| ನಾನುಗೌರಿ ಡೆಸ್ಕ್ |
ಆಸ್ಟ್ರೇಲಿಯಾದ ಎದುರಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಶಿಖರ್ ಧವನ್ ರವರು ಈಗ ಇಡೀ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅದೇ ಪಂದ್ಯದ ವೇಳೆ ಹೆಬ್ಬೆರಳಿಗೆ ಆದ ಗಾಯ ವಾಸಿಯಾಗದೇ ತೀವ್ರ ಸ್ವರೂಪಕ್ಕೆ ತಿರುಗಿದ ಕಾರಣ ವೈದ್ಯರು ವಿಶ್ವಕಪ್ ನ ಯಾವುದೇ ಪಂದ್ಯಗಳಲ್ಲಿ ಭಾಗವಹಿಸದಿರಲು ಸೂಚಿಸಿದ್ದಾರೆ.
ಆಸ್ಟ್ರೇಲಿಯಾದ ಎದುರಿನ ಪಂದ್ಯದಲ್ಲಿ ಆಡುತ್ತಿದ್ದಾಗ ವೇಗದ ಬೌಲರ್ ಮಾಡಿದ ಬೌಲ್ ನೇರವಾಗಿ ಶಿಖರ್ ಧವನ್‍ರವರ ಕೈಗೆ ಬಡಿದಿತ್ತು. ಆದರೆ ವಿಚಲಿತರಾಗದ ಅವರು ನಂತರವೂ ಆಟ ಮುಂದುವರೆಸಿ ಶತಕ ದಾಖಲಿಸಿದ್ದಾರೆ. ಔಟಾದ ನಂತರ ಗಾಯ ಹೆಚ್ಚಾಗಿದ್ದ ಕಾರಣದಿಂದ ಫೀಲ್ಡಿಂಗ್ ಮಾಡದೇ ವಿಶ್ರಾಂತಿ ಪಡೆದಿದ್ದರು. ಅಲ್ಲಿಂದ ಮೂರು ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಗಾಯ ಮಾಗದ ಕಾರಣ ಇಡೀ ವಿಶ್ವಕಪ್ ನಿಂದಲೇ ದೂರವುಳಿಯಬೇಕಾಗಿದೆ.
ವೈದ್ಯರ ಭೇಟಿಯ ನಂತರ ಹೊರಗುಳಿಯುವ ತೀರ್ಮಾನವಾಗಿದ್ದು ಅಭಿಮಾನಿಗಳ ಪಾಲಿಗೆ ತೀವ್ರ ನಿರಾಶೆಯಾಗಿದೆ. ಎರಡನೇ ಪಂದ್ಯದಲ್ಲಿ ಶತಕ ಗಳಿಸಿದ್ದ ಶಿಖರ್ ಧವನ್ ಗೆ ಮಹತ್ವದ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ ದುರಾದೃಷ್ಟ ಎದುರಾಗಿದೆ. ಮುಂದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾರೊಂದಿಗೆ ಕೆ.ಎಲ್ ರಾಹುಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.
ರಾಹುಲ್ ಪಾಕ್ ಎದರಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಉತ್ತಮ ಕೊಡುಗೆಯನ್ನೇ ನೀಡಿದ್ದರು. ಆದರೂ ಎಡಗೈ ದಾಂಡಿಗ ಶಿಖರ್ ಧವನ್ ಬೇಗ ಚೇತರಿಸಿಕೊಳ್ಳಲಿ ಎಂಬ ಹಾರೈಕೆ ನಮ್ಮದು.