ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ನೀಡುವ ‘ಉಚಿತಗಳ’ ಭರವಸೆಗಳ ಮಾರ್ಗಸೂಚಿ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ (ಜ.25) ಒಕ್ಕೂಟ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಇದನ್ನು ‘ಗಂಭೀರ ಸಮಸ್ಯೆ’ ಎಂದು ಕರೆದಿರುವ ನ್ಯಾಯಾಲಯ, ‘ಉಚಿತಗಳ ಬಜೆಟ್’ ಸಾಮಾನ್ಯ ಬಜೆಟ್‌ಗಿಂತ ಮಿಗಿಲಾಗುತ್ತಿದೆ ಎಂದು ಹೇಳಿದೆ. ನಾಲ್ಕು ವಾರಗಳಲ್ಲಿ ಚುನಾವಣಾ ಆಯೋಗ ಮತ್ತು ಒಕ್ಕೂಟ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶಿಸಿದೆ.
’ಈ ವಿಷಯದ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ದೇಶಿಸಿದೆ. ಆದರೆ, ಚುನಾವಣಾ ಸಂಸ್ಥೆಯು ಕೇವಲ ಒಂದು ಸಭೆಯನ್ನು ನಡೆಸಿದೆ. ರಾಜಕೀಯ ಪಕ್ಷಗಳಿಂದ ಅಭಿಪ್ರಾಯಗಳನ್ನು ಕೇಳಿದ್ದರು. ನಂತರ ಏನಾಯಿತು, ಅದರ ಫಲಿತಾಂಶ ಇನ್ನು ನನಗೆ ತಿಳಿದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ: ಮೊದಲ ಹಂತದ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಸಿಜೆಐ ಎನ್‌ವಿ ರಮಣ, ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ವಕೀಲ ಮತ್ತು ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಅರ್ಜಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಮತ್ತು ರಾಜ್ಯಗಳನ್ನು ಸಾಲದ ಸುಳಿಯಲ್ಲಿ ತಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದ್ದರು.
ಸಾರ್ವಜನಿಕ ನಿಧಿಯಿಂದ ಉಚಿತಗಳನ್ನು ವಿತರಿಸುವುದಾಗಿ ಭರವಸೆ ನೀಡುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳನ್ನು ವಶಪಡಿಸಿಕೊಳ್ಳಲು ಮತ್ತು ನೋಂದಣಿ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ಚುನಾವಣಾ ಆಯೋಗದ ನಿಯಮಗಳ ಹೊರತಾಗಿಯೂ ನಾಗರಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮತದಾರರ ಮೇಲೆ ಅನಗತ್ಯವಾಗಿ ಪ್ರಭಾವ ಬೀರಬಹುದು, ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳುಮಾಡುತ್ತದೆ. ಇಂತಹ ಕ್ರಮಗಳು ಸಂವಿಧಾನವನ್ನು ಉಲ್ಲಂಘಿಸುವುದರಿಂದ ಅವುಗಳನ್ನು ಸಂಪೂರ್ಣ ನಿಷೇಧಿಸಬೇಕು. ಇವುಗಳನ್ನು ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಯುಪಿ ಚುನಾವಣೆ: BJP ಜೊತೆ ಮೈತ್ರಿ ವಿಫಲ; JDUನಲ್ಲಿ ಹೆಚ್ಚುತ್ತಿರುವ ಆಂತರಿಕ ಬಿರುಕು!


