ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆಯರ ಮೇಲೆ ನಡೆದ ಹಲ್ಲೆಯ ಕುರಿತು ವಿವರಣೆ ನೀಡಲು ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಅ.13) ಸೂಚಿಸಿರುವುದಾಗಿ livelaw.in ವರದಿ ಮಾಡಿದೆ.
ಪ್ರತಿಭಟನೆಗಳ ವರದಿಗಾರಿಕೆಯಲ್ಲಿ ತೊಡಗಿರುವ ಪತ್ರಕರ್ತರಿಗೆ, ಅದರಲ್ಲೂ ಮುಖ್ಯವಾಗಿ ಮಹಿಳಾ ಪತ್ರಕರ್ತೆಯರಿಗೆ ರಕ್ಷಣೆ ನೀಡಬೇಕು ಎಂದು ಕೋರಿ ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ (NWMI) ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಪ್ರಸ್ತಾಪಿಸಿದ ನಂತರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮೇಲಿನ ಸೂಚನೆ ನೀಡಿದ್ದಾರೆ.
“ಯಾರಾದರೂ ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ಖುದ್ದಾಗಿ ಹಾಜರಿದ್ದು ವಿವರಣೆ ನೀಡಬೇಕು ಎಂದು ನಾವು ಬಯಸುತ್ತೇವೆ” ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿಗಳು, “ಪೊಲೀಸ್ ಇಲಾಖೆಯು ಈ ಆರೋಪಗಳಿಗೆ ವಿವರಣೆ ನೀಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಸಾಲಿಸಿಟರ್ ಜನರಲ್ ಅವರಿಗೆ ಮುಂಚಿತವಾಗಿಯೇ ನೋಟಿಸ್ ನೀಡಲಾಗಿದೆ ಎಂದು ಜೈಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರ ಕಡೆಯಿಂದ ನಡೆದಿದೆ ಎನ್ನಲಾದ ಕ್ರಮಕ್ಕೆ ಸಂಬಂಧಿಸಿದ ವಿಷಯದ ಜೊತೆಯಲ್ಲೇ, ಈ ಅರ್ಜಿಯನ್ನೂ ಸಹ ಗುರುವಾರ (ಅ.15) ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ‘ಫ್ರೀಡಂ ಸ್ಪೀಚ್ ಕಲೆಕ್ಟಿವ್’ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಪ್ರಸ್ತಾಪಿಸಿದ್ದು, ಪ್ರತಿಭಟನೆಗಳ ವರದಿಗಾರಿಕೆ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಕಿರುಕುಳ ನೀಡಬಾರದು ಎಂದು ಕೋರ್ಟ್ ಅಕ್ಟೋಬರ್ 10 ರಂದು ನೀಡಿದ್ದ ಆದೇಶವನ್ನು ಉಲ್ಲಂಘಿಸಿ, ಪೊಲೀಸರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅವರೂ ಸಹ ಇದೇ ರೀತಿಯ ಮತ್ತೊಂದು ಅರ್ಜಿಯನ್ನು ಪ್ರಸ್ತಾಪಿಸಿದ್ದಾರೆ.
ಪ್ರತಿಭಟನೆಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳ ವರದಿಗಾರಿಕೆ ಮಾಡುವ ಪತ್ರಕರ್ತರ ಸುರಕ್ಷತೆ ಹಾಗೂ ಗೌರವವನ್ನು ಖಾತ್ರಿಪಡಿಸಲು ನಿರ್ದೇಶನಗಳನ್ನು ನೀಡುವಂತೆ ಕೋರಿ NWMI ರಿಟ್ ಅರ್ಜಿಯನ್ನು ಸಲ್ಲಿಸಿದೆ.
ಈಗಾಗಲೇ ಪೊಲೀಸರ ದೌರ್ಜನ್ಯಗಳ ಕುರಿತು ಒಂದು ತನಿಖೆ ನಡೆಯುತ್ತಿದ್ದರೂ, ಅದು ಪತ್ರಕರ್ತರ ಸಮಸ್ಯೆಗಳನ್ನು ಮುಖ್ಯವಾಗಿ ಪರಿಗಣಿಸುತ್ತಿಲ್ಲ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ಪ್ರತಿಭಟನೆ ನಡೆಯುವ ಸ್ಥಳಗಳಿಗೆ ಪತ್ರಕರ್ತರು ಮುಕ್ತವಾಗಿ ಹೋಗಲು ಬಿಡದಿರುವುದು, ಪೊಲೀಸರು ಅವರನ್ನು ವಶಕ್ಕೆ ಪಡೆಯುವುದು ಅಥವಾ ಬಲವಂತವಾಗಿ ಅಲ್ಲಿಂದ ಓಡಿಸುತ್ತಿರುವುದರ ಬಗ್ಗೆ ಪ್ರಸ್ತುತ ತನಿಖೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಅದರೊಂದಿಗೆ, ಪತ್ರಕರ್ತರು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಸುದ್ದಿ ಸಂಗ್ರಹಿಸಲು ಮತ್ತು ವರದಿ ಮಾಡಲು ಕಾನೂನಿನ ಪ್ರಕಾರ ಸಿಗಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಈ ತನಿಖೆ ಗಮನ ಹರಿಸುತ್ತಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅಂದರೆ, ಈಗ ನಡೆಯುತ್ತಿರುವ ತನಿಖೆಯು ಪತ್ರಕರ್ತರ ಕೆಲಸದ ಸ್ವಾತಂತ್ರ್ಯ ಮತ್ತು ಅವರ ರಕ್ಷಣೆಯ ಅಸಲಿ ವಿಷಯಗಳನ್ನೇ ಕೈಬಿಟ್ಟಿದೆ ಎಂದು ಹೇಳಲಾಗಿದೆ.
ಅರ್ಜಿಯು ಭಾರತ ಸರ್ಕಾರದ ನಿರ್ದೇಶನಗಳನ್ನು ಕೋರಿದ್ದು, ನೈಜ ಸುದ್ದಿ ಸಂಗ್ರಹಣೆ ಅಥವಾ ವರದಿಗಾರಿಕೆಯಲ್ಲಿ ತೊಡಗಿರುವ ಮಹಿಳಾ ಪತ್ರಕರ್ತೆಯರು ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ, ಜನಸಂದಣಿ ನಿಯಂತ್ರಣ ಕಾರ್ಯಾಚರಣೆ ಅಥವಾ ಇತರ ಸಾರ್ವಜನಿಕ ಪ್ರಾಮುಖ್ಯತೆಯ ಕಾರ್ಯಕ್ರಮಗಳ ಸ್ಥಳದಲ್ಲಿ ಹಾಜರಿದ್ದಾರೆ ಅಥವಾ ಅದರ ಹತ್ತಿರ ಇದ್ದಾರೆ ಎಂಬ ಕೇವಲ ಕಾರಣಕ್ಕಾಗಿ ಅವರನ್ನು ದೈಹಿಕವಾಗಿ ಎಳೆದಾಡುವುದು, ಬೆದರಿಸುವುದು, ಅನಗತ್ಯವಾಗಿ ಬಂಧಿಸುವುದು ಅಥವಾ ಬಲವಂತವಾಗಿ ಅಲ್ಲಿಂದ ತೆರವುಗೊಳಿಸದಂತೆ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದೆ.
ಪತ್ರಕರ್ತರು ಕೇವಲ ಇಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ವರದಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಪೊಲೀಸರ ಯಾವುದೇ ಕ್ರಮಕ್ಕೆ ಒಳಗಾಗದೆ, ತಮ್ಮ ವೃತ್ತಿಪರ ಕರ್ತವ್ಯಗಳನ್ನು ಮುಕ್ತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು ಎಂದು ಈ ಅರ್ಜಿಯು ಕೋರಿದೆ.
Courtesy :livelaw.in


