Homeಮುಖಪುಟ‘ಫಡ್ನಾವೀಸ್‌ಗಿಂತ ಶಿಂಧೆ ಜನಪ್ರಿಯ’: ಶಿವಸೇನೆ- ಬಿಜೆಪಿ ನಡುವೆ ಬಿಕ್ಕಟ್ಟು ಸೃಷ್ಟಿಸಿದ ಜಾಹೀರಾತು!

‘ಫಡ್ನಾವೀಸ್‌ಗಿಂತ ಶಿಂಧೆ ಜನಪ್ರಿಯ’: ಶಿವಸೇನೆ- ಬಿಜೆಪಿ ನಡುವೆ ಬಿಕ್ಕಟ್ಟು ಸೃಷ್ಟಿಸಿದ ಜಾಹೀರಾತು!

ಶಿಂಧೆ ಬಣದ ಶಿವಸೇನೆ ನೀಡಿರುವ ಜಾಹೀರಾತಿನಲ್ಲಿ ಬಾಳಾಸಾಹೇಬ್ ಠಾಕ್ರೆ ಚಿತ್ರವನ್ನು ಕೈಬಿಡಲಾಗಿದೆ

- Advertisement -
- Advertisement -

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಂಗಳವಾರ ಹಲವು ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ಶಿವಸೇನೆ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.

‘ಮೋದಿ ಫಾರ್ ಇಂಡಿಯಾ, ಶಿಂಧೆ ಫಾರ್ ಮಹಾರಾಷ್ಟ್ರ’ ಎಂಬ ಶೀರ್ಷಿಕೆಯ ಪೂರ್ಣ ಪುಟದ ಜಾಹೀರಾತನ್ನು ನೀಡಲಾಗಿದ್ದು, ಸಮೀಕ್ಷೆಯೊಂದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಉನ್ನತ ಹುದ್ದೆಯಲ್ಲಿ ಫಡ್ನಾವೀಸ್‌ಗಿಂತ ಏಕನಾಥ್‌ ಶಿಂಧೆಯವರು ಇರಬೇಕೆಂದು ಹೆಚ್ಚಿನ ಜನರು ಇಚ್ಛಿಸುತ್ತಾರೆಂದು ಜಾಹೀರಾತು ಪ್ರತಿಪಾದಿಸಿದೆ.

ಸೇನೆಯ ಬಿಲ್ಲು-ಬಾಣದ ಚಿಹ್ನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಏಕನಾಥ್‌ ಶಿಂಧೆ ಅವರ ಚಿತ್ರಗಳನ್ನು ಜಾಹೀರಾತು ಹೊಂದಿದೆ. ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಯಾವುದೇ ಫೋಟೋವನ್ನು ಜಾಹೀರಾತಿನಲ್ಲಿ ಬಳಸಲಾಗಿಲ್ಲ.

ಉದ್ದವ್ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿ, “ಇದು ಮೋದಿ-ಶಾ ಅವರ ಶಿವಸೇನೆ” ಎಂದು ಟೀಕಿಸಿದ್ದಾರೆ. ಬಾಳಾ ಸಾಹೇಬ್ ಠಾಕ್ರೆಯವರ ಫೋಟೋ ಬಳಸದಿರುವುದು ಚರ್ಚೆಗೆ ಆಸ್ಪದ ನೀಡಿದೆ.

“ಮಹಾರಾಷ್ಟ್ರದಲ್ಲಿ ಶೇ. 26. 1 ಜನರು ಏಕನಾಥ್ ಶಿಂಧೆ ಅವರನ್ನು, ಶೇ. 23. 2 ರಷ್ಟು ಜನರು ದೇವೇಂದ್ರ ಫಡ್ನಾವೀಸ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ” ಎಂದು ಜಾಹೀರಾತು ಹೇಳಿದೆ. ಝೀ ಟಿವಿ- ಮ್ಯಾಟ್ರಿಜ್‌ ನಡೆಸಿದೆ ಎನ್ನಲಾದ ಸಮೀಕ್ಷೆಯ ಅಂಕಿ-ಅಂಶಗಳನ್ನು ಜಾಹೀರಾತು ಆಧಾರಿಸಿದೆ.

“ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಮಹಾರಾಷ್ಟ್ರದ ಶೇಕಡಾ 30.2 ರಷ್ಟು ಜನತೆ ಭಾರತೀಯ ಜನತಾ ಪಕ್ಷವನ್ನು ಬಯಸುತ್ತಾರೆ, ಶೇ. 16.2 ರಷ್ಟು ನಾಗರಿಕರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಬಯಸುತ್ತಾರೆ. ಮಹಾರಾಷ್ಟ್ರದಲ್ಲಿನ ಶೇ. 46.4ರಷ್ಟು ಜನರ ಪ್ರತಿಕ್ರಿಯೆ ಇದಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಯನ್ನು ನಂಬಿರಿ” ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಈ ಜಾಹೀರಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಜಯ್ ರಾವುತ್, “ಇದು ಮೊದಲು ಬಾಳಾಸಾಹೇಬ್ ಅವರ ಶಿವಸೇನೆಯಾಗಿತ್ತು. ಆದರೆ ಇದು ಮೋದಿ-ಶಾ ಅವರ ಶಿವಸೇನೆ ಎಂಬುದನ್ನು ಜಾಹೀರಾತು ಸ್ಪಷ್ಟಪಡಿಸಿದೆ. ದಿವಂಗತ ಬಾಳಾಸಾಹೇಬ್ ಠಾಕ್ರೆಯವರ ಫೋಟೋ ಜಾಹೀರಾತಿನಲ್ಲಿ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.

ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವನಕುಳೆ ಅವರು ಜಾಹೀರಾತಿಗೆ ಕಡಿಮೆ ಪ್ರಾಶಸ್ತ್ಯ ನೀಡಲು ಪ್ರಯತ್ನಿಸಿದ್ದಾರೆಂದು ವರದಿಯಾಗಿದೆ.

“ಮತದಾರರಿಗೆ ಯಾವ ಪಕ್ಷ ಅಥವಾ ನಾಯಕ ಹೆಚ್ಚು ಸ್ವೀಕಾರಾರ್ಹ ಎಂಬುದನ್ನು ಯಾವಾಗಲೂ ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ. ಶಿಂಧೆ ಕ್ಯಾಬಿನೆಟ್ ಸಚಿವರಾಗಿ ಹಿಂದೆ ಜನಪ್ರಿಯರಾಗಿದ್ದರು ಮತ್ತು ಈಗ ಮುಖ್ಯಮಂತ್ರಿಯಾಗಿ ಸ್ವೀಕೃತವಾಗಿದ್ದಾರೆ. ರಾಜ್ಯದ ಜನರು ಫಡ್ನಾವೀಸ್‌, ಶಿಂಧೆ, ಮೋದಿ ಅವರಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ” ಎಂದು ಬಾವನಕುಳೆ ತಿಳಿಸಿದ್ದಾರೆ.

“ರಾಜ್ಯ ಮಟ್ಟದ ನಾಯಕರಾಗಲು ಮಹಾರಾಷ್ಟ್ರದ ಜನತೆ ಫಡ್ನಾವೀಸ್ ಅವರಿಗೆ ಎರಡು ಬಾರಿ ಆದ್ಯತೆ ನೀಡಿದ್ದಾರೆ. ಯಾರು ದೊಡ್ಡವರು ಅಥವಾ ಚಿಕ್ಕವರು ಎಂಬುದರ ಬಗ್ಗೆ ಶಿವಸೇನೆ ಮತ್ತು ಬಿಜೆಪಿ ನಡುವೆ ಯಾವುದೇ  ಹೋಲಿಕೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಮುಖ್ಯ ವಕ್ತಾರ ಅತುಲ್ ಲೋಂಧೆ ಪ್ರತಿಕ್ರಿಯಿಸಿ, “ಇದು ನಕಲಿ ಸಮೀಕ್ಷೆಯಾಗಿದ್ದು, ಶಿಂಧೆ ಅವರು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಇದನ್ನು ಬಳಸಿಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ಜಯಲಲಿತಾರವರ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಣ್ಣಾಮಲೈ ವಿರುದ್ಧ ನಿರ್ಣಯ ಮಂಡಿಸಿದ AIADMK

“ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ 42ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮಹಾರಾಷ್ಟ್ರದಲ್ಲಿ ಗೆಲ್ಲಲಿದೆ. ಹಾಗೆಯೇ ರಾಜ್ಯ ವಿಧಾನಸಭೆಯಲ್ಲಿ 200 ಸ್ಥಾನಗಳನ್ನು ಗೆಲ್ಲುವುದು ಖಚಿತ. ‘ಒಂದಾನೊಂದು ಕಾಲದಲ್ಲಿ ಶಿಂಧೆ’ ಎಂಬ ಹೊಸ ಕಥೆಯನ್ನು ಶಿಂಧೆಯವರೇ ಬರೆಯಲಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರವು 48 ಲೋಕಸಭಾ ಸ್ಥಾನಗಳನ್ನು ಮತ್ತು 288 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಮಹಾ ವಿಕಾಸ್ ಅಘಾಡಿ (ಎಂವಿಎ)ಯಲ್ಲಿ ಉದ್ಧವ್ ಬಣದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳಿದ್ದು, ಸಮನ್ವಯ ಸಾಧಿಸಿ ಚುನಾವಣೆ ಎದುರಿಸುವುದಾಗಿ ಪ್ರತಿಪಾದಿಸಿವೆ.

ಶಿಂಧೆ ನೇತೃತ್ವದ ಶಿವಸೇನೆಯ ಮುಖ್ಯ ಸಚೇತಕ ಭರತ್ ಗೋಗವಾಲೆ ಪ್ರತಿಕ್ರಿಯಿಸಿ, “ಅನುಕೂಲಕರ ಸಮೀಕ್ಷೆಗಾಗಿ ನಾವು ಯಾರನ್ನೂ ನೇಮಿಸಿಲ್ಲ. ಶಿಂಧೆಯವರನ್ನು ಜನರು ಸ್ವೀಕರಿಸಿದ್ದಾರೆ. ಅವರು ರಾಜ್ಯದ ಎಲ್ಲಾ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ನಮಗಾಗಿ ಸಮೀಕ್ಷೆ ನಡೆಸಿರೆಂದು ನಾವು ಯಾವುದೇ ಮಾಧ್ಯಮ ಸಂಸ್ಥೆಯಲ್ಲಿ ಕೇಳಿಕೊಂಡಿಲ್ಲ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...