ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ RCB ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ಆ ಮೂಲಕ 16 ಅಂಕ ಗಳಿಸಿ ತನ್ನ ಲೀಗ್ ಪೂರ್ಣಗೊಳಿಸಿದ್ದು ಪ್ಲೇಆಫ್ ಹತ್ತಿರಕ್ಕೆ ಬಂದಿದೆ. ಶನಿವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತಲ್ಲಿ RCB ಸುಲಭವಾಗಿ ಪ್ಲೇಆಫ್ ಪ್ರವೇಶಿಸಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ಆರಂಭದಲ್ಲೆ ಎಡವಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 1 ರನ್‌ಗೆ ಹೆಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದು ಗಿಲ್ ರನ್ನು ಪೆವಿಲಿಯನ್‌ಗೆ ಕಳಿಸಿದರು. ನಂತರ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ವಾಡೆ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಆನಂತರ ಉತ್ತಮವಾಗಿ ಆಡುತ್ತಿದ್ದ ವೃದ್ದಿಮಾನ್ ಶಾ ರನ್ ಔಟ್ ಆಗಿ 31ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಿಲ್ಲರ್ 34 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 64 ಗಳಿಸಿ ನಾಟ್ ಔಟ್ ಆದರು. ಕೊನೆಯಲ್ಲಿ ಬಂದ ರಶೀದ್ ಖಾನ್ 19 ರನ್ ಸಿಡಿಸಿ ತಂಡಕ್ಕೆ ನೆರವಾದರು. ಗುಜರಾತ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು.
ಸಾಧಾರಣ ಮೊತ್ತ ಬೆನ್ನಟ್ಟಿದ್ದ ಆರ್‌ಸಿಬಿ ಉತ್ತಮ ಆರಂಭ ಕಂಡಿತು. ಮೊದಲ ವಿಕೆಟ್ ಜೊತೆಯಾಟಕ್ಕೆ ವಿರಾಟ್ ಮತ್ತು ಡುಪ್ಲೆಸಿಸ್ 115 ರನ್ ಗಳಿಸಿದರು. ಡುಪ್ಲೆಸಿಸ್ 44 ರನ್ ಗಳಿಸಿ ಔಟ್ ಆದರೆ ವಿರಾಟ್ 73 ರನ್ ಚಚ್ಚಿದರು. ನಂತರ ಕ್ರೀಸ್‌ಗಿಳಿದ ಮ್ಯಾಕ್ಸ್‌ವೆಲ್ ಕೇವಲ 18 ಎಸೆತಗಳಲ್ಲಿ 40 ರನ್ ಬಾರಿಸಿ ಇನ್ನು 8 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್‌ಸಿಬಿ 8 ವಿಕೆಟ್‌ಗಳ ಜಯ ಸಾಧಿಸಿತು. ಗುಜರಾತ್ ಪರ ರಶೀದ್ ಖಾನ್ ಎರಡು ವಿಕೆಟ್ ಪಡೆದರು.
IPL 2022ರ ಲೀಗ್ ಹಂತದ ಮೂರು ಪಂದ್ಯಗಳು ಮಾತ್ರ ಉಳಿದಿದ್ದು, ಪ್ಲೇಆಫ್ ಪ್ರವೇಶಿಸಲು RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ. ಇಂದು ಪಂದ್ಯ ಗೆದ್ದಿರುವ ಆರ್‌ಸಿಬಿ 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಶನಿವಾರ ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಗೆಲುವಿಗಾಗಿ ಪ್ರಾರ್ಥಿಸಬೇಕಿದೆ. ಏಕೆಂದರೆ ಬೆಂಗಳೂರು ತಂಡದ ನೆಟ್ ರನ್ ರೇಟ್ -253 ಇದೆ. ಆದರೆ ಡೆಲ್ಲಿ ತಂಡ ಸದ್ಯ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದರೂ ಅದರ ನೆಟ್ ರನ್ ರೇಟ್ +255 ಇದೆ. ಒಂದು ವೇಳೆ ಅದು ಮುಂಬೈ ವಿರುದ್ಧ ಗೆದ್ದರೆ 16 ಅಂಕ ಮತ್ತು ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇಆಫ್ ಪ್ರವೇಶಿಸುತ್ತದೆ ಮತ್ತು ಬೆಂಗಳೂರು ಹೊರಬೀಳುತ್ತದೆ.
ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕ್ರಮವಾಗಿ 20 ಮತ್ತು 18 ಅಂಕಗಳೊಂದಿಗೆ ಈಗಾಗಲೇ ಪ್ಲೇಆಫ್ ಪ್ರವೇಶಿಸಿವೆ. ರಾಜಸ್ಥಾನ್ ರಾಯಲ್ಸ್ ತಂಡ 16 ಅಂಕ ಗಳಿಸಿದ್ದು +304 ನೆಟ್ ರನ್ ರೇಟ್ ಹೊಂದಿರುವ ಕಾರಣ ಅದು ಕೂಡ ಪ್ಲೇಆಫ್ ಪ್ರವೇಶದ ಹೊಸ್ತಿಲಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಶುಕ್ರವಾರ ಚನ್ನೈ ಎದುರು ಸೆಣಸಲಿದ್ದು, ಗೆದ್ದರೂ ಅಥವಾ ಕಡಿಮೆ ಅಂತರದಿಂದ ಸೋತರೂ ಸಹ ಅದ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಭಾರೀ ಅಂತರದಿಂದ ಸೋತಲ್ಲಿ ಮಾತ್ರ ಅದರ ನೆಟ್ ರನ್ ರೇಟ್ ಲೆಕ್ಕಕ್ಕೆ ಬರುತ್ತದೆ.
ಇದನ್ನೂ ಓದಿ: ಸರ್ಕಾರ ಹೊರಗಿಟ್ಟಿರುವ ಕ್ರಾಂತಿಕಾರಿ ‘ಭಗತ್‌ಸಿಂಗ್’ ಪಾಠದಲ್ಲಿ ಇರುವುದೇನು? ಆ ಪುಟ್ಟ ಪಠ್ಯ ಇಲ್ಲಿದೆ
ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರುವ ಗುಜರಾತ್ ಮತ್ತು ಎರಡನೇ ಸ್ಥಾನ ಪಡೆಯುವ ತಂಡದ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ನಡೆಯಲಿದೆ. ಅಲ್ಲಿ ಗೆದ್ದವರು ನೇರ ಫೈನಲ್ ತಲುಪತ್ತಾರೆ. ಸೋತವರಿಗೆ ಎರಡನೇ ಕ್ವಾಲಿಫೈಯರ್ (ಸೆಮಿಫೈನಲ್) ಅವಕಾಶವಿರುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವರ ಎಲಿಮಿನೇಟರ್ ಪಂದ್ಯ ಮೇ 25 ರಂದು ನಡೆಯಲಿದೆ. ಅಲ್ಲಿ ಸೋತವರು ಟೂರ್ನಿಯಿಂದ ಹೊರಬೀಳುತ್ತಾರೆ. ಗೆದ್ದವರು ಎರಡನೇ ಕ್ವಾಲಿಫೈಯರ್ (ಸೆಮಿಫೈನಲ್) ಪ್ರವೇಶಿಸುತ್ತಾರೆ. ಆ ಪಂದ್ಯ ಮೇ 27 ರಂದು ನಡೆಯಲಿದೆ. ಅಲ್ಲಿ ಗೆದ್ದವರು ಮೇ 29 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಸೆಣಸುತ್ತಾರೆ.