Homeಕರ್ನಾಟಕ‘ಹತ್ತು ದಿನದಲ್ಲಿ ಪಠ್ಯದಲ್ಲಿರುವ ಲೋಪ ತಿದ್ದಿ’: ಸರ್ಕಾರಕ್ಕೆ ಗಡುವು ನೀಡಿದ ಲಿಂಗಾಯತ ಮಠಾಧೀಶರು

‘ಹತ್ತು ದಿನದಲ್ಲಿ ಪಠ್ಯದಲ್ಲಿರುವ ಲೋಪ ತಿದ್ದಿ’: ಸರ್ಕಾರಕ್ಕೆ ಗಡುವು ನೀಡಿದ ಲಿಂಗಾಯತ ಮಠಾಧೀಶರು

- Advertisement -
- Advertisement -

ಸಮಾಜ ಸುಧಾರಕ ಬಸವಣ್ಣನವರ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರ್ಕಾರ ಹತ್ತು ದಿನಗಳ ಒಳಗಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧೀಶರು ಸರ್ಕಾರಕ್ಕೆ ಎಚ್ಚರಿಕೆಯ ಜೊತೆಗೆ ಗಡುವು ನೀಡಿದ್ದಾರೆ. ಧಾರವಾಡದ ಕಲ್ಯಾಣ ನಗರದಲ್ಲಿರುವ ಶ್ರೀಸಿದ್ದರಾಮೇಶ್ವರ ಮಾರ್ಗದರ್ಶಿಯಲ್ಲಿ ಮಂಗಳವಾರ ಸುದೀರ್ಘ ಐದು ಗಂಟೆಗಳ ಸಭೆ ನಡೆಸಿದ 21 ಲಿಂಗಾಯತ ಮಠಾಧೀಶರು ಈ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.

“ಸಮಾಜ ವಿಜ್ಞಾನ ಭಾಗ-1ರ 9ನೇ ತರಗತಿ ಪಠ್ಯಪುಸ್ತಕವನ್ನು ಶೀಘ್ರ ಬದಲಿಸಬೇಕು. ಹತ್ತು ದಿನಗಳ ಒಳಗೆ ಬದಲಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ರೂಪಿಸುತ್ತೇವೆ” ಎಂದು ಸಾಣೆಹಳ್ಳಿ ತರಳುಬಾಳು ಮಹಾಸಂಸ್ಥಾನದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಠಾಧೀಶರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಣೆಹಳ್ಳಿ ಸ್ವಾಮೀಜಿ, “9ನೇ ತರಗತಿಗೆ ಇರುವ ಸಮಾಜ ವಿಜ್ಞಾನ ಭಾಗ 1ರ ಪಠ್ಯದಲ್ಲಿ ಹಲವು ದೋಷಗಳನ್ನು ಗುರುತಿಸಿದ್ದೇನೆ. ವೈದಿಕ ಪರಂಪರೆಯನ್ನು ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಈ ಪಠ್ಯದಲ್ಲಿ ನಡೆಸಲಾಗಿದೆ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್‌ ಹೆಗಡೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ನಾಯಕರೆಂದು ಗುರುತಿಸಿದ ಬಿಜೆಪಿ

“ವೈದಿಕ ಪರಂಪರೆ ಧಿಕ್ಕರಿಸಿದ್ದ ಬಸವಣ್ಣನವರಿಗೆ ಯಾವುದೇ ಶೈವ ಗುರುಗಳು ದೀಕ್ಷೆ ಕೊಟ್ಟಿಲ್ಲ. ಆದರೆ ಪುಸ್ತಕದಲ್ಲಿ ಮಾತ್ರ ಶೈವ ಗುರುಗಳು ದೀಕ್ಷೆ ಕೊಟ್ಟರು ಎಂಬ ಉಲ್ಲೇಖವಿದೆ. ಈ ಸಂಬಂಧ ನಾವು ಮಠಾಧೀಶರು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದೇವೆ. ಅವರು ಬಸವೇಶ್ವರರ ಪಠ್ಯದಲ್ಲಿರುವ ದೋಷಗಳನ್ನು ಸರಿಪಡಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ಮುಂದೆ ಪಠ್ಯದಲ್ಲಿ ಎಲ್ಲಿಯೂ ಕೂಡ ಬಸವ ತತ್ವಕ್ಕೆ ಅಪಚಾರ ಆಗಬಾರದು. ಬಸವ ತತ್ವವನ್ನು ಸರಳವಾಗಿ ಬಿಂಬಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಬಸವೇಶ್ವರರು ಮತ್ತು ಅವರ ಪ್ರತಿಪಾದಿಸುತ್ತಿದ್ದ ವಿಷಯಗಳ ಬಗ್ಗೆ ನಾವೇ ಹೊಸ ಪಠ್ಯವೊಂದನ್ನು ರಚಿಸಿ, ಮುಖ್ಯಮಂತ್ರಿಗೆ ಕಳುಹಿಸುತ್ತೇವೆ. ಅದನ್ನು ಸರ್ಕಾರ ಒಪ್ಪಿಕೊಂಡರೆ ಸಂತೋಷ ಪಡುತ್ತೇವೆ. ನಾಳೆಯೇ ಎಲ್ಲರೂ ಸೇರಿ ಒಂದು ಮನವಿ ಕೊಡುತ್ತೇವೆ. ಈಗ ಇರುವ ಪಠ್ಯವನ್ನು ಹತ್ತು ದಿನಗಳಲ್ಲಿ ಬದಲಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಎಲ್ಲ ಮಹನೀಯರ ಪಠ್ಯವೂ ಸರಿಯಾಗಲಿ

ಪಠ್ಯ ಪುಸ್ತಕದಲ್ಲಿ ಕೇವಲ ಬಸವಣ್ಣ ಮಾತ್ರವಲ್ಲ, ಕುವೆಂಪು, ಡಾ ಬಿ.ಆರ್.ಅಂಬೇಡ್ಕರ್, ನಾರಾಯಣಗುರು ಸೇರಿದಂತೆ ಎಲ್ಲ ಮಹನೀಯರ ಕುರಿತು ಆಗಿರುವ ಲೋಪದೋಷಗಳನ್ನು ಕೂಡಲೇ ಸರ್ಕಾರ ಸರಿ ಮಾಡಬೇಕು. ಕೆಲವು ಸಾಹಿತಿಗಳು ಈಗಾಗಲೇ ತಮ್ಮ ಲೇಖನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಲೋಪದೋಷ ಸರಿಪಡಿಸಿದರೆ ಅವರು ಮರಳಿ ಕೊಡುವ ವಿಶ್ವಾಸವಿದೆ ಎಂದು ಗದಗ ತೋಂಟದಾರ್ಯ ಮಠದ ಡಾ ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಹತ್ಯೆ: ನಾಲೆಯಲ್ಲಿ ತೇಲಿ ಬಂದ ಅರ್ಧ ಕತ್ತರಿಸಿದ ಮಹಿಳೆಯರ ಮೃತದೇಹಗಳು

ಬಸವಣ್ಣನವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವುಗಳಿಗೆ ಸರ್ಕಾರ ಗಮನ ಕೊಡದೇ ನೇರವಾಗಿ ಬಸವ ತತ್ವ ಮತ್ತು ವಚನ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸ್ವಾಮೀಜಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...