚಿಂತನೆಯ ಕೊರತೆಯಿದೆ. ಆದ್ದರಿಂದ ಅವರು ಅಪರಾಧದಲ್ಲಿ ಹೆಚ್ಚು ತೊಡಗುತ್ತಾರೆ ಎಂದು ಹೇಳಿದ್ದಾರೆ.

ಗಂಗಾಪೋಲ್ ಸರ್ಕಾರಿ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಯಲ್ಲಿ ಹಿಜಾಬ್  ಧರಿಸಿರುವುದನ್ನು ವಿರೋಧಿಸಿದ ಹವಾ ಮಹಲ್ ಶಾಸಕ ಆಚಾರ್ಯ ಬಲ್ಮುಕುಂದ್ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಹೊರಗೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ‘ಹಿಜಾಬ್  ಮೈ ಐಡೆಂಟಿಟಿ ಮತ್ತು ಹಿಜಾಬ್ ಕೋ ಮಿಟವಾನೆ ವಾಲೇ ಮಿಟ್ಟಿ ಮಿ ಮಿಲ್ ಜಾಯೇಂಗೆ’ ಎಂಬ ಫಲಕಗಳೊಂದಿಗೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿ, ಹಿಜಾಬ್ ಮತ್ತು ಬುರ್ಖಾ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಬಾಲ್ಮುಕುಂದ್ ಆಚಾರ್ಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೂಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಬಾಲ್ಮುಕುಂದ್ ಅವರು ಶಾಲೆಯೊಂದಕ್ಕೆ ಹೋಗಿದ್ದ ವಿಡಿಯೋ ವೈರಲ್‌ ಆಗಿತ್ತು.  ಹಿಜಾಬ್ ಮತ್ತು ಬುರ್ಖಾವನ್ನು ಧರಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ನೋಡಿ ಶಾಲೆಯ ಡ್ರೆಸ್ ಕೋಡ್ ಬಗ್ಗೆ ಪ್ರಿನ್ಸಿಪಾಲ್‌ಗೆ ಪ್ರಶ್ನಿಸಿದ್ದಾರೆ. ಶಾಲೆಯಲ್ಲಿ ಎರಡು ರೀತಿಯ ಡ್ರೆಸ್ ಕೋಡ್ ಇದೆಯೇ ಎಂದು ಪ್ರಾಂಶುಪಾಲರನ್ನು ಕೇಳಿದ್ದಾರೆ. ಒಂದು ಮುಸ್ಲಿಮರಿಗೆ ಮತ್ತು ಇನ್ನೊಂದು ಹಿಂದೂಗಳಿಗೆ ಬೇರೆ ಬೇರೆ ಡ್ರೆಸ್‌ ಕೋಡ್‌ ಇದೆಯಾ?  ಪ್ರಾಂಶುಪಾಲರು ಶಾಲೆಯಲ್ಲಿ ಒಂದೇ ಡ್ರೆಸ್ ಕೋಡ್ ಮಾತ್ರ ಇದೆ ಎಂದು ಹೇಳಿದ್ದು, ಕೆಲ ಬಾಲಕಿಯರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.  ಶಾಲೆಗಳಲ್ಲಿ ಡ್ರೆಸ್ ಕೋಡ್ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.

ಪ್ರತಿಭಟನಾ ನಿರತ ಬಾಲಕಿಯರು ಈ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಆದರ್ಶನಗರದ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ. ಈ ವಿಚಾರದಲ್ಲಿ ವಿಧಾನಸೌಧದಲ್ಲೂ ವಿಷಯ ಪ್ರಸ್ತಾಪಿಸಲು ಅವರು ಯತ್ನಿಸಿದ್ದರು ಅದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಿರಲಿಲ್ಲ.

ಮೊದಲ ಬಾರಿಗೆ ಶಾಸಕರಾಗಿರುವ ಬಲ್ಮುಕುಂದ್ ಆಚಾರ್ಯ ಅವರು ಹವಾ ಮಹಲ್ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಬಲ್ಮುಕುಂದ್ ಆಚಾರ್ಯ ಗೆಲವಿನ ಬಳಿಕ ಹಲವು ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಈ ಮೊದಲು ಮಾಂಸದ ವ್ಯಾಪಾರಿಗಳನ್ನು  ಭೇಟಿ ಮಾಡಿ ಅಗತ್ಯ ಪರವಾನಗಿ ಇಲ್ಲದೆ ಇದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದರು.

ಇದನ್ನು ಓದಿ: 2024ರ ಚುನಾವಣೆ ಪ್ರಜಾಪ್ರಭುತ್ವ ಉಳಿಸಲು ಜನರಿಗಿರುವ ಕೊನೆಯ ಅವಕಾಶ: ಮಲ್ಲಿಕಾರ್ಜುನ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...