Homeಮುಖಪುಟಇಸ್ರೇಲ್‌ನಿಂದ ವೈಮಾನಿಕ ದಾಳಿ: ಇರಾನ್‌ನ ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿ 7 ಜನರ ಹತ್ಯೆ

ಇಸ್ರೇಲ್‌ನಿಂದ ವೈಮಾನಿಕ ದಾಳಿ: ಇರಾನ್‌ನ ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿ 7 ಜನರ ಹತ್ಯೆ

- Advertisement -
- Advertisement -

ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC)ನ ಇಬ್ಬರು ಕಮಾಂಡರ್‌ಗಳು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.

ಐಆರ್‌ಜಿಸಿಯ ಎಲೈಟ್ ಕುಡ್ಸ್ ಫೋರ್ಸ್‌ನ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಉಪ ಜನರಲ್ ಮೊಹಮ್ಮದ್ ಹಾದಿ ಹಜ್ರಿಯಾಹಿಮಿ ಅವರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಡಮಾಸ್ಕಸ್‌ನ ರಾಯಭಾರಿ ಕಚೇರಿ ಬಳಿ ಅವಶೇಷಗಳಿಂದ ಹೊಗೆ ಬರುತ್ತಿರುವುದು ಮತ್ತು ತುರ್ತು ವಾಹನಗಳು ರಾಯಭಾರಿ ಕಚೇರಿಯನ್ನು ಆವರಿಸಿರುವುದನ್ನು ಮತ್ತು ಅವಶೇಷಗಳ ಮುಂದೆ ಕಂಬಕ್ಕೆ ಕಟ್ಟಿದ್ದ ಇರಾನಿನ ಧ್ವಜ ನೇತಾಡುತ್ತಿದೆ, ಸಿರಿಯಾ ಮತ್ತು ಇರಾನ್ ವಿದೇಶಾಂಗ ಮಂತ್ರಿಗಳು ಘಟನಾ ಸ್ಥಳದಲ್ಲಿದ್ದರು ಎಂದು ವರದಿಗಾರರು ಕಂಡುಕೊಂಡಿದ್ದಾರೆ. ಘಟನೆಯಲ್ಲಿ ಇರಾನ್‌ನ ರಾಯಭಾರಿ ಹುಸೇನ್ ಅಕ್ಬರಿ ಅವರು ಗಾಯಗೊಂಡಿಲ್ಲ, ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ ಮೂವರು ಮಿಲಿಟರಿ ಸಿಬ್ಬಂದಿ ಸೇರಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಈ ದಾಳಿಯನ್ನು ಎಲ್ಲಾ ಅಂತರಾಷ್ಟ್ರೀಯ ಕಟ್ಟುಪಾಡುಗಳು ಮತ್ತು ನಿಯಮಗಳ ಉಲ್ಲಂಘನೆ ಎಂದು ವಿವರಿಸಿ ಇಸ್ರೇಲ್‌ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ ಈ ಕುರಿತು ಪ್ರತ್ಯೇಕ ಹೇಳಿಕೆಯನ್ನು ಹೊರಡಿಸಿದ್ದು, ಪ್ರತಿಕ್ರಿಯೆಯನ್ನು ನೀಡುವ ಹಕ್ಕನ್ನು ಇರಾನ್ ಹೊಂದಿದೆ ಮತ್ತು ಪ್ರತಿಕ್ರಿಯೆಯ ವಿಧಾನ ಮತ್ತು ಆಕ್ರಮಣಕಾರರಿಗೆ ಶಿಕ್ಷೆ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಸಿರಿಯಾದ ವಿದೇಶಾಂಗ ಸಚಿವ ಫೈಸಲ್ ಮೆಕ್ದಾದ್ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಡಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್ ಕಟ್ಟಡವನ್ನು ಗುರಿಯಾಗಿಸಿಕೊಂಡು ಹಲವಾರು ಮುಗ್ಧ ಜನರನ್ನು ಕೊಂದ ಈ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಮೆಕ್ದಾದ್ ಹೇಳಿದ್ದಾರೆ.

ಇಸ್ರೇಲ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ರಷ್ಯಾ, ಇಸ್ರೇಲ್‌ ಸ್ವೀಕಾರಾರ್ಹವಲ್ಲದ ದಾಳಿಯನ್ನು ನಡೆಸುತ್ತಿದೆ ಎಂದು ಹೇಳಿದೆ. ದಾಳಿಯ ಬಗ್ಗೆ ಕೇಳಿದಾಗ, ಇಸ್ರೇಲಿ ಮಿಲಿಟರಿ ವಕ್ತಾರರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.  ವಿದೇಶಿ ಮಾಧ್ಯಮಗಳಲ್ಲಿನ ವರದಿಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್ ಅಕ್ಟೋಬರ್ 7ರಂದು ಗಾಝಾದ ಮೇಲೆ ಯುದ್ಧ ಘೋಷಿಸಿದ ಬಳಿಕ  ಇಸ್ರೇಲ್ ಸಿರಿಯಾದಲ್ಲಿ ಲೆಬನಾನ್‌ನ ಇರಾನಿನ ಬೆಂಬಲಿತ ಹೆಜ್ಬೊಲ್ಲಾ ಮಿಲಿಷಿಯಾ ಮತ್ತು ಇರಾನ್‌ನ ಐಆರ್‌ಜಿಸಿ ವಿರುದ್ಧ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ, ಇವೆರಡೂ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸರ್ಕಾರವನ್ನು ಬೆಂಬಲಿಸುತ್ತವೆ. ಗಾಝಾ- ಇಸ್ರೇಲ್‌ ನಡುವಿನ ಯುದ್ಧವು ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಆತಂಕದ ನಡುವೆ, ಡಮಾಸ್ಕಸ್‌ನ ಮೇಲೆ ಈ ದಾಳಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ: “ಅವರು ಕಚ್ಚತೀವು ದ್ವೀಪವನ್ನು ವಾಪಸ್ ತೆಗೆದುಕೊಳ್ಳುತ್ತಾರಾ..”; ಪ್ರಧಾನಿ ಮೋದಿಗೆ ಕಾಂಗ್ರೆಸ್ ಸಂಸದರ ಸವಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read