Homeಮುಖಪುಟಸರ್ಕಾರದ ಮನವಿ ಧಿಕ್ಕರಿಸಿ ಮಣಿಪುರಕ್ಕೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

ಸರ್ಕಾರದ ಮನವಿ ಧಿಕ್ಕರಿಸಿ ಮಣಿಪುರಕ್ಕೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

- Advertisement -
- Advertisement -

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ನಡುವೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿ ಮಾಡಲು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಭಾನುವಾರ ಇಂಫಾಲ್‌ಗೆ ಆಗಮಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕಾರಣಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ರಾಜ್ಯ ಬಿಜೆಪಿ ಸರ್ಕಾರ ಶನಿವಾರ ಮನವಿ ಮಾಡಿತ್ತು. ಆದರೂ ಸರ್ಕಾರದ ಮನವಿಯನ್ನು ಧಿಕ್ಕರಿಸಿ ಸ್ವಾತಿ ಮಲಿವಾಲ್ ಅವರು ಭಾನುವಾರ ಇಂಫಾಲ್‌ಗೆ ಭೇಟಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ವಾತಿ ಮಲಿವಾಲ್ ಅವರು, ”ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಹೇಳುತ್ತಾರೆ, ಅದಕ್ಕಾಗಿಯೇ ನಾನು ಹೋಗಲು ಬಯಸುತ್ತೇನೆ” ಎಂದು ಮಲಿವಾಲ್ ಪಿಟಿಐಗೆ ತಿಳಿಸಿದರು.

”ಇಂತಹ 100 ಪ್ರಕರಣಗಳು [ಲೈಂಗಿಕ ದೌರ್ಜನ್ಯ] ಇವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಸರ್ಕಾರದಿಂದ ಸಹಾಯ ಸಿಕ್ಕಿದೆಯೇ? ಅವರು ಎಲ್ಲಿ ವಾಸಿಸುತ್ತಿದ್ದಾರೆ? ಮತ್ತು ಅವರು ಈಗ ಯಾವ ಪರಿಸ್ಥಿತಿಯಲ್ಲಿದ್ದಾರೆ? ಕಾನೂನು ನೆರವು, ಸಮಾಲೋಚನೆ ಅಥವಾ ಪರಿಹಾರ ಅವರಿಗೆ ಸಿಕ್ಕಿದೆಯೇ? ಅವರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆಯೇ? ಅವರು ಸುರಕ್ಷಿತವಾಗಿದ್ದಾರೆಯೇ? ಎಂಬ ಬಗ್ಗೆ ತಿಳಿಯಬೇಕಿದೆ. ಹಾಗಾಗಿ ನಾನು ಅವರನ್ನು ಭೇಟಿಯಾಗಲು ಬಯಸಿದ್ದೇನೆ” ಎಂದು ಮಲಿವಾಲ್ ಹೇಳಿದ್ದಾರೆ.

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಜುಲೈ 19ರಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆದವು. ಇಬ್ಬರು ಕುಕಿ ಮಹಿಳೆಯರನ್ನು ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೇ 4 ರಂದು ರಾಜ್ಯದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರವು ಮೊದಲ ಬಾರಿಗೆ ವರದಿಯಾದ ಒಂದು ದಿನದ ನಂತರ ಈ ಘಟನೆ ನಡೆದಿದೆ.

ಬಿಜೆಪಿ ಸರ್ಕಾರ ಮೇ 3ರಂದು ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಈ ವೀಡಿಯೊ ಜುಲೈ 19ರಂದು ವೈರಲ್ ಆಯಿತು. ಆ ಬಳಿಕ ಪ್ರತಿಪಕ್ಷಗಳು ಮತ್ತು ಸುಪ್ರೀಂ ಕೋರ್ಟ್‌ ತೀಕ್ಷ್ಣ ಮಾತುಗಳಿಂದ ಟೀಕಿಸಿದ್ದವು. ಆ ನಂತರ ಮಣಿಪುರ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಲು ಪ್ರಾರಂಭಿಸಿದರು. ಮೇ 18 ರಂದು ಎಫ್‌ಐಆರ್ ಸಲ್ಲಿಸಿದ್ದರೂ ಸಹ ಈವರೆಗೂ ಕ್ರಮ ಕೈಗೊಂಡಿರಲಿಲ್ಲ. ಇದೀಗ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರನೇ ವ್ಯಕ್ತಿ ಬಾಲಾಪರಾಧಿಯಾಗಿದ್ದಾನೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಮಾಡಲು ಶುರುಮಾಡಿದ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ”ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಹಾಗಾಗಿ ಇಂಟರ್ನೆಟ್ ಬಂದ್ ಮಾಡಿದ್ದೇವೆ” ಎಂದು ಹೇಳಿದ್ದರು.

ಕಾಂಗ್‌ಪೋಕ್ಪಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯದ ವಿಡಿಯೋ ಬೆಳಕಿಗೆ ಬಂದ ನಂತರ ಹಲವಾರು ಮಣಿಪುರಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಾಗುತ್ತಿವೆ. ಮೇ 16 ರಂದು, ಇಬ್ಬರು ಕುಕಿ ಮಹಿಳೆಯರ ಅಪಹರಣ, ಅತ್ಯಾಚಾರ ಮತ್ತು ಹತ್ಯೆಯ ಕುರಿತು ಕಾಂಗ್‌ಪೋಪಿಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿತ್ತು.

ಭಾನುವಾರ ಇಂಫಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿವಾಲ್, ”ಲೈಂಗಿಕ ದೌರ್ಜನ್ಯದ ದೂರುದಾರರ ಸ್ಥಿತಿಗತಿ ಕುರಿತು ಮಾತನಾಡಲು ಮುಖ್ಯಮಂತ್ರಿಯೊಂದಿಗೆ ಸಮಯ ಕೋರಿದ್ದೇನೆ” ಎಂದು ಹೇಳಿದರು.

”ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಪಾರಾಗಲು ಹಲವಾರು ಮಣಿಪುರಿ ಮಹಿಳೆಯರು ದೆಹಲಿಗೆ ಬಂದಿದ್ದಾರೆ. ನಾನು ಅವರ ಸಮಸ್ಯೆಗಳನ್ನು ಾಲಿಸಲು ಬಯಸುತ್ತೇನೆ” ಎಂದು ಹೇಳಿದರು.

”ಈ ಮಣಿಪುರ ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚು ಜನರನ್ನು ಸಾಯಿಸಲಾಗಿದೆ. 60,000 ಜನರನ್ನು ಸ್ಥಳಾಂತರಿಸಲಾಗಿದೆ. ಹಿಂಸಾಚಾರದಿಂದ ಧ್ವಂಸಗೊಂಡಿರುವ ಮಣಿಪುರಕ್ಕೆ ಭೇಟಿ ನೀಡುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read