Homeಕರೋನಾ ತಲ್ಲಣಕೇಂದ್ರದ ದಮನಕಾರಿ ರಾಜಕೀಯ ತಂತ್ರ ಮತ್ತು ಕೋವಿಡ್‌ ನಂತರದಲ್ಲಿ ಸಂಭವಿಸಬಹುದಾದ ಹೊಸ ಬದಲಾವಣೆಗಳು

ಕೇಂದ್ರದ ದಮನಕಾರಿ ರಾಜಕೀಯ ತಂತ್ರ ಮತ್ತು ಕೋವಿಡ್‌ ನಂತರದಲ್ಲಿ ಸಂಭವಿಸಬಹುದಾದ ಹೊಸ ಬದಲಾವಣೆಗಳು

- Advertisement -
- Advertisement -

ಕೊರೋನಾ ಸಾಂಕ್ರಾಮಿಕವು ಭಾರತದಲ್ಲಿ ಈಗಾಗಲೇ ಹಲವಾರು ವರ್ಗ ಮತ್ತು ಜಾತಿಗಳ ಜನರ ಉದ್ಯೋಗ ಮತ್ತು ಬದುಕನ್ನು ಹೇಳ ಹೆಸರಿಲ್ಲದಂತೆ ಮಾಡಿದೆ. ಹಾಗಾದರೆ ಈ ದುರಂತ ಕಾಲದಲ್ಲಿ ಕಲಿತ ಪಾಠಗಳು ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಬಹುದೇ?

ಕೆಮರೂನಿಯನ್ ಚಿಂತಕ ‘ಅಚಿಲ್ಲೆ ಎಂಬೆಂಬೆ’ 2019 ರಲ್ಲಿ ತಮ್ಮ ‘ನೆಕ್ರೊಪಾಲಿಟಿಕ್ಸ್’ ಕೃತಿಯಲ್ಲಿ ಹೀಗೆ ಹೇಳುತ್ತಾರೆ. ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆಗಳು ತಮ್ಮ ಮೂಲದಲ್ಲಿ ಹುದುಗಿರಿವ ಸಮುದಾಯಗಳನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ, ಶೋಷಿಸುವ ಮತ್ತು ವ್ಯವಸ್ಥೆಯಿಂದ ದೂರವಿಡುವ ಕ್ರೌರ್ಯದ ಕುರಿತು ಯೋಚಿಸಿ ಸರಿಪಡಿಸಲು ಮುಂದಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ವ್ಯವಸ್ಥೆಯ ಒಳಗೆ ಗುಪ್ತಗಾಮಿನಿಯಾಗಿ ಹರಿಯುವ ಈ ಅಸಮಾನತೆಯ ನೀತಿಗಳನ್ನು ಬಿಟ್ಟು ಮುಂದಕ್ಕೂ ಹೋಗುವುದಿಲ್ಲ. ಸಾವಿಗೆ ಕಾರಣವಾಗಲು ಮತ್ತು ಸಾವನ್ನು ನಿಯಂತ್ರಿಸಲು ಈ ವಿಧಾನಗಳನ್ನು ವ್ಯವಸ್ಥಿತವಾಗಿ ಜನರ ನಿಯಂತ್ರಣ ಕ್ರಮಗಳನ್ನಾಗಿ ಬಳಸಿಕೊಳ್ಳುತ್ತಿವೆ.

ದುರಂತಗಳನ್ನು ಸುಮ್ಮನೆ ಕುಳಿತು ನೋಡುವ ಮೂಲಕ ಅಥವಾ ಕೆಲವೊಮ್ಮೆ ಭಯವನ್ನು ಹುಟ್ಟಿಸುವ ಮುಖೇನ ಇಲ್ಲವೇ ವ್ಯವಸ್ಥೆಯ ಅಂಚಿನಲ್ಲಿರುವ ಜನರಿಗೆ ಒಂದಷ್ಟು ಸಾವಿನ ಭಯದ ರುಚಿಯನ್ನು ತೋರಿಸುವ ಮುಖಾಂತರ ಸಮಾಜ ಮತ್ತು ವ್ಯವಸ್ಥೆಯನ್ನು ನಿಯಂತ್ರಿಸುವ ತಮ್ಮ ಶಕ್ತಿಯನ್ನು ಪ್ರಯೋಗಿಸುತ್ತಾರೆ.

ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ಈ ರೀತಿ ನಮ್ಮಆಳುವ ವರ್ಗ ಅಥವಾ ಆಡಳಿತ ವ್ಯವಸ್ಥೆಯೇ ನಡೆಸುವ ಸೂಕ್ಷ್ಮ ಹಿಂಸೆಯು ಮೇಲ್ನೋಟಕ್ಕೆ ಹಿಂಸೆಯಂತೆ ಯಾರಿಗೂ ಕಾಣುವುದಿಲ್ಲ. ಆದರೆ ನಿಧಾನವಾಗಿ ಜನರಿಗೇ ಅರಿವಿಲ್ಲದಂತೆ ಅವರ ರಕ್ತ ಹರಿಸುವುದು, ವ್ಯವಸ್ಥಿತ ಶೋಷಣೆ, ದಿನ ನಿತ್ಯ ಅಧಿಕಾರ, ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಜನರನ್ನು ಹಿಂಸಿಸಲಾಗುತ್ತದೆ. ಆಮೂಲಕ ತನಗೆ ಸವಾಲಾಗಿ ಪರಿಣಮಿಸಿದ ವರ್ಗವನ್ನು ಕ್ಷೀಣಿಸುವಂತೆ ಅಥವಾ ಇಲ್ಲವಾಗುವಂತೆ ನೋಡಿಕೊಳ್ಳಲು ವ್ಯವಸ್ಥೆ ಮುಂದಾಗುತ್ತದೆ.

ದಿನ ಕಳೆದಂತೆ ಜನರನ್ನು ನಿಯಂತ್ರಿಸಲು ಬಳಸುವ ಶಕ್ತಿ ನಿತ್ಯದ ರಾಜಕೀಯ ತಂತ್ರಗಾರಿಕೆಯಾಗಿ ಸರ್ಕಾರದ ಮೂಲ ಉದ್ಧೇಶವಾಗಿ ಪರಿಣಮಿಸಿಬಿಡುತ್ತದೆ. ಈ ನಾಕ್ರೊಪಾಲಿಟಿಕ್ಸ್ ಅಥವಾ ತನಗೆ ಬೇಕಾದಂತೆ ಜನರನ್ನು ನಿಯಂತ್ರಿಸುವ ರಾಜಕೀಯ ಅತಿರೇಕಕ್ಕೆ ಹೋದಾಗ ಕೆಲವರನ್ನು ಸಾಯಿಸುವ, ಬಂಧಿಸುವ ನಿರ್ಲಕ್ಷ್ಯ ಧೋರಣೆಯ ಮೂಲಕ ವ್ಯವಸ್ಥೆಯಿಂದ ಹೊರಗೆ ತಳ್ಳಿ ತನಗೆ ಸದ್ಯಕ್ಕೆ ಎದುರಾಗುವ ಕಂಟಕಗಳನ್ನು ಅಧಿಕಾರವನ್ನು ಶಾಶ್ವತಗೊಳಿಸಲು ಉಂಟಾಗುವ ತೊಡಕನ್ನು ನಿವಾರಿಸಿಕೊಳ್ಳಲಾಗುತ್ತದೆ.

ಕೊರೊನಾ 2 ನೇ ಅಲೆ ಗ್ರಾಮೀಣ ಭಾರತಕ್ಕೆ; ಪ್ರಕರಣಗಳು ಮತ್ತು ಸಾವುಗಳು ನಾಲ್ಕು ಪಟ್ಟು ಹೆಚ್ಚಳ! | NaanuGauri

 

ವಿಚಿತ್ರವೆಂದರೆ ಸರ್ಕಾರದ ಈ ದಮನಕಾರಿ ನೀತಿಗೆ ಎಂದಿಗೂ ಬಲಿಯಾಗುವವರು ಸಮಾಜದ ಕಟ್ಟಕಡೆಯ ಅವಕಾಶ ಸೌಲಭ್ಯಗಳಿಂದ ವಂಚಿತರಾದ ಜನಗಳೇ. ಯಾಕೆಂದರೆ ಸರ್ಕಾರಕ್ಕೆ ಈ ದೊಡ್ಡ ಸಮುದಾಯ ಬೊಕ್ಕಸ ತುಂಬಲಿಕ್ಕಾಗಲಿ ಅಥವಾ ಸದಾ ತನ್ನ ಬೆನ್ನಿಗೆ ನಿಲ್ಲುವ ಓಟ್ ಬ್ಯಾಂಕ್ ಆಗಿ ಉಪಯೋಗಕ್ಕೆ ಬರುವುದಿಲ್ಲ. ಬದಲಾಗಿ ತನ್ನ ಸುಗಮ ಆಢಳಿತ ವ್ಯವಸ್ಥೆಗೆ ಈ ಸಮುದಾಯಗಳಿಗೆ ವ್ಯಯಿಸುವ ಹಣ ಹೊರೆಯಾಗಿ ಸರ್ಕಾರಕ್ಕೆ ತೋರುತ್ತದೆ. ಮತ್ತು ತಾನು ದೇಶದ ಮುಂದೆ ಕಟ್ಟಿಕೊಡುವ ಭ್ರಮಾತ್ಮಕ ಅಭಿವೃದ್ಧಿಯ ಸಾಮ್ರಾಜ್ಯದ ಕನಸಿಗೆ ಈ ದೊಡ್ಡ ವರ್ಗ ದುಸ್ವಪ್ನವಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ಭಾರತದಲ್ಲಿ ಕೊರೋನಾ ತಂದಿಟ್ಟ ದುರಂತವು ಈ ದಮನಕಾರಿ ನಿಯಂತ್ರಣ ರಾಜಕೀಯಕ್ಕೆ ಅನವು ಮಾಡಿಕೊಟ್ಟಿದೆ. ಸರ್ಕಾರದ ವೈಫಲ್ಯತೆ ಮತ್ತು ಹೆಚ್ಚುತ್ತಿರುವ ಕೊರೋನಾ ಸಾಂಕ್ರಾಮಿಕದಿಂದ ಉಂಟಾದ ಸಾವುನೋವುಗಳು ಮತ್ತು ಅವನ್ನು ಮರೆಮಾಚುವ ಯತ್ನ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಬೀರಿವೆ. ಆದರೆ ಇಷ್ಟೊಂದು ಅನಾಹುತಗಳ ನಡುವೆಯೂ ದೇಶದ ಆಡಳಿತ ವ್ಯವಸ್ಥೆ ಅಸ್ವಾಭಾವಿಕ ಘಟನೆಗಳು ಆಗಿಯೇ ಇಲ್ಲವೆಂಬಂತೆ ಸಾಮಾನ್ಯವಾಗಿ ವರ್ತಿಸುತ್ತಿದೆ.

ಈ ಕೊರೋನಾ ದುರಂತದ ಸಂದರ್ಭದಲ್ಲಿ ನಾವು ಅಚಿಲ್ಲೆ ಅಂಬೆಬೆ ಹೇಳುವ ನೆಕ್ರೊಪಾಲಿಟಿಕ್ಸ್‌ ಅಥವಾ ನಿರ್ದಿಷ್ಟ ದಮನಕಾರಿ ನಿಯಂತ್ರಣ ರಾಜಕೀಯ ತಂತ್ರಕ್ಕೆ ಸರ್ಕಾರ ಮೊರೆಹೋಗಿರುವುದನ್ನು ಗಮನಿಸಲೇಬೇಕು.

ಪ್ರತಿನಿತ್ಯ ಶವಾಗಾರದಲ್ಲಿ ದುಡಿಯುವ ನೂರಾರು ಕಾರ್ಮಿಕರು ಅನಾಥ ಶವಗಳಿಗೆ ಘನತೆಯ ಅಂತ್ಯಕ್ರಿಯೆ ನೀಡುತ್ತಿರುವ ಕಥೆಗಳನ್ನು ಕೇಳುತ್ತಿದ್ದೇವೆ. ಸಾವಿರಾರು ಜನ ಸ್ವಚ್ಛತಾ ಕರ್ಮಿಗಳು ತಮ್ಮ ಕಾಯಕ ನಿಲ್ಲಿಸದೇ ನಮ್ಮ ಮನೆ ಬೀದಿಗಳನ್ನು ಸ್ವಚ್ಛಗೊಳಿಸುತ್ತಲೇ ಇದ್ದಾರೆ. ಸರ್ಕಾರಿ ಚಿತಾಗಾರದಲ್ಲಿ ಕೆಲಸಮಾಡುವ ಉದ್ಯೋಗಿಗಳು ಬಿಡುವಿಲ್ಲದೇ ಹಗಲಿರುಳು ಶ್ರಮಪಡುತ್ತಿದ್ದಾರೆ. ಆದರೆ ಸರ್ಕಾರಗಳು ಇವರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಮುಖ್ಯವಾಗಿ ಗಮನಿಸಬೇಕಾದ ಅಂಶ ಬಹುತೇಕ ಈ ಎಲ್ಲ ಜನರು ದಲಿತ ಅಥವಾ ಹಿಂದುಳಿದ ಸಮುದಾಯಕ್ಕೆ ಸೇರಿದವರು. ನಿತ್ಯ ಇವರೂ ಸೋಂಕಿನ ಅಪಯಾದ ಕತ್ತಿಯಲಗಿನ ಮೇಲೆ ನಡೆಯುತ್ತ ತಮ್ಮ ದಿನ ನಿತ್ಯದ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಇವರ ಸಾವಿನ ಕುರಿತು ಎದುರಿಸುತ್ತಿರುವ ಆತಂಕಗಳ ಕುರಿತು ನಮ್ಮಲ್ಲಿ ಯಾವುದೇ ಸುದ್ದಿಯಾಗುವುದಿಲ್ಲ. ಸರ್ಕಾರಗಳು ಇವರ ಕೊಡುಗೆಯನ್ನು ಲೆಕ್ಕಕ್ಕೂ ತೆಗೆದುಕೊಳ್ಳುವುದಿಲ್ಲ.

ಹಾಗಿದ್ದರೆ ಉದ್ದೇಶಿತವಾಗಿಯೇ ಈ ಜನರು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆಯೇ ? ಕನಿಷ್ಠ ಸುರಕ್ಷತೆಯ ಸೌಲಭ್ಯವನ್ನೂ ನೀಡದೇ ಇವರನ್ನು ಹೋರಾಟದ ಮುಂಚುಣಿಯಲ್ಲಿ ನಿಲ್ಲಿಸಿ ಸರ್ಕಾರ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆಯೇ?

ಇದನ್ನೂ ಓದಿ: ನಿರೀಶ್ವರವಾದದ ತಿಳಿವನ್ನು ಪಸರಿಸುತ್ತಿರುವ ’ದೇವರು ಎಂಬುದೇಕಿಲ್ಲ?’ ಪುಸ್ತಕ

ಭಾರತದ ನದಿಗಳಲ್ಲಿ ಹರಿದು ಬರುತ್ತಿರುವ ಗುರುತಿಗೆ ಸಿಗದ ನೂರಾರು ಮೃತದೇಹಗಳು ಮತ್ತು ಸ್ಮಶಾಣದಲ್ಲಿನ ದೇಹಗಳು ಸರ್ಕಾರದ ಈ ನಿರ್ಲಕ್ಷ ನೀತಿಯನ್ನೇ ಸ್ಪಷ್ಟ ಪಡಿಸುತ್ತಿವೆ. ಇನ್ನು ದೇಶದ ವಿವಿಧ ಭಾಗಗಳ ಕೊಳಗೇರಿಗಳಲ್ಲಿ, ಊರಿನಿಂದ ಹೊರಗೆ ಅತ್ಯಂತ ಜನನಿಬಿಡ ಪರಿಸ್ಥಿತಿಯಲ್ಲಿ ವಾಸಿಸುವ ಜನರ ಕತೆ ಇದಕ್ಕೆ ವಿಭಿನ್ನವಾಗಿಲ್ಲ.

ಈ ಎಲ್ಲ ಜನರು ಒಂದು ಜಾತಿ ಆಧಾರಿತ ಶ್ರಮ ವಿಭಜನೆಯ ಕರಾಳ ವ್ಯವಸ್ಥೆಯ ಕಾರಣದಿಂದ ಸಮಾಜದ ಹೊರಗೆ ದೂಡಲ್ಪಟ್ಟಿದ್ದಾರೆ. ನಗರದ ಆಚೆ, ನಾಗರಿಕ ಸಮುದಾಯದಿಂದ ದೂರದಲ್ಲಿ ಈ ಜನರ ವಸತಿ ವ್ಯವಸ್ಥೆಯನ್ನು ಸರ್ಕಾರವೇ ಮುಂದೆ ನಿಂತು ಮಾಡಿರುತ್ತದೆ. ಆದರೆ ಇದುವರೆಗೆ ಕನಿಷ್ಠ ವಸತಿ, ಶುದ್ಧ ಕುಡಿಯುವ ನೀರಿನಂತಹ ಯಾವ ಸೌಲಭ್ಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನಗಳು ಆಢಳಿತ ವ್ಯವಸ್ಥೆಯಿಂದ ಕಂಡುಬರುವುದಿಲ್ಲ.

ಕೊರೊನಾ: ಮೃತ ದೇಹವನ್ನು ಕಸದ ವಾಹನದಲ್ಲಿ ಸಾಗಾಟ! | Naanu gauri

ಇನ್ನು ದುರಂತವೆಂದರೆ ಸೋಂಕು, ಪ್ರವಾಹ ಮುಂತಾದ ವಿಪತ್ತಿನ ಸಂದರ್ಭದಲ್ಲಿ ಹೀಗೆ ದೂರದ ಕೊಳಗೇರಿಯಲ್ಲಿರುವ ಜನರೇ ಮೊದಲು ಬಲಿಯಾಗುತ್ತಾರೆ. ಯಾಕೆಂದರೆ ಅವರ ಬದುಕಿನ ಸ್ಥಿತಿಯಲ್ಲಿ ವಿಪತ್ತಿನಿಂದ ಸಂರಕ್ಷಿಸಿಕೊಳ್ಳುವ ಯಾವ ವಿಧಾನ ಸೌಲಭ್ಯಗಳನ್ನು ಅವರು ಹೊಂದಿರುವುದು ಸಾಧ್ಯವಿಲ್ಲ. ವ್ಯವಸ್ಥೆಯೇ ನಿರ್ಮಿಸಿದ ಅವರ ವಸತಿ ವ್ಯವಸ್ಥೆಗಳ ಮಾಲಿನ್ಯ, ಅಪಾಯಕಾರೀ ವಾತಾವರಣ ಈ ಜನರಿಗೆ ಬದುಕುವ ಯಾವ ಆಯ್ಕೆಯನ್ನೂ ನೀಡುವುದಿಲ್ಲ.

ಇದು ಸರ್ಕಾರಗಳಿಗೆ ತಿಳಿಯದ ವಿಷಯಗಳಲ್ಲ. ಆದರೆ ಇವರು ತನಗೆ ಸಂಬಂಧಿಸಿದವರೇ ಅಲ್ಲ, ಅಂತ್ಯದಲ್ಲಿರುವಷ್ಟು ಜನರ ಕಷ್ಟಕ್ಕೆ ಕರೆಗೊಟ್ಟರೆ ಉಳಿದ ಜನರ ವ್ಯವಸ್ಥೆ ಕಷ್ಟವೆಂಬ ಕಾರಣಕ್ಕೆ ಸರ್ಕಾರ ಯಾವತ್ತು ತನ್ನ ಆಯ್ಕೆಯಾಗಿ ಮೇಲ್ಜಾತಿ, ಮೇಲ್ವರ್ಗವನ್ನೇ ಆಯ್ದುಕೊಳ್ಳುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯಂದರೆ ಕರ್ನಾಟಕ ಸರ್ಕಾರ ಲಾಕ್‌ ಡೌನ್‌ ಘೋಷಿಸಿದ ಸಂದರ್ಭದಲ್ಲಿ ತ್ವರಿತವಾಗಿ ಅರ್ಚಕರ ನೆರವಿಗೆ ಧಾವಿಸಿದ ಘಟನೆ.

ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ಇದೇ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೊಳಗೇರಿಯ ನಿವಾಸಿಗಳೋ ಹೆಣ ಹೂಳುವವರೋ ಅದೇ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರೆ ಅದರ ಕತೆ ಬೇರೆಯದೇ ಆಗಿರುತ್ತಿತ್ತು. ನಿಜದಲ್ಲಿ ಈ ಜನಗಳ ದನಿ ಸರ್ಕಾರಕ್ಕೆ ಯಾವತ್ತೂ ಕೇಳುವುದು ಸಾಧ್ಯವಿಲ್ಲ. ಬದಲಾಗಿ ಅವರು ತಮ್ಮ ದುರ್ಬಲ ರೋಗ ನಿರೋಧಕ ಶಕ್ತಿಯೊಂದಿಗೆ ಸಾಂಕ್ರಾಮಿಕವನ್ನು ಎದುರಿಸುತ್ತಾರೆ. ದುರ್ಬಲ ಆರ್ಥಿಕ, ದೈಹಿಕ ಮತ್ತು ಮಾನಸಿಕ ಶಕ್ತಿಯೊಂದಿಗೇ ಎಲ್ಲವನ್ನೂ ಎದುರಿಸಬೇಕು.

ಮತ್ತೊಂದೆಡೆ ಸರ್ಕಾರ ಇದ್ದಕ್ಕಿದ್ದಂತೆ ನಗರ ಹಳ್ಳಿಗಳನ್ನು ಸ್ಥಗಿತಗೊಳಿಸಿದಾಗ ಹಸಿವಿನಿಂದ ಅನಿವಾರ್ಯವಾಗಿ ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ವ್ಯವಸ್ಥೆಯ ಮೇಲ್ಪದರದಲ್ಲಿ ಕಾಣಿಸುವ ಈ ಅವ್ಯವಸ್ಥೆ ಮತ್ತು ಸಮಸ್ಯೆಗಳನ್ನು ನಿವಾರಿಸುವುದು ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿರುವ ವಿಷಯವಲ್ಲ. ಉದಾರವಾದಿ ಸಾಮ್ರಾಜ್ಯಗಳ ಮೂಲಭೂತ ಅಡಿಪಾಯವೇ ಈ ವ್ಯವಸ್ಥೆಯನ್ನು ಜೀವಂತವಾಗಿಡುವುದು.

ಕೋವಿಡ್‌ ಮೊದಲನೇ ಅಲೆಯಲ್ಲಿ ದೈಹಿಕ ಶ್ರಮದ ಕೆಲಸಮಾಡುವ ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ನಾಗರಿಕ ವ್ಯವಸ್ಥೆ ಪರಿಗಣನೆಗೆ ತೆಗೆದುಕೊಳ್ಳದ ಒಂದಷ್ಟು ವರ್ಗ ಸೋಂಕಿನಿಂದ ಅದಲ್ಲವಾದರೆ ನಿರುದ್ಯೋಗದಿಂದ ಬಲವಾದ ಹೊಡೆತ ತಿಂದಿತು. ಮತ್ತು ಬಲವಂತವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸ ಹೊರಟಿತು.

ದೇಶದಲ್ಲಿ ಒಂದೇ ದಿನ 40 ಸಾವಿರ ಕೊರೊನಾ ಪಾಸಿಟಿವ್: 2021 ರ ಅತಿ ಹೆಚ್ಚು ಏಕದಿನ ಹೆಚ್ಚಳ
PC: Rupak De Chowdhuri, REUTERS

ಆದರೆ ಇದಕ್ಕೆ ವಿರುದ್ಧವಾಗಿ ಕೋವಿಡ್‌ ಎರಡನೆ ಅಲೆಯಲ್ಲಿ ಮೇಲ್ನೋಟಕ್ಕೆ ಕಾಣುವಂತೆ ದೇಶದ ಮಧ್ಯಮ-ಮೇಲ್ಮಧ್ಯಮ ವರ್ಗಗಳು ಮತ್ತು ಮೇಲ್ಜಾತಿಗೆ ಸೇರಿದವರು ಗಂಭೀರವಾದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆಕ್ಸಿಜನ್‌, ವೆಂಟಿಲೇಟರ್‌, ಆಸ್ಪತ್ರೆಯ ಬೆಡಗಳ ಅಲಭ್ಯತೆಯು ಈ ವರ್ಗವನ್ನು ದು:ಸ್ಥಿತಿಗೆ ತಲುಪಿದೆ. ಹಾಗಾಗಿ ಎರಡನೇ ಅಲೆಯು ಮೊದಲನೇ ಅಲೆಗಿಂತ ಹೆಚ್ಚು ವ್ಯಾಪಕಾದ ಪರಿಣಾಮವನ್ನು ಗಾಯವನ್ನು ವ್ಯವಸ್ಥೆಗೆ ಮಾಡುತ್ತಿದೆ. ಇದು ದೇಶದ ಆರೋಗ್ಯ ವ್ಯವಸ್ಥೆಯ ದುರವಸ್ಥೆಯನ್ನು ಜಗಜ್ಜಾಹೀರುಗೊಳಿಸುತ್ತಿದೆ. ಹಾಗಾಗಿಯೇ ಸರ್ಕಾರಗಳು ಮೊದಲನೇ ಅಲೆಗಿಂತ ಎರಡನೇ ಅಲೆಗೆ ಹೆಚ್ಚು ಕಂಗಾಲಾಗಿವೆ. ಆರೋಗ್ಯ ವ್ಯವಸ್ಥೆಯ ದು:ಸ್ಥಿತಿ ಸರ್ಕಾರದ ದಮನಕಾರಿ ನಿಯಂತ್ರಣ ರಾಜಕೀಯದ ದುಶ್ಪರಿಣಾಮ ಇಂದು ಸೌಲಭ್ಯವನ್ನು ಹೊಂದಿದ ಆರ್ಥಿಕ ಮತ್ತು ಸಾಮಾಜಿಕವಾಗಿ ಸುಸ್ಥಿರವಾಗಿರುವ ನಾಗರಿಕರಿಗೂ ತಟ್ಟಿದೆ.

ಇದನ್ನೂ ಓದಿ: ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

ತಮ್ಮ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಸ್ಥಾನಮಾನಗಳಿಂದ ಜಗತ್ತಿನ ಮುಂದೆ ಭಾರತದ ಚಿತ್ರಣವಾಗಿ ನಿಲ್ಲುವ ಈ ವರ್ಗ ತಾನು ಎಂದೂ ಊಹಿಸಿರದ ಆಘಾತಕ್ಕೆ ಒಳಗಾಗಿದೆ. ತಮ್ಮ ದು:ಸ್ವಪ್ನಗಳು ನಿಜಾವಾಗುತ್ತಿರುವುದನ್ನು ಕಂಡು ಅವರು ತಾವು ಪೋಷಿಸಿಕೊಂಡು ಬಂದಿದ್ದ ಭದ್ರತೆಯ ಭಾವದಿಂದ ಅನಿವಾರ್ಯವಾಗಿ ಹೊರಬರಲೇ ಬೇಕಿದೆ. ಯಾಕೆಂದರೆ ಇಂದು ಮೇಲ್ಮಧ್ಯಮ ವರ್ಗಗಳು ಎದುರಿಸುತ್ತಿರುವ ಸಮಸೈಗಳನ್ನು ನೂರಾರು ವರ್ಷಗಳಿಂದ ಕೆಳವರ್ಗಗಳು ಅನುಭವಿಸುತ್ತಲೇ ಬರುತ್ತಿವೆ.

ಆದರೆ ತಮ್ಮ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳಿಂದ ಇಂತಹ ಸಮಸೈಗಳನ್ನು ಅನುಭವಿಸದೇ ಆ ಕುರಿತು ಅಂಧಕಾರದಲ್ಲೇ ಇದ್ದ ಜನರು ಇಂದು ನಾಟಕೀಯವಾದ ಅನುಭವಗಳಿಗೆ ಒಳಗಾಗುತ್ತಿದ್ದಾರೆ. ಸುಲಭಕ್ಕೆ ಎಟಕುವ ಸಾಮಾಜಿಕ ಮಾಧ್ಯಮಗಳ ಮೂಲಕ ಮಹಾ ದುರಂತವೆಂಬಂತೆ ಇದೆಲ್ಲವನ್ನು ಜಗತ್ತಿನ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

ವಿಪರ್ಯಾಸವೆಂದರೆ ಸೌಲಭ್ಯಗಳನ್ನು ಪಡೆದ ಪ್ರಿವಿಲೆಜ್ಡ್‌ ಜನರೇ ಇಂದು ತಮ್ಮ ಜೀವನ ಶೈಲಿಯಿಂದ ದೊರೆತಿರಬಹುದು ಎಂದು ನಂಬಿದ್ದ ರೋಗ ನಿರೋಧಕ ಶಕ್ತಿ ಯಾವ ಪ್ರಯೋಜನಕ್ಕೂ ಬರುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಹಾಗದಾರೆ ಈ ಶ್ರೇಣಿಕೃತ ವರ್ಗ ವ್ಯವಸ್ಥೆ ಮಾನವ ಶಾಸ್ತ್ರದ ಆಧಾರದಲ್ಲಿ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತಹ ಮಹತ್ವದ ಬದಲಾವಣೆಗಳನ್ನೇನೂ ತಂದಿಲ್ಲ. ಈಗ ಹುಟ್ಟಿಕೊಳ್ಳುವ ಮಹತ್ವದ ಪ್ರಶ್ನೆಯೆಂದರೆ ಈಗಲಾದರೂ ಭಾರತದ ಮೇಲ್ಮಧ್ಯಮ ವರ್ಗ ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಆರೋಗ್ಯ ವ್ಯವಸ್ಥೆಗಾಗಿ, ಜೀವ ಉಳಿಸುವ ನ್ಯಾಯಯುತ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತದೆಯೇ ಎಂದು ?

ಇದನ್ನೂ ಓದಿ: ಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

ಎರಡನೇಯದಾಗಿ ಸಾಂಕ್ರಮಿಕ ನಮ್ಮ ಮುಂದೆ ತಂದಿಟ್ಟ ಮತ್ತೊಂದು ಮಹತ್ವದ ಸಮಸ್ಯೆಯೆಂದರೆ ಆಸ್ಪತ್ರೆಯ ಶವಾಗಾರಗಳಲ್ಲಿ ಅನಾಥವಾಗುವ ಸೋಂಕಿತರ ಮೃತ ದೇಹಗಳು. ಈ ಹಿಂದೆಂದೂ ಭಾರತ ಈ ರೀತಿಯ ಸಂದಿಗ್ಧಗಳಿಗೆ ಸಾಕ್ಷಿಯಾಗಿರಲಿಲ್ಲ. ಕೋವಿಡ್‌ ಸೋಂಕಿತ ಮೃತದೇಹಗಳು ಅಸ್ಪಶ್ಯವಾಗಿರುವುದು ಮೇಲ್ಮಧ್ಯಮ ಜಾತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ವರ್ಗ ಇದುವರೆಗೆ ಅಸ್ಪ್ರಶ್ಯತೆಯ ಅನುಭವವನ್ನು ಹೊಂದಿಲ್ಲ.

ಇಂದು ಕೋವಿಡ್‌ ಸೋಂಕು ತಗುಲಿ ಮೃತಪಟ್ಟ ಎಲ್ಲ ದೇಹಗಳನ್ನು ಸಮಾನವಾಗಿ ಪರಿಗಣಿಸುತ್ತಿರುವ ಪರಿಣಾಮ, ಸ್ಪ್ರಶ್ಯ ಜಾತಿಯ ಮೃತದೇಹಗಳಿಗೆ ಅಸ್ಪ್ರಶ್ಯ ಪರಿಗಣಿಸಲ್ಪಟ್ಟಿದ್ದ ಜನರೂ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಿದ್ದಾರೆ. ಹಾಗಾದರೆ ಮೇಲ್ಜಾತಿಗಳಿಗೂ ನೇರವಾಗಿ ತಟ್ಟಿದ ಅಸ್ಪ್ರಶ್ಯತೆಯ ಅನುಭವ ಭಾರತದ ಜಾತಿ ಪದ್ಧತಿ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಬಹುದೇ ? ಯಾಕೆಂದರೆ ಸಾವಿರಾರು ವರ್ಷಗಳಿಂದ ಮೇಲ್ಜಾತಿಗಳಲ್ಲಿ ಬೆಳೆದು ಬಂದಿದ್ದ ತಮ್ಮ ಕುರಿತಾದ ಶ್ರೇಷ್ಠತೆ ಮತ್ತು ಪವಿತ್ರ ಭಾವಗಳನ್ನು ಕೋವಿಡ್‌ ಸಾವುಗಳು ಕುಸಿಯುವಂತೆ ಮಾಡುತ್ತಿವೆ.

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಆದರೆ ಈ ತಾತ್ಕಾಲಿಕ ಸಂದಿಗ್ಧತೆ ಮತ್ತು ಅನುಭವಗಳನ್ನು ದಲಿತ ಮತ್ತು ಇತರ ಹಿಂದುಳಿದ ಜಾತಿಗಳು ಅನುಭವಿಸುತ್ತಿರುವ ಮತ್ತು ಸಮಾಜದಲ್ಲಿ ಅವರ ಕುರಿತಾಗಿ ಆಳವಾಗಿ ಬೇರೂರಿರುವ ಅಸ್ಪ್ರಶ್ಯತೆಗೆ ಹೋಲಿಸಲು ಸಾಧ್ಯವಿಲ್ಲ. ಆದರೆ ಭಾರತದಲ್ಲಿ ಉದ್ಭವಿಸಿದ ಈ ಘಟನೆಗಳು ಇದುವರೆಗೆ ಇದ್ದ ಅಸ್ಪ್ರಶ್ಯತೆಯ ಸ್ವರೂಪವನ್ನು ಬದಲಾಯಿಸ ಬಲ್ಲವು. ವೈದ್ಯರು, ಶುಷ್ರುಕರು ಅಥವಾ ಇನ್ನಾವುದೋ ರೂಪದಲ್ಲಿ ಆರೋಗ್ಯ ವ್ಯವಸ್ಥೆಯ ಭಾಗವಾಗಿದ್ದ ಮೇಲ್ಮಧ್ಯಮ ವರ್ಗದ ಜನರು ತಮಗಾದ ಸ್ವಂತ ಅನುಭವಗಳಿಂದ ನಿಜವಾಗಿ ಎಲ್ಲರನ್ನೂ ಒಳಗೊಳ್ಳುವ ಸುಧಾರಿತ ಆರೋಗ್ಯ ವ್ಯವಸ್ಥೆಗಾಗಿ, ಆ ಕುರಿತು ಯೋಜನೆಗಳಿಗಾಗಿ ಒತ್ತಾಯಿಸಲು ಮುಂದಾಗಬಹುದೇ ? ತಮಗಷ್ಟೇ ಸೀಮಿತವಲ್ಲದ ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳ ಕಡೆಗೆ ಈ ವರ್ಗ ಇನ್ನಾದರೂ ಗಮನ ಹರಿಸಬಹುದೇ ?

ಇದನ್ನೂ ಓದಿ: ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಮೂರನೇಯದು, ಸರ್ಕಾರದ ನಿರ್ದಿಷ್ಟ ರಾಜಕೀಯ ತಂತ್ರದ ಪರಿಣಾಮವಾಗಿ ದೇಶದಲ್ಲಿ ರಾಜಕೀಯ ಶಕ್ತಿಗಳನ್ನು ರೂಪಿಸುವ, ನೀತಿ ನಿರೂಪಣೆಗಳಿಗೆ ಕಾರಣವಾಗುವ ವರ್ಗಗಳು ಒಂದು ಕಡೆ ತಮ್ಮ ಬೆಂಬಲವನ್ನು ಸೂಚಿಸುವುದು ಸಾಧ್ಯವಾಗುವುದಿಲ್ಲ. ಇದು ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ರಾಜಕೀಯ ಲೆಕ್ಕಾಚಾರಗಳನ್ನು ಒಡೆದು ವ್ಯವಸ್ಥೆಯನ್ನು ನಿಯಂತ್ರಿಸುವ ಕೈಗಳು ಮುಂದೆ ಬದಲಾಗುವ ಸಾಧ್ಯತೆಯೂ ಇದೆ. ಅಂದರೆ ಈಗಿರುವ ಜಾತಿಗಳು ಮತ್ತು ವರ್ಗಗಳ ಬದಲಾಗಿ ಬೇರೆಯದೇ ವರ್ಗಗಳನ್ನು ದೇಶದ ಚಾಲಕಶಕ್ತಿಗಳನ್ನಾಗಿ ನಿರ್ಧರಿಸಬಹುದು.

ಮುಖ್ಯವಾಗಿ ಈ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ, ಮೊದಲಿನಂತೆ ಭಯವನ್ನು ಹುಟ್ಟಿಸುವ ಮತ್ತು ತನ್ನ ಹಿಂಸಾತ್ಮಕ ತಂತ್ರಗಳ ಮೂಲಕ ಅಧಿಕಾರವನ್ನು ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ನಿಜಕ್ಕೂ ಸಮಸ್ಯೆಗೆ ಒಳಗಾಗಿರುವವರು ಆಢಳಿತ ವ್ಯವಸ್ಥೆಯ ಬಹುಮುಖ್ಯ ಭಾಗವಾದ ಮಧ್ಯಮ-ಮೇಲ್ಮಧ್ಯಮ ವರ್ಗಳು ಮತ್ತು ಮೇಲ್ಜಾಜತಿಗಳೇ ಆಗಿವೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ಅನುಭವಿಸಿದ ನೋವು ಮತ್ತು ಸಮಸ್ಯೆಗಳನ್ನು ಬಗೆಹರಿಸಲಾಗದ ಸರ್ಕಾರದ ವೈಫಲ್ಯ ಸೌಲಭ್ಯಗಳನ್ನು ಹೊಂದಿದವರಲ್ಲೂ ಒಂದು ರೀತಿಯ ಅನಾಥಪ್ರಜ್ಞೆಯನ್ನು ಹುಟ್ಟುಹಾಕಿದೆ. ಹಾಗಾದರೆ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಎಲ್ಲರನ್ನೂ ಕಾಡಿದ ಅರಾಜಕತೆ ಮತ್ತು ಅವ್ಯವಸ್ಥೆ ಸರ್ಕಾರದ ವಿರುದ್ಧ ಜನಾಕ್ರೋಶವಾಗಿ ಬದಲಾಗಬಹುದೇ ? ಅಥವಾ ಮೇಲ್ವರ್ಗಳು ಮತ್ತೊಮ್ಮೆ ತಮ್ಮನ್ನು ರಕ್ಷಿಸಲು, ಘನತೆಯ ಸಾವನ್ನು ನೀಡಲು ವಿಫಲವಾದ ಆಡಳಿತ ವ್ಯವಸ್ಥೆಯನ್ನು ಸುಲಭವಾಗಿ ಕ್ಷಮಿಸಬಹುದೇ ? ಅಥವಾ ತಮ್ಮ ಆರೋಗ್ಯಕ್ಕಾಗಿ ಮಾತ್ರ ಸರ್ಕಾರವನ್ನು ಒತ್ತಾಯಿಸಬಹುದೇ?

ಇದನ್ನೂ ಓದಿ: ಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು

ಮಾನವಶಾಸ್ತ್ರದ ಆಧಾರದಲ್ಲಿ ಹೇಳುವುದಾದರೆ ಭಾರತದಲ್ಲಿ ಸಾಮಾಜಿಕ ಬದಲಾವಣೆ ಅಷ್ಟು ಸುಲಭದಲ್ಲಿಲ್ಲ. ಯಾಕೆಂದರೆ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ, ಅಸ್ಪ್ರಶ್ಯತೆ, ಲಿಂಗ ಆಧಾರಿತ ಶೋಷಣೆಗಳು ಜನರಲ್ಲಿ ವೈಚಾರಿಕವಾದ ಚಿಂತನೆಗಳನ್ನು ತಡೆಯುತ್ತವೆ. ಆದರೆ ಇದು ದೇಶದ ಜನರ ವಿಚಾರಗಳ ಮೇಲೆ ದಿನ ನಿತ್ಯ ನಮ್ಮ ಮುಂದೆ ನಡೆಯುತ್ತಿರುವ ದುರಂತಗಳು ಯಾವರೀತಿಯಲ್ಲಿ ಪರಿಣಾಮವನ್ನು ಬೀರಿವೆ ಎಂಬುದರ ಆಧಾರದ ಮೇಲೆ ನಿಂತಿದೆ.

ಲಾಕ್‌ಡೌನ್‌ನಿಂದ ಸಾವಿಗೀಡಾದವರು, 383 ಜನರು

ಬೇರೆ ಬೇರೆ ವರ್ಗಗಳಿಗೆ ನೋವು ಸಂಕಟಕ್ಕೆ ಕಾರಣವಾದ ಸಾಂಕ್ರಾಮಿಕವು ಎಲ್ಲರನ್ನೂ ಒಳಗೊಳ್ಳುವ ಸುಧಾರಿತ ಆರೋಗ್ಯ ವ್ಯಸ್ಥೆಯ ನಿರ್ಮಾಣಕ್ಕೆ ಕಾರಣವಾಗಬಹುದೇ ? ದಲಿತರು ಮತ್ತು ಇನ್ನಿತರ ಹಿಂದುಳಿದ ವರ್ಗದ ಜನರು ಎದುರಿಸುತ್ತಿರುವ ಅಸ್ಪ್ರಶ್ಯತೆ ಮುಂತಾದ ಶೋಷಣೆಗಳಿಗೆ ಪರಿಹಾರ ಒದಗಿಸಬಹುದೇ ? ಅಥವಾ ತಾವು ಅನುಭವಿಸಿದ ಸಾವು ನೋವುಗಳಿಗೆ ಸಂತ್ರಸ್ತವರ್ಗಗಳು ರಾಜಕೀಯವಾಗಿ ಒಂದಾಗಿ ಪ್ರಸ್ತುತ ಆಡಳಿತ ವ್ಯವಸ್ಥೆಯನ್ನು ವೈಫಲ್ಯದ ಹೊಣೆಗಾರರನ್ನಾಗಿ ಮಾಡಬಹುದೇ ? ಅಥವಾ ಸರ್ಕಾರದ ದಮನಕಾರಿ ತಂತ್ರಗಳು ಈ ಎಲ್ಲಾ ಸಾಧ್ಯತೆಗಳನ್ನು ಕೊನೆಗೊಳಿಸಬಹುದೇ ?

ಸದ್ಯ ದೇಶ ಎದುರಿಸುತ್ತಿರು ಆರೋಗ್ಯ ವ್ಯವಸ್ಥೆಯ ಬಿಕ್ಕಟ್ಟು ಮುಂದೆ ಎಲ್ಲರನ್ನು ಒಳಗೊಳ್ಳುವಂತೆ ದೇಶದ ಆಸ್ಪತ್ರೆ ಮತ್ತು ಔಷಧಿವಲಯನ್ನು ರೂಪಿಸಲು ಸಶಕ್ತವಾಗಿವೆ. ಆದರೆ ಇದು ತಾನೇ ತಾನಾಗಿ ಸಂಭವಸಬೇಕೆಂದು ಜನರು ಬಯಸಿದರೆ ದೇಶದಲ್ಲಿ ಎಂದಿಗೂ ಬದಲಾವಣೆಗಳು ಸಾಧ್ಯವಿಲ್ಲ.

ದಿವೈರ್‌ ಮೂಲ: ನಿಖಿಲ್ ಪಂಧಿ
ಚಿಂತಕರು, ವೈದ್ಯಕೀಯ ಮತ್ತು ಮಾನವಿಕ ಶಾಸ್ತ್ರದ ಸಂಶೋಧಕರು, ಪ್ರಿನ್ಸ್ಟನ್ ವಿಶ್ವವಿದ್ಯಾಲಯ

ಅನುವಾದ: ರಾಜೇಶ್‌ ಹೆಬ್ಬಾರ್

ಇದನ್ನೂ ಓದಿ: ನೂರರ ನೋಟ: ರೈತ ಹೋರಾಟ ತೀವ್ರಗೊಳ್ಳುವುದರ ಜೊತೆಗೆ ಜೈಲ್ ಭರೋ ಪ್ರಾರಂಭಿಸಬೇಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈಗ ಬಂದಿರುವ ಕೋವಿಡ್ ದುರಂತದಿಂದ ಜನರು ಮತ್ತು ಸರ್ಕಾರಗಳು ಬುದ್ದಿ ಕಲಿಯಬೇಕು. ಬಹಳ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳ್ಳಬೇಕು. ಇದಕ್ಕಾಗಿ ಜನರು ಒಕ್ಕೊರಲಿನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು.

  2. ಈಗಿನ ಬಿಕ್ಕಟ್ಟಿನಿಂದ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರು ಪಾಠ ಕಲಿಯ ಬಹುದೇ, ಜೀವನದ ಬಗೆಗಿನ ಅವರ ದೃಷ್ಟಿಕೋನ ಬದಲಾಗ ಬಹುದೇ ಅನ್ನುವ ಪ್ರಶ್ನೆಗಳಿಗೆ, ಉತ್ತರ, ನನ್ನ ಪ್ರಕಾರ, ಇಲ್ಲ ಅಂತಲೇ. ಇವರು ಕೇವಲ ಮೇಲ್ವರ್ಗದ ಜನ ಅಲ್ಲ, ಮೇಲ್ಜಾತಿಯ ಜನ. ಅವರ ಜಾತಿ ಆಧಾರಿತ ಯೋಚನೆ ಮತ್ತು ಜಾತಿ ಗೂಡಿನಲ್ಲಿ ಬಂಧಿಯಾಗಿರುವ ಅವರ ಲೋಕದೃಷ್ಟಿ ಇಂಥ ಬಿಕ್ಕಟ್ಟುಗಳು ಬಂದರೂ ತಾವು ಶ್ರೇಷ್ಠ ಅನ್ನುವ ಭ್ರಾಂತಿಯ ನ್ನ ಬಿಟ್ಟು ಬದುಕಲಾರರು.ಸುನಾಮಿ ನಂತರ ಸ್ಥಾಪಿಸಲಾದ ನಿರಾಶ್ರಿತರ ಶಿಬಿರಗಳಲ್ಲಿ ಮೇಲ್ಜಾತಿಯವರ ನಡವಳಿಕೆಯನ್ನು ನಡವಳಿಕೆಯನ್ನು ನೆನಪಿಸಿಕೊಳ್ಳಿ.

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...