Homeಕರ್ನಾಟಕಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತಡೆ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತಡೆ

- Advertisement -
- Advertisement -

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಆಯ್ಕೆಯಾದ 13,352 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು. ಮಾರ್ಚ್ 8, 2023ರ ಅಂತಿಮ ಆಯ್ಕೆ ಪಟ್ಟಿಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ ನೀಡಲಾದ ನೇಮಕಾತಿ ಪತ್ರಗಳನ್ನು ಅಮಾನತಿನಲ್ಲಿಡಬೇಕು ಎಂದು ಆದೇಶಿಸಿದೆ.

ಅ.12, 2023ರ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದ ವಿರುದ್ಧ ಲೀಲಾವತಿ ಎನ್ ಮತ್ತು ಇತರರು ಸಲ್ಲಿಸಿದ ಅರ್ಜಿಗಳನ್ನು ವಿಚಾರಿಸಿದ ಸುಪ್ರೀಂಕೋರ್ಟ್‌ ಜ.3ರಂದು ಹೈಕೋರ್ಟ್‌ ಆದೇಶಕ್ಕೆ ತಡೆನೀಡಿದೆ ಮತ್ತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಡಿಎಲ್ ಚಿದಾನಂದ ಅವರಿಗೆ ಕೋರ್ಟ್‌ ಸೂಚಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎ ಎನ್ ವೇಣುಗೋಪಾಲ ಗೌಡ ಮತ್ತು ವಕೀಲ ಬಾಲಾಜಿ ಶ್ರೀನಿವಾಸನ್, ಹಿರಿಯ ವಕೀಲ ಸಿ ಎ ಸುಂದರಂ ಮತ್ತು ವಕೀಲ ಚಿನ್ಮಯ್ ದೇಶಪಾಂಡೆ ಮತ್ತು ವಕೀಲರಾದ ಶೈಲೇಶ್ ಮಡಿಯಾಳ್, ಮಹೇಶ್ ಠಾಕೂರ್ ಮತ್ತಿತರರು ವಾದ ಮಂಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಆದೇಶದವರೆಗೆ, ಹೈಕೋರ್ಟ್‌ ತೀರ್ಪಿನ ಪ್ಯಾರಾಗ್ರಾಫ್ 45 ರಿಂದ 47 ರವರೆಗೆ ನೀಡಲಾದ ನಿರ್ದೇಶನಗಳನ್ನು ಜಾರಿಗೆ ತರಬಾರದು. ಮಾರ್ಚ್ 08, 2023ರ ಅಂತಿಮ ಆಯ್ಕೆ ಪಟ್ಟಿಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾದ ನೇಮಕಾತಿ ಪತ್ರಗಳನ್ನು ತಡೆ ಹಿಡಿಯಬೇಕು ಎಂದು ಕೋರ್ಟ್‌ ಹೇಳಿದೆ.

ಜ.30 2023ರಂದು ಹೈಕೋರ್ಟ್‌ನ ಏಕ ನ್ಯಾಯಾಧೀಶ ಪೀಠವು ನ.18, 2022ರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿತ್ತು. ಅನುತ್ತೀರ್ಣಗೊಂಡಿದ್ದ ಅಭ್ಯರ್ಥಿಗಳು ಸಲ್ಲಿಸಿದ ರಿಟ್ ಅರ್ಜಿಗಳ  ಮೇಲೆ ಆದೇಶಿಸಿತ್ತು. ಆಯ್ಕೆಪಟ್ಟಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ರದ್ದುಪಡಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 451 ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ. ಈ ಅಭ್ಯರ್ಥಿಗಳು ತಮ್ಮ ತಕರಾರನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಮುಂದೆ ಮಂಡಿಸಿ ಸೂಕ್ತ ನ್ಯಾಯ ಪಡೆಯಬಹುದು ಎಂದು ಹೇಳಿತ್ತು.

ವಿವಾಹಿತ ಮಹಿಳೆಯರು ಪತಿಯ ಆದಾಯದ ಆಧಾರದಡಿ ತಮ್ಮ ಆದಾಯ ಪ್ರಮಾಣ ಪತ್ರವನ್ನು ನೇಮಕಾತಿ ವೇಳೆ ಸಲ್ಲಿಸಬೇಕಿತ್ತು. ಅದರೆ ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಎಂಬ ಕಾರಣ ನೀಡಿ 451 ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ, ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನು ಓದಿ: ಮಣಿಪುರದಲ್ಲಿ ಪತ್ರಕರ್ತರ ಬಂಧನ: ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಮಾದ್ಯಮಗಳನ್ನು ಕಟ್ಟಿಹಾಕಲು ಯತ್ನ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read