Homeಮುಖಪುಟಜೀವ ರಕ್ಷಣೆಯ ಜೊತೆಗೆ ಸಾಮರಸ್ಯದ ಸಂದೇಶ ಸಾರಿದ ಸಿಲ್ಕ್ಯಾರ ಕಾರ್ಯಾಚರಣೆ

ಜೀವ ರಕ್ಷಣೆಯ ಜೊತೆಗೆ ಸಾಮರಸ್ಯದ ಸಂದೇಶ ಸಾರಿದ ಸಿಲ್ಕ್ಯಾರ ಕಾರ್ಯಾಚರಣೆ

- Advertisement -
- Advertisement -

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ ಸುರಂಗದಲ್ಲಿ ಕುಸಿತ ಸಂಭವಿಸಿದ ಪರಿಣಾಮ ಒಳಗಡೆ ಸಿಲುಕಿಕೊಂಡಿದ್ದ 17 ಕಾರ್ಮಿಕರನ್ನು ನವೆಂಬರ್ 28ರಂದು ರಕ್ಷಣೆ ಮಾಡಲಾಗಿದೆ. 17 ದಿನಗಳ ಕತ್ತಲ ವಾಸದ ಬಳಿಕ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿ ಹೊರ ಬಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಈ ರಕ್ಷಣಾ ಕಾರ್ಯಾಚರಣೆ, ಕಾರ್ಮಿಕರ ಜೀವ ರಕ್ಷಣೆಯ ಜೊತೆಗೆ ಸಾಮರಸ್ಯದ ಸಂದೇಶ ಸಾರಿದೆ. ರಕ್ಷಣಾ ಕಾರ್ಯಾಚರಣೆಯ ಅಂತಿಮ ಹಂತದಲ್ಲಿ ಸುರಂಗ ಕೊರೆದ ಸಿಬ್ಬಂದಿಯ ಮುಖ್ಯಸ್ಥರು ತಮ್ಮ ತಂಡದಲ್ಲಿನ ನಂಬಿಕೆಗಳ ವೈವಿಧ್ಯತೆಯನ್ನು ಒತ್ತಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ನಮ್ಮ ತಂಡದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಇದ್ದಾರೆ. ಎರಡೂ ಧರ್ಮಗಳ ಜನರು 41 ಜೀವಗಳನ್ನು ಉಳಿಸಲು ಶ್ರಮಿಸಿದ್ದಾರೆ. ಅವರಲ್ಲಿ ಯಾರೂ ಇದನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕು. ದ್ವೇಷದ ವಿಷ ಹರಡಬಾರದು. ದೇಶಕ್ಕಾಗಿ ನಮ್ಮ 100 ಶೇಖಡ ಶ್ರಮ ಹಾಕಬೇಕು. ಇದು ನನ್ನ ಸಂದೇಶ, ದಯವಿಟ್ಟು ಇದನ್ನು ಎಲ್ಲರಿಗೂ ತಲುಪಿಸಿ” ಎಂದು ದೆಹಲಿ ಮೂಲದ ರಾಕ್‌ವೆಲ್ ಎಂಟರ್‌ಪ್ರೈಸಸ್ ಮಾಲೀಕ ವಕೀಲ್ ಹಸನ್ ಹೇಳಿದ್ದಾರೆ.

ವಕೀಲ್ ಹಸನ್ ಅವರ ಕಂಪನಿಯ ಸಿಬ್ಬಂದಿಗಳಾದ ದೆಹಲಿಯ 6 ಮಂದಿ ಮತ್ತು ಉತ್ತರ ಪ್ರದೇಶದ ಬುಲಂದ್‌ಶಹರ್‌ನ 6 ಮಂದಿ ಡ್ರಿಲ್ಲಿಂಗ್ ಯಂತ್ರ ಕೆಟ್ಟು ನಿಂತಾಗ ಸುರಂಗ ಕೊರೆದವರಾಗಿದ್ದಾರೆ. ಕಳೆದ ಸೋಮವಾರ ಮತ್ತು ಮಂಗಳವಾರದ ನಡುವೆ, ಸುರಂಗದೊಳಗೆ ಸಿಲುಕಿಕೊಂಡಿದ್ದ ಜನರನ್ನು ತಲುಪಲು ಈ 12 ಮಂದಿ ಇಕ್ಕಟ್ಟಾದ ಜಾಗದಲ್ಲಿ 12 ಮೀಟರ್‌ ಕೊರೆದು ಪೈಪ್ ಅಳವಡಿಸಿದ್ದಾರೆ.

ಕೊನೆಯ ಹಂತದ ಸುರಂಗ ಕೊರೆದವರಲ್ಲಿ ಹಸನ್, ಮುನ್ನಾ ಖುರೇಷಿ, ನಸೀಮ್ ಮಲಿಕ್, ಮೋನು ಕುಮಾರ್, ಸೌರಭ್, ಜತಿನ್ ಕುಮಾರ್, ಅಂಕುರ್, ನಾಸಿರ್ ಖಾನ್, ದೇವೇಂದ್ರ, ಫಿರೋಜ್ ಖುರೇಷಿ, ರಶೀದ್ ಅನ್ಸಾರಿ ಮತ್ತು ಇರ್ಷಾದ್ ಅನ್ಸಾರಿ ಎಂಬ 20 ರಿಂದ 45 ವರ್ಷ ವಯಸ್ಸಿನವರು ಇದ್ದರು.

ಕಿರಿದಾದ ಜಾಗದಲ್ಲಿ ಕಲ್ಲು, ಮಣ್ಣು ಕೊರೆದು ಕೊಳವೆ ಅಳವಡಿಸಿದ ಈ ತಂಡದ ಸಾಹಸಕ್ಕೆ ಇಡೀ ದೇಶ ಸಲಾಂ ಹೇಳಿದೆ. ಈ ನಿಪುಣ ‘ಇಲಿ ಬಿಲ’ ತಂಡದ ಸದಸ್ಯರು ದೆಹಲಿ ಜಲ ಮಂಡಳಿಯಲ್ಲಿ ಪೈಪ್ ಅಳವಡಿಕೆಗೆ ಸುರಂಗ ಕೊರೆದು ಅಭ್ಯಾಸ ಹೊಂದಿದ್ದಾರೆ.

41 ಜನರ ಜೀವ, ಅವರ ಕುಟುಂಬದ ಸಾವಿರಾರು ಕನಸುಗಳನ್ನು ಜೀವಂತವಾಗಿಸಿ ಇಲಿ ಬಿಲ ತಂಡದ ನಿಪುಣರು ಬುಧವಾರ ಸಿಲ್ಕ್ಯಾರದಿಂದ ತಮ್ಮ ಊರಿಗೆ ತೆರಳಿದ್ದಾರೆ. ಹೊರಡುವ ಮುಂಚೆ ತಮ್ಮ ಕೆಲಸ ಕುರಿತು ಹಸನ್ ಮಾತನಾಡಿದ್ದು, ನಾವು ದೆಹಲಿ ಜಲ ಮಂಡಳಿಗಾಗಿ ಕೆಲಸ ಮಾಡುವವರು. ಇಲಿಗಳಂತೆ ಸುರಂಗ ಕೊರೆದು ನೀರಿನ ಪೈಪ್ ಅಳವಡಿಸುವುದು ನಮ್ಮ ಕೆಲಸ. ನಮ್ಮಲ್ಲಿ ಇಬ್ಬರು ಮುಂದೆ ಹೋಗುತ್ತಾರೆ. ಅವರಲ್ಲಿ ಒಬ್ಬರು ಮಣ್ಣು ಕರೆಯುತ್ತಾರೆ. ಇನ್ನೊಬ್ಬರು ಅದನ್ನು ಬಕೆಟ್‌ನಲ್ಲಿ ತುಂಬಿಸಿ ಕೊಡುತ್ತಾರೆ. ಉಳಿದವರು ಮಣ್ಣು ಹೊರಗೆಳೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕಾರ್ಮಿಕರ ಜೀವ ರಕ್ಷಣೆಯ ಜೊತೆಗೆ ಇಲಿ ಬಿಲ ತಂಡದ ಸದಸ್ಯರು ಮಾನವೀಯತೆ, ಭಾರತದ ಬಹುತ್ವದ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ್ದಾರೆ.

ಇದನ್ನೂ ಓದಿ : ಅಝಾನ್‌ಗೆ ಧ್ವನಿವರ್ಧಕ ಬಳಸಿದರೆ ಶಬ್ಧಮಾಲಿನ್ಯವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ: ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read