Homeಮುಖಪುಟಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭ; ಭಾರಿ ಬಿಗಿ ಭದ್ರತೆ

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭ; ಭಾರಿ ಬಿಗಿ ಭದ್ರತೆ

- Advertisement -
- Advertisement -

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯು, ದೇವಾಲಯದ ಮೇಲೆ ನಿರ್ಮಾಣವಾಗಿದೆಯೇ ಎಂಬುದರ ನಿರ್ಣಯಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸೋಮವಾರ ಬೆಳಿಗ್ಗೆ ವೈಜ್ಞಾನಿಕ ಸಮೀಕ್ಷೆ ಆರಂಭವಾಗಿದೆ. ಮಸೀದಿ ಸಂಕೀರ್ಣದೊಳಗೆ ತಮ್ಮ ದೇವರನ್ನು ಪೂಜಿಸಲು ಹಕ್ಕು ಕೋರಿ ಹಿಂದೂ ಅರ್ಜಿದಾರರ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯವು ಶುಕ್ರವಾರ ಸಮೀಕ್ಷೆಗೆ ಆದೇಶ ನೀಡಿತ್ತು.

ಭಾರತೀಯ ಪುರಾತತ್ವ ಇಲಾಖೆಯ 40 ಅಧಿಕಾರಿಗಳು ಬೆಳಿಗ್ಗೆ 7 ರಿಂದ ಸಮೀಕ್ಷೆ ಆರಂಭಿಸಿದ್ದಾರೆ. ಸಮೀಕ್ಷೆ ಹಿನ್ನೆಲೆಯಲ್ಲಿ ಮಸೀದಿಗೆ ಹಾಗೂ ಮಸೀದಿ ಸುತ್ತಮುತ್ತ ಭಾರಿ ಭದ್ರತೆಯನ್ನು ಒದಗಿಸಲಾಗಿದೆ. ಸ್ಥಳದಲ್ಲಿ ಪ್ರಕರಣದ ಅರ್ಜಿದಾರರೆಲ್ಲರ ವಕೀಲರು ಹಾಜರಿದ್ದಾರೆ. ಹಿಂದೂಗಳ ಪರ ವಕೀಲ ಮದನ್‌ ಮೋಹನ್ ಯಾದವ್ ವಾದ ಮಂಡಿಸುತ್ತಿದ್ದಾರೆ.

ಇದು ಐತಿಹಾಸಿಕ ದಿನ, ವಿಜ್ಞಾನವು ನಮ್ಮ ನಂಬಿಕೆಯನ್ನು ಒಗ್ಗೂಡಿಸುತ್ತದೆ ಎಂದು ಹಿಂದೂಗಳ ಪರವಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಹಾಗೂ ಸಮೀಕ್ಷೆ ನಡೆಯುವ ಸ್ಥಳದಲ್ಲಿದ್ದ ಸೀತಾ ಸಾಹು ಪಿಟಿಐಗೆ ತಿಳಿಸಿದ್ದಾರೆ.

ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಹಿಂದೂ ಅರ್ಜಿದಾರರು ಪ್ರತಿಪಾದಿಸಿದಂತೆ ದೇವಸ್ಥಾನದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಅಗತ್ಯವಿದ್ದರೆ ಉತ್ಖನನ ಸೇರಿದಂತೆ ಸಮೀಕ್ಷೆಗೆ ಆದೇಶಿಸಿದರು. ಸಮೀಕ್ಷೆಯ ಸಮಯದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಬಾರದು ಮತ್ತು ಮಸೀದಿಗೆ ಯಾವುದೇ ಹಾನಿ ಮಾಡಬಾರದು ಎಂದು ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿದೆ.

ಮಸೀದಿಯ ‘ವಝುಖಾನಾ’ದಲ್ಲಿ ‘ಶಿವಲಿಂಗ’ದಂಥ ರಚನೆ ಇದೆ ಎಂದು ಹೇಳಲಾಗಿದ್ದು, ಆ ಸ್ಥಳದ ಸಂರಕ್ಷಣೆಗೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶಿಸಿದೆ. ಹೀಗಾಗಿ ನಿರ್ದಿಷ್ಟ ಜಾಗದಲ್ಲಿ ಸಮೀಕ್ಷೆ ನಡೆಯುತ್ತಿಲ್ಲ.

ಮಸೀದಿ ಆವರಣದಲ್ಲಿ ಕಂಡುಬರುವ ಅಂಡಾಕಾರದ ವಸ್ತುವಿನ ವೈಜ್ಞಾನಿಕ ಸಮೀಕ್ಷೆಯನ್ನು ಮಾಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಮೇ ತಿಂಗಳಲ್ಲಿ ಸಲ್ಲಿಸಿದ ಅರ್ಜಿಯ ನಂತರ ಈ ನಿರ್ಧಾರವು ಬಂದಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ವಾರಣಾಸಿಯ ಸಿವಿಲ್ ಕೋರ್ಟ್ ಆದೇಶದ ಮೇರೆಗೆ ಮಸೀದಿ ಆವರಣದ ಸಮೀಕ್ಷೆ ವೇಳೆ ಅಂಡಾಕಾರದ ಆಕಾರದ ವಸ್ತು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಹಿಂದೂ ದಾವೆದಾರರು ಆ ವಸ್ತುವು ಶಿವಲಿಂಗವಾಗಿದೆ – ಇದು ಹಿಂದೂ ದೇವತೆ ಶಿವನ ಪ್ರಾತಿನಿಧ್ಯ ಎಂದು ಪ್ರತಿಪಾದಿಸಿದರು. ಆದಾಗ್ಯೂ, ಮಸೀದಿಯ ಉಸ್ತುವಾರಿ ಸಮಿತಿಯು ವಸ್ತುವು ವಾಜು ಖಾನಾ ಅಥವಾ ತೊಟ್ಟಿಯಲ್ಲಿ ನಿಷ್ಕ್ರಿಯವಾದ ಕಾರಂಜಿ ಎಂದು ಪ್ರತಿಪಾದಿಸಿತು.

ಅಂಡಾಕಾರದ ಆಕಾರದ ವಸ್ತುವಿನ ಸಮೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಹಿಂದೂ ದಾವೆದಾರರು ಇಡೀ ಮಸೀದಿಯ ಸಮೀಕ್ಷೆಯನ್ನು ಕೇಳಲು ಹೊಸ ಅರ್ಜಿಯನ್ನು ಸಲ್ಲಿಸಿದರು. ಅನೇಕ ವರ್ಷಗಳಿಂದ ಈ ಸ್ಥಳದಲ್ಲಿ “ಶಿವಲಿಂಗ” ಅಸ್ತಿತ್ವದಲ್ಲಿದೆ ಮತ್ತು “ನಾಸ್ತಿಕರು ಮತ್ತು ವಿಗ್ರಹಾರಾಧಕರ ವಿರುದ್ಧ ದ್ವೇಷ” ಹೊಂದಿರುವ ಮುಸ್ಲಿಂ ಆಕ್ರಮಣಕಾರರಿಂದ ಹಲವಾರು ಬಾರಿ ಹಾನಿಗೊಳಗಾಗಿದೆ ಎಂದು ಅವರು ಹೇಳಿದ್ದಾರೆ.

ಮಸೀದಿಯ ರಚನೆಯು ಹಳೆಯ ಹಿಂದೂ ದೇವಾಲಯದ ಅವಶೇಷಗಳನ್ನು ಸೂಚಿಸುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

”ಕಟ್ಟಡದೊಳಗೆ ಇರುವ ನೈಜ ಸಂಗತಿಗಳನ್ನು ಮೌಖಿಕ ಸಾಕ್ಷ್ಯದಿಂದ ಸಾಬೀತುಪಡಿಸಲಾಗುವುದಿಲ್ಲ ಮತ್ತು ನಿರ್ಮಾಣದ ಸ್ವರೂಪ, ರಚನೆಯ ಕಾಲ ತಿಳಿಯಲು ಭಾರತೀಯ ಪುರಾತತ್ವ ಸಮೀಕ್ಷೆ  ನಡೆಸಬೇಕು. ಆ ಬಳಿಕ ತಜ್ಞರ ಅಭಿಪ್ರಾಯದ ಆಧಾರದ ಮೇಲೆ ನ್ಯಾಯಾಲಯದ ಮುಂದೆ ಸಾಬೀತುಪಡಿಸಬಹುದು” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಮುಖ್ಯ ದಾವೆದಾರರಾದ ರಾಖಿ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read