ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಹಾಗೂ ಬಡವರು ವಾಸಿಸುವ ಈ ಪ್ರದೇಶದಲ್ಲಿ SIR ಕುರಿತು ಸ್ಪಷ್ಟ ಮಾಹಿತಿ ಇಲ್ಲದಿರುವುದು ಮತ್ತು ದಾಖಲೆಗಳನ್ನು ಸಲ್ಲಿಸುವ ಕುರಿತ ಆತಂಕ ಹಲವು ಕುಟುಂಬಗಳಲ್ಲಿ ಗೊಂದಲ ಹಾಗೂ ಭಯಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಎನ್ಆರ್ ಕಾಲೊನಿಯ ಪ್ರವೇಶದ್ವಾರದಲ್ಲಿ ನೋಟಿಸ್ ಹಿಡಿದು ನಿಂತಿದ್ದ 80 ವರ್ಷ ದಾಟಿದ ವೃದ್ಧೆಯೊಬ್ಬರು, ದಾಖಲೆಗಳನ್ನು ನೀಡದಿದ್ದರೆ ತಮ್ಮ ಪಿಂಚಣಿ ನಿಲ್ಲಿಸಲಾಗುತ್ತದೆ ಎಂದು ನೋಟಿಸ್ನ ಹಿನ್ನೆಲೆಯಲ್ಲಿ ತಿಳಿಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ಅವರ ಬಳಿ ಅಳಲು ತೋಡಿಕೊಂಡರು. ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್, “ನಿಮ್ಮ ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ” ಎಂದು ಭರವಸೆ ನೀಡಿದರು.
ಕಾಲೋನಿಯ ನಿವಾಸಿಗಳಲ್ಲಿ ಕೆಲವರು SIR ಎಂದರೇನು ಎಂಬುದರ ಬಗ್ಗೆಯೇ ಸ್ಪಷ್ಟ ಮಾಹಿತಿ ಇಲ್ಲದೆ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಾದರೆ ಸರ್ಕಾರದ ಸೌಲಭ್ಯಗಳು ನಿಲ್ಲಬಹುದು ಅಥವಾ ತಮ್ಮನ್ನು ಹೊರಗಿನವರಂತೆ ಪರಿಗಣಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಪ್ರಕಾಶ್ ರಾಜ್ ಅವರೊಂದಿಗೆ ರೈತ ನಾಯಕ ವೀರಸಂಗಯ್ಯ, ವಸತಿ ಹೋರಾಟಗಾರ ಕುಮಾರ್ ಸಮತಳ ಸೇರಿದಂತೆ ಜನಪರ ಸಂಘಟನೆಗಳ ಮುಖಂಡರು ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.
ಮನೆಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಹಿಳೆಯೊಬ್ಬರು ತಮ್ಮ ಕುಟುಂಬದ ಯಾರಿಗೂ ಎನ್ಯುಮರೇಷನ್ ಫಾರಂ ಬಂದಿಲ್ಲ ಎಂದು ತಿಳಿಸಿದರು. ಇದನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ರಾಜ್ಯದಲ್ಲಿ ಇರುವ ಮತದಾರರ ಸಂಖ್ಯೆಗೆ ಅನುಗುಣವಾಗಿ ಫಾರಂಗಳನ್ನು ಮುದ್ರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹೇಳುತ್ತಿದ್ದರೆ, ತಮ್ಮ ಮನೆಗಳಿಗೆ ಫಾರಂಗಳು ಏಕೆ ತಲುಪಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಜಯಮ್ಮ ಎಂಬ ವೃದ್ಧ ಮಹಿಳೆಯೊಬ್ಬರು SIR ನೋಟಿಸ್ನಿಂದ ತೀವ್ರ ಆತಂಕಕ್ಕೊಳಗಾಗಿರುವ ವಿಚಾರವೂ ಬೆಳಕಿಗೆ ಬಂತು. ನಿಗದಿತ ಅವಧಿಯೊಳಗೆ ದಾಖಲೆಗಳನ್ನು ತರದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದು ಬೂತ್ ಮಟ್ಟದ ಅಧಿಕಾರಿ (BLO) ದೂರವಾಣಿ ಮೂಲಕ ತಿಳಿಸಿದ್ದಾಗಿ ಕುಟುಂಬದವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸರಿಯಾಗಿ ಊಟ ಮಾಡುತ್ತಿಲ್ಲ, ಆತಂಕದಲ್ಲಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಕಾಲೋನಿಯ ನಿವಾಸಿಗಳು ಚುನಾವಣಾ ಆಯೋಗದ ಅಧಿಕಾರಿಗಳು ಕೇವಲ ಕಚೇರಿಗಳಿಂದ ಹೇಳಿಕೆ ನೀಡದೆ, ತಮ್ಮ ಮನೆಗಳಿಗೆ ಬಂದು ಸಮಸ್ಯೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ದೂರದ ಊರುಗಳಿಗೆ ಕೆಲಸಕ್ಕಾಗಿ ತೆರಳಿರುವ ಹಲವು ನಿವಾಸಿಗಳಿಗೆ ನೋಟಿಸ್ಗಳ ಮಾಹಿತಿ ಸಂಬಂಧಿಕರ ಮೂಲಕ ತಲುಪಿಸಲಾಗಿದೆ ಎಂಬುದನ್ನೂ ಸ್ಥಳೀಯರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೇವಲ ಪ್ರತಿಭಟನೆ ನಡೆಸುವುದಕ್ಕೆ ಸೀಮಿತವಾಗದೆ, ಮತದಾರರ ಪಟ್ಟಿ ಸಂಪೂರ್ಣವಾಗಿ ಸರಿಯಾಗುವವರೆಗೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಿರುವ ಕುರಿತು ಗಟ್ಟಿ ನಿರ್ಧಾರ ಕೈಗೊಂಡು ಬೀದಿ ಹೋರಾಟಕ್ಕೆ ಇಳಿಯಬೇಕು ಎಂದು SIR ವಿರೋಧಿ ಒಕ್ಕೂಟ ಕರೆ ನೀಡಿದೆ. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 26ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಡ, ಪ್ರಜಾತಾಂತ್ರಿಕ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಜಂಟಿ ಪ್ರತಿಭಟನೆ ನಡೆಯಲಿದೆ.
SIR ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆಳೆಯಲು, ಸಂತ್ರಸ್ತರನ್ನು ನೇರವಾಗಿ ಭೇಟಿ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ SIR ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಎನ್ಆರ್ ಕಾಲೊನಿಯಲ್ಲಿನ ಮನೆಮನೆ ಭೇಟಿ ಈ ಪರಿಶೋಧನಾ ಪ್ರಕ್ರಿಯೆಯ ಭಾಗವಾಗಿ ನಡೆದಿದೆ.


