Homeಮುಖಪುಟಸಿಖ್ ಪೊಲೀಸ್ ಅಧಿಕಾರಿಗೆ "ಖಲಿಸ್ತಾನಿ" ಹಣೆಪಟ್ಟಿ ಕಟ್ಟಿದ ಬಿಜೆಪಿಗರು; ಸುವೇಂದು ಅಧಿಕಾರಿ ವಿರುದ್ಧ ಭುಗಿಲೆದ್ದ ಆಕ್ರೋಶ

ಸಿಖ್ ಪೊಲೀಸ್ ಅಧಿಕಾರಿಗೆ “ಖಲಿಸ್ತಾನಿ” ಹಣೆಪಟ್ಟಿ ಕಟ್ಟಿದ ಬಿಜೆಪಿಗರು; ಸುವೇಂದು ಅಧಿಕಾರಿ ವಿರುದ್ಧ ಭುಗಿಲೆದ್ದ ಆಕ್ರೋಶ

- Advertisement -
- Advertisement -

ಪ.ಬಂಗಾಳದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ “ಖಲಿಸ್ತಾನಿ” ಎಂದು ಕರೆದಿದ್ದು, ತಮ್ಮದೇ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಿಖ್‌ ಸಮುದಾಯಕ್ಕೆ ಸೇರಿದ ಐಪಿಎಸ್‌ ಅಧಿಕಾರಿಯನ್ನು ಸಿಖ್‌ ಪ್ರತ್ಯೇಕತಾವಾದಿಗಳಿಗೆ ಹೋಲಿಕೆ ಮಾಡಿದ್ದಾರೆ, ಆ ಮೂಲಕ ದೇಶ ವಿರೋಧಿ ಎಂದು ಬಿಂಬಿಸಲು ಹೊರಟ್ಟಿದ್ದಾರೆ. ಕಾನೂನು ರಕ್ಷಕರನ್ನು ಧರ್ಮದ ಹೆಸರಿನಲ್ಲಿ ಪ್ರತ್ಯೇಖಿಸಿ ಹೇಳಿಕೆ ಕೊಡುವ ಬಿಜೆಪಿ ನಾಯಕರ ನಡೆಯು ಆಘಾತಕಾರಿಯಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಜೆಪಿಯ ಸುವೇಂದು ಅಧಿಕಾರಿ ನಾಚಿಕೆಯಿಲ್ಲದೆ ಪೇಟ ಧರಿಸಿದ್ದ IPS ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದು ಕರೆದಿದ್ದಾರೆ. ಬಿಜೆಪಿಯ ಈ ಲಜ್ಜೆಗೆಟ್ಟ ಮತ್ತು ವಿಭಜಕ ಹೇಳಿಕೆ ವಿರುದ್ಧ ಅಸನ್ಸೋಲ್‌ನ ಸಿಖ್ ಸಮುದಾಯವು ಬೀದಿಗಿಳಿದಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಸಂದೇಶಖಲಿ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ವಿಪಕ್ಷ ಬಿಜೆಪಿ ನಾಯಕರನ್ನು ತಡೆದಾಗ ಗುಂಪಿನಲ್ಲಿ ಓರ್ವರು ಅಧಿಕಾರಿಯನ್ನು ಖಾಲಿಸ್ತಾನಿ ಎಂದು ಕರೆದಿದ್ದಾರೆ. ಖಾಲಿಸ್ತಾನಿ ಎಂದು ಕರೆದಿರುವುದನ್ನು ಕೇಳಿ ಐಪಿಎಸ್‌ ಅಧಿಕಾರಿ ಜಸ್‌ಪ್ರೀತ್‌ ಸಿಂಗ್‌, ಪೇಟ ಧರಿಸಿದ್ದೇನೆಂಬ ಮಾತ್ರಕ್ಕೆ ಖಾಲಿಸ್ತಾನಿ ಎನ್ನುತ್ತೀರಾ? ನಾನು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ. ನೀವು ನನ್ನ ಧರ್ಮದ ಮೇಲೆ ದಾಳಿ ಮಾಡಬಾರದು. ನಿಮ್ಮ ಧರ್ಮದ ಬಗ್ಗೆ ನಾನು ಏನನ್ನೂ ಹೇಳಿಲ್ಲ ಎಂದು ಸಿಟ್ಟಿಗೆದ್ದು ಪೊಲೀಸ್‌ ಅಧಿಕಾರಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಬ್ಬರು ಬಿಜೆಪಿ ನಾಯಕರು  ಅಸನ್ಸೋಲ್ ದಕ್ಷಿಣ ಶಾಸಕ ಅಗ್ನಿಮಿತ್ರ ಪಾಲ್ ಮತ್ತು ಸುವೇಂದು ಅಧಿಕಾರಿ ವಿಡಿಯೋದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.

ದಿ ವೈರ್‌ನೊಂದಿಗೆ ಮಾತನಾಡಿದ ಸಿಂಗ್, ಈ ಘಟನೆ ನಡೆದಾಗ ಅವರು ಬಸಿರ್‌ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂದೇಶಖಾಲಿ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದರು. ಸೆಕ್ಷನ್ 144 CrPC ಜಾರಿಯಲ್ಲಿರುವುದರಿಂದ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಾವು ರಾಜಕಾರಣಿಗಳ ಗುಂಪನ್ನು  ಸಂದೇಶಖಾಲಿ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿದ್ದೇವೆ. ನಾವು ರಾಜಕಾರಣಿಗಳನ್ನು ನಿಲ್ಲಿಸಿದಾಗ ಸುವೆಂದು ಅಧಿಕಾರಿ ನನ್ನನ್ನು ‘ಖಲಿಸ್ತಾನಿ’ ಎಂದು ಕರೆದರು, ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದರ ವಿರುದ್ಧ ನಾನು ತೀವ್ರವಾಗಿ ಪ್ರತಿಕ್ರಿಯಿಸಿದೆ ಎಂದು ಹೇಳಿದ್ದಾರೆ.

ತಮ್ಮದೇ ರಾಜ್ಯದ ಪೊಲೀಸ್‌ ಅಧಿಕಾರಿಯೋರ್ವರನ್ನು ಖಲಿಸ್ತಾನಿ ಎಂದು ಕರೆದಿರುವುದು ಬಿಜೆಪಿ ವಿರುದ್ಧ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಖ್ ಸಂಘಟನೆ ಎಸ್‌ಜಿಪಿಸಿ (ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ) ಮತ್ತು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬಿಜೆಪಿ ಆರೋಪವನ್ನು ತಳ್ಳಿಹಾಕಿದ್ದು, ಪೊಲೀಸರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಅಧೀನರಾಗಿದ್ದಾರೆ ಎಂದು ಪ್ರತ್ಯಾರೋಪವನ್ನು ಮಾಡಿದೆ.

ನಮ್ಮದೇ ಅಧಿಕಾರಿಯೊಬ್ಬರನ್ನು ರಾಜ್ಯದ ವಿರೋಧ ಪಕ್ಷದ ನಾಯಕ ‘ಖಲಿಸ್ತಾನಿ’ ಎಂದು ಕರೆದರು. ಅದು ಅವರ ತಪ್ಪು, ಅವರು ಹೆಮ್ಮೆಯ ಸಿಖ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿರುವ ಸಮರ್ಥ ಪೋಲೀಸ್ ಅಧಿಕಾರಿಯಾಗಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ತುಂಬಾ ದುರುದ್ದೇಶಪೂರಿತವಾಗಿದೆ. ಇದು ಕೋಮು ಪ್ರಚೋದನೆಯಾಗಿರುವುದರಿಂದ ಜನಾಂಗೀಯವಾಗಿದೆ. ಇದು ಕ್ರಿಮಿನಲ್ ಕೃತ್ಯವಾಗಿದೆ ಎಂದು ರಾಜ್ಯ ಪೊಲೀಸ್‌ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

ಸುವೇಂದು ಅಧಿಕಾರಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಂದೇಶಖಾಲಿಗೆ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಬಳಿಕ ನಡೆದ ಘರ್ಷಣೆಯ ವೇಳೆ ಪ್ರತಿಭಟನಾಕಾರರಲ್ಲಿ ಒಬ್ಬರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಖಲಿಸ್ತಾನಿ ಎಂದು ಕರೆದಿದ್ದಾರೆ.

ಬಿಜೆಪಿ ಒಡೆದು ಆಳುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಖಂಡಿಸಿದ್ದಾರೆ. ಇಂದು ಬಿಜೆಪಿಯ ಒಡೆದು ಆಳುವ ರಾಜಕಾರಣ, ನಾಚಿಕೆಯಿಲ್ಲದೆ ಸಾಂವಿಧಾನಿಕ ಗಡಿಗಳನ್ನು ಮೀರಿದೆ. ಬಿಜೆಪಿ ಪ್ರಕಾರ, ಟರ್ಬನ್ ಧರಿಸಿರುವ ಪ್ರತಿಯೊಬ್ಬ ವ್ಯಕ್ತಿಯು ಖಲಿಸ್ತಾನಿ. ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರ ಖ್ಯಾತಿಯನ್ನು ದುರ್ಬಲಗೊಳಿಸುವ ಈ ದಿಟ್ಟ ಪ್ರಯತ್ನವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಬಂಗಾಳದ ಸಾಮಾಜಿಕ ಸಾಮರಸ್ಯವನ್ನು ರಕ್ಷಿಸುವಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ ಮತ್ತು ಅದನ್ನು ಅಡ್ಡಿಪಡಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಸಿಖ್ಖರು ಅತಿ ಹೆಚ್ಚು ತ್ಯಾಗ ಮಾಡಿದ್ದಾರೆ ಎಂಬುವುದನ್ನು ದೇಶದಲ್ಲಿ ಇಂತಹ ಚಿಂತನೆಯನ್ನು ಹೊಂದಿರುವ ನಾಯಕರು ಎಂದಿಗೂ ಮರೆಯಬಾರದು. ದೇಶದಲ್ಲಿ ಅಂತಹ ಜನರು ಉದ್ದೇಶಪೂರ್ವಕವಾಗಿ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಆದರೆ ಸರ್ಕಾರಗಳು ಮೌನವಾಗಿವೆ ಎಂದು SGCP ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಹಬ್ಬಿಸಿರುವ ಧಾರ್ಮಿಕ ಮತಾಂಧತೆಯ ಕುಟುಕು ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ವಿಷಪೂರಿತಗೊಳಿಸುತ್ತಿದೆ, ಕಾನೂನು ರಕ್ಷಕರನ್ನು ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಎಂದು ಹೆಸರಿಸಲಾಗುತ್ತಿದೆ. ಸಬ್ಕಾ ಸಾಥ್ ಅಂದರೆ ಈಗ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಕಿತ್ತುಹಾಕುವುದಾ? ಮಿಸ್ಟರ್ ಮೋದಿ, ನಿಮ್ಮ ಏಕೈಕ ಉದ್ದೇಶವೆಂದರೆ ಧರ್ಮಗಳು, ಪಂಗಡಗಳು ಮತ್ತು ಸಮುದಾಯಗಳ ನಡುವೆ ಅಸಂಗತತೆ, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಇದನ್ನು ಓದಿ: ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸೋನಿಯಾ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...