Homeಮುಖಪುಟಶಿವಮೂರ್ತಿ ಮುರುಘಾ ಶರಣರಿಗೆ ಸಿದ್ದಪ್ಪ ಮೂಲಗೆಯವರ ಬಹಿರಂಗ ಪತ್ರ

ಶಿವಮೂರ್ತಿ ಮುರುಘಾ ಶರಣರಿಗೆ ಸಿದ್ದಪ್ಪ ಮೂಲಗೆಯವರ ಬಹಿರಂಗ ಪತ್ರ

ಲಿಂಗಾಯತ ಧರ್ಮದ ಜಾನ್ ಪೋಪ್ ಆಗುವ ಧಾವಂತದ ಭ್ರಮೆ ನೋಡಿ ನಿಮ್ಮ ಬಗ್ಗೆ ನನಗೆ ಕನಿಕರವೂ ಜತೆಗೆ ಅದನ್ನು ಸಾಧಿಸಲು ನೀವು ತಲುಪಿರುವ ಅವಸ್ಥೆ ನೋಡಿ ಮರುಕ ಆಗುತ್ತಿದೆ.

- Advertisement -
- Advertisement -

ಶಿವಮೂರ್ತಿ ಮುರುಘಾ ಶರಣರೆ, ನಿಮ್ಮನ್ನು ಕೇಳುವ ಪ್ರಶ್ನೆಗಳು ಬಹಳ ಇವೆ, ಅವಸರ ಇಲ್ಲ. ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರಿಸಿ ಸಾಕು.

ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ 2ನೇ ಅಸಂಖ್ಯ ಪ್ರಮಥರ ಗಣಮೇಳ ಮತ್ತು ಶಿವಯೋಗ ಸಂಭ್ರಮ ನಡೆಸಿದ್ದು ಸಂತೋಷದ ಸಂಗತಿ. 12ನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ 1.96 ಲಕ್ಷ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಇತಿಹಾಸ. ಅದು ಪ್ರಮಥರ ಮೊದಲ ಗಣಮೇಳ. 21ನೆಯ ಶತಮಾನದಲ್ಲಿ ಅಂತಹ ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಎರಡನೆಯ ಗಣಮೇಳ ಮಾಡುತ್ತಿದ್ದೇವೆ. ಆರಂಭದಲ್ಲಿ 2 ಲಕ್ಷ ಜನರು ಸೇರುತ್ತಾರೆಂದು ಹೇಳಿದ್ದಿರಿ. ಅದಕ್ಕಾಗಿ ತನು, ಮನ, ಧನದಿಂದ ನಿಮ್ಮ ಎಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ದಿರಿ, ನಿಮ್ಮ ಪ್ರಯತ್ನ ಮೆಚ್ಚುವಂತಹದು. ಆದರೆ ಕಡೆಗೆ ಅದರಲ್ಲಿ ಮೂರನೇ ಒಂದು ಭಾಗವೂ ಸೇರಲಿಲ್ಲವೆಂಬುದು ಬೇರೆ ವಿಷಯ.

ಏಕಕಾಲಕ್ಕೆ ಸುಮಾರು 24000 ಮಂದಿ ಇಷ್ಟಲಿಂಗ ಪೂಜೆ ನೆರೆವೇರಿಸುವ ಮೂಲಕ ಸದರಿ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ (ಲಿಮ್ಕಾ) ರೆಕಾರ್ಡ್‌ನಲ್ಲಿ ದಾಖಲಿಸಿದ್ದಿರಿ; ನಿಮಗೆ ಮನದುಂಬಿ ಅಭಿನಂದನೆಗಳು. (ಈ ರೀತಿಯಾಗಿ ದಾಖಲೆ ಆಗುವುದು. ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಮತ್ತು ಸುಲಲಿತವಾಗಿದೆ ಎನ್ನುವುದು ನಿಮಗೂ ಗೊತ್ತಿದೆ. ಉದಾಹರಣೆಗೆ ತೀರಾ ಇತ್ತೀಚೆಗೆ ಮಾರುದ್ದ ಮೀಸೆ ಬಿಟ್ಟು ತನ್ನ ಮೀಸೆಯಿಂದ ಜೀಪ್ ಎಳೆಯುವ ಮೂಲಕ ಮೀಸೆ ಸಾಧಕ ಸಹಾ ಸಹ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದ್ದಾನೆ. ಇಂತಹ ಉದಾಹರಣೆಗಳು ಸಾವಿರಾರು ಕೊಡಬಹುದು. ದಾಖಲೆಯಲ್ಲಿ ಸೇರಲು ಮೊದಲೇ ನಿರ್ಧರಿಸಿ, ಮುಂಚಿತವಾಗಿಯೇ ಆನ್ಲೈನ್‌ನಲ್ಲಿ ನಿಗದಿತ ಅರ್ಜಿ ಭರ್ತಿ ಮಾಡಿ ದಾಖಲಿಸುವರನ್ನು ಮೊದಲೇ ಸಂಪರ್ಕ ಮಾಡಿ, ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಹಾಗೆ ನೋಡಿಕೊಳ್ಳುತ್ತಾರೆ – ಒಟ್ಟಾರೆ ಇದೆಲ್ಲಾ ಒಂದು ದೊಡ್ಡ ಪ್ರಹಸನ)

ನಿಮ್ಮ ಬಗ್ಗೆ ವೈಯಕ್ತಿಕವಾಗಿ ನನಗೆ ಯಾವ ಅನುರಾಗವೂ ಇಲ್ಲ. ದ್ವೇಷ, ನಂಜು ಅಂತು ಮೊದಲೇ ಇಲ್ಲ. ಸಹಮಾನವನಾಗಿ ನಿಮ್ಮ ಬಗ್ಗೆ ನನಗೆ ಪ್ರೀತಿಯಿದೆ. ಲಿಂಗಾಯತ ಧರ್ಮದ ಜಾನ್ ಪೋಪ್ ಆಗುವ ಧಾವಂತದ ಭ್ರಮೆ ನೋಡಿ ನಿಮ್ಮ ಬಗ್ಗೆ ನನಗೆ ಕನಿಕರವೂ ಜತೆಗೆ ಅದನ್ನು ಸಾಧಿಸಲು ನೀವು ತಲುಪಿರುವ ಅವಸ್ಥೆ ನೋಡಿ ಮರುಕ ಆಗುತ್ತಿದೆ. ನೀವು ಲಿಂಗಾಯತ ಧರ್ಮದ ಜಾನ್ ಪೋಪ್ ಆಗಿ ಮತ್ತು ಜಗತ್ತಿನ ಸರ್ವೋತ್ತಮ ಸಂತನಾಯಕರಾಗಿ ನನಗೆ ಯಾವ ಅಭ್ಯಂತರವಿಲ್ಲ. ಈ ದಿಶೆಯಲ್ಲಿ ಪ್ರಯತ್ನಿಸುವ ಎಲ್ಲಾ ಹಕ್ಕು ನಿಮಗಿದೆ.

ಆದರೆ ನಾನು ಅಭಿನವ ಬಸವಣ್ಣ ಎಂದು ಜಗತ್ತಿಗೆ ಸಾರಲು ನೀವು ಮಾಡುವ ಪ್ರಹಸನಗಳನ್ನು ನೋಡಿ. ಬಸವಣ್ಣನವರಿಗೆ ಸರಿಸಮಾನವಾಗಿ, ಅವರನ್ನು ಹೋಲುವಂತಹ ಪಟಗಳನ್ನು ಹಾಕಿ ಮಾರಾಟ ಮಾಡುವುದು, ಎಲ್ಲರಿಗೂ ಎದ್ದು ಕಾಣುವ ಹಾಗೆ ವೇದಿಕೆಯಲ್ಲಿ ಒಂದು ಕಡೆ ಬಸವಣ್ಣನವರ, ಇನ್ನೊಂದು ಕಡೆ ನಿಮ್ಮ ಭಾವಚಿತ್ರ ಸರಿಸಮಾನವಾಗಿ ಹಾಕಿಕೊಳ್ಳುತ್ತಿರುವುದು ಖಂಡನಾರ್ಹವಾಗಿದೆ.

ಬಾಗಿದ ತಲೆ ಮುಗಿದ ಕೈಯಾಗಿಸಿಕೊಂಡಿರುವ ಬಸವಣ್ಣ ಎಲ್ಲಿ? ವಿಮಾನದ ಮೂಲಕ ಪುಷ್ಪವೃಷ್ಟಿ ಮಾಡಿಕೊಳ್ಳುವ ನೀವೆಲ್ಲಿ? ಅದು ಜಗತ್ತನ್ನು ಬೆಳಗುವ ಮಹಾ ಬೆಳಕು, ನೀವು? ಕಷ್ಟದ ಸಂದರ್ಭದಲ್ಲಿ ಪ್ರಧಾನಮಂತ್ರಿ ಹುದ್ದೆ ತೊರೆದು ಜನರ ಜೊತೆ ನಿಂತ ಬಸವಣ್ಣ ಎಲ್ಲಿ? ದುರಿತಕಾಲದಲ್ಲಿ ಜನರ ಜತೆ ನಿಲ್ಲದೇ, ಇಂಡಿಯಾ ಬುಕ್ ಆಫ್ ರಿಕಾರ್ಡ್ ಸೇರಲು ಮತ್ತು ಆಳುವವರ್ಗವನ್ನು ಓಲೈಸಲು ನೀವು ಮಾಡುವ ಪ್ರಹಸನಗಳು ಎಲ್ಲಿ? ಎತ್ತಣಿದೆಂತ ಸಂಬಂಧ ಶ್ರೀಗಳೆ? ನನ್ನ ಗೋತ್ರ ಮಾದಾರ ಚನ್ನಯ್ಯನ ಗೋತ್ರ ಎಂದು ಸಾರಿದ ಬಸವಣ್ಣ ಎಲ್ಲಿ? ನಿಮ್ಮ ಮಠದ ಎಲ್ಲಾ ಶಾಖಾಮಠಗಳಿಗೆ ನಿಮ್ಮ ಪೂರ್ವಾಶ್ರಮದ ಜಂಗಮರನ್ನೇ (ಐಗೋಳು) ನೇಮಿಸಿದ ನಿವೇಲ್ಲಿ? ಭಕ್ತಿ ಭಂಡಾರಿಯಾದ ಬಸವಣ್ಣ, ಭಕ್ತಿ ಇಲ್ಲದ ಬಡವ ನಾನಯ್ಯ ಎಂದು ಕಿಂಕರತೆಯಿಂದ ಸಾರಿದ ಬಸವಣ್ಣ ಎಲ್ಲಿ? ಬಹಿರಂಗವಾಗಿಯೇ ಸಾರ್ವಜನಿಕರೆದುರು ನನ್ನಲ್ಲಿ ಸಿಕ್ಸ್ತ್ ಸೆನ್ಸ್ ಇದೆ ಎನ್ನುವ ನೀವೆಲ್ಲಿ? ಅತ್ಯಂತ ಉನ್ನತ ಹುದ್ದೆಯಲ್ಲಿದ್ದರೂ ಸಹ ಸಹಜವಾಗಿ ಜನರೊಂದಿಗೆ ಬೆರೆಯುವ ಬಸವಣ್ಣ ಎಲ್ಲಿ? ಸ್ವಾಮಿ, ಜಗದ್ಗುರುಗಿಂತಲೂ ಶರಣ ಪದವಿ ಸಾವಿರ ಪಟ್ಟು ಮೇಲು ಎಂದು ಅರಿತು, ತನ್ನನ್ನು ಇನ್ನು ಮೇಲೆ ಜಗದ್ಗುರು ಎಂದು ಕರೆಯಬಾರದು, ಶರಣ ಎಂದು ಕರೆಯರಿ ಎಂದು ತೋರಿಕೆಗಾಗಿ ಸಾರುವ ನೀವೆಲ್ಲಿ?

ನೀವು ಆಡುವ ಮಾತುಗಳು, ನಿಮ್ಮ ಬರವಣಿಗೆ, ನಿಮ್ಮ ಕಾರ್ಯಚಟುವಟಿಕೆಗಳನ್ನು ದೂರದಲ್ಲಿ ನಿಂತು ನೋಡಿದರೆ ನೀವೊಬ್ಬರು ಅತ್ಯಂತ ಪುರೋಗಾಮಿಗಳು ಎಂದು ಸಹಜವಾಗಿ ಎನಿಸುತ್ತದೆ. ಮೇಲಾಗಿ ಕ್ರಾಂತಿಕಾರಿ ಹೋರಾಟಗಾರನ್ನು ನಿಮ್ಮ ಮಠಕ್ಕೆ ಕರೆದು ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ನೀಡಿ, ಪರೋಕ್ಷವಾಗಿ ನಾನು ಸಹ ಇವರಂತೆಯೇ ಒಬ್ಬ ಕ್ರಾಂತಿಕಾರಿ ಎಂದು ಜಗತ್ತಿಗೆ ಸಾರುತ್ತೀರಿ. ಆಂತರ್ಯದಲ್ಲಿ ನೀವು ಒಬ್ಬ ಅತ್ಯಂತ ಕರ್ಮಠ ಪ್ರತಿಗಾಮಿಗಳು ಎನ್ನುವ ಒಂದು ಗುಮಾನಿ ನನಗೆ ಬಹುದಿನಗಳಿಂದ ಕಾಣುತ್ತಿದೆ. ನನ್ನ ಅನುಮಾನಕ್ಕೆ ಕಾರಣವೂ ಸಹ ನಿಮ್ಮ ನಡವಳಿಕೆಗಳು ಎನ್ನುವುದು ಸುಳ್ಳಲ್ಲ.

ಮನುವಾದಿಗಳು ಮತ್ತು ಮನಿವಾದಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮನುಷ್ಯರ ಮಧ್ಯ ಅನೇಕ ಅಸಮಾನತೆಯ ಗೋಡೆಗಳನ್ನು ನಿರ್ಮಿಸಿದ್ದಾರೆ. ಈ ಗೋಡೆಗಳನ್ನ ಪ್ರಗತಿಪರ ಮುಖವಾಡ ಧರಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಏರಿಸುತ್ತಿದ್ದಿರೇನೋ ಮತ್ತಷ್ಟು ಬಲಿಷ್ಠಗೊಳಿಸುತ್ತಿದ್ದೀರೇನೋ ಎನ್ನುವ ಅನುಮಾನವೂ ನನಗಿದೆ.

12ನೆಯ ಶತಮಾನದಲ್ಲಿ ಗಣಮೇಳಗಳು ನಡೆಯುತ್ತಿದ್ದದ್ದು ಸುಳ್ಳಲ್ಲ. ನೀವು ಹೇಳುವ ಹಾಗೆ ಒಂದಲ್ಲ ಅನೇಕ ಗಣಮೇಳಗಳು ನಡೆದಿವೆ. ಆದರೆ ಅವರಲ್ಲಿ ಒಂದು ಸಮಾನೋದ್ದೇಶ ಇತ್ತು. ಮೇಲಾಗಿ ಅವರೆಲ್ಲರೂ ಸಮಾನಮನಸ್ಕರಾಗಿದ್ದರು. ಈ ಭೂಮಿ ಜಾತಿ, ವರ್ಗ, ಲಿಂಗ, ವಯೋ, ವರ್ಣ ಭೇದಗಳಿಂದ ಮತ್ತು ಎಲ್ಲಾ ರೀತಿಯ ಶೋಷಣೆ-ಅಸಮಾನತೆ-ತಾರತಮ್ಯಗಳಿಂದ ಮುಕ್ತವಾದ ನೆಲೆಯಾಗಬೇಕೆಂಬ ಹೆಬ್ಬಯಕೆ ಅವರಲ್ಲಿತ್ತು.

ಆದರೆ ನಿನ್ನೆ ನೀವು ನಡೆಸಿರುವ ಗಣಮೇಳದಲ್ಲಿ ಅಂತಹ ಯಾವ ಉದ್ದೇಶಗಳು ಕಾಣಲಿಲ್ಲ. ಸಂಪೂರ್ಣವಾಗಿ ಅದಕ್ಕೆ ತದ್ವಿರುದ್ಧವಾಗಿಯೇ ಇತ್ತು. ಸಮಾನಮನಸ್ಕರಂತೂ ದೂರ ಉಳಿಯಿತು, ಸಮಾನೋದ್ದೇಶ ಹೊಂದಿದ್ದವರನ್ನು ದುರ್ಬೀನ ಹಾಕಿ ಹುಡುಕಿದರೂ ಬೆರಳೆಣಿಕೆಯಷ್ಟೂ ಜನರು ಸಿಗುವುದಿಲ್ಲ. ಮೇಲಾಗಿ ಅನೇಕ ಕುಕೃತ್ಯದ ಖ್ಯಾತನಾಮರೂ ವೇದಿಕೆಯಲ್ಲಿ ವಿರಾಜಮಾನರಾಗಿದ್ದರು. (ಇರಲಿ ಬಿಡಿ ಲಿಮ್ಕಾದಲ್ಲಿ ದಾಖಲಾಗಲು ಇವೆಲ್ಲವೂ ಸಹಜ) ನಿನ್ನೆಯ ಕಾರ್ಯಕ್ರಮದ ಬಗ್ಗೆ ಆಮೂಲಾಗ್ರವಾಗಿ ನೋಡಿದರೆ ನಾಲ್ಕು ಉದ್ದೇಶಗಳು ಎಲ್ಲರಿಗೂ ಢಾಳಾಗಿ ಎದ್ದು ಕಾಣುತ್ತಿವೆ.

1: ಇದು ನೀವು ಜಾನ್ ಪೋಪ್ ಆಗುವ ಪ್ರಕ್ರಿಯೆಯ ಮುಂದುವರೆದ ಭಾಗ ಅಂತ.

2: ಯಡಿಯೂರಪ್ಪನವರ ಮಗನಾದ ವಿಜಯೇಂದ್ರನನ್ನು ರಾಜ್ಯದ ಮತ್ತು ಲಿಂಗಾಯತರ ಭವಿಷ್ಯದ ನಾಯಕ ಎಂದು ಬಿಂಬಿಸುವುದು.

3: ನಿಮ್ಮ ಮಠದ ಹಿಂಬದಿ ನಿರ್ಮಿಸಲು ಉದ್ದೇಶಿರುವ ಬಸವ ಪುತ್ಥಳಿಗೆ 150 ಕೋಟಿ ರೂಪಾಯಿ ಹಣ ಸಂಗ್ರಹಿಸುವುದು.

4: ಲಿಂಗಾಯತ ಹೋರಾಟಕ್ಕೆ ಪೆಟ್ಟು ನೀಡುವುದು.

ಕಾರ್ಯಕ್ರಮದಲ್ಲಿ ಅರುಣ್ ಸೋಮಣ್ಣ ಮಂಡಿಸಿರುವ 07 ನಿರ್ಣಯಗಳಲ್ಲಿ 02ನಿರ್ಣಯಗಳು ಮೇಲಿನ 1 & 3 ಉದ್ದೇಶಗಳನ್ನು ಖಚಿತಪಡಿಸಿವೆ. ಒಂದು ನಿಮಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು. ಇನ್ನೊಂದು ಬಸವ ಪುತ್ಥಳಿಗೆ ಉದಾರವಾಗಿ ಸರ್ಕಾರ ಅನುದಾನ ನೀಡಬೇಕು. (ಖಂಡಿತಾ ಇವನ್ನು ನಿಮ್ಮ ಅಣತಿಯ ಮೇರೆಗೆ ಮಂಡಿಸಿರುತ್ತಾರೆ, ಇದು ನಿಸ್ಸಂಶಯ)

ವಿಜಯೇಂದ್ರನನ್ನು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಮಾಡುವ ಮೂಲಕ ಮುಂದೆ ಯಡಿಯೂರಪ್ಪರ ಸ್ಥಾನವನ್ನು ತುಂಬುವ ಶಕ್ತಿ ಅವರ ಮಗನಿಗೆ ಇದೆ. ಇವರೇ ಇನ್ನು ಮುಂದೆ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ನಾಯಕ ಎಂದು ಬಿಂಬಿಸಿದ್ದಿರಿ. ಈ ಮೂಲಕ ಯಡಿಯೂರಪ್ಪರ ನಾಯಕತ್ವಕ್ಕೆ ಮನ್ನಣೆ ನೀಡಿ ಲಿಂಗಾಯತ ಹೋರಾಟಕ್ಕೆ ಬಲವಾದ ಪೆಟ್ಟು ನೀಡಲು ಪ್ರಯತ್ನಿಸಿರುವ ಸಂಗತಿ ಎದ್ದು ಕಾಣುತ್ತಿದೆ. ಇದಕ್ಕೆ ಕಾರ್ಯಕ್ರಮದಲ್ಲಿ ಸಂತೋಷದ ಭರದಲ್ಲಿ ವಿ.ಸೋಮಣ್ಣ ಆಡಿರುವ ಮಾತುಗಳೇ ಸಾಕ್ಷಿಯಾಗಿವೆ. ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಿಮ್ಮ ನಿಲುವು ಏನು ಅಂತ ಮಾಧ್ಯಮಗಳು ಸಹಜವಾಗಿ ಕೇಳಿದ್ದಾಗ ಅದರ ಬಗ್ಗೆ ಇವಾಗ ನಾವು ಉತ್ತರಿಸುವುದಿಲ್ಲ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಮೇಲೆ ನಿಮಗಿರುವ ನಿಷ್ಠೆ ಜಗಜ್ಜಾಹೀರು ಮಾಡಿಕೊಂಡಿದ್ದಿರಿ.

ನಿಮ್ಮ ನಡವಳಿಕೆಗಳು, ಕೆಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ, ಇವು ನನ್ನೊಬ್ಬನ ಪ್ರಶ್ನೆಗಳಾಗದೇ, ಬಹುತೇಕರ ಪ್ರಶ್ನೆಗಳಾಗಿವೆ.

1: ಶಿವಯೋಗ ಅಂತರಂಗದ ಅನುಸಂಧಾನವೋ? ಅಥವಾ ಬಹಿರಂಗವಾಗಿ ಪ್ರದರ್ಶನ ಮಾಡುವ ಸಂಭ್ರಮವೋ? ಕೋಮುವಾದಿಗಳಗಳನ್ನು ಭೂಕಂಟಕರನ್ನೂ, ಭ್ರಷ್ಟರನ್ನು ವೇದಿಕೆಯಲ್ಲಿ ತನ್ನ ಅಕ್ಕಪಕ್ಕದಲ್ಲಿ ಕೂಡಿಸಿಕೊಂಡು ಅವರ ಕೈಯಲ್ಲಿ ಲಿಂಗಕೊಟ್ಟು ಸಮಾಜಕ್ಕೆ ಯಾವ ಆದರ್ಶ ಬಿತ್ತುತ್ತಿದ್ದಿರಾ? ಇದರ ಒಟ್ಟು ಸಂದೇಶವೇನು? ಒಂದು ಧರ್ಮದ ಧಾರ್ಮಿಕ ಲಾಂಛನಗಳನ್ನು ನಿಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳಲು ಮತ್ತು ಇಡೀ ಒಂದು ಸಮುದಾಯದ ಧಾರ್ಮಿಕ ಆಚರಣೆಯನ್ನು ನಗೆಪಾಟಿಲಿಗೆ ಗುರಿಯಾಗಿಸುವ ಹಕ್ಕು ನಿಮಗೆ ಕೊಟ್ಟವರು ಯಾರು?

2: ನಾನೊಬ್ಬ ಅತ್ಯಂತ ಪ್ರಭಾವಶಾಲಿ ಸ್ವಾಮೀಜಿ ಎಂದು ಸಮಾಜಕ್ಕೆ ತೋರಿಸಲು ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ಮಾಡುತ್ತಲೇ ಇರುತ್ತೀರಿ. ಆದರೆ ಇತ್ತೀಚೆಗೆ ನಿಮ್ಮ ನೇತೃತ್ವದಲ್ಲಿ, ನಿಮ್ಮದೇ ಚಿತ್ರದುರ್ಗ ಜಿಲ್ಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಜರುಗಿದ ಸಮಾವೇಶದಲ್ಲಿ ಕನಿಷ್ಠ 4-5 ಸಾವಿರ ಜನರು ಸೇರಲಿಲ್ಲ, ಏಕೆ? ಇತ್ತೀಚೆಗೆ, ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು ಸಾಣೆಹಳ್ಳಿಯ ಪಂಡಿತಾರಾಧ್ಯರ ನೇತೃತ್ವದಲ್ಲಿ ಮುಂದಿನ ಹೋರಾಟವನ್ನು ರೂಪಿಸೋಣ, ಅವರ ನೇತೃತ್ವದಲ್ಲೇ ಮುಂದೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟ ಮುಂದುವರಿಸೋಣ ಎಂದು ನಿರ್ಧರಿಸಿ, ಈಗಾಗಲೇ ಒಂದು ನಿಯೋಗ ತೆಗೆದುಕೊಂಡು ಹೋಗಿ ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ, ಈಗಲೂ ಸಹ ಸತತವಾಗಿ ಅದೇ ಪ್ರಯತ್ನದಲ್ಲಿದ್ದಾರೆ. ಇಲ್ಲಿ ಸಾರ್ವಜನಿಕರಿಗೊಂದು ಪ್ರಶ್ನೆ ಕಾಡುತ್ತಿದೆ ಅತ್ಯಂತ ಪ್ರಭಾವಶಾಲಿ ಆಗಿರುವ ನಿಮ್ಮ ನೇತೃತ್ವದಲ್ಲೇ ಮುಂದಿನ ಹೋರಾಟವನ್ನು ರೂಪಿಸುವ ಬಗ್ಗೆ ಕನಿಷ್ಠ ಚರ್ಚೆಯೂ ಮಾಡಿಲ್ಲ, ಈಗಲೂ ಮಾಡುತ್ತಿಲ್ಲ ಏಕೆ?

3: ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಈ ಕಾರ್ಯಕ್ರಮ ಎಂದು ಹೇಳಿದ್ದಿರಿ. ಸಂತೋಷ, ಆದರೆ ಭಾರತದ ಶಾಂತಿ ಮತ್ತು ಪ್ರಗತಿಗೆ ತಡೆಗೋಡೆಯಾಗಿರುವ ಬ್ರಾಹ್ಮಣವಾದ (ಮೂಲಭೂತವಾದ), ಕೋಮುವಾದ ಮತ್ತು ಬಂಡವಾಳವಾದ ಇವುಗಳನ್ನು ಹೂತು ಹಾಕದೇ ಇನ್ನೆಲ್ಲಿ ಶಾಂತಿ? ಇನ್ನೆಲ್ಲಿಯ ಪ್ರಗತಿ ಶ್ರೀಗಳೆ? ಇವುಗಳ ನಿವಾರಣೆಗೆ ನಿಮ್ಮ ಕಾರ್ಯಸೂಚಿಗಳೇನು?

4: ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವುದೇ ಬಸವತತ್ವ. ಈ ನೆಲದ ಭೂರಹಿತರ, ಬಡವರ, ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಪಾಲಿಗೆ ಮರಣಶಾಸನವಾಗಿರುವ CAA, NRC, NPR ಬಗ್ಗೆ ನಿಮ್ಮ ನಿಲುವೇನು? ಇದನ್ನು ಹಿಮ್ಮೆಟ್ಟಿಸಲು ಜನ ಸಾಮಾನ್ಯರು, ಈ ನೆಲದ ಪ್ರಗತಿಪರ ಹೋರಾಟಗಾರರು, ಅಸಂಖ್ಯಾತ ಜಾತ್ಯತೀತರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಆ ಸದಾಶಯದ ಪರವಾಗಿ ನೀವು ಕೈಗೊಂಡ ಕಾರ್ಯಚಟುವಟಿಕೆಗಳೇನು? ಇದರ ಬಗ್ಗೆ ಪರವಾದರೂ ಅಥವಾ ವಿರುದ್ಧವಾದರೂ ಒಂದು ಸಣ್ಣ ಹೇಳಿಕೆಯು ನಿಮ್ಮಿಂದ ಬರುತ್ತಿಲ್ಲ ಏಕೆ? ಈ ನಿಮ್ಮ ಜಾಣ ಮೌನ, ಅಲ್ಲಲ್ಲ ಕ್ರೂರ ಮೌನದ ಹಿಂದಿರುವ ಮರ್ಮ ಏನು ಸ್ವಾಮೀಜಿ?

5: ನಿಮ್ಮ ಮಠದ ಹತ್ತಾರು ಶಾಖಾ ಮಠಗಳಿಗೆ, ಇವುಗಳಿಗೆ ಉತ್ತರಾಧಿಕಾರಿಗಳನ್ನು ನಿಮ್ಮ ಪೂರ್ವಾಶ್ರಮದ ಐನೋರನ್ನೆ (ಜಂಗಮರನ್ನೇ) ನೇಮಿಸಿದ್ದಿರಿ. ಇದು ಪುರೋಗಾಮಿ ಸ್ವಾಮೀಜಿಯ ಲಕ್ಷಣವೋ? ಅಥವಾ ಪ್ರತಿಗಾಮಿ ಸ್ವಾಮೀಜಿಯ ಲಕ್ಷಣವೋ? ಮುಂದೆಯಾದರೂ ನಿಮ್ಮ ಉತ್ತರಾಧಿಕಾರಿಯಾಗಿ ಒಬ್ಬ ದಲಿತ ಸಮುದಾಯದ ವ್ಯಕ್ತಿಯನ್ನು ನೇಮಿಸುತ್ತಿರಾ? ನಿಮ್ಮ ಒಂದೆರಡು ಶಾಖಾಮಠಗಳಿಗಾದರೂ ಭಕ್ತವರ್ಗದವರನ್ನು, (ಜಂಗಮೇತರರನ್ನು) ನೇಮಿಸುತ್ತಿರಾ?

5: ಬಡವರ ಬಗ್ಗೆ, ದಲಿತರ ಬಗ್ಗೆ, ರೈತರ ಬಗ್ಗೆ ಅವಾಗವಾಗ ಕಣ್ಣೊರೆಸುವ ಮಾತುಗಳು ಆಡುತ್ತೀರಿ. ನಿಮ್ಮ ಮಠದ ಅಡಿಯಲ್ಲಿ ಸಾವಿರಾರು ಎಕರೆ ಭೂಮಿಯಿದೆ. ನಿಮ್ಮ ಜಿಲ್ಲೆಯಲ್ಲಿಯ ಭೂಹೀನರು ತುಂಡು ಭೂಮಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ನಿಮ್ಮ ಮಠದ ಸ್ವಲ್ಪ ಭೂಮಿ ಅವರಿಗೆ ನೀಡಬಹುದೇ? ನೀವು ಅಭಿನವ ಬಸವಣ್ಣ ಎಂದು ಬಿಂಬಿಸಿಕೊಳ್ಳುತ್ತಿದ್ದಿರಿ, ಬಸವಣ್ಣ ಒಬ್ಬ ಸಮಾಜವಾದಿ, ಅದಕ್ಕೂ ಮುಂದುವರೆದೂ ಒಬ್ಬ ಸಮತಾವಾದಿ ಅಲ್ವೇ ಸ್ವಾಮೀಜಿ.

6: ಬಸವಣ್ಣನವರ ಹತ್ತಿರ ನಂಜು ಮತ್ತು ಮತ್ಸರ ಇರಲಿಲ್ಲ. ಯಾರಾದರೂ ಸಮಾಜಕ್ಕೆ ಒಳಿತು ಮಾಡುವದು ಕಂಡು ಬಂದರೆ, ಅಂತವರಿಗೆ ಪ್ರೋತ್ಸಾಹ ನೀಡಿ, ತಮ್ಮ ಕೈಲಾದ ಸಹಾಯ-ಸಹಕಾರ ಮಾಡುತ್ತಿದ್ದರು. ಆದರೆ ನೀವು ಮೊನ್ನೆಯಷ್ಟೇ ಸಾಣೆಹಳ್ಳಿಯ ಪಂಡಿತಾರಾಧ್ಯರ ಮುಂದಾಳತ್ವದಲ್ಲಿ ಜರುಗಿದ ಮತ್ತೆ ಕಲ್ಯಾಣ ಅಭಿಯಾನ ವಿಫಲಗೊಳಿಸಲು ನಿಮ್ಮ ಅಡಿಯಲ್ಲಿರುವ ಅನೇಕ ಬಸವಕೇಂದ್ರದವರಿಗೆ ಮತ್ತು ಬಸವಕೇದ್ರದ ಸ್ವಾಮೀಜಿಗಳಿಗೆ ನಿಮ್ಮ ಆಪ್ತರ ಮೂಲಕ ಅದರಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳಬಾರದು ಎಂದು ಫರ್ಮಾನು ಹೊರಡಿಸಿದ್ದು ಏಕೆ?

7: ವಚನ ಚಳವಳಿಯ ಮೂಲ ಉದ್ದೇಶಗಳಲ್ಲಿ ಜಾತಿವಿನಾಶ ಪ್ರಮುಖವಾಗಿತ್ತು. ನಿಮ್ಮ ಮಠದ ಶಿಷ್ಯರ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಮತ್ತು ಈ ಹಿಂದೆ ನಿಮ್ಮ ಆಪ್ತರಾಗಿದ್ದ ಬಸವರಾಜ್ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು, ಮತಗಳ ಧೃವೀಕರಣದ ಏಕೈಕ ಉದ್ದೇಶದಿಂದ ಜಾತಿಗೊಂದು ಮಠಗಳನ್ನು ಹುಟ್ಟು ಹಾಕಿ, ಈ ನೆಲದಲ್ಲಿ ಜಾತಿಯ ಗೋಡೆಗಳನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ, ಬಲಿಷ್ಠಗೊಳಿಸಿದ್ದಿರಿ. ಇವರಲ್ಲಿ ಇಂದು ಬಹುತೇಕರು ಸಂಘಪರಿವಾರದ ಅಂಗಳದಲ್ಲಿ ಇದ್ದಾರೆ. ಇದರ ಬಗ್ಗೆ ತಮ್ಮ ನಿಲುವೇನು? ಜಾತಿಗೊಂದು ಮಠ ಮಾಡಿ ಜನತೆಯಲ್ಲಿ ಜಾತಿಪ್ರಜ್ಞೆ ಗಟ್ಟಿಗೊಳಿಸಲು ನೀವು ಮಾಡಿದ ಕೆಲಸ ಕಾರಣವಾಯಿತೆಂದು ನಿಮಗೆ ಅನಿಸುತ್ತದೆಯಾ ಸ್ವಾಮೀಜಿ?

8: ಯಾವ ಪುರುಷಾರ್ಥಕ್ಕಾಗಿ ನಿಮಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು? ನಿಮ್ಮನ್ನು ಲಿಂಗಾಯತ ಸಮೂದಾಯದ ಜಾನ್ ಪೋಪ್ ಎಂದು ಒಪ್ಪಿಕೊಳ್ಳಬೇಕು?

9: ನಿಮ್ಮ ವೇದಿಕೆಯಲ್ಲಿ ಯಡಿಯೂರಪ್ಪ ಬಸವಾದಿ ಶರಣರು ಮತ್ತು ಬಸವ ಚಳವಳಿ ಪ್ರಭುತ್ವವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಿಲ್ಲ. (ಅವರು ಪ್ರಭುತ್ವದ ಬಾಲಂಗೋಚಿಯಾಗಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ) ಸ್ವಾಮೀಜಿ ಬಸವಾದಿಗರು ಪ್ರಭುತ್ವದ ಬಾಲಂಗೋಚಿಯಾಗಿದ್ದರೆ? ಸದ್ಯಕ್ಕೆ ಇಷ್ಟು ಸಾಕು.

ತಾತ್ವಿಕ ಹಿನ್ನೆಲೆಯಲ್ಲಿಯೇ ಕೇಳಿದ ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರಗಳಿವೆಯೇ? ನಿರುತ್ತುರನಾದ ಮನುಷ್ಯ ಒಂದೋ ಜಾಣ ಮೌನಕ್ಕೆ ಜಾರುತ್ತಾನೆ, ಇಲ್ಲವೇ ಬಲವನ್ನು ಪ್ರಯೋಗಿಸಿ ಪ್ರಶ್ನೆ ಎತ್ತಿದವರ ಮೇಲೆ ಪ್ರತಿಕಾರಕ್ಕೆ ಇಳಿಯುತ್ತಾನೆ. ನೀವು ಹೀಗೆ ಮಾಡುವುದಿಲ್ಲ. ಏಕೆಂದರೆ ನೀವು ಅಭಿನವ ಬಸವಣ್ಣ ಖಂಡಿತಾ ಉತ್ತರಿಸುತ್ತಿರಿ ಎಂದು ನಂಬಿದ್ದೇನೆ. ಪ್ರೀತಿಯಿರಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...