Homeಅಂತರಾಷ್ಟ್ರೀಯಇಂಟರ್ನ್ಯಾಷನಲ್ ಫೋಕಸ್: ಇರಾಕ್ ಬೀದಿಗಳಲ್ಲಿ ಸದ್ರ್‌ವಾದಿ ಚಳವಳಿ

ಇಂಟರ್ನ್ಯಾಷನಲ್ ಫೋಕಸ್: ಇರಾಕ್ ಬೀದಿಗಳಲ್ಲಿ ಸದ್ರ್‌ವಾದಿ ಚಳವಳಿ

- Advertisement -
- Advertisement -

ಸದ್ರ್‌ವಾದಿ ಚಳವಳಿಯ ನಾಯಕ ಮುಕ್ತಾದ ಅಲ್-ಸದ್ರ್, ಆಗಸ್ಟ್ 20, 2022ರಂದು ಒಂದು ಟ್ವೀಟ್ ಮಾಡಿ, ತನ್ನ ಬೆಂಬಲಿಗರು ತನ್ನ ಮುಂದಿನ ನಡೆಗಾಗಿ ಕಾಯಬೇಕೆಂದೂ, ತಾನು ಸರಕಾರದೊಂದಿಗೆ ಯಾವುದೇ ಗುಪ್ತ ಸಂಧಾನದಲ್ಲಿ ಭಾಗವಹಿಸುವುದಿಲ್ಲ ಎಂದೂ ಹೇಳಿದ್ದಾರೆ. ತಾನು ತನ್ನ ಬೆಂಬಲಿಗರಿಗೆ ಪಾರದರ್ಶಕವಾಗಿರಲು ಬಯಸುವುದಾಗಿಯೂ ಅವರು ಹೇಳಿದ್ದಾರೆ. ಪ್ರಧಾನಿ ಅಲ್-ಕಾಧಿಮಿ ಬಹುಪಕ್ಷೀಯ ಮಾತುಕತೆಗೆ ಕರೆನೀಡಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಅಲ್-ಸದ್ರ್ ಅವರ ಸದ್ರ್‌ವಾದಿ ಚಳವಳಿಯು ಯಾವುದೇ ಮಾತುಕತೆಯಲ್ಲಿ ಭಾಗವಹಿಸಲು ನಿರಾಕರಿಸಿದೆ.

ಅಲ್-ಸದ್ರ್ ಅವರು, 2021ರಲ್ಲಿ ನಡೆದ ಚುನಾವಣೆಗಳಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ, ಅದರ ವಿರುದ್ಧ ಒಂದು ಅಭಿಯಾನದ ನಾಯಕತ್ವ ವಹಿಸಿದ್ದಾರೆ. ಆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಲ್-ಸದ್ರ್ ನಂತರದಲ್ಲಿ ಜಯಗಳಿಸಿದರೂ, ಈ ವರ್ಷದ ಜೂನ್‌ನಲ್ಲಿ ಸಂಸತ್ತಿಗೆ ರಾಜೀನಾಮೆ ನೀಡಿ, ಇರಾಕಿ ಸಂಸತ್ತಿನಲ್ಲಿ ಭಾರೀ ಸಭಾತ್ಯಾಗಕ್ಕೆ ಕಾರಣರಾಗಿದ್ದರು. (ಅವರ ಬೆನ್ನಲ್ಲೇ ಅವರ ಬೆಂಬಲಿಗರರೂ ರಾಜೀನಾಮೆ ನೀಡಿದ್ದರು.) ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗಳನ್ನು ನಡೆಸಬೇಕೆಂದು ಅವರು ಕರೆನೀಡುತ್ತಲೇ ಬಂದಿದ್ದಾರೆ. ಈ ತಕ್ಷಣದ ಬಿಕ್ಕಟ್ಟಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕೆಂದು ವಿಶ್ವಸಂಸ್ಥೆಯು ವಿವಿಧ ಇರಾಕಿ ರಾಜಕೀಯ ಪಕ್ಷಗಳಿಗೆ ಕರೆ ನೀಡಿದೆ.

ಇರಾಕ್ ಸರಕಾರವು 2022ರ ಉದ್ದಕ್ಕೂ ನಿರಂತರವಾದ ಒಂದು ದಿಗ್ಬಂಧನದ ಸ್ಥಿತಿಯಲ್ಲಿಯೇ ಇದೆ. ಅಕ್ಟೋಬರ್ 2021ರಲ್ಲಿ ಇರಾಕಿನ ರಾಷ್ಟ್ರೀಯ ಚುನಾವಣೆಗಳ ಫಲಿತಾಂಶಗಳನ್ನು ಘೋಷಿಸಲಾಯಿತು. ಯಾವುದೇ ರಾಜಕೀಯ ಪಕ್ಷವು 10 ಶೇಕಡಾಕ್ಕಿಂತ ಹೆಚ್ಚು ಜನಪ್ರಿಯ ಮತಗಳನ್ನು ಪಡೆಯಲಿಲ್ಲ ಅಥವಾ ಒಟ್ಟು ಸ್ಥಾನಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಸ್ಥಾನಗಳನ್ನೂ ಪಡೆಯಲಿಲ್ಲ. ಮತಗಳು ಮತ್ತು ಸ್ಥಾನಗಳಲ್ಲೂ ಎಲ್ಲರಿಗಿಂತಲೂ ಹೆಚ್ಚು ಜನಪ್ರಿಯ ಕೂಟವಾಗಿ ಸದ್ರ್‌ವಾದಿ ಚಳವಳಿ ಮೂಡಿಬಂತು.

ಚುನಾವಣೆಗಳಲ್ಲಿ ಸ್ಪರ್ಧೆ

ಸದ್ರ್‌ವಾದಿ ಚಳವಳಿಯು ಆರಂಭದಲ್ಲಿ ಚುನಾವಣೆಗಳಿಗೆ ವಿರುದ್ಧವಾಗಿ ನಿಂತಿದ್ದುದರಿಂದ ಈ ಫಲಿತಾಂಶ ಅಚ್ಚರಿಹುಟ್ಟಿಸುವಂತದ್ದಾಗಿತ್ತು. ಜುಲೈಯಲ್ಲಿ ಅದರ ನಾಯಕ ಮುಕ್ತಾದಾ ಅಲ್-ಸದ್ರ್, ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮುಕ್ತ ಚುನಾವಣೆ ನಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದರು. ಅವರಿಗೆ ಇರಾಕಿ ಕಮ್ಯುನಿಸ್ಟ್ ಪಕ್ಷ ಮತ್ತು ಚುನಾವಣೆಗಳನ್ನು ಬಹಿಷ್ಕರಿಸುವಂತೆ ಕ್ರೈಸ್ತರಿಗೆ ಕರೆ ನೀಡಿದ್ದ ಕ್ಯಾಥೋಲಿಕ್ ಚರ್ಚ್ ಬೆಂಬಲ ನೀಡಿದ್ದವು. ಆದರೆ, ಮುಕ್ತಾದಾ ಆಗಸ್ಟ್ ತಿಂಗಳಲ್ಲಿ ತನ್ನ ನಿಲುವನ್ನು ತಿರುವುಮುರುವು ಮಾಡಿ, ಚುನಾವಣೆಗಳಲ್ಲಿ ಸ್ಪರ್ಧಿಸುವ ಉದ್ದೇಶವನ್ನು ಘೋಷಿಸಿದ್ದರು. ಯಾವುದೇ ಸ್ಪಷ್ಟ ವಿಜಯಿ ಇಲ್ಲದೇ ಚುನಾವಣೆಗಳು ಮುಗಿದವು. ನವೆಂಬರ್ 2021ರಲ್ಲಿ ಸದ್ರ್‌ವಾದಿ ಚಳವಳಿಯು ಅತ್ಯಂತ ದೊಡ್ಡ ಮೈತ್ರಿಕೂಟವಾಗಿ ಮೂಡಿಬಂತು. ಕುರ್ದಿಸ್ತಾನ್ ಡೆಮೊಕ್ರಾಟಿಕ್ ಪಾರ್ಟಿಯು ಹೆಚ್ಚು ಕಡಿಮೆ ಎಂಟನೇ ಒಂದು ಪಾಲು ಸ್ಥಾನಗಳನ್ನೂ ಒಂಬತ್ತು ಶೇಕಡಾ ಜನಪ್ರಿಯ ಮತಗಳನ್ನೂ ಪಡೆದು ಏಕೈಕ ದೊಡ್ಡ ಪಕ್ಷ ಎನಿಸಿತು.

ಬಿಕ್ಕಟ್ಟು ಉಲ್ಬಣ

ನವೆಂಬರ್ ಮೊದಲ ಭಾಗದಲ್ಲಿ ಪ್ರತಿಭಟನಕಾರರು ಸರಕಾರಿ ಕಟ್ಟಡಗಳಿಗೆ ನುಗ್ಗಲು ಪ್ರಯತ್ನ ಮಾಡುವುದರೊಂದಿಗೆ ದಿಗ್ಬಂಧವು ಹಿಂಸಾತ್ಮಕವಾಗಿ ಭುಗಿಲೆದ್ದಿತು. ಅವರು ಡೇರೆಗಳನ್ನು ಹಾಕಿ ಕಟ್ಟಡಗಳನ್ನು ವಶಕ್ಕೆ ತೆಗೆದುಕೊಂಡರು.  ಹಲವಾರು ಪ್ರತಿಭಟನಕಾರರು ಭದ್ರತಾ ಪಡೆಗಳ ಮೇಲೆ ಕಲ್ಲೆಸೆದರು. ಭದ್ರತಾಪಡೆಗಳು ಅಶ್ರುವಾಯು, ಜೊತೆಗೆ ಪ್ರತಿಭಟನಾಕಾರರ ಡೇರೆಗಳಿಗೆ ಬೆಂಕಿ ಹಚ್ಚುವುದರ ಮೂಲಕ ಪ್ರತಿಕ್ರಿಯಿಸಿದವು. ಈ ಪ್ರತಿಭಟನೆಗಳ ನಡುವೆ ಪ್ರಧಾನಿ ಮುಸ್ತಾಫ ಅಲ್- ಕಾಧಿಮಿ ಮೇಲೆ ಒಂದು ಡ್ರೋನ್ ದಾಳಿ ನಡೆಯಿತು. ಅವರು ಈ ಹತ್ಯೆ ಯತ್ನದಲ್ಲಿ ಪಾರಾದರೂ, ಅವರ ಆರು ಮಂದಿ ಅಂಗರಕ್ಷಕರು ಗಾಯಗೊಂಡರು. ಪ್ರಧಾನಿಯ ಜೀವದ ಮೇಲಿನ ಈ ದಾಳಿಯು  ಹಿಂಸಾಚಾರವನ್ನು ಇನ್ನಷ್ಟು ಉಲ್ಬಣಗೊಳಿಸಿತು. ಯಾರೂ ಈ ದಾಳಿಯ ಹೊಣೆಗಾರಿಕೆಯನ್ನು ಹೊರಲಿಲ್ಲವಾದರೂ, ಮುಖ್ಯ ಸಂಶಯ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್‌ನ (ಪಿಎಂಎಫ್)  ಕೆಲವು ನಿರ್ದಿಷ್ಟ ಗುಂಪುಗಳ ಮೇಲಿದೆ.

ಇರಾಕ್ ಪ್ರಧಾನಿ ಅಲ್-ಕಾಧಿಮಿ

ಪಿಎಂಎಫ್ ಎಂದರೆ, ಸಾಮಾನ್ಯವಾಗಿ ನೂರಾರು, ಕೆಲವೊಮ್ಮೆ ಸಾವಿರಾರು ಸದಸ್ಯರನ್ನು ಹೊಂದಿರುವ ಹಲವಾರು ಸಶಸ್ತ್ರ ಘಟಕಗಳ ಒಂದು ಸಡಿಲ ಒಕ್ಕೂಟ. ಈ ಘಟಕಗಳು ಒಂದೋ ಇರಾಕ್, ಇಲ್ಲವೇ ಇರಾನ್ ಸರಕಾರಗಳ ಬೆಂಬಲ ಪಡೆದಿವೆ. ಕಾಧಿಮಿ ಮೇಲಿನ ದಾಳಿಗೆ ಸದ್ರ್‌ವಾದಿ ಚಳವಳಿ ಅಥವಾ ಇರಾನ್ ಸರಕಾರದ ನೇರ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇಂತಾ ಸಂಬಂಧ ಹೊಂದಿರುವ ಹಲವಾರು ಘಟಕಗಳು ಆರೋಪಕ್ಕೆ ಗುರಿಯಾದರೂ, ಆ ಡ್ರೋನ್ ತಯಾರಾದದ್ದು ಮಾತ್ರ ಇರಾನಿನಲ್ಲಿ ಎಂಬುದು ಸಾಬೀತಾಗಿದೆ.

ಛಿದ್ರ ಸರಕಾರದ ಸ್ಥಾಪನೆ

ನಂತರದ ವರ್ಷದಲ್ಲಿ ಜನವರಿ 2022ರಲ್ಲಿ ಸಂಸತ್ತು ಸಭೆ ಸೇರಿತು. ಎಲ್ಲಾ ಪಕ್ಷಗಳ ನಡುವಿನ ಪರಸ್ಪರ ಉದ್ವಿಗ್ನತೆಯಿಂದಾಗಿ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಸಿಗದೇ, ದೇಶಕ್ಕೆ ಒಬ್ಬರು ಅಧ್ಯಕ್ಷರು ಇಲ್ಲದಂತಾಯಿತು. ಜೂನ್ 2022ರಲ್ಲಿ ಮುಕ್ತಾದ ಅಲ್-ಸದ್ರ್ ಕರೆಗೆ ಅನುಗುಣವಾಗಿ ಸದ್ರ್‌ವಾದಿ ಚಳವಳಿಯ ಸದಸ್ಯರು ಸಂಸತ್ತಿಗೆ ರಾಜೀನಾಮೆ ನೀಡಿದರು. ಇದರಿಂದಾಗಿ ಅವರ ಸ್ಥಾನಗಳು 2021ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದವರಿಗೆ ಹೋಯಿತು. ಪರಿಣಾಮವಾಗಿ ಕೊಆರ್ಡಿನೇಶನ್ ಫ್ರೇಮ್‌ವರ್ಕ್ ಬ್ಲಾಕ್ ಎಂದು ಕರೆಯಲಾಗುವ ಕೂಟವು ಹಲವು ಸ್ಥಾನಗಳನ್ನು ಗಳಿಸಿ ಅತ್ಯಂತ ದೊಡ್ಡ ಮೈತ್ರಿಕೂಟವಾಯಿತು. ಅದು ಸಂಸತ್ತಿನಲ್ಲಿ ಹೆಚ್ಚು ಕಡಿಮೆ ಮೂರನೇ ಒಂದರಷ್ಟು ಸ್ಥಾನಗಳನ್ನು ಪಡೆಯಿತು. ಕೊಆರ್ಡಿನೇಶನ್ ಫ್ರೇಮ್‌ವರ್ಕ್ ಬ್ಲಾಕ್‌ನ ನಾಯಕ ಇರಾನ್ ಪರ ಶಿಯಾ ಗುಂಪಿನವರಾದ ಮತ್ತು ಇರಾಕಿನ ಮಾಜಿ ಪ್ರಧಾನಿ ನೌರಿ ಅಲ್-ಮಾಲ್ಕಿ. ಅವರು ಅಲ್-ಸದ್ರ್ ಅವರನ್ನು ಟೀಕಿಸುವ ರೆಕಾರ್ಡಿಂಗ್ ಒಂದು ಬಹಿರಂಗಗೊಂಡಾಗ ಸರಕಾರದ ವಿರುದ್ಧ ಪ್ರತಿಭಟನೆಗಳು ಮತ್ತೆ ಆರಂಭಗೊಂಡವು. ಅಲ್-ಮಾಲ್ಕಿ, ಇರಾಕಿನಲ್ಲಿ ವಿದೇಶಿ ಇರಾನಿ ಮಧ್ಯಪ್ರವೇಶವನ್ನು ಬೆಂಬಲಿಸುತ್ತಿದ್ದಾರೆ ಎಂದು ಅಲ್-ಸದ್ರ್ ಬೆಂಬಲಿಗರು ಆರೋಪಿಸಿದರು. ನಂತರ, ಮನೆಗೆ ಮರಳುವಂತೆ ತನ್ನ ಬೆಂಬಲಿಗರಿಗೆ ಅಲ್-ಸದ್ರ್ ಕರೆ ನೀಡಿದ್ದರೂ, ಹಲವರು ಇನ್ನೂ ಡೇರೆ ಹಾಕಿ ಕುಳಿತಿದ್ದಾರೆ.  ಸರಕಾರವು ದಿಢೀರ್ ಚುನಾವಣೆಗಳನ್ನು ನಡೆಸಬೇಕೆಂದು ಅಲ್-ಸದ್ರ್ ಪಟ್ಟು ಹಿಡಿದಿದ್ದಾರೆ. ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌

ಸಮಸ್ಯೆಯ ಆರಂಭ ಎಲ್ಲಿ?

ಯುಎಸ್ಎ 2003ರಲ್ಲಿ ಇರಾಕ್ ಮೇಲೆ ದಾಳಿ ಮಾಡಿದ ನಂತರದಿಂದ ಹೆಚ್ಚಿನ ಇರಾಕಿಗಳು ತಮ್ಮ ಸರಕಾರ ಭ್ರಷ್ಟ ಮತ್ತು ಪರಿಣಾಮರಹಿತ ಎಂದೇ ಭಾವಿಸಿದ್ದಾರೆ. ಯುಎಸ್ಎ ನೀಡಿದ ಸಂವಿಧಾನವು ವ್ಯಾಪಾರಿ ಪರ ಪ್ರಭುತ್ವವನ್ನು ಒದಗಿಸಿತು ಮತ್ತು ಅದು ಪ್ರಜಾಸತ್ತಾತ್ಮಕ ಬದಲಾವಣೆಗಳಿಗೆ ತಡೆ ಒಡ್ಡುವಂತದ್ದಾಗಿತ್ತು. ಚುನಾವಣೆಗಳು ನಡೆದರೂ, ಜನರ ಧ್ವನಿಗೆ ಅಭಿವ್ಯಕ್ತಿಯೇ ಸಿಗದಂತ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಹಲವಾರು ಇರಾಕಿಗಳು ತಮ್ಮ ಸಂಕಷ್ಟಗಳಿಗೆ ಕಾರಣಗಳ ಭಾಗವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ವಿದ್ಯುತ್ ಕ್ಷೇತ್ರದ ಕುಸಿತ, ಕೋಮುವಾದಿ ಆಡಳಿತ ವ್ಯವಸ್ಥೆ ಇತ್ಯಾದಿಗಳ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾರೆ. 2003ರಿಂದಲೂ ಸ್ಥಳೀಯ ಆಡಳಿತವು ಇನ್ನೂ ಹೆಚ್ಚು ಭ್ರಷ್ಟವಾಗಿದೆ ಎನ್ನಲಾಗಿದೆ. 2003ರ ಸಂವಿಧಾನವು ಬಹಿರಂಗವಾಗಿ ತಾರತಮ್ಯಕ್ಕೆ ಅವಕಾಶ ನೀಡಲಿಲ್ಲವಾದರೂ, ಅಧಿಕಾರವು ಯಾವತ್ತೂ ಕೋಮುನೆಲೆಯಲ್ಲಿ ಹಂಚಿಹೋಗುವಂತ ಚೌಕಟ್ಟನ್ನು ಹೊಂದಿದೆ. ಪರಿಣಾಮವಾಗಿ ಪ್ರಧಾನಿ ಯಾವಾಗಲೂ ಶಿಯಾ. ಅಧ್ಯಕ್ಷ ಯಾವಾಗಲೂ ಕುರ್ದಿಶ್, ಸಂಸತ್ತಿನ ಸ್ಪೀಕರ್ ಯಾವಾಗಲೂ ಸುನ್ನಿ ಅರಬ್. ಆದರೆ, ಶಿಯಾ ಅರಬರು ಇರಾಕಿನ ಮೂರನೇ ಎರಡರಷ್ಟು ಜನಸಂಖ್ಯೆ ಹೊಂದಿದ್ದಾರೆ. ಸುನ್ನಿ ಕುರ್ದ್ ಮತ್ತು ಸುನ್ನಿ ಅರಬರು ತಲಾ ಆರನೇ ಒಂದರಷ್ಟಿದ್ದಾರೆ.

ಸದ್ರ್‌ವಾದಿ ಚಳವಳಿ

ಮುಕ್ತಾದ ಅಲ್-ಸದ್ರ್ 2014ರಲ್ಲಿ ಮುನ್ನೆಲೆಗೆ ಬಂದರು. ಇರಾಕಿನ ಅತ್ಯಂತ ಪ್ರಭಾವಿ ಕುಟುಂಬಗಳಲ್ಲಿ ಒಂದಕ್ಕೆ ಸೇರಿದ ಅವರು, ಮಧ್ಯಮ ಹಂತದ ಶಿಯಾ ಧಾರ್ಮಿಕ ನಾಯಕರಾಗಿದ್ದರು. ಅತ್ಯಂತ ವರ್ಚಸ್ವಿಯಾದ ಅವರು, ಬಡವರ ಪರವಾದ ತಮ್ಮ ನಿಲುವಿಗಾಗಿ ಪರಿಚಿತರು. ಯುಎಸ್ಎಯ ಆಕ್ರಮಣಕ್ಕೆ ಮೊದಲು ಸದ್ದಾಂ ಹುಸೇನ್ ಆಡಳಿತಕ್ಕೆ ಪ್ರತಿರೋಧ ತೋರಿದ್ದಕ್ಕಾಗಿ ಅವರ ಕುಟುಂಬ ಪ್ರಸಿದ್ಧವಾಗಿದೆ. ಸರಕಾರದ ವಿರುದ್ಧ ಪ್ರತಿಭಟನೆಗಳು 2011ರಲ್ಲಿ ಟ್ಯುನೀಶಿಯಾದ ಅರಬ್ ಸ್ಪ್ರಿಂಗ್ ಚಳವಳಿಯ ಪ್ರೇರಣೆಯಿಂದ ಆರಂಭವಾದವು. ಆದರೆ, ಇರಾಕಿನ ಪ್ರತಿಭಟನಾಕಾರರು ಕಷ್ಟದ ಸಮಯವನ್ನು ಎದುರಿಸಿದರು. ಏಕೆಂದರೆ, ಅವರು ಯುಎಸ್ಎ ಆಕ್ರಮಿತ ಮತ್ತು ಐಸಿಲ್‌ನಂತ (ISIL) ಭಯೋತ್ಪಾದಕ ಗುಂಪುಗಳ ಹಿಡಿತದಲ್ಲಿದ್ದ ದೇಶದಲ್ಲಿದ್ದರು. ಇದು ಹಿಂಸಾತ್ಮಕವಾಗಿ ಪ್ರತಿಭಟನಾಕಾರರ ಮೇಲೆ ಮುಗಿಬೀಳಲು ಸರಕಾರಕ್ಕೆ ಅವಕಾಶ ಒದಗಿಸಿತು. ಆದರೆ ಇದು, ಬೀದಿಗಿಳಿಯದಂತೆ ಜನರನ್ನು ತಡೆಯಲು ಸಾಧ್ಯವಾಗಲಿಲ್ಲ. ಎಲ್ಲಾ ರೀತಿಯ ವಿದೇಶಿ ಮಧ್ಯಪ್ರವೇಶಗಳ ವಿರುದ್ಧ ತನ್ನ ತತ್ವಾದರ್ಶಗಳ ನಿಲುವಿನಿಂದಾಗಿ ಮತ್ತು ಸಾರ್ವಜನಿಕ ರಂಗದಲ್ಲಿ ಭ್ರಷ್ಟಾಚಾರದ ವಿರುದ್ಧ ವೇದಿಕೆ ಒದಗಿಸಿದುದಕ್ಕಾಗಿ ಅಲ್-ಸದ್ರ್ ಒಬ್ಬ ಜನಪ್ರಿಯ ನಾಯಕರಾಗಿ ಮೇಲೇರಿ ಬಂದರು. ಅವರು ಇರಾಕಿನಲ್ಲಿ ಮಧ್ಯಪ್ರವೇಶ ಮಾಡುವ ಯುಎಸ್ಎ, ಇರಾನ್ ಮತ್ತಿತರ ಶಕ್ತಿಗಳ ಟೀಕಾಕಾರರಾಗಿದ್ದಾರೆ. ಅವರ ಬೆಂಬಲಿಗರು ಸಂವಿಧಾನದ ಪುನರ್ರಚನೆಗೆ ಕರೆ ನೀಡಿದ್ದಾರೆ. ಈ ಕುರಿತು ಸಾರ್ವಜನಿಕ ಚರ್ಚೆಗೆ ಬರುವಂತೆಯೂ ಅಲ್-ಸದ್ರ್ ಅವರು ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ. ಅವರ ಬೆಂಬಲಿಗರು ಇನ್ನೂ ಸಂಸತ್ತಿನ ಹೊರಗೆ ಹಸಿರು ವಲಯದಲ್ಲಿ ಬೀಡುಬಿಟ್ಟು ಪ್ರತಿಭಟನೆಗಳನ್ನು ಮುಂದುವರಿಸಿದ್ದಾರೆ. ತಮ್ಮ ಮೇಲೆ ಹೇರಲಾಗಿರುವ ಸರಕಾರಕ್ಕೆ ಬದಲಾಗಿ, ಇರಾಕಿನಲ್ಲಿ ಒಂದು ಪರಿಣಾಮಕಾರಿ ಸರಕಾರದ ಸ್ಥಾಪನೆಗೆ ದಾರಿ ಮಾಡಿಕೊಡಬಲ್ಲ ಹೊಸ ಸಂವಿಧಾನಕ್ಕಾಗಿ ಅವರು ಒತ್ತಾಯಿಸುತ್ತಿದ್ದಾರೆ.

ಕಿಶೋರ್ ಗೋವಿಂದ
  • ಕಿಶೋರ್ ಗೋವಿಂದ, ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...