Homeಕರ್ನಾಟಕಹೆಡ್‌ಬುಷ್ ಬಗ್ಗೆ ಮಾತಾಡುವ ಸುನೀಲ್ ಕುಮಾರ್‌ರವರೆ, ನಾರಾಯಣ ಗುರುಗಳಿಗೆ ಅವಮಾನವಾದಾಗ ಎಲ್ಲಿದ್ದೀರಿ? ಕಾಂಗ್ರೆಸ್ ಪ್ರಶ್ನೆ

ಹೆಡ್‌ಬುಷ್ ಬಗ್ಗೆ ಮಾತಾಡುವ ಸುನೀಲ್ ಕುಮಾರ್‌ರವರೆ, ನಾರಾಯಣ ಗುರುಗಳಿಗೆ ಅವಮಾನವಾದಾಗ ಎಲ್ಲಿದ್ದೀರಿ? ಕಾಂಗ್ರೆಸ್ ಪ್ರಶ್ನೆ

- Advertisement -
- Advertisement -

ಹೆಡ್‌ಬುಷ್ ಚಿತ್ರದ ಬಗ್ಗೆ ಆಕ್ಷೇಪಣೆ ಎತ್ತುವ ಸಚಿವ ಸುನೀಲ್ ಕುಮಾರ್‌ರವರೆ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ಎಲ್ಲಿದ್ದೀರಿ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಕುರಿತು ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ ಸುನೀಲ್‌ ಕುಮಾರ್‌ರವರೆ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?” ಎಂದು ಪ್ರಶ್ನಿಸಿದೆ.

ಬಳ್ಳಾರಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಒಳಚರಂಡಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಿನೆಮಾ ಒಂದನ್ನು ಹಿಡಿದು ವಿವಾದ ಸೃಷ್ಟಿಸಲು ಯತ್ನಿಸುವ ಇಂಧನ ಸಚಿವ ಸುನೀಲ್‌ ಕುಮಾರ್‌ರವರು
ತಮ್ಮ ಇಲಾಖೆಯ ಇಂತಹ ಅವ್ಯವಸ್ಥೆ ಗಮನಿಸುವುದಿಲ್ಲವೇ? ಸಚಿವರೇ, ಮೊದಲು ನಿಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸುವುದನ್ನು ಕಲಿಯಿರಿ ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ. ಪಠ್ಯದಲ್ಲಿ ಸುರಪುರದ ವೀರರಿಗೆ ಅವಮಾನವಾದಾಗ ಎಲ್ಲಿ ಹೋಗಿದ್ದರು? ತಮ್ಮ ಇಂಧನ ಇಲಾಖೆಯ ಅಕ್ರಮಗಳನ್ನು ತಡೆಯಲು, ಅವ್ಯವಸ್ಥೆ ನಿವಾರಿಸಲು ಆಸಕ್ತಿ ಇಲ್ಲವೇಕೆ? ವಿವಾದಗಳಿಗೆ ಮಾತ್ರ ಇವರ ಆಸಕ್ತಿಯೇ? ಎಂದು ಕಿಡಿಕಾರಿದೆ.

ಇದನ್ನೂ ಓದಿ; ಹೆಡ್ ಬುಷ್ ಚಿತ್ರತಂಡದ ವಿರುದ್ಧ ದೂರು: ಡಾಲಿ ಧನಂಜಯ್ ಪರ ನಿಂತ ಸಿನಿಮಾ ಪ್ರೇಮಿಗಳು

“ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ” ಎಂದು ಸಚಿವ ಸುನೀಲ್ ಕುಮಾರ್ ಅಕ್ಟೋಬರ್ 26ರಂದು ಟ್ವೀಟ್ ಮಾಡಿದ್ದರು.

ಉದಯೋನ್ಮುಖ ನಟ ಡಾಲಿ ಧನಂಜಯ್ ನಿರ್ಮಿಸಿ ಅಭಿನಯಿಸಿರುವ ಹೆಡ್ ಬುಷ್ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿಯೂ ಕೂಡ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಎಂಬ ವರದಿಗಳಿವೆ. ಈ ಬೆನ್ನಲ್ಲೆ ಚಿತ್ರದಲ್ಲಿ ವೀರಗಾಸೆ ಕಲಾವಿದರ ಕಲಾವಿದರ ಮೇಲೆ ಹಲ್ಲೆ ನಡೆಸುವುದನ್ನು ತೋರಿಸಲಾಗಿದೆ ಮತ್ತು ಐತಿಹಾಸಿಕ ಕರಗಕ್ಕೆ ಅಪಮಾನ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ದೂರು ನೀಡಿದ್ದಾರೆ.

ಚಿತ್ರದ ವಿರುದ್ಧ ಅಪಸ್ವರ ಕೇಳಿಬಂದ ಕೂಡಲೇ ಹಲವಾರು ಸಿನಿಮಾ ನಿರ್ದೇಶಕರು, ತಂತ್ರಜ್ಞರು ಚಿತ್ರತಂಡದ ಪರ ನಿಂತಿದ್ದಾರೆ. IStanWithDhananjay ಹ್ಯಾಷ್‌ಟ್ಯಾಗ್ ಬಳಸಿ ಧನಂಜಯ್‌ರವರಿಗೆ ಬೆಂಬಲ ಘೋಷಿಸಿದ್ದಾರೆ.

ಇದನ್ನೂ ಓದಿ; ‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read