Homeಕರ್ನಾಟಕಬ್ರಿಜ್ ಭೂಷಣ್‌ನನ್ನು ಬಂಧಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ; ಅಗ್ರ ಕುಸ್ತಿಪಟುಗಳ ಪಟ್ಟು

ಬ್ರಿಜ್ ಭೂಷಣ್‌ನನ್ನು ಬಂಧಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ; ಅಗ್ರ ಕುಸ್ತಿಪಟುಗಳ ಪಟ್ಟು

- Advertisement -
- Advertisement -

ಹಲವಾರು ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ತಮ್ಮ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಭಾರತದ ಅಗ್ರ ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಬ್ರಿಜ್‌ ಭೂಷಣ್‌ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕರಣವನ್ನು ಆಲಿಸಿದ ಕೆಲವು ಗಂಟೆಗಳ ನಂತರ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಸುಮಾರು ನಾಲ್ಕು ತಿಂಗಳ ನಂತರ ಕುಸ್ತಿಪಟುಗಳು ಆರೋಪಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

“ಇದು ವಿಜಯದತ್ತ ನಮ್ಮ ಮೊದಲ ಹೆಜ್ಜೆಯಾಗಿದೆ, ಆದರೆ ಪ್ರತಿಭಟನೆಗಳು ಮುಂದುವರಿಯುತ್ತವೆ” ಎಂದು ಮಲಿಕ್ ಹೇಳಿದ್ದಾರೆ. “ನಾವು ಸುದೀರ್ಘ ಯುದ್ಧಕ್ಕಾಗಿ ಇಲ್ಲಿದ್ದೇವೆ. ಆಂತರಿಕ ಸಮಾಲೋಚನೆಯ ನಂತರ ನಾವು ನಮ್ಮ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

“ದೆಹಲಿ ಪೊಲೀಸರ ಮೇಲೆ ಕುಸ್ತಿಪಟುಗಳು ನಂಬಿಕೆ ಕಳೆದುಕೊಂಡಿದ್ದಾರೆ. ಏಕೆಂದರೆ ಅವರು ಆರು ದಿನಗಳನ್ನು ತೆಗೆದುಕೊಂಡರು ಮತ್ತು ಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು” ಎಂದು ಫೋಗಟ್ ಹೇಳಿದ್ದಾರೆ.

“ನಾವು ಈಗಾಗಲೇ ಸಾಕಷ್ಟು ಪುರಾವೆಗಳನ್ನು ನೀಡಿದ್ದೇವೆ ಮತ್ತು ಬೇರೆ ಏನಾದರೂ ಅಗತ್ಯವಿದ್ದರೆ, ನಾವು ಅದನ್ನು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತಪಡಿಸುತ್ತೇವೆಯೇ ಹೊರತು ದೆಹಲಿ ಪೊಲೀಸರಿಗೆ ಅಲ್ಲ. ಇದು ಎಫ್‌ಐಆರ್ ದಾಖಲಿಸುವ ಹೋರಾಟವಲ್ಲ. ಈಗಾಗಲೇ 85 ಪ್ರಕರಣಗಳಿರುವ ವ್ಯಕ್ತಿಯ ವಿರುದ್ಧದ ಹೋರಾಟವಾಗಿದೆ. ನಾವು ಭ್ರಷ್ಟರನ್ನು ಕುಸ್ತಿಯಿಂದ ಮುಕ್ತಗೊಳಿಸಬೇಕಾಗಿದೆ” ಎಂದಿದ್ದಾರೆ.

ಬ್ರಿಜ್‌ ಭೂಷಣ್‌ ಸಿಂಗ್ ಅವರನ್ನು ಎಲ್ಲಾ ಸ್ಥಾನಗಳಿಂದ ವಜಾಗೊಳಿಸುವಂತೆ ಕುಸ್ತಿಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

“ಕಂಬಿ ಹಿಂದೆ ಹಾಕುವವರೆಗೂ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥರು ಮುಂದುವರಿಸುತ್ತಾರೆ” ಎಂದು ಪುನಿಯಾ ತಿಳಿಸಿದ್ದಾರೆ.

“ಪ್ರತಿಭಟಿಸುವ ನಮಗೆಲ್ಲರಿಗೂ ಭದ್ರತೆ ಬೇಕು, ದೂರುದಾರರಿಗೆ ಭದ್ರತೆ ಬೇಕು. ಏಕೆಂದರೆ ನಮಗೆ ಯಾರು ಹಾನಿ ಮಾಡಲು ಬಯಸುತ್ತಾರೆ ಎಂದು ನಿಮಗೆ ತಿಳಿದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಏಪ್ರಿಲ್ 21ರಂದು ದೆಹಲಿಯಲ್ಲಿ ಆತನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.

ಅಪ್ರಾಪ್ತ ಕುಸ್ತಿಪಟು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ) ಅಡಿಯಲ್ಲಿ ಮೊದಲ ಪ್ರಕರಣ ದಾಖಲಿಸಲಾಗಿದೆ. ವಯಸ್ಕ ಕುಸ್ತಿಪಟುಗಳು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಕೈಸರ್‌ಗಂಜ್‌ನಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಗೆದ್ದಿರುವ, ಆರೋಪಿ ಬ್ರಿಜ್‌ ಭೂಷಣ್ ಸಿಂಗ್ ಪ್ರತಿಕ್ರಿಯಿಸಿದ್ದು, ಪೊಲೀಸರೊಂದಿಗೆ ಸಹಕರಿಸಲು ಸಿದ್ಧ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಥ್ಲೀಟ್‌ಗಳು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸುವ ಮೊದಲು ಆರೋಪಗಳ ತನಿಖೆಗಾಗಿ ಕೇಂದ್ರ ಕ್ರೀಡಾ ಸಚಿವಾಲಯ ರಚಿಸಿರುವ ಉಸ್ತುವಾರಿ ಸಮಿತಿಯ ವರದಿಗಾಗಿ ಕಾಯಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಸುಪ್ರೀಂ ಕೋರ್ಟ್‌ ನೋಟಿಸ್‌ ನಂತರ ಬಿಜೆಪಿ ಸಂಸದ ಸಿಂಗ್ ವಿರುದ್ಧ FIR: ಕ್ರೀಡಾಪಟುಗಳ ಹೋರಾಟಕ್ಕೆ ಮೊದಲ ಜಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...