Homeಕರ್ನಾಟಕಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

‘ಈ ದಿನ’ ವೆಬ್‌ಸೈಟ್ ಮಾಡಿರುವ ವರದಿಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಹೀಗೆ ಪ್ರತಿಕ್ರಿಯೆ ನೀಡಿದರು...

- Advertisement -
- Advertisement -

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಸಚಿವರ ಮೌಖಿಕ ಆದೇಶದಲ್ಲೇ ಪಠ್ಯ ಪರಿಷ್ಕರಣೆಯನ್ನು ಮಾಡಿ ಮುಗಿಸಿ ಹಲವಾರು ಅಧ್ವಾನಗಳು ಆಗಿರುವುದು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ರೋಹಿತ್ ಚಕ್ರತೀರ್ಥ ಅವರು ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಗಾಳಿಗೆ ತೂರಿ, ಏಕ ಪಕ್ಷೀಯವಾಗಿ ಪಠ್ಯಪುಸ್ತಕ ರಚಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ‘ಈ ದಿನ’ ವೆಬ್‌ಸೈಟ್‌ ವಿಶೇಷ ವರದಿ ಮಾಡಿದ್ದು, ಪರಿಶೀಲನಾ ಸಮಿತಿಯ ಸದಸ್ಯರು ಸೂಚಿಸಿದ್ದೇನು? ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರು ಮಾಡಿದ್ದೇನು ಎಂಬ ಮಾಹಿತಿಯನ್ನು ವಿಸ್ತೃತವಾಗಿ ಬಹಿರಂಗಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಪ್ರಕಾರ, ರೋಹಿತ್ ಚಕ್ರತೀರ್ಥ ಐಐಟಿ ಹಾಗೂ ಸಿಇಟಿ ಪ್ರೊಫೆಸರ್‌. ಇದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ ಸರ್ಕಾರ ರಚಿಸಿದ ಪರಿಶೀಲನಾ ಸಮಿತಿಯಲ್ಲಿ ರೋಹಿತ್‌ ಚಕ್ರತೀರ್ಥ ಅವರ ಹೊರತಾಗಿಯೂ ಕೆಲವು ತಜ್ಞರು ಇದ್ದರು. ಅದರಲ್ಲಿ ಯಾರಾದರೂ ಅಧ್ಯಕ್ಷರಾಗಬಹುದಿತ್ತು ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ ಸಮಿತಿಯ ಅಧ್ಯಕ್ಷರು ಮಾಡಿರುವ ಎಡವಟ್ಟುಗಳು ಮುನ್ನೆಲೆಗೆ ಬಂದಿವೆ.

ರೋಹಿತ್‌ ಚಕ್ರತೀರ್ಥ ಅವರು ಸಮಿತಿ ಸದಸ್ಯರು ನೀಡಿದ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವ ಯಾವ ವಿಷಯಗಳನ್ನು ತಂದಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದ  ಹದಿನೈದಕ್ಕೂ ಹೆಚ್ಚು ಪಠ್ಯಗಳನ್ನು ಅಧ್ಯಕ್ಷರೇ ಕೈಬಿಟ್ಟಿದ್ದಾರೆ.

ಉದಾಹರಣೆಗೆ ಎಂಟನೇ ತರಗತಿ ಕನ್ನಡ ಪಠ್ಯದಲ್ಲಿದ್ದ ಬಿ.ಟಿ.ಲಲತಾ ನಾಯಕ್‌ ಅವರ ಪದ್ಯವನ್ನು ಮುಂದುವರಿಸಬಹುದು ಎಂದು ಸಮಿತಿ ಸದಸ್ಯರು ಹೇಳಿದ್ದರು. ಆದರೆ ಅದನ್ನು ಕೈಬಿಟ್ಟು ಕುವೆಂಪು ಅವರ ‘ಬಹುಮಾನ’ ಪಠ್ಯವನ್ನು ಚಕ್ರತೀರ್ಥ ಸೇರಿಸಿದರು.

ಜವಾಹರಲಾಲ್‌ ನೆಹರೂ ಅವರ ‘ಮಗಳಿಗೆ ಪತ್ರಗಳು’ ಮುಂದುವರಿಸಲು ಸಮಿತಿ ಸದಸ್ಯರು ಒಪ್ಪಿದ್ದರು. ಚಕ್ರತೀರ್ಥ ಅದನ್ನು ಕೈಬಿಟ್ಟು ‘ಪಾರಂಪಳ್ಳಿ ನರಸಿಂಹ ಐತಾಳ’ರ ‘ಭೂಕೈಲಾಸ’ (ಪೌರಾಣಿಕ ನಾಟಕ)ವನ್ನು ಇರಿಸಿದ್ದಾರೆ.

ಒಂಬತ್ತನೇ ತರಗತಿ ಕನ್ನಡ ಪಠ್ಯದಲ್ಲಿ ‘ರಾಮಸ್ವಾಮಿ ಅಯ್ಯಂಗಾರ್‌’ ಅವರ ‘ಕನ್ನಡ ಮೌಲ್ವಿ’ ಬದಲಿಗೆ ವಿದ್ವಾನ್‌ ಡಾ.ಎನ್.ರಂಗನಾಥ ಶರ್ಮರವರ ‘ರಾಮರಾಜ್ಯ’, ‘ಧರ್ಮ ಸಮದೃಷ್ಟಿ ವಿಜಯನಗರ ಶಾಸನ’ ಬದಲಿಗೆ ಭೈರಪ್ಪನವರ ‘ನಾನು ಕಂಡಂತೆ ಡಾ.ಬಿ.ಜಿ.ಎಲ್.ಸ್ವಾಮಿ’ ಸೇರ್ಪಡೆ,  ಎಲ್‌.ಬಸವರಾಜು ಅವರ ‘ಊರು ಭಂಗ’ ಬದಲಿಗೆ ಡಾ.ಗಜಾನನ ಶರ್ಮ ಅವರ ‘ಚೆನ್ನಾಭೈರಾದೇವಿ’- ಹೀಗೆ ಪಠ್ಯಗಳನ್ನು ಬದಲಿಸಲಾಗಿದೆ. ಪಠ್ಯವನ್ನು ಮುಂದುವರಿಸಬಹುದೆಂದು ಸಮಿತಿ ಸದಸ್ಯರು ಹೇಳಿದ್ದರೂ ಅದನ್ನು ಕೈಬಿಟ್ಟಿರುವ ಸಾಲು ಸಾಲು ಉದಾಹರಣೆಗಳನ್ನು ‘ಈ ದಿನ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ದಿನ’ ವರದಿಯ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ರೋಹಿತ್‌ ಚಕ್ರತೀರ್ಥ, “ಕಳೆದೆರಡು ವಾರಗಳಿಂದ ಪತ್ರಿಕೆಗಳಿಗೆ ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದೇನೆ. ನಾನು ಸರ್ಕಾರಕ್ಕೆ ಉತ್ತರ ಕೊಟ್ಟಾಗಿದೆ. ನನ್ನ ಮತ್ತು ಸರ್ಕಾರ ನಡುವೆ ಮಾತುಕತೆ ನಡೆದಿದೆ. ಯಾರೋ ಬಂದು ಕೇಳಿದರೆ ಉತ್ತರ ಕೊಡುತ್ತಾ ಕೂರಲು ಆಗುತ್ತಾ? ಈ ವರದಿ ನಿಜವೋ ಸುಳ್ಳೋ ಎಂಬ ಪ್ರಶ್ನೆಯೇ ಬರುವುದಿಲ್ಲ. ಪ್ರತಿಯೊಂದಕ್ಕೂ ನಾನು ಉತ್ತರ ಕೊಡುತ್ತಾ ಕೂರಲು ಆಗುವುದಿಲ್ಲ. ನನ್ನ ವರದಿಯ ಶಿಫಾರಸ್ಸುಗಳನ್ನು ತೆಗೆದುಕೊಳ್ಳುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು”  ಎಂದು ಸ್ಪಷ್ಟಪಡಿಸಿದರು.

“ಮಾಧ್ಯಮಗಳು ಸುಮ್ಮಸುಮ್ಮನೆ ವರದಿಗಳನ್ನು ಮಾಡುತ್ತಿವೆ. ಸಾಕ್ಷಿ ಇಲ್ಲದೆ ವರದಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿರಿ: ಪಠ್ಯಪುಸ್ತಕ ವಾಪಸಾತಿಗೆ ದೇವೇಗೌಡರ ಪಟ್ಟು; ಸಿಎಂಗೆ ಮಾಜಿ ಪ್ರಧಾನಿ ಪತ್ರ

ಪಠ್ಯಪುಸ್ತಕ ವಿರೋಧಿಸಿ ಬೆಂಗಳೂರಿನಲ್ಲಾದ ದೊಡ್ಡ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ, “ನಿಮ್ಮ ದೃಷ್ಟಿಯಲ್ಲಿ ಇದು ದೊಡ್ಡ ಪ್ರತಿಭಟನೆಯಾಗಿರಬಹುದು. ನನಗೆ ಅದೆಲ್ಲ ಏನೂ ಅಲ್ಲ” ಎಂದು ಉತ್ತರಿಸಿದರು.

ಪಠ್ಯವಿವಾದಕ್ಕೆ ಸಂಬಂಧಿಸಿದಂತ  ಇತ್ತೀಚೆಗೆ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯವನ್ನು ಹೇಳಲು ನಿರಾಕರಿಸಿದ್ದರು. “ನಮಗೆ ಸೂಚನೆ ಇದೆ. ಅಧ್ಯಕ್ಷರು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಸಮಿತಿ ವಿಸರ್ಜನೆಯಾಗಿದೆ” ಎಂದು ಬಹುತೇಕರು ಪ್ರತಿಕ್ರಿಯೆ ನೀಡಿದ್ದರು.

ರೋಹಿತ್‌ ಚಕ್ರತೀರ್ಥ ಅವರ ಮೇಲೆ ಬಂದಿರುವ ಈ ಆರೋಪ ನಿಜವೇ ಎಂದು ತಿಳಿಯಲು ಸಮಿತಿಯ ಕೆಲವು ಸದಸ್ಯರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಲು ಯತ್ನಿಸಿತು. ಆದರೆ ಯಾರೋಬ್ಬರೂ ಕರೆಯನ್ನು ಸ್ವೀಕರಿಸಲಿಲ್ಲ. (ಪ್ರತಿಕ್ರಿಯೆ ಬಂದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...