Homeಕರ್ನಾಟಕಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು

ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು

- Advertisement -
- Advertisement -

(ರಾಜ್ಯದ ಹೊಸ ಸರಕಾರವು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿಯನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಟಿಪ್ಪಣಿಗಳು)

ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆದು ಸರಕಾರ ರಚಿಸಿದ ಮೇಲೆ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ನೇಮಕಗೊಳ್ಳಲು ಜನರ ನೂಕುನುಗ್ಗಲು ವಿಪರೀತವಾಗಿದೆ. ವಿಶ್ವವಿದ್ಯಾಲಯಗಳ ಕುಲಸಚಿವರಾಗಲು, ಕುಲಪತಿಗಳಾಗಲು ಮತ್ತು ಸಿಂಡಿಕೇಟ್ ಸದಸ್ಯರಾಗಲು ಹೊಸ/ಹಳೆಯ ಮುಖಗಳು ಮಂತ್ರಿಗಳ ಮನೆ ಬಾಗಿಲುಗಳಿಗೆ ಎಡತಾಕುತ್ತಿವೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಇದು ಸಹಜ ಪ್ರಕ್ರಿಯೆ ಎಂಬಂತೆ ನಡೆದುಹೋಗುತ್ತದೆ. ಬಿಜೆಪಿಯು ಅಧಿಕಾರಕ್ಕೆ ಬಂದಾಗ ಇಂತಹ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ತಮಗೆ ‘ಬೇಕಾದವರನ್ನು’ ನೇಮಿಸಿಕೊಳ್ಳುವ ಒಂದು ಸ್ಪಷ್ಟ ನೀತಿಯನ್ನು ಸಿದ್ಧ ಮಾಡಿಟ್ಟುಕೊಂಡಿದೆ. ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗ ‘ಇಂತಹ ಜನರನ್ನು’ ಮಾತ್ರ ಈ ಸಂಸ್ಥೆಗಳಿಗೆ ನೇಮಿಸಬೇಕು ಎಂಬ ಬದ್ಧತೆಯನ್ನು ಯಾವತ್ತೂ ರೂಢಿಸಿಕೊಂಡು ಬಂದಿಲ್ಲ. ಬಿಜೆಪಿ ಪಕ್ಷವು ಉನ್ನತ ಶಿಕ್ಷಣ ಸಂಸ್ಥೆ ಮತ್ತು ಅಕಾಡೆಮಿಗಳಂತಹ ಸಾಂಸ್ಕೃತಿಕ ಸಂಸ್ಥೆಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತದೆ. ಈ ಸಂಸ್ಥೆಗಳನ್ನು ಹೀಗೆ ಬಳಸಿಕೊಳ್ಳುವುದರ ಹಿಂದೆ ಬಿಜೆಪಿಗೆ ಒಂದು ಸ್ಪಷ್ಟವಾದ ಸೈದ್ಧಾಂತಿಕ ಸ್ಪಷ್ಟತೆ ಇದೆ. ಆರೆಸ್ಸೆಸ್ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರುವ ಕಾಲಾಳುಗಳನ್ನು ಇಂತಹ ಸಂಸ್ಥೆಗಳಿಗೆ ಬಿಜೆಪಿಯ ಮೂಲಕ ನೇಮಿಸುತ್ತದೆ. ಬಿಜೆಪಿ ಪಕ್ಷಕ್ಕೆ ಬೌದ್ಧಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಉನ್ನತೀಕರಿಸುವ ಮಹತ್ವಾಕಾಂಕ್ಷೆಯೇನೂ ಇಲ್ಲ. ಬದಲಿಗೆ, ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಂದ ಉತ್ಪನ್ನವಾಗಬಹುದಾದ ಜ್ಞಾನದ ಕುರಿತು ಸಂಘಪರಿವಾರ ಮತ್ತು ಬಿಜೆಪಿಯು ಆತಂಕಗೊಳ್ಳುತ್ತದೆ. ಜ್ಞಾನವು ಮನುಷ್ಯನನ್ನು ಅವನ ಎಲ್ಲ ಸಂಕೋಲೆಗಳಿಂದ ವಿಮೋಚನೆ ಪಡೆಯುವಂತೆ ಪ್ರೇರೇಪಿಸುತ್ತದೆ ಎಂಬ ಭಯವು ಮೂಲಭೂತವಾದಿ ಸಂಘಟನೆಗಳನ್ನು ಸದಾ ಕಾಡುತ್ತಿರುತ್ತದೆ. ತನ್ನ ಫ್ಯಾಸಿಸ್ಟ್ ಅಜೆಂಡಾಗಳನ್ನು ಅನುಷ್ಠಾನ ಮಾಡುವ ಏಜೆನ್ಸಿಗಳನ್ನಾಗಿ ಈ ಸಂಸ್ಥೆಗಳನ್ನು ಬಿಜೆಪಿಯು ಬಳಸಿಕೊಳ್ಳುತ್ತದೆ. ಇದಕ್ಕಾಗಿ ಬಿಜೆಪಿಯು ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಂತಹ ಖಾತೆಗಳನ್ನು ಆರೆಸ್ಸೆಸ್‌ನ ಕಟ್ಟಾ ಅನುಯಾಯಿಗಳಿಗೆ ಹಂಚಿಕೆ ಮಾಡುತ್ತದೆ. ಅಷ್ಟೇನೂ ಲಾಭದಾಯಕವಲ್ಲದ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸ್ಥಾನವನ್ನೂ ಕೂಡ ಪ್ರಖರ ಹಿಂದುತ್ವವಾದಿ ಶಾಸಕರಿಗೆ ಹಂಚುತ್ತದೆ. ಇನ್ನು ಶಿಕ್ಷಣ ಸಚಿವರನ್ನು ಕೇಶವಕೃಪವೇ ನೇರವಾಗಿ ನಿಯಂತ್ರಣ ಮಾಡುತ್ತ ತನಗೆ ಬೇಕಾದ ಪಠ್ಯ ಮತ್ತು ಬೋಧನಾ ವಿಧಾನಗಳನ್ನು ಜಾರಿಗೆ ತರಲು ಸದಾ ಪ್ರಯತ್ನಿಸುತ್ತಿರುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಯಾವ ಗೊತ್ತುಗುರಿಗಳಿಲ್ಲ. ಸಮಾಜವನ್ನು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಕಟ್ಟುವ ರಾಜಕೀಯ ಬದ್ಧತೆಯೂ ಇಲ್ಲ. ತನ್ನನ್ನು ಓಲೈಸುವ ಮತ್ತು ಹಾಡಿಹೊಗಳುವ ವ್ಯಕ್ತಿಗಳು ಯಾರೇ ಆಗಲಿ ಅವರನ್ನು ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಿಸಿಬಿಡುತ್ತದೆ. ಉನ್ನತಮಟ್ಟದ ಶೈಕ್ಷಣಿಕ ಚಟುವಟಿಕೆಗಳು ನಡೆಯುವ ವಿಶ್ವವಿದ್ಯಾಲಯಗಳಿಗೆ ಶುದ್ಧ ಅಪ್ರಯೋಜಕರನ್ನು ಕುಲಪತಿಗಳನ್ನಾಗಿ ನೇಮಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಕನ್ನಡ ಸಂಸ್ಕೃತಿ ಇಲಾಖೆ, ಉನ್ನತ ಮತ್ತು ಪ್ರಾಥಮಿಕ ಶಿಕ್ಷಣ ಖಾತೆಗಳು ಕಾಂಗ್ರೆಸ್ ಪಕ್ಷಕ್ಕೆ ಲಾಭ ತಂದುಕೊಡದ, ಯಾವ ಆಕರ್ಷಣೆಯೂ ಇಲ್ಲದ ಖಾತೆಗಳಾಗಿ ಭಾವಿಸಲ್ಪಟ್ಟಿವೆ. ಜನರ ಮನೋಲೋಕವನ್ನು ರೂಪಿಸುವ ಮತ್ತು ಹೊಸ ಮನುಷ್ಯನನ್ನು ಸೃಷ್ಟಿಸುವ ಶೈಕ್ಷಣಿಕ ಸಂಸ್ಥೆಗಳ ಕುರಿತು ಕಾಂಗ್ರೆಸ್ ಪಕ್ಷಕ್ಕೆ ವಿಪರೀತ ಅನಾದರವಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿ ಎಂಬುದು ಅನಾದಿಕಾಲದಿಂದಲೂ ಇಲ್ಲ. ಭಾರತದಂತಹ ಜನತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಭುತ್ವ (ಸರಕಾರ)ಕ್ಕೆ ಒಂದು ನಿಶ್ಚಿತ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿ ಎಂಬುದು ಇರಬೇಕಾಗುತ್ತದೆ. ಯಾಕಾಗಿ ಈ ನೀತಿಯ ಅವಶ್ಯಕತೆ ಎಂಬುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸೋಣ.

ಪ್ರಜಾಪ್ರಭುತ್ವದಲ್ಲಿ ಜನರು ಐದು ವರ್ಷ ಸುಮ್ಮನಿದ್ದು, ನಂತರ ಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತಚಲಾಯಿಸಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದು ಈಗ ಹಳೆಯ ಕಾಲದ ನಂಬಿಕೆ. ನಾಗರಿಕರು ಪ್ರಭುತ್ವವನ್ನು ಪ್ರಶ್ನಿಸಲು ಮತ್ತು ಪ್ರತಿಭಟನೆಗಳ ಮೂಲಕ ಜನಾಭಿಪ್ರಾಯಗಳನ್ನು ರೂಪಿಸಲು ಈಗ ಅನೇಕ ಮಾಧ್ಯಮ (Medium)ಗಳಿವೆ. ಸರಕಾರದ ನಡೆಗಳನ್ನು ಮತ್ತು ಅಧಿಕಾರ ಕೇಂದ್ರಗಳ ಒಳಸುಳಿಗಳನ್ನು ಅರ್ಥಮಾಡಿಕೊಳ್ಳುವುದು ಹಿಂದಿಗಿಂತಲೂ ಈಗ ಸುಲಭ. ಇದೇ ತಂತ್ರವನ್ನು ಬಿಜೆಪಿಯ ಐಟಿ ಕೇಂದ್ರಗಳು ಪರಿಣಾಮಕಾರಿಯಾಗಿ ಬಳಸಿದ ಕಾರಣಕ್ಕಾಗಿ ಫ್ಯಾಸಿಸ್ಟ್ ಗುಂಪುಗಳು ದೆಹಲಿಯ ಸಿಂಹಾಸನವನ್ನು ಹಿಡಿಯಲು ಸಾಧ್ಯವಾಯಿತು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಆ ಪಕ್ಷದ ರಾಜಕಾರಣಿಗಳು ಪ್ರಯತ್ನಿಸಿದ್ದು ಕಡಿಮೆ. ಆದರೆ ಆ ಪಕ್ಷವನ್ನು ಅಧಿಕಾರಕ್ಕೆ ತರಲು ರೂಪುಗೊಂಡ ಗುಪ್ತ ಸಮಾಲೋಚಕ ಮಂಡಳಿ (Think Tank)ಯೊಂದು ಮಾಡಿದ ಸಾಂಸ್ಕೃತಿಕ ರಾಜಕಾರಣವು ಬಿಜೆಪಿಯನ್ನು ಅಧಿಕಾರಕ್ಕೆ ತಂದಿತು. ಈ ಗುಪ್ತ ಸಮಾಲೋಚಕ ಮಂಡಳಿಯು ಜನರ ಭಾವಲೋಕವನ್ನು ಆವರಿಸಿಕೊಳ್ಳುವ ಮತ್ತು ಆ ಮೂಲಕ ಜನರ ಆಲೋಚನಾಕ್ರಮವನ್ನು ಮರುರೂಪಿಸುವ ಸಾಂಸ್ಕೃತಿಯ ನೀತಿಯನ್ನು ಸಿದ್ಧಪಡಿಸಿತು. ಇದರ ಜೊತೆಗೆ ಭಾರತದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಕೇಂದ್ರಗಳಾದ ವಿಶ್ವವಿದ್ಯಾಲಯಗಳ ಬೌದ್ಧಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಯಿತು. ಈ ವಿಶ್ವವಿದ್ಯಾಲಯಗಳಲ್ಲಿ ಉತ್ಪನ್ನವಾಗುವ ಸಾಮಾಜಿಕ ಚಿಂತನೆಗಳು ತನ್ನ ಅಸ್ತಿತ್ವಕ್ಕೆ ಘಾಸಿಯನ್ನುಂಟುಮಾಡುವಂತಿದ್ದಲ್ಲಿ ಅವುಗಳನ್ನು ಮಟ್ಟ ಹಾಕುವ ದಮನಕಾರಿ ನೀತಿಯನ್ನೂ ಬಿಜೆಪಿ ಪಕ್ಷ ರೂಪಿಸಿಕೊಂಡು ಬಂದಿದೆ. ತನ್ನ ಕಾರ್ಯಸಾಧನೆಗಾಗಿ ಬಿಜೆಪಿಯು ದಮನದ ಮಾನದಂಡವನ್ನಾದರೂ ಬಳಸಿ ತನ್ನ ಕಾರ್ಯಸೂಚಿಯನ್ನು ಅಸ್ತಿತ್ವಕ್ಕೆ ತರುತ್ತದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇಂತಹ ಕಾರ್ಯಸೂಚಿಯೇ ಇಲ್ಲ. ಬಿಜೆಪಿಯ ಮುಂದೆ ಕಾಂಗ್ರೆಸ್ ಪಕ್ಷವು ಮೂಲೆ ಸೇರಿದ ಹಳೆಯ ಕಾಲದ ಮುದಿ ಎತ್ತಿನಂತೆ ಕಾಣುತ್ತಿದೆ. ಫ್ಯಾಸಿಸ್ಟ್ ಗುಂಪುಗಳು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶತಮಾನಗಳಿಂದ ತಾಲೀಮು ನಡೆಸುತ್ತಾ ಬಂದಿವೆ. ‘ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜನರ ಆಲೋಚನೆಯನ್ನು ರೂಪಿಸುತ್ತವೆ, ಜನರು ತಮ್ಮ ವಿಮೋಚನೆಗಾಗಿ ಬೌದ್ಧಿಕ ವಲಯವನ್ನು ಆಶ್ರಯಿಸುತ್ತಾರೆ’ ಎಂಬ ಸತ್ಯವನ್ನು ಈ ಫ್ಯಾಸಿಸ್ಟ್ ಗುಂಪುಗಳು ನಂಬುತ್ತವೆ. ಇದೇ ಕಾರಣಕ್ಕಾಗಿ ಫ್ಯಾಸಿಸ್ಟರು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸದಾ ನಿಯಂತ್ರಿಸಲು ಬಯಸುತ್ತಾರೆ.

ಭಾರತದಲ್ಲಿನ ಸಮುದಾಯಗಳಿಗೆ ಹಲವು ಬಗೆಯ ಚಹರೆಗಳಿವೆ. ಜನಾಂಗ, ಜಾತಿ, ಧರ್ಮ, ಭಾಷೆ, ಆಧ್ಯಾತ್ಮ ಮತ್ತು ಸಂಸ್ಕೃತಿಗಳ ತಳಹದಿಯ ಮೇಲೆ ಹಲವು ಸಮುದಾಯಗಳು ತಮ್ಮ ಆತ್ಮಪ್ರತ್ಯಯಗಳನ್ನು ರೂಪಿಸಿಕೊಂಡು ಬಂದಿವೆ. ಜನರ ಅಂತಃಸ್ಥ ಜಗತ್ತಿನ ಈ ಬಗೆಯ ವೈವಿಧ್ಯತೆಗಳೇ ಭಾರತದ ಸಮಾಜದ ಪ್ರಧಾನ ಲಕ್ಷಣಗಳು. ಇಂತಹ ದೇಶಗಳಲ್ಲಿ ಜನಸಮುದಾಯಗಳಿಗೆ ತಮ್ಮ ವೈಶಿಷ್ಟತೆ ಮತ್ತು ಸಂಸ್ಕೃತಿಯ ಕುರಿತು ಅಭಿಮಾನವಿರುತ್ತದೆ ಮತ್ತು ಭಾವನಾತ್ಮಕ ನಿಲುವುಗಳಿರುತ್ತವೆ. ಧರ್ಮ, ದೈವ, ಜನ್ಮಭೂಮಿ, ಅಧ್ಯಾತ್ಮ, ಪರಂಪರೆ, ಭಾಷೆ, ಜಾತಿ ಮತ್ತು ಜನಾಂಗೀಯ ವೈಶಿಷ್ಟ್ಯಗಳ ಮೂಲಕ ರೂಪುಗೊಂಡ ವಿಭಿನ್ನ ಚಹರೆಗಳು (Identities) ಜನ ಸಮುದಾಯಗಳ ಭಾವಲೋಕಗಳನ್ನು ನಿರ್ಮಾಣ ಮಾಡುತ್ತಾ ಬಂದಿವೆ. ಸಮುದಾಯಗಳ ಈ ಭಾವಲೋಕವು ದಿಢೀರೆಂದು ಸೃಷ್ಟಿಯಾಗಿಲ್ಲ. ಮಾನವ ಸಮಾಜವು ವಿಕಾಸಗೊಳ್ಳಲು ಮುಂದಡಿ ಇಟ್ಟ ಪ್ರತಿ ಸಂದರ್ಭದಲ್ಲೂ ಅದು ತನ್ನ ಸುತ್ತ ಇರುವ ಪರಿಸರದ ಜೊತೆ ಹೋರಾಡುತ್ತಲೇ ಬಂದಿದೆ. ಪರಿಸರದ ಜೊತೆಗೆ ಮನುಷ್ಯ ನಡೆಸಿದ ಸಂಘರ್ಷ ಮತ್ತು ಅನುಸಂಧಾನಗಳು ಮಾನವನ ಪ್ರಜ್ಞೆಯನ್ನು ಕಾಲದಿಂದ ಕಾಲಕ್ಕೆ ರೂಪಿಸಿಕೊಂಡು ಬಂದಿವೆ. ನಿಸರ್ಗದ ಜೊತೆಗೆ ಮನುಷ್ಯ ಹೋರಾಡುತ್ತ ಮತ್ತು ಅನುಸಂಧಾನ ಮಾಡುತ್ತ ತನಗೆ ಬೇಕಾದ ಜ್ಞಾನವನ್ನು ಗಳಿಸಿಕೊಳ್ಳುತ್ತಾ ಬಂದಿದ್ದಾನೆ. ಹಾಗಾಗಿ ಮನುಷ್ಯನಲ್ಲಿ ಪ್ರಜ್ಞೆ ಅಥವಾ ತಿಳಿವಳಿಕೆಗಳು ರೂಪುಗೊಳ್ಳುವುದರ ಹಿಂದೆ ಬೆವರು ಮತ್ತು ರಕ್ತಗಳು ಮಹತ್ತರವಾದ ಪಾತ್ರ ವಹಿಸುತ್ತಾ ಬಂದಿವೆ. ಮನುಷ್ಯನಲ್ಲಿ ಸಂಭವಿಸಿದ ಈ ಪ್ರಜ್ಞೆಯ ಸುತ್ತ ಅವನ ಭಾವಲೋಕವೂ ಸೃಷ್ಟಿಯಾಗುತ್ತ ಬಂದಿದೆ. ಪ್ರಜ್ಞೆಯು ಹಿಂದೆ ಸರಿದು, ಭಾವಲೋಕದಲ್ಲಿನ ಅಸ್ಪಷ್ಟತೆಗಳು ಮುನ್ನೆಲೆಗೆ ಬಂದಾಗ ನಮ್ಮಲ್ಲಿ ಪುರೋಹಿತಶಾಹಿ ಪ್ರಣೀತ ಊಳಿಗಮಾನ್ಯತೆಯು ಅಸ್ತಿತ್ವಕ್ಕೆ ಬಂದಿತು. ಜ್ಞಾನವನ್ನು ಭಾವನೆಗಳು ನಿಯಂತ್ರಿಸುವಂತಾದ ಮೇಲೆ ಮಾನವನ ಬೌದ್ಧಿಕತೆಯ ಸ್ವರೂಪವೇ ಬದಲಾಗಿಹೋಯಿತು. ಹೀಗಾಗಿ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಲೌಕಿಕದ ಸಂಗತಿಗಳಿಗಿಂತ ಹೆಚ್ಚಾಗಿ ಭಾವನಾತ್ಮಕ ವಿಷಯಗಳಿಗೆ ಜನ ಹೆಚ್ಚಾಗಿ ಕೆರಳಿಬಿಡುತ್ತಾರೆ. ಸಮುದಾಯಗಳ ಈ ವಿರಾಟ್ ದೌರ್ಬಲ್ಯವನ್ನು ಫ್ಯಾಸಿಸ್ಟರು ಅನೂಚಾನವಾಗಿ ಬಳಸುತ್ತಾ ಬಂದಿದ್ದಾರೆ. ಶತಮಾನಗಳಿಂದ ಫ್ಯಾಸಿಸ್ಟರು ಈ ಕಾರಣಕ್ಕಾಗಿಯೇ ಜನಸಮುದಾಯಗಳ ಪಾರಂಪರಿಕ ಸಂಸ್ಥೆಗಳನ್ನು ಅರ್ಥಮಾಡಿಕೊಳ್ಳುತ್ತ, ಆ ಮೂಲಕ ಜನರ ಆಲೋಚನೆಗಳನ್ನು ನಿಯಂತ್ರಿಸುತ್ತಾ ಬಂದಿದ್ದಾರೆ. ಫ್ಯಾಸಿಸ್ಟರನ್ನು ಹೊರತುಪಡಿಸಿದರೆ ಹೀಗೆ ಜನರನ್ನು ಅರ್ಥಮಾಡಿಕೊಳ್ಳುವ ವೈಜ್ಞಾನಿಕ ವಿಧಾನವನ್ನು ಜಾರಿಗೆ ತಂದವರು ವಸಾಹತುಶಾಹಿಗಳು.

ಬ್ರಿಟಿಷ್ ವಸಾಹತುಶಾಹಿಯು ತನ್ನ ಆಡಳಿತವನ್ನು ಸುಗಮಗೊಳಿಸಿಕೊಳ್ಳಲು ಭಾರತದ ಜನರ ಬದುಕು ಮತ್ತು ಆಲೋಚನಾಕ್ರಮಗಳನ್ನು ಅರ್ಥಮಾಡಿಕೊಳ್ಳಲು ಬಯಸಿತು. ಅದಕ್ಕಾಗಿ ಭಾರತವನ್ನು ಕುರಿತು ವಿಶೇಷ ಅಧ್ಯಯನಗಳನ್ನು ಮಾಡಲು ಯುರೋಪಿನ ಓರಿಯಂಟಲ್ ಚಿಂತಕರನ್ನು ಇಲ್ಲಿಗೆ ಕರೆತಂದಿತು. ಈ ವಿದ್ವಾಂಸರು ಇಂಡಿಯಾದ ಬದುಕನ್ನು ಅರ್ಥೈಸಿ ವಸಾಹತು ಆಡಳಿತಕ್ಕೆ ಅನುವು ಮಾಡಿಕೊಡುವುದಕ್ಕಾಗಿಯೇ ಇಲ್ಲಿ ಅನೇಕ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು. 1774ರಲ್ಲಿ ಕಲ್ಕತ್ತಾದಲ್ಲಿ ‘ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ‘ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಭಾರತವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ. ನಂತರ ‘ಎತ್ನೋಗ್ರಫಿಕ್ ಸರ್ವೆ ಆಫ್ ಇಂಡಿಯಾ’ದಂತಹ ದೊಡ್ಡದೊಡ್ಡ ಸಂಸ್ಥೆಗಳನ್ನು ಪ್ರಾರಂಭಿಸಿತು. ಇಲ್ಲಿನ ಜನರನ್ನು ಅಧ್ಯಯನ ಮಾಡಿ, ಅವರ ಬದುಕಿನ ಲೋಕದೃಷ್ಟಿಯನ್ನು ಅರ್ಥಮಾಡಿಕೊಂಡರೆ ತಮ್ಮ ಆಡಳಿತಕ್ಕೆ ಅನುಕೂಲ ಎಂಬ ನೀತಿಯು ಈ ಶೈಕ್ಷಣಿಕ ಚಟುವಟಿಕೆಗಳ ಹಿಂದೆ ಪ್ರಧಾನವಾಗಿ ಕೆಲಸ ಮಾಡಿತ್ತು. ಆ ಕಾಲದ ಅಧ್ಯಯನಗಳು ವಸಾಹತು ಆಡಳಿತವನ್ನು ಸುಗಮಗೊಳಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದವು.

ಇದನ್ನೂ ಓದಿ: ಘೋಷಿತ ಗ್ಯಾರಂಟಿಗಳು ಮತ್ತು ಉದ್ದೇಶಿತ ಹೊಸ ಆರ್ಥಿಕ ಮಾದರಿಯ ನಡುವೆ..

ಅಂದರೆ ಒಂದು ನೆಲದ ಜನರ ಮನೋಭಾವವನ್ನು ಅರ್ಥ ಮಾಡಿಕೊಂಡಲ್ಲಿ ಅವರನ್ನು ಅಧೀನಗೊಳಿಸಿಕೊಳ್ಳುವುದು ಸುಲಭ ಎಂಬ ಉಪಯೋಗವಾದಿ (Utilitarianism) ನಿಲುವು ಈ ರಾಜಕಾರಣದ ಹಿಂದೆ ಕೆಲಸ ಮಾಡಿತ್ತು. ಸಾರರೂಪದಲ್ಲಿ ಹೇಳುವುದಾರೆ; 18 ಮತ್ತು 19ನೇ ಶತಮಾನದಲ್ಲಿ ಯುರೋಪಿನವರಿಂದ ಸೃಷ್ಟಿಯಾದ ಜ್ಞಾನವು ವಸಾಹತು ಆಡಳಿತವನ್ನು ಸುಗಮಗೊಳಿಸುವುದಕ್ಕೆ ಹೊಸ ಹತಾರಗಳನ್ನು (ತಂತ್ರಗಳನ್ನು) ಸೃಷ್ಟಿ ಮಾಡಿಕೊಟ್ಟಿತು. ಇದರ ಜೊತೆಗೆ ಈ ಜ್ಞಾನದ ಭಾಗವಾಗಿ ರೂಪುಗೊಳ್ಳುವ ಸಂಕಥನಗಳು ಜನರ ಲೋಕದೃಷ್ಟಿಯನ್ನೂ ಬದಲಾಯಿಸುವಷ್ಟು ಶಕ್ತಿಶಾಲಿಯಾಗಿದ್ದವು. ಈ ಕಾರಣಕ್ಕಾಗಿ ವಸಾಹತು ಆಡಳಿತವು ತನ್ನದೇ ಆದ ಶಿಕ್ಷಣ ನೀತಿಯನ್ನೂ ರೂಪಿಸಿಕೊಂಡಿತು. 1813ರಲ್ಲಿ ಜಾರಿಗೆ ಬಂದ ದಿ ಚಾರ್ಟರ್ ಆಕ್ಟ್ (The Charter Act of 1813) ಮೂಲಕ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿತು. ಇದಕ್ಕಾಗಿ ಥಾಮಸ್ ಬ್ಯಾಬಿಂಗಟನ್ ಮೆಕಾಲೆಯನ್ನು ಭಾರತಕ್ಕೆ ಕರೆಸಿ ಭಾರತದ ಜನರಿಗೆ ನೀಡಬೇಕಾದ ಶಿಕ್ಷಣದ ಸ್ವರೂಪವನ್ನು ನಿರ್ಧರಿಸಲು ಸೂಚಿಸಲಾಯಿತು. ಮೆಕಾಲೆಯು ಭಾರತದ ಜನಗಳಿಗೆ ನೀಡುವ ಶಿಕ್ಷಣದ ಸ್ವರೂಪ ಹೇಗಿರಬೇಕು ಎಂಬ ನೀಲನಕ್ಷೆಯನ್ನು ಸಿದ್ಧಪಡಿಸಿದನು. ಮೆಕಾಲೆ ಸಿದ್ಧಪಡಿಸಿದ ‘ಮಿನಿಟ್ ಆನ್ ಇಂಡಿಯನ್ ಎಜ್ಯುಕೇಶನ್’ (Minute on Indian Education) ಎಂಬ ದಸ್ತವೇಜನ್ನು ಒಪ್ಪಿಕೊಳ್ಳುವ ಮೂಲಕ ವಸಾಹತು ಆಡಳಿತವು ಭಾರತದಲ್ಲಿ ತನ್ನದೇ ಆದ ಶಿಕ್ಷಣ ನೀತಿಯನ್ನು ಅಸ್ತಿತ್ವಕ್ಕೆ ತಂದಿತು. ಭಾರತದಲ್ಲಿ ನೀಡುವ ಶಿಕ್ಷಣವು ತನ್ನ ಸಾಮ್ರಾಜ್ಯದ ತಳಪಾಯವನ್ನು ಗಟ್ಟಿಗೊಳಿಸಬೇಕು; ತನ್ನ ಆಡಳಿತವು ಸುಗಮವಾಗಿ ನಡೆಯಲು ನೆರವಾಗುವ ನೌಕರರನ್ನು ಈ ಮೂಲಕ ತಯಾರು ಮಾಡಬೇಕು; ಭಾರತದಲ್ಲಿ ತನಗೆ ಬೇಕಾದ ಜ್ಞಾನವನ್ನು ಸೃಷ್ಟಿಸಲು ಮತ್ತು ಅದನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ ಮೆಕಾಲೆಯ ಶಿಕ್ಷಣ ನೀತಿಯನ್ನು ವಸಾಹತು ಆಡಳಿತ ಜಾರಿಗೆ ತಂದಿತು.

ಜಗತ್ತಿನ ಎಲ್ಲ ಪ್ರಭುತ್ವಗಳು ಈ ಕಾರಣಕ್ಕಾಗಿ ಜ್ಞಾನ ಕೇಂದ್ರಗಳನ್ನು ಆದಷ್ಟು ತನ್ನ ಉಪಯೋಗಕ್ಕೆ ಬಳಸಿಕೊಳ್ಳಲು ನೋಡುತ್ತವೆ. ತನ್ನ ಆಡಳಿತಕ್ಕೆ ಪೂರಕವಾಗುವ ನಿಲುವುಗಳಿರುವ ಜ್ಞಾನವನ್ನು ಅಧಿಕೃತವೆಂದೂ, ಪ್ರಭುತ್ವವನ್ನು ಪ್ರಶ್ನಿಸುವ, ಜನಪರವಾಗಿರುವ ಜ್ಞಾನವನ್ನು ‘ವಿದ್ರೋಹಿ’ ಎಂದು ಪ್ರಭುತ್ವಗಳು ಪರಿಗಣಿಸುತ್ತಾ ಬಂದಿವೆ. ಭಾರತದ ನೆಲದಲ್ಲಿಯೇ ಹುಟ್ಟಿದ ಲೋಕಾಯತ ಮತ್ತು ಬೌದ್ಧ ತತ್ವಜ್ಞಾನಗಳನ್ನು ವೈದಿಕ ಪ್ರಭುತ್ವವು ನಾಶ ಮಾಡಲು ಪ್ರಯತ್ನಿಸಿತು. ಬಹುಸಂಖ್ಯಾತ ದುಡಿವ ವರ್ಗಗಳನ್ನು ಸಂಘಟಿಸಿದ ಬಸವಣ್ಣನವರು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದುಬಿಡುತ್ತಾರೆ ಎಂದು ಆತಂಕಿತರಾದವರು ವಚನ ಚಳವಳಿಯನ್ನೇ ನಾಶ ಮಾಡಲು ಮುಂದಾದರು. ಇನ್ನು ಆಧುನಿಕ ಭಾರತದ ಮಹಾನ್ ತತ್ವಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಕಾರಣಕ್ಕಾಗಿ ಹಲವು ಸಂಘರ್ಷಗಳನ್ನು ಎದುರಿಸಿದರು. ಈ ದೇಶದ ಚರಿತ್ರೆಯಲ್ಲಿ ಜನಪರವಾದ ರಾಜಕಾರಣವನ್ನು ಮುಂಚೂಣಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಲು ಮುಂದಾದ ಮತ್ತು ವೈದಿಕಶಾಹಿಯ ಜನವಿರೋಧಿ ತತ್ವಗಳಿಗೆ ಪ್ರತಿಯಾಗಿ ಸಮಾಜಮುಖಿ ವೈಚಾರಿಕತೆಯನ್ನು ರೂಪಿಸಲು ಮುಂದಾದ ಅನೇಕ ಜ್ಞಾನ ಕೇಂದ್ರಗಳನ್ನು ನಾಶ ಪಡಿಸಲಾಗಿದೆ.

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಎರಡು ಜಾಗತಿಕ ಯುದ್ಧಗಳಿಗೆ ಕಾರಣವಾದ ಯುರೋಪಿನ ನಾಜೀವಾದವು ಮೊದಲು ಅಲ್ಲಿನ ವಿಶ್ವವಿದ್ಯಾಲಯಗಳನ್ನು, ಅಧ್ಯಯನ ಕೇಂದ್ರಗಳನ್ನು ನಾಶಪಡಿಸಿತು. ಅಲ್ಲಿನ ಗ್ರಂಥಾಲಯಗಳಿಗೆ ಬೆಂಕಿ ಹಚ್ಚಲಾಯಿತು. ಐನ್‌ಸ್ಟೀನ್‌ನಂತಹ ವಿಜ್ಞಾನಿಗಳು ಯುರೋಪನ್ನೇ ತೊರೆದು ಓಡಿ ಹೋಗುವಂತಹ ಭಯವನ್ನು ಯುರೋಪಿನ ಫ್ಯಾಸಿಸಮ್ ಸೃಷ್ಟಿ ಮಾಡಿತ್ತು. ಎರಡನೇ ಮಹಾಯುದ್ಧಕ್ಕೂ ಮುನ್ನ ಹಿಟ್ಲರ್ ಯುರೋಪಿನ ಹಲವು ಬುದ್ಧಿಜೀವಿಗಳನ್ನು, ಕಲಾವಿದರನ್ನು ಮತ್ತು ವಿಜ್ಞಾನಿಗಳನ್ನು ಕೊಲ್ಲಿಸಿದನು. ವಿಶ್ವದಲ್ಲಿ ಆರ್‍ಯ ಜನಾಂಗದ ಪ್ರಾಧಾನ್ಯತೆಗೆ ಅಡ್ಡಿಯಾಗುವ ಯಾವ ಜ್ಞಾನ ವ್ಯವಸ್ಥೆಯೂ ಅಸ್ತಿತ್ವದಲ್ಲಿರಬಾರದು ಎಂದು ಹಿಟ್ಲರ್ ಬಯಸಿದ್ದ. ಇದಕ್ಕಾಗಿ ಅವನು ಆಶ್ರಯಿಸಿದ್ದು ನಾಜಿ ಜನಾಂಗವಾದವನ್ನು. ಈ ನಾಜಿವಾದವನ್ನು ಸಮರ್ಥಿಸುವ ತಿಳಿವಳಿಕೆಯನ್ನು ಯಾರು ಸೃಷ್ಟಿಸುವರೋ ಅವರೆಲ್ಲ ಹಿಟ್ಲರ್‌ನ ಆಸ್ಥಾನ ಪಂಡಿತರಾದರು. ಒಂದು ದಶಕದ ಕಾಲ ನಡೆದ ಹಿಟ್ಲರ್‌ನ ಮಾರಣಹೋಮದಲ್ಲಿ ಲಕ್ಷಾಂತರ ಜನ ಕೊಲ್ಲಲ್ಪಟ್ಟರು. ಬಹುಜನ ಸಮಾಜದ ಮೇಲೆ ಆಳ್ವಿಕೆ ನಿರಂತರವಾಗಿರಬೇಕೆಂದರೆ, ಪ್ರಭುತ್ವಕ್ಕೆ ಪೂರಕವಾದ ತಿಳಿವಳಿಕೆ ಮಾತ್ರ ಸೃಷ್ಟಿಯಾಗುತ್ತಿರಬೇಕು ಎಂಬುದನ್ನು ಫ್ಯಾಸಿಸ್ಟ್ ವ್ಯವಸ್ಥೆ ಬಲವಾಗಿ ನಂಬುತ್ತದೆ.

ಸ್ವಾತಂತ್ರ್ಯಾನಂತರ ಭಾರತವು ಒಂದು ‘ಕಲ್ಯಾಣ ರಾಷ್ಟ್ರ’ ಎಂದೇ ಪರಿಭಾವಿಸಲ್ಪಟ್ಟಿತು. ಇಲ್ಲಿನ ಆಡಳಿತವನ್ನು ವೈಜ್ಞಾನಿಕವಾಗಿ ಜನಪರವಾಗಿಸುವ ನಿಟ್ಟಿನಲ್ಲಿ ಹಲವು ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಅದರಲ್ಲೂ ಪಂಡಿತ್ ನೆಹರು, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹ ದಾರ್ಶನಿಕ ರಾಜಕಾರಣಿಗಳು ಈ ದೇಶದ ಪುರೋಗಾಮಿ ಮುಂಚಲನೆಗಾಗಿ ಅನೇಕ ನೀತಿಗಳನ್ನು ತಂದರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅನೇಕ ವಿಶ್ವವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವೈಜ್ಞಾನಿಕ ತರಬೇತಿ ಕೇಂದ್ರಗಳು, ಸಮಾಜವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಸಂಶೋಧನಾ ಸಂಸ್ಥೆಗಳನ್ನು ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಗಳು ಸ್ಥಾಪಿಸುತ್ತಾ ಬಂದಿವೆ. ಈ ಶೈಕ್ಷಣಿಕ ಸಂಸ್ಥೆಗಳು ಭಾರತ ದೇಶದ ಪ್ರಗತಿಗೆ ಇಂದಿಗೂ ಶ್ರಮಿಸುತ್ತಿವೆ. ಆದರೆ, ಕಳೆದ ಒಂದು ದಶಕದಿಂದ ಇಂತಹ ಸಂಸ್ಥೆಗಳ ಅಂತರಂಗವನ್ನೇ ನಾಶ ಮಾಡುವ ರಾಜಕಾರಣವು ಮುಂಚೂಣಿಗೆ ಬಂದುಬಿಟ್ಟಿದೆ. ವಿಶ್ವವಿದ್ಯಾಲಯಗಳಲ್ಲಿನ ವೈಚಾರಿಕ ಗುಂಪುಗಳನ್ನು ಹತ್ತಿಕ್ಕಲಾಗುತ್ತದೆ. (ಉದಾಹರಣೆಗೆ; ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ (JNU). ದೇಶದ ಪುರೋಗಾಮಿ ಲೇಖಕರನ್ನು ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಮೋದಿಯ ಬಿಜೆಪಿ ಸರಕಾರ ಭಾರತದ ಎಲ್ಲ ವಿವಿಗಳ ಮತ್ತು ಸಂಶೋಧನಾ ಸಂಸ್ಥೆಗಳ ಮೂಲ ಆಶಯಗಳನ್ನೇ ನಾಶ ಮಾಡುವ ಪ್ರಚ್ಛನ್ನ ಯಜ್ಞವನ್ನು ನಡೆಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು, ಭಾಷೆ, ಜಾನಪದ, ತೋಟಗಾರಿಕೆ, ಕೃಷಿ, ವೈದ್ಯಕೀಯ ಮತ್ತು ಮಹಿಳಾ ವಿಶ್ವವಿದ್ಯಾಲಯಗಳಂತಹ ವಿಶಿಷ್ಟವಾದ ಉನ್ನತ ಶೈಕ್ಷಣಿಕ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಇದಲ್ಲದೆ ಸರಕಾರದ ನೇರ ಆಡಳಿತಕ್ಕೆ ಒಳಪಡುವ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳು, ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಕಾರ್ಯನಿರತವಾಗಿವೆ. ಉದಾಹರಣೆಗೆ; ಸಾಮಾಜಿಕ ಆರ್ಥಿಕ ಬದಲಾವಣೆಯ ಅಧ್ಯಯನ ಕೇಂದ್ರ (ISEC), ಬೆಂಗಳೂರಿನಲ್ಲಿ ಭಾರತ ಸಂಖ್ಯಾಶಾಸ್ತ್ರ ಸಂಸ್ಥೆ (1978), ಭಾರತ ವಿಜ್ಞಾನ ಸಂಸ್ಥೆ (1911), ಭಾರತ ಆಡಳಿತ ನಿರ್ವಹಣಾ ಸಂಸ್ಥೆ (1972), ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (1987)ಗಳು ಕೆಲಸ ಮಾಡುತ್ತಿವೆ. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು 1989ರಲ್ಲಿ ಸ್ಥಾಪಿಸಲ್ಪಟ್ಟಿತು. ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ತರಬೇತಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಇದಲ್ಲದೆ, ಕರ್ನಾಟಕದ ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ನೇರ ಸಂಪರ್ಕ ಸಾಧಿಸುವ ಕೆಲವು ಸಂಶೋಧನಾ ಸಂಸ್ಥೆಗಳಿವೆ. ಅವುಗಳೆಂದರೆ, 1. ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ, 2. ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, 3. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಕರ್ನಾಟಕದ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಜೊತೆಗೆ, ಸರಕಾರಿ ನೌಕರರ ಜೊತೆಗೆ, ವಿದ್ಯಾರ್ಥಿ ಸಮುದಾಯದ ಜೊತೆಗೆ ನೇರ ಒಡನಾಟ ಇಟ್ಟುಕೊಳ್ಳುತ್ತವೆ. ಇಂತಹ ಮುಖ್ಯವಾದ ಸಂಸ್ಥೆಗಳನ್ನು ಈಗ ಆರೆಸ್ಸೆಸ್‌ನ ಪ್ರಮುಖರು ನೇರವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಸ್ಥೆಗಳು ಸಮಾಜದಲ್ಲಿ ಪುರೋಗಾಮಿ ಬದಲಾವಣೆಗಳನ್ನು ತರುತ್ತಿವೆ ಎಂಬ ಆತಂಕ ಈ ಕೋಮು ಸಂಘಟನೆಯನ್ನು ನಿರಂತವಾಗಿ ಕಾಡುತ್ತಿದೆ. ಈ ಕಾರಣಕ್ಕಾಗಿ ಕರ್ನಾಟಕದ ಸಂಶೋಧನಾ ಕೇಂದ್ರಗಳನ್ನು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಮೂಲ ಸ್ವರೂಪವನ್ನೇ ಬದಲಾಯಿಸುವುದಕ್ಕೆ ಆರೆಸ್ಸೆಸ್ ಕೈಹಾಕಿದೆ. ಪ್ರಸ್ತುತ ಸಂಸ್ಥೆಗಳು ತಮ್ಮ ಮೂಲ ಆಶಯಗಳಿಗೆ ವ್ಯತಿರಿಕ್ತವಾಗುವಂತಹ ರಾಜಕಾರಣವನ್ನು ಬಲಪಂಥೀಯರು ತೀವ್ರಗೊಳಿಸಿದ್ದಾರೆ. ಬಲಪಂಥೀಯರ ಈ ವಿಚ್ಛಿದ್ರಕಾರಿ ಚಟುವಟಿಕೆಗಳು ಕಳೆದ ನಾಲ್ಕೈದು ವರ್ಷಗಳಿಂದ ತೀವ್ರವಾಗುತ್ತಾ ಬಂದಿವೆ. ಈ ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳಿಗೆ ಮರುಜೀವ ನೀಡುವುದು ಹೇಗೆ? ಮತ್ತು ತರಬೇತಿ ಕೇಂದ್ರ್ರಗಳ ಇಂದಿನ ಕಾರ್ಯನಿರ್ವಹಣೆಯನ್ನು ಹೇಗೆ ಜನಪರವಾಗಿಸುವುದು? ಮತ್ತು ಪ್ರಗತಿಪರ ಆಶಯಗಳಿಗೆ ಅನುಗುಣವಾಗಿ ಈ ಸಂಸ್ಥೆಗಳನ್ನು ಹೊಸ ಸರಕಾರ ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎನ್ನುವದನ್ನು ಅರ್ಥ ಮಾಡಿಕೊಳ್ಳಲು ಪ್ರಸ್ತುತ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆ.

(ಎರಡನೇ ಭಾಗ ಮುಂದಿನ ವಾರಕ್ಕೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...