Homeಕರ್ನಾಟಕಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು: ಭಾಗ-2

ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು: ಭಾಗ-2

- Advertisement -
- Advertisement -

(ರಾಜ್ಯದ ಹೊಸ ಸರಕಾರವು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿಯನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಟಿಪ್ಪಣಿಗಳು)

ಕರ್ನಾಟಕದ ವಿಶ್ವವಿದ್ಯಾಲಯಗಳು

ಕರ್ನಾಟಕದಲ್ಲಿ ಕ್ಲಸ್ಟರ್ ಮತ್ತು ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯಗಳನ್ನು ಒಳಗೊಂಡಂತೆ (ಖಾಸಗಿ ವಿವಿಗಳನ್ನು ಹೊರತುಪಡಿಸಿ) ಸುಮಾರು 24 ವಿಶ್ವವಿದ್ಯಾಲಯಗಳಿವೆ. ಈ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮತ್ತು ಸಂಶೋಧನೆಗಳು ಕುಂಟುತ್ತಾ ಸಾಗಿವೆ. ವಿವಿಗಳ ಇಂದಿನ ಮುಖ್ಯ ಸಮಸ್ಯೆ ಏನೆಂದರೆ ಬೋಧನೆ ಮತ್ತು ಸಂಶೋಧನೆ ಮಾಡಲು ಸೂಕ್ತ ಮಾನವ ಸಂಪನ್ಮೂಲ ಇಲ್ಲದೇ ಇರುವುದು, ಜೊತೆಗೆ ಸರಕಾರದಿಂದ ಸೂಕ್ತ ಅನುದಾನ ಸಿಗದೇ ಇರುವುದು. ಸರಕಾರಗಳು ಕಾಲದಿಂದ ಕಾಲಕ್ಕೆ ಉನ್ನತ ಶಿಕ್ಷಣಕ್ಕಾಗಿ ನೀಡುವ ಅನುದಾನವನ್ನು ಕಡಿತ ಮಾಡುತ್ತಲೇ ಇವೆ ಮತ್ತು ಆಯಾ ವಿವಿಗಳೇ ತಮಗೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳುತ್ತಿವೆ. ತಮ್ಮ ಸಂಪನ್ಮೂಲಗಳನ್ನು ತಾವೇ ಉತ್ಪಾದಿಸಿಕೊಳ್ಳಲು ವಿವಿಗಳು ಕಾರ್ಖಾನೆಗಳಲ್ಲ. ಇದರ ಜೊತೆಗೆ ವಿವಿಧ ಪಕ್ಷಗಳ ಸರಕಾರಗಳು ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಮತ್ತು ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಕುಲಪತಿಗಳ, ಕುಲಸಚಿವರ ಮತ್ತು ಕಾರ್ಯನಿರ್ವಾಹಕ ಪರಿಷತ್ತು (ಸಿಂಡಿಕೇಟ್) ವಿದ್ಯಾವಿಷಯಕ ಪರಿಷತ್ತು (ಸೆನೆಟ್)ಗಳ ನೇಮಕಾತಿಯಲ್ಲಿ ಸರಕಾರಗಳು ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿವೆ. ಆದರೆ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ತನ್ನ ಗುಪ್ತ ಅಜೆಂಡಾಗಳನ್ನು ಜಾರಿ ಮಾಡುವ ಕೀಲಿ ಯಂತ್ರಗಳನ್ನು ವಿವಿಗಳಿಗೆ ನೇಮಕ ಮಾಡುತ್ತದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬಂದಾಗ ಜಾತಿ, ಹಣ ಮತ್ತು ಪ್ರಭಾವಗಳೇ ಮುಖ್ಯವಾಗುತ್ತವೆ. ಈ ಎರಡೂ ಪಕ್ಷಗಳಲ್ಲಿನ ಪ್ರಭಾವಿ ಸಚಿವರು ತಮ್ಮ ಜಾತಿಯವರನ್ನು, ಹಣ ಕೊಡುವ ತಾಕತ್ತಿರುವವರನ್ನು ಮತ್ತು ಶೈಕ್ಷಣಿಕವಾಗಿ ಯಾವುದೇ ಸಾಧನೆಗಳಿರದವರನ್ನು ವಿವಿಗಳಿಗೆ ಕುಲಪತಿ/ಕುಲಸಚಿವರನ್ನಾಗಿ ನೇಮಿಸುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಬಿಜೆಪಿಗಿರುವಂತೆ ಗುಪ್ತ ಅಜೆಂಡಗಳಿರದೇ ಇದ್ದರೂ ವಿವಿಗಳನ್ನು ತಮ್ಮ ಖಾಸಗಿ ಜಹಗೀರುಗಳೆಂದೇ ಭಾವಿಸುತ್ತವೆ. ಹೀಗಾಗಿ ವಿಶ್ವವಿದ್ಯಾಲಯಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಲು ಅಸಮರ್ಥರು, ಭ್ರಷ್ಟರು, ಜಾತಿವಾದಿಗಳು ಮತ್ತು ಕೋಮುವಾದಿಗಳು ಸತತವಾಗಿ ನೇಮಕವಾಗುತ್ತಿದ್ದಾರೆ. ಇನ್ನು ಸಿಂಡಿಕೇಟ್ ಮತ್ತು ಸೆನೆಟ್ ಸಮಿತಿಗಳಿಗೆ ಆಯಾ ಪಕ್ಷಗಳ ಅತೃಪ್ತ ಪುಢಾರಿಗಳನ್ನು ನೇಮಿಸಲಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜನಪರವಾಗಿ ಕೆಲಸ ಮಾಡುವ ಅಧ್ಯಾಪಕರು ಕಳೆದ ಒಂದೂವರೆ ದಶಕದಿಂದ ನಿರಂತರವಾಗಿ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಕಳೆದ ಒಂದೂವರೆ ದಶಕದಿಂದ ಕೇಶವಕೃಪದ ಜನ ಎಲ್ಲಾ ವಿವಿಗಳ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ತಮಾಷೆಯ ಸಂಗತಿಯೆಂದರೆ, ಕಾಂಗ್ರೆಸ್ ಪಕ್ಷದ ಸರಕಾರವಿದ್ದಾಗಲೂ ಮಾರುವೇಷ ಧರಿಸಿದ ಆರೆಸ್ಸೆಸ್ ಕುಳಗಳು ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಜಾಗಗಳಿಗೆ ನೇಮಕವಾಗಿಬಿಡುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳಿಗೆ ಇರುವ ಮುಖ್ಯವಾದ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು.

  • 2010ರ ನಂತರ ವಿಶ್ವವಿದ್ಯಾಲಯಗಳ ಮೇಲೆ ಸರಕಾರಗಳು ವಿಪರೀತ ಹಸ್ತಕ್ಷೇಪ ಮಾಡಲಾರಂಭಿಸಿವೆ. ಕುಲಪತಿಗಳ ನೇಮಕದಲ್ಲಿ ಮಿತಿಮೀರಿದ ಸ್ವಜನಪಕ್ಷಪಾತ ಮತ್ತು ಭಯಾನಕ ಭ್ರಷ್ಟಾಚಾರ ನಡೆಯುತ್ತಿದೆ. (2013ರಿಂದ 2018ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲಿ ಹಲವು ಯೋಗ್ಯ ವಿದ್ವಾಂಸರು ಕುಲಪತಿಗಳಾಗಿದ್ದು ಮಾತ್ರ ಇದಕ್ಕೆ ಅಪವಾದ) ವಿಶ್ವವಿದ್ಯಾಲಯಗಳ ಮೂಲ ಆಶಯಗಳನ್ನು ನಾಶ ಮಾಡಲೆಂದೇ ಬಲಪಂಥೀಯ ಬಿಜೆಪಿ ಸರಕಾರ ಇಂತಹ ದುರುಳ ವ್ಯಕ್ತಿಗಳನ್ನು ಕುಲಪತಿಗಳನ್ನಾಗಿ ನೇಮಿಸುತ್ತಾ ಬಂದಿದೆ. ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ನಾಶವಾಗಿರುವ ಇಂತಹ ಕುಲಪತಿಗಳನ್ನು ಬಳಸಿಕೊಂಡು ವಿಶ್ವವಿದ್ಯಾಲಯಗಳಲ್ಲಿ ಯಾವ ಸಂಶೋಧನೆಗಳೂ ನಡೆಯದಂತೆ ಮಾಡಲಾಗಿದೆ. ಜನಪರವಾದ ಅಧ್ಯಾಪಕರನ್ನು ಕುಗ್ಗಿಸುವ ಮತ್ತು ಅವರನ್ನು ಸಮಾಜಮುಖಿ ಕೆಲಸಗಳಿಂದ ವಿಮುಖವಾಗಿಸುವಲ್ಲಿ ಬಲಪಂಥೀಯರು ಈಗಾಗಲೆ ಯಶಸ್ವಿಯಾಗಿದ್ದಾರೆ.
  • ವಿಶ್ವವಿದ್ಯಾಲಯಗಳಲ್ಲಿನ ಆಡಳಿತವು ಸುಗಮವಾಗಿ ನಡೆಯಲು ಸರಕಾರವು ಸಿಂಡಿಕೇಟ್ ಮತ್ತು ಸೆನೆಟ್ ಎಂಬ ಸಮಿತಿಗಳನ್ನು ನೇಮಿಸುತ್ತದೆ. ಕಳೆದ ಒಂದೂವರೆ ದಶಕದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸಮಿತಿಗಳಿಗೆ ಮತ್ತು ಸೆನೆಟ್‌ಗಳಿಗೆ ಆಯಾ ರಾಜಕೀಯ ಪಕ್ಷಗಳು ತಮ್ಮ ಅತೃಪ್ತ ಕಾರ್ಯಕರ್ತರನ್ನು ನಾಮಕರಣ ಮಾಡಿವೆ. ಈ ಸಮಿತಿಗಳು ವಿವಿಗಳ ಉನ್ನತಿಗೆ ಶ್ರಮಿಸದೆ, ಉನ್ನತ ಶಿಕ್ಷಣ ಸಂಸ್ಥೆಗಳ ಪತನಕ್ಕೆ ಕಾರ್ಯನಿರ್ವಹಿಸುತ್ತಿವೆ. ಇಪ್ಪತ್ತು ವರ್ಷಗಳ ಹಿಂದೆ ಯೋಗ್ಯರು ಮತ್ತು ವಿದ್ವಾಂಸರು ಈ ಎರಡೂ ಸಮಿತಿಗಳಿಗೆ ನೇಮಕವಾಗುತ್ತಿದ್ದರು. ಆಗ ವಿಶ್ವವಿದ್ಯಾಲಯಗಳು ಅವರ ಮಾರ್ಗದರ್ಶನದಲ್ಲಿ ಸರಿದಾರಿಯಲ್ಲಿ ಸಾಗುತ್ತಿದ್ದವು. ಆದರೆ, ಕಳೆದ ಒಂದೂವರೆ ದಶಕದಿಂದ ಕೋಮುವಾದಿಗಳು ವಿಶ್ವವಿದ್ಯಾಲಯಗಳನ್ನು ಪ್ರವೇಶಿಸಿ ಅಲ್ಲಿ ಪ್ರಗತಿಪರವಾಗಿ ಕೆಲಸ ಮಾಡುವ ಪ್ರಾಧ್ಯಾಪಕರನ್ನು ನೈತಿಕವಾಗಿ ಕುಗ್ಗಿಸುವ ಮತ್ತು ಅವರನ್ನು ವಿನಾಕಾರಣ ಕಿರುಕುಳ ಕೊಟ್ಟು ಅಮಾನತು ಮಾಡಿಸುವ ಘನಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಪರಿಹಾರಗಳು:

  1. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ಗುಣಾತ್ಮಕ ಮತ್ತು ಪರಿಣಾಮಾತ್ಮಕ ಆಯ್ಕೆ ಪ್ರಕ್ರಿಯೆಯನ್ನು ರೂಪಿಸಬೇಕು. ಸರಕಾರವು ಅರ್ಜಿಗಳನ್ನು ಆಹ್ವಾನಿಸಿ ಕುಲಪತಿಗಳನ್ನು ಆಯ್ಕೆ ಮಾಡದೆ, ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ವಿದ್ವಾಂಸರ ಸಮಿತಿಯೊಂದನ್ನು ರಚಿಸಿ, ಈ ಸಮಿತಿಗೆ ಕುಲಪತಿಗಳನ್ನು ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು. ಕುಲಪತಿಯಾಗಿ ನೇಮಕವಾಗುವ ವಿದ್ವಾಂಸನ ವೈಯಕ್ತಿಕ ಮತ್ತು ಶೈಕ್ಷಣಿಕ ಸಾಧನೆಗಳನ್ನು ಸಾರ್ವಜನಿಕಗೊಳಿಸಿ ಜನಾಭಿಪ್ರಾಯಗಳನ್ನು ದಾಖಲಿಸುವಂತಾಗಬೇಕು. ಕುಲಪತಿಗಳ ಆಯ್ಕೆಯಲ್ಲಿ ಕಡ್ಡಾಯವಾಗಿ ಸಾಮಾಜಿಕ ನ್ಯಾಯವನ್ನು ಪಾಲಿಸುವ ನಿಯಮಗಳನ್ನು ರೂಪಿಸಬೇಕು. ಗುರುತರ ಆರೋಪಗಳನ್ನು ಎದುರಿಸುವ, ಭ್ರಷ್ಟಾಚಾರದಲ್ಲಿ ತೊಡಗುವ ಕುಲಪತಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ (Impeachment) ನಿಯಮಗಳನ್ನು ರೂಪಿಸಬೇಕು. ಭ್ರಷ್ಟಾಚಾರ ಮಾಡಿ ಸಿಕ್ಕಿ ಹಾಕಿಕೊಳ್ಳುವ ಕುಲಪತಿ/ಕುಲಸಚಿವರುಗಳಿಗೆ ಗರಿಷ್ಟ ಪ್ರಮಾಣದ ಶಿಕ್ಷೆಯನ್ನು ನೀಡುವಂತಾಗಬೇಕು.
  2. ವಿವಿಗಳ ಸಿಂಡಿಕೇಟ್ ಮತ್ತು ಸೆನೆಟ್‌ಗಳನ್ನು ಶೀಘ್ರ ರದ್ದುಪಡಿಸಿಬಿಟ್ಟಲ್ಲಿ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳಿಗೆ ಯಾವ ಧಕ್ಕೆಯೂ ಆಗುವುದಿಲ್ಲ. (ಈ ಕುರಿತು ಆಯಾ ವಿವಿಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಭಿಪ್ರಾಯಗಳನ್ನು ಬೇಕಾದರೆ ಕೇಳಿ ಜನಮತ ಗಣನೆ ಮಾಡಬಹುದು) ಇದರ ಬದಲಿಗೆ, ಉನ್ನತ ಶಿಕ್ಷಣದಲ್ಲಿ ಹಲವು ಸಾಧನೆಗಳನ್ನು ಮಾಡಿದ ನಾಲ್ಕೈದು ಜನ ಉನ್ನತ ಮಟ್ಟದ ವಿದ್ವಾಂಸರ ಸಮಿತಿಯನ್ನು ರಚಿಸಿ, ಅದನ್ನು ಕೇವಲ ಶಿಕ್ಷಣ ಪರಿಷತ್ತು (Academic Council) ಎಂದು ಪರಿಗಣಿಸಿ ಅಸ್ತಿತ್ವಕ್ಕೆ ತಂದರೆ ಒಳಿತಾಗುತ್ತದೆ. ಈ ಸಮಿತಿಯು ವಿವಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಸದಾ ಉತ್ತರದಾಯಿಗಿರುವಂತೆ ಮಾಡುವ ಹೊಣೆಗಾರಿಕೆಯನ್ನು ನೀಡಬೇಕು.
  3. ಅರ್ಹ ಬೋಧಕ ಸಿಬ್ಬಂದಿಯ ಕೊರತೆ ವಿಶ್ವವಿದ್ಯಾಲಯಗಳ ಪ್ರಗತಿಯನ್ನು ಇನ್ನಿಲ್ಲದಂತೆ ಕುಗ್ಗಿಸಿದೆ. ಸರಕಾರವು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿಯನ್ನು ಹಲವಾರು ವರ್ಷಗಳಿಂದ ನೇಮಕ ಮಾಡಿಲ್ಲ. ಇತ್ತೀಚೆಗೆ ಕೆಲವು ವಿವಿಗಳಲ್ಲಿ ಆದ ಕೆಲವು ನೇಮಕಾತಿಗಳಲ್ಲಿ ಭೀಕರವಾದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಸರಕಾರವು ಬೋಧಕ ಸಿಬ್ಬಂದಿಯ ನೇಮಕಾತಿಯನ್ನು ತುರ್ತಾಗಿ ಮಾಡಬೇಕು. ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು (ಎಲ್ಲಾ ವಿವಿಗಳಿಗೆ) ಒಂದು ರಾಜ್ಯಮಟ್ಟದ ಉನ್ನತ ಸಮಿತಿಯನ್ನು ರಚಿಸಬೇಕು. ಬೋಧಕರನ್ನು ಆಯ್ಕೆ ಮಾಡುವ ನೇಮಕಾತಿ ಮಂಡಳಿ (Board of Appointment)ಯು ತೆಗೆದುಕೊಂಡ ನಿರ್ಧಾರಗಳನ್ನು ಈ ಉನ್ನತ ಸಮಿತಿಯು ಪರಿಶೀಲಿಸಬೇಕು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಪ್ಪೆಸಗಿದ ಸಿಬ್ಬಂದಿಗಳನ್ನು ಯಾವ ಮುಲಾಜೂ ನೋಡದೆ ನೌಕರಿಯಿಂದ ಶಾಶ್ವತವಾಗಿ ತೊಲಗಿಸಬೇಕು
  4. ಸೂಕ್ತ ಅನುದಾನದ ಕೊರತೆ ಎಲ್ಲ ವಿವಿಗಳ ಸಾಮಾನ್ಯ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿನ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗೆ ಕೆಲವು ಹಣಕಾಸಿನ ಮೂಲಗಳಿದ್ದರೂ ಸಹ ಅದು ಸಾಲುತ್ತಿಲ್ಲ. ಸರಕಾರಗಳು ಉನ್ನತ ಶಿಕ್ಷಣಕ್ಕಾಗಿ ಆಯವ್ಯಯದಲ್ಲಿ ಮೀಸಲಾಗಿಡುವ ಅನುದಾನ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಬಂದಿದೆ. ಒಂದು ನಾಡಿನ ಪರಿಸರವು ನಿರುಮ್ಮಳವಾಗಿರಬೇಕೆಂದರೆ ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಜೀವಂತವಾಗಿರಬೇಕು. ಕೇಂದ್ರ ಸರಕಾರದ ಅಧೀನದಲ್ಲಿರುವ ಯುಜಿಸಿಯಂತಹ ಸಂಸ್ಥೆಗಳು ವಿವಿಗಳಿಗೆ ಮತ್ತು ಪದವಿ ಕಾಲೇಜುಗಳಿಗೆ ಸಂಶೋಧನೆಗೆಂದು ನೀಡುತ್ತಿದ್ದ ಅನುದಾನವನ್ನು 2014ರಿಂದ ನಿಲ್ಲಿಸಲಾಗಿದೆ. ಇದರಿಂದಾಗಿ ಯಾವ ಹಣಕಾಸಿನ ಮೂಲಗಳಿಲ್ಲದ ವಿಶ್ವವಿದ್ಯಾಲಯಗಳು ಜಡವಾಗುವ ಹಂತ ತಲುಪಿವೆ. ರಾಜ್ಯ ಸರಕಾರವು ಉನ್ನತ ಶಿಕ್ಷಣಕ್ಕೆ ಆಯವ್ಯಯದಲ್ಲಿ ಹೆಚ್ಚು ಅನುದಾನವನ್ನು ಮೀಸಲಿಡಬೇಕಿದೆ.ಇದನ್ನೂ ಓದಿ: ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು
  5. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ/ಶಿಷ್ಯ ವೇತನಗಳನ್ನು 2014ರಿಂದ ನಿಲ್ಲಿಸಲಾಗಿದೆ. ವಿವಿಗಳಲ್ಲಿ ಸಮಾಜವಿಜ್ಞಾನವನ್ನೂ ಸೇರಿದಂತೆ ಮಾನವಿಕ ವಿಷಯಗಳಲ್ಲಿ ಅಧ್ಯಯನ ಮಾಡಲು ಹೆಚ್ಚಾಗಿ ಬರುತ್ತಿರುವ ತಳಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸೂಕ್ತ ಶಿಷ್ಯವೇತನ ಸಿಗುವಂತಾಗಬೇಕು. ಆಗ ಮಾತ್ರ ಸಮಾಜದ ಬೇರೆಬೇರೆ ಸ್ತರಗಳಿಂದ ಬಂದ ಈ ವಿದ್ಯಾರ್ಥಿಗಳು ನಾಡನ್ನು ಕಟ್ಟುವ ವಿಶಿಷ್ಟವಾದ ತಿಳವಳಿಕೆಯನ್ನು ಸೃಷ್ಟಿಸಬಲ್ಲರು.
  6. ಎಲ್ಲದಕ್ಕಿಂತ ಹೆಚ್ಚಾಗಿ, ವಿಶ್ವವಿದ್ಯಾಲಯಗಳ ಒಳಗೆ ನಡೆಯುವ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಕೇಶವಕೃಪ ನೇರವಾಗಿ ನಿಯಂತ್ರಿಸುತ್ತಿದೆ. ವಿವಿಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಜನಪರವಾಗಿ ಕೆಲಸ ಮಾಡುವ ಪ್ರಗತಿಪರ ಪ್ರಾಧ್ಯಾಪಕರು ಕೇಶವಕೃಪದ ದಾಳಿಗೆ ಒಳಗಾಗುತ್ತಿದ್ದಾರೆ. ವಾದಿರಾಜ ಸಾಮರಸ್ಯ, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥರಂತಹ ಜನ ಉನ್ನತ ಶಿಕ್ಷಣವನ್ನು ಕೇಸರೀಕರಣ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಬಹಳಷ್ಟು ವಿವಿಗಳು ಈಗ ಆರೆಸ್ಸೆಸ್ ಕೇಂದ್ರಗಳಾಗಿಬಿಟ್ಟಿವೆ. ಕಲಬುರ್ಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರೆಸ್ಸೆಸ್‌ನ ಬೈಠಕ್‌ಗಳು ಹಗಲುರಾತ್ರಿ ನಡೆಯುತ್ತಿವೆ. ಅಲ್ಲಿನ ಕುಲಸಚಿವನೊಬ್ಬ ಮೋಹನ್ ಭಾಗವತ್ ಅವರ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಶೀಘ್ರ ನಿವಾರಿಸಬೇಕು.
  7.  ಯುಜಿಸಿಯಿಂದ ಸ್ಥಾಪಿಸಲ್ಪಟ್ಟಿರುವ ನ್ಯಾಕ್ (NACC) ಸಂಸ್ಥೆಯು ದೇಶದ ಎಲ್ಲ ವಿಶ್ವವಿದ್ಯಾಲಯಗಳ ಶ್ರೇಯಾಂಕವನ್ನು ನಿರ್ಧರಿಸುತ್ತದೆ. ಈ ಸಂಸ್ಥೆಯು ಕಳೆದ ಒಂದು ದಶಕದಿಂದ ವಾಣಿಜ್ಯ ಪದವಿಗಳನ್ನು ನೀಡುವ ಖಾಸಗಿ/ಕಾರ್ಪೊರೆಟ್ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅಂಕಗಳನ್ನು ನೀಡುತ್ತಿದೆ. ನ್ಯಾಕ್ ಸಂಸ್ಥೆಯ ಇತ್ತೀಚಿನ ಮಾನದಂಡಗಳ ಪ್ರಕಾರ ಸ್ಥಳೀಯ ವಿಶ್ವವಿದ್ಯಾಲಯಗಳ ಜನಪರವಾದ ಆಶಯಗಳು ನಿರುಪಯುಕ್ತ. ಅದರಲ್ಲೂ ಮಾನವಿಕ ವಿಷಯಗಳಲ್ಲಿ ಪದವಿಗಳನ್ನು ನೀಡುವ ಮತ್ತು ಸಮಾಜವಿಜ್ಞಾನಗಳಲ್ಲಿ ಹೆಚ್ಚಿನ ಸಂಶೋಧನೆ ಮಾಡುವ ರಾಜ್ಯಗಳ ವಿಶ್ವವಿದ್ಯಾಲಯಗಳಿಗೆ ಈ ಸಂಸ್ಥೆಯು ಹೆಚ್ಚಿನ ಅಂಕಗಳನ್ನು ನೀಡುವುದಿಲ್ಲ. ಇದರಿಂದಾಗಿ ಸರಕಾರ ನಡೆಸುವ ವಿವಿಗಳು ಒಕ್ಕೂಟ ಸರಕಾರದಿಂದ (ಯುಜಿಸಿ/ಮಾನವ ಸಂಪನ್ಮೂಲ ಸಚಿವಾಲಯದಿಂದ) ಅನುದಾನ ಪಡೆಯುವಲ್ಲಿ ಹಿಂದೆಬೀಳುತ್ತಿವೆ. ಸ್ಥಳೀಯ ಶಿಕ್ಷಣ ಸಂಸ್ಥೆಗಳನ್ನು ಮುಗಿಸಿಬಿಡಲು ಒಕ್ಕೂಟ ಸರಕಾರ ಈ ಮೂಲಕ ಒಂದು ಹುನ್ನಾರ ನಡೆಸುತ್ತಿದೆ.

ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ ಅವುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಒಂದು ‘ಉನ್ನತ ಶಿಕ್ಷಣ ವಿಚಕ್ಷಣ ಪರಿಷತ್ತ’ನ್ನು ರಾಜ್ಯ ಸರಕಾರ ನೇಮಿಸಬೇಕು. ಇದು ನ್ಯಾಕ್ ಸಂಸ್ಥೆಯಂತೆ ವಿವಿಗಳನ್ನು ಮೌಲ್ಯಮಾಪನ ಮಾಡಿ ಅವುಗಳಿಗೆ ದರ್ಜೆಗಳನ್ನು ನೀಡಬೇಕು. ಆಯಾ ವಿವಿಗಳು ಪಡೆಯುವ ಅಂಕಗಳನ್ನು ಆಧರಿಸಿ ರಾಜ್ಯ ಸರಕಾರ ಅನುದಾನವನ್ನು ನಿಗದಿಪಡಿಸಬೇಕು. ಇದರ ಜೊತೆಗೆ, ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡುವ ವಿವಿಗಳ ಲೋಪಗಳನ್ನು ಅಧ್ಯಯನ ಮಾಡಿ ಅವುಗಳನ್ನು ಸರಿಪಡಿಸಬೇಕು.

8. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಆಯಾ ವಿವಿಗಳ ಕುಲಪತಿಗಳು ಶುದ್ಧ ಕಮಿಷನ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ‘ಕುಲಪತಿಯಾಗಲು/ಕುಲಸಚಿವನಾಗಲು ತಾನು ಇಂತಿಷ್ಟು ಲಂಚ ಕೊಟ್ಟು ಬಂದಿದ್ದೇನೆ. ಈಗ ಆ ಹಣವನ್ನು ತಾನು ಹಿಂಪಡೆದರೆ ಏನು ತಪ್ಪು’ ಎಂದು ಸಾರ್ವಜನಿಕವಾಗಿ ತಮ್ಮ ಭ್ರಷ್ಟಾಚಾರವನ್ನು ನ್ಯಾಯಬದ್ಧಗೊಳಿಸುವ ಕುಲಪತಿ/ಕುಲಸಚಿವರೇ ಇಲ್ಲಿ ಹೆಚ್ಚಾಗಿದ್ದಾರೆ. ಹಣ ದೋಚಲೆಂದೇ, ವಿಶ್ವವಿದ್ಯಾಲಯಗಳಿಗೆ ಬೇಡವಾದ ಕಟ್ಟಡಗಳನ್ನು ಕಟ್ಟಿಸುವುದು, ಅನಗತ್ಯವಾಗಿ ಪೀಠೋಪಕರಣ/ ಪಾಠೋಪಕರಣಗಳನ್ನು ಖರೀದಿಸುವ ಕೆಲಸಗಳಿಗೆ ಇವರು ಕೈ ಹಾಕುತ್ತಾರೆ. ವಿಶ್ವವಿದ್ಯಾಲಯಗಳ ಅಗತ್ಯಗಳಿಗೆ ಮಾತ್ರ ಕಟ್ಟಡ ಕಟ್ಟುವುದಕ್ಕೆ ಸರಕಾರ ಅನುಮತಿ ನೀಡಬೇಕು. ಈ ಕಟ್ಟಡಗಳನ್ನು ಸರಕಾರಿ/ಅರೆಸರಕಾರಿ ಸಂಸ್ಥೆಗಳ ಮೂಲಕ (ಉದಾ: ಲ್ಯಾಂಡ್ ಆರ್ಮಿ) ಸರಕಾರವೇ ನಿರ್ಮಿಸಿಕೊಡಬೇಕು. ಈ ಕುಲಪತಿ/ಕುಲಸಚಿವರಿಗೆ ಕೇವಲ ಶೈಕ್ಷಣಿಕ ಚಟುವಟಿಕೆಗಳತ್ತ ಗಮನ ಹರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು. ಆದರೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಸರಕಾರ ಕಿತ್ತುಕೊಳ್ಳಬಾರದು.

9. ಕಳೆದ ಹತ್ತು ವರ್ಷಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಅನೇಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿಕೊಂಡಿರುವ ವಿವಿಗಳು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ಈ ಮೂಲಕ ಒಂದು ಪಕ್ಷದ ಕಾರ್ಯಕರ್ತರನ್ನು, ಕೆಲವೇ ಜಾತಿಗಳಿಗೆ ಸೇರಿದವರನ್ನು, ಹಣಕೊಟ್ಟವರನ್ನು ಈ ಹುದ್ದೆಗಳಿಗೆ ನೇಮಕ ಮಾಡಿದೆ. ಈ ಎಲ್ಲಾ ಹುದ್ದೆಗಳನ್ನು ಸರ್ಕಾರವು ನಿಯಮಾನುಸಾರ ಭರ್ತಿ ಮಾಡಿಕೊಂಡು ಈವರೆಗೆ ಅಕ್ರಮವಾಗಿ ಮತ್ತು ಯಾವುದೇ ಮೀಸಲಾತಿ ರೋಸ್ಟರ್ ಪಾಲಿಸದೆ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಎಲ್ಲರನ್ನೂ ಬಿಡುಗಡೆಗೊಳಿಸಬೇಕು.

10. ಅತ್ಯಂತ ಮುಖ್ಯವಾದ ಸಂಗತಿ ಯಾವುದೆಂದರೆ; ಉನ್ನತ ಶಿಕ್ಷಣ ಸಂಸ್ಥೆಗಳನ್ನು ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ಕಟ್ಟುವ ಪ್ರತಿಭಾವಂತರನ್ನು ವಿವಿಗಳಿಗೆ ನೇಮಕ ಮಾಡಬೇಕು. ನಾಗಪುರ, ಕೇಶವಕೃಪದ ಜನರು ವಿವಿಗಳನ್ನು ನಿಯಂತ್ರಿಸುವುದಕ್ಕೆ ಅವಕಾಶಗಳಿರಬಾರದು. ಇದಕ್ಕಾಗಿ ವಿವಿಗಳ ಆಡಳಿತಕ್ಕಾಗಿ ರೂಪಿಸಲಾದ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು.

(ಮುಂದಿನ ವಾರ: ಕರ್ನಾಟಕದಲ್ಲಿನ ಸಂಶೋಧನಾ ಸಂಸ್ಥೆಗಳ ಅವಲೋಕನ)

ಅಲ್ಲಮ, ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...