Homeಚಳವಳಿಕಳೆದ ದಶಕದಲ್ಲಿ ಸತ್ಯದ ಪರ ದನಿಯೆತ್ತಿ ಬೆಳಕಿಗೆ ಬಂದ ಜನಪರ-ಜೀವಪರ ಯುವತಾರೆಗಳು..

ಕಳೆದ ದಶಕದಲ್ಲಿ ಸತ್ಯದ ಪರ ದನಿಯೆತ್ತಿ ಬೆಳಕಿಗೆ ಬಂದ ಜನಪರ-ಜೀವಪರ ಯುವತಾರೆಗಳು..

ಸಂಕಷ್ಟಗಳನ್ನು ಎದುರಿಸಿ, ಕಂಫರ್ಟ್‌ ಜೋನ್‌ನಿಂದ ಹೊರಬಂದವರು ಕೆಲವರಾದರೆ, ಮತ್ತೆ ಕೆಲವರು ಮಣ್ಣಿಂದಲೇ ಮೇಲೆದ್ದವರು..

- Advertisement -
- Advertisement -

2010-2020 ಭಾರತದ ಹೋರಾಟ-ಚಳವಳಿಯ ಪಾಲಿಗೆ ಕಠಿಣ ದಶಕ.. 70-80ರ ದಶಕಗಳಲ್ಲಿ ಮಹಾನ್‌ ಹೋರಾಟದ ಮೂಲಕ ಪಡೆದ ಹಲವು ಹಕ್ಕುಗಳನ್ನು ಪ್ರಭುತ್ವ ವಾಪಸ್‌ ಕಿತ್ತುಕೊಂಡ ಕಾಲ. ಇಂತಹ ದಶಕದಲ್ಲಿಯೇ ಲಕ್ಷಾಂತರ ಯುವಜನರು ಪ್ರಭುತ್ವವನ್ನು ಪ್ರಶ್ನಿಸಿ ಬೀದಿಗಿಳಿದಿದ್ದಾರೆ. ಸಾವಿರಾರು ಜನ ನಾಯಕತ್ವ ನೀಡಿದ್ದಾರೆ. ನೂರಾರು ಜನ ಮಾತ್ರ ಪ್ರಚಲಿತಕ್ಕೆ ಬಂದಿದ್ದಾರೆ. ಅವರಲ್ಲಿ 12 ಜನರ ಸಂಕ್ತಿಪ್ತ ವಿವರವನ್ನು ಇಲ್ಲಿ ಕೊಡಲಾಗಿದೆ..

ಜಗತ್ತಿನ ಜನರಿಗಾಗಿ ಪರಿಸರ ಉಳಿಸಲು ಮುಂದಾದ ಗ್ರೇಟಾ ಥನ್ಬರ್ಗ್‌

ಕ್ಲೈಮೇಟ್‌ ಚೇಂಜ್‌ ವಿರುದ್ಧ ದಿಟ್ಟವಾಗಿ ದನಿಯೆತ್ತಿದ್ದ ಗ್ರೇಟಾ ಈ ಭೂಮಿಯನ್ನು ನಮಗೂ ಉಳಿಸಿ ಎಂದು ಕೇಳುತ್ತಿದ್ದಾರೆ. ಸ್ವೀಡನ್‌ನಲ್ಲಿ ಜನವರಿ 03, 2003ರಂದು ಜನಿಸಿದ ಈ ಬಾಲೆ ಆಗಸ್ಟ್‌ 2018ರಿಂದ ಅಂದರೆ  ಆಕೆಗೆ 15 ವರ್ಷವಿದ್ದಾಗಿನಿಂದ ಪ್ರತಿ ಶುಕ್ರವಾರದಂದು ಶಾಲೆಗೆ ಹೋಗದೇ ಪಾರ್ಲಿಮೆಂಟಿನ ಎದುರು ಕುಳಿತು ಕ್ಲೈಮೇಟ್‌ ಚೇಂಜ್‌ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾದಳು.

ಈಕೆಯ ಪ್ರಾಮಾಣಿಕ ಹೋರಾಟಕ್ಕೆ ಮನಸೋತ ಪ್ರಪಂಚದ ಕೋಟ್ಯಾಂತರ ಜನತೆ ಈಕೆಯ ಹೋರಾಟದೊಂದಿಗೆ ಕೈಜೋಡಿಸಿರು. ವಿಶ್ವಸಂಸ್ಥೆಯಲ್ಲಿ ನಮಗೂ ಮುಂದಿನ ಪೀಳೆಗೆಗೂ ಸೇರಿದ ಈ ಭೂಮಿಯನ್ನು ನಾಶಮಾಡುತ್ತಿರುವ ನಿಮಗೆಷ್ಟು ಧೈರ್‍ಯ ಎಂದು ಪ್ರಶ್ನಿಸುವ ಮೂಲಕ ಈಕೆ ಪ್ರಪಂಚದ ಬಹುತೇಕರ ಮನೆಮಾತಾಗಿದ್ದಾಳೆ.

17ರ ಹರೆಯದ ಈಕೆಯ ಕಣ್ಣುಗಳಲ್ಲಿ ಈ ಪರಿಸರವನ್ನು ಜೋಪಾನವಾಗಿಡುವ ಕನಸಿದೆ. ಅದರಲ್ಲಿ ಈ ಪ್ರಪಂಚದ ಎಲ್ಲಾ ಜೀವಕಣಗಳ ಸುರಕ್ಷತೆಯಿದೆ, ಅದು ಇಂದಿಗೂ ಮತ್ತು ಮುಂದಿಗೂ…

ಸುಳ್ಳು ಸುದ್ದಿಗಳ ಕಾಲದಲ್ಲಿ ಜನಪರ ಮಾಧ್ಯಮವಾದ ಧೃವ್‌ ರಾಠೀ

ಅಕ್ಟೋಬರ್‌ 8, 2004ರಲ್ಲಿ ಹರ್ಯಾಣದಲ್ಲಿ ಹುಟ್ಟಿದ ಧೃವ್‌ ರಾಠೀ, ಜರ್ಮನಿಯಲ್ಲಿ ಮಾಸ್ಟರ್ಸ್ ಇನ್ ರಿನ್ಯುಬಲ್ ಎನರ್ಜಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತನಾದ 25 ವರ್ಷದ ಯುವಕ. ಹವ್ಯಾಸಕ್ಕಾಗಿ ಫೋಟೋಗ್ರಫಿ, ಪ್ರವಾಸದ ವಿಡಿಯೋ ಮಾಡುತ್ತಿದ್ದ ಈತ ನಂತರ ಭಾರತದ ರಾಜಕೀಯ, ಆರ್ಥಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಮುಂದಾದ.

ಈತನ ವಿಡಿಯೋಗಳು ಯಾವ ಪರಿ ಕೋಟ್ಯಾಂತರ ವಿಕ್ಷಕರನ್ನು ತಲುಪಿದವೆಂದರೆ ನೋಡ ನೋಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಫೇಸ್‌ಬುಕ್‌ಪುಟಗಳಿಗಿಂತ ಎರಡು ಪಟ್ಟು ಹೆಚ್ಚು ಎಂಗೆಜ್‌ಮೆಂಟ್‌ಗಳು ಈತನ ಪುಟಕ್ಕೆ ದಾಖಲಾಗಿವೆ. ಬರೋಬ್ಬರಿ 28 ಲಕ್ಷ ಜನರು ಈತನ ಯೂಟ್ಯೂಬ್‌ ಚಾನೆಲ್‌ಗೆ ಚಂದಾದಾರರಾಗಿದ್ದಾರೆ.

ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಪರಿಸರಕ್ಕಾಗಿ ದನಿಯೆತ್ತುವ ಈಗ ರಾಜಕೀಯದ ಉತ್ತಮ ನಡೆಗಳನ್ನು ಪ್ರಶಂಸಿಸುವುದಲ್ಲದೇ ಕೆಟ್ಟ ನಡೆಗಳನ್ನು ಆಧಾರ ಸಮೇತ ಟೀಕಿಸುತ್ತಾರೆ. ಪರ್ಯಾಯ ಮಾಧ್ಯಮದ ದನಿಯಾಗಿ ಜನರಿಗೆ ಸತ್ಯ ತಲುಪಿಸಲು ಧೃವ್‌ ಶ್ರಮಿಸುತ್ತಿದ್ದಾರೆ.

ಭತ್ತದ ಗದ್ದೆಯಿಂದ ಬೆಳೆದು ಬಂದ ಚಿನ್ನದ ಹುಡುಗಿ ಹಿಮಾ ದಾಸ್‌

ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸು ಜನವರಿ 9, 2000ರಲ್ಲಿ ಹುಟ್ಟಿತು. ಯಾವುದೇ ಕ್ರೀಡಾ ಹಿನ್ನೆಲೆಯಿಲ್ಲದೇ ಬೆಳೆದ ಈಕೆ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಟ್ಟು ಇತಿಹಾಸ ಸೃಷ್ಟಿಸಿದವಳು..

ಅಲ್ಲದೇ 2019ರ ಜುಲೈನಲ್ಲಿ ಯೂರೋಪ್‌ನಲ್ಲಿ ಎರಡು ತಿಂಗಳಲ್ಲಿ ಏಳು ಚಿನ್ನ ಗೆಲ್ಲುವ ಮೂಲಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದ ಹಿಮಾ ಭಾರತದಲ್ಲಿ ಮಾತ್ರ ಅಪಮಾನಕ್ಕೊಳಗಾಗಿದ್ದಳು. ಏಕೆಂದರೆ ಭಾರತದ ಜಾತಿಗ್ರಸ್ಥ ಮನ್ಸಸ್ಸುಗಳು ಗೂಗಲ್‌ನಲ್ಲಿ ಅವಳ ಜಾತಿ ಹುಡುಕಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದರು.

ಇನ್ನು ಅಥ್ಲೆಟಿಕ್‌ ಫೆಡರೇಷನ್‌ ಆಫ್‌ ಇಂಡಿಯಾ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…” ಎಂದಿತ್ತು. ಎಎಫ್‍ಐನ ಧೋರಣೆಗೆ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟು ನೀಡಿದ್ದರು.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು ಅಥ್ಲೆಟಿಕ್ಸ್‌ನಲ್ಲಿ ಹೆಸರು ತಂದಿದ್ದು ಅಸಾಧಾರಣ ಸಾಧನೆ.. ಇದು ಹೀಗೆ ಮುಂದುವರೆಯಲಿ..

ಸಮಾನತೆಯ ಕನಸು ಕಂಡ ಬಡವರ ಮಗ ಕನ್ಹಯ್ಯ ಕುಮಾರ್‌

ಇಂದು ದೇಶಾದ್ಯಂತ ಮೊಳಗುತ್ತಿರುವ ಅಜಾದಿ ಘೋಷಣೆಗಳು ಪ್ರಸಿದ್ದಗೊಳಿಸಿದ ಕೀರ್ತಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮತ್ತು ಯುವನಾಯಕ ಕನ್ಹಯ್ಯ ಕುಮಾರ್‌‌ಗೆ ಸಲ್ಲುತ್ತದೆ.

ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ 1987ರ ಜನವರಿಯಲ್ಲಿ ಜನಿಸಿದ ಇವರು ಜೆಎನ್‌ಯುನಲ್ಲಿ ’ದಿ ಪ್ರೊಸೆಸ್‌ ಆಫ್‌ ಡಿ ಕಲೋನಿಸೈಸೇಷನ್ ಅಂಡ್‌ ಸೋಷಿಯಲ್‌ ಟ್ರಾನ್ಸ್‌ಫರ್ಮೇಷನ್‌ ಇನ ಸೌತ್‌ ಆಫ್ರಿಕಾ 1994-2015′ ವಿಷಯದ ಕುರಿತು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದರು ಮತ್ತು ಜೆಎನ್‌ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದರು.

2016ರಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಹೋರಾಟಗಾರ ರೋಹಿತ್‌ ವೇಮುಲಾ ಜಾತಿವಾದಿಗಳ ಹುನ್ನಾರಕ್ಕೆ ಬಲಿಯಾದಾಗ ದೇಶಾದ್ಯಂತ ಪ್ರತಿರೋಧ ಮೂಡಿಬಂದಿತ್ತು. ಈ ಸಮಯದಲ್ಲಿಯೇ ಜೆಎನ್‌ಯು ಹೋರಾಟದ ರಣರಂಗವಾಗಿತ್ತು. ಹೋರಾಟವನ್ನು ದಿಕ್ಕುತಪ್ಪಿಸಲು ಕೆಲವು abvp ಕಿಡಿಗೇಡಿಗಳು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಲ್ಲದೇ ಅದನ್ನು ಕನ್ಹಯ್ಯ ಕುಮಾರ್‌ ತಲೆಗೆ ಕಟ್ಟಿದ್ದರು. ಇದಕ್ಕಾಗಿ ಹಲವು ಕೇಸುಗಳಲ್ಲಿ ಜೈಲುವಾಸ ಅನುಭವಿಸಿದ ಇವರು ನಂತರ ಸತ್ಯ ಹೊರಬಿದ್ದು ಖುಲಾಸೆಗೊಂಡರು ಮಾತ್ರವಲ್ಲ ಅಷ್ಟರಲ್ಲಿ ದೇಶದ ಯುವನಾಯಕರಾಗಿ ಹೊರಹೊಮ್ಮಿದ್ದರು.

ತಮ್ಮ ಪೂರ್ತಿ ಜೀವನವನ್ನು ಹೋರಾಟಕ್ಕೆ ಮುಡಿಪಿಟ್ಟಿರುವ ಕನ್ಹಯ್ಯ ಎಡಪಂಥೀಯ ಚಳವಳಿಯ ಭರವಸೆಯ ಬೆಳಕಾಗಿದ್ದಾರೆ. ಸಮಾನತೆಯ ಯುಗಕ್ಕಾಗಿ ಹಂಬಲಿಸುವ ಕನ್ಹಯ್ಯ ತನ್ನ ಹರಿತ ಭಾಷಣಗಳು ಮತ್ತು ಬೀದಿ ಚಳವಳಿಯನ್ನು ಧೃಡವಾಗಿ ಮುಂದುವರೆಸಿದ್ದಾರೆ.

ಕಾಶ್ಮೀರದ ಪ್ರತಿರೂಪ ಈ ಶೆಹ್ಲಾ ರಶೀದ್‌

ಅದೇ ಜೆಎನ್‌ಯುನಲ್ಲಿ ಓದುತ್ತಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿದ್ದ ಶೆಹ್ಲಾ ರಶೀದ್‌ ಕನ್ಹಯ್ಯ ಜೈಲಿನಲ್ಲಿದ್ದಾಗ ದಿಟ್ಟವಾಗಿ ಹೋರಾಟವನ್ನು ಮುಂದುವರೆಸಿದ್ದರು.

ಮೂಲತಃ ಕಾಶ್ಮೀರದವರಾದ ಶೇಹ್ಲಾ ರಶೀದ್‌ 2010ರಿಂದಲೇ ಮಾನವ ಹಕ್ಕುಗಳ ಪರವಾಗಿ ದನಿಯೆತ್ತುತ್ತಾ ಬಂದವರು. ವಿಶೇಷವಾಗಿ ವಿಚಾರನಾಧೀನ ಅಲ್ಪಸಂಖ್ಯಾತ ಖೈದಿಗಳ ಪರವಾಗಿ ವಾದ ಮಾಡುತ್ತಾ ಬಂದವರು. ನಂತರ ಜೆಎನ್‌ಯುನಲ್ಲ ಉಪಾಧ್ಯಕ್ಷಳಾಗಿ ಆಯ್ಕೆಯಾದ ಮೊದಲ ಕಾಶ್ಮೀರಿ ಯುವತಿ ಶೆಹ್ಲಾ ಆಗಿದ್ದರು. ಯುಜಿಸಿಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿ, ’ಆಕ್ಕುಪೈ ಯುಜಿಸಿ’ ಹೋರಾಟವನ್ನು ಸಹ ಮುನ್ನಡೆಸಿದ್ದರು.

ಶಾ ಫೈಸಲ್‌ ನೇತೃತ್ವದ ಜಮ್ಮು ಕಾಶ್ಮೀರ್‌ ಪೀಪಲ್ಸ್‌ ಮೂವ್‌ಮೆಂಟ್‌ ಪೊಲಿಟಿಕಲ್‌ ಪಾರ್ಟಿ ಸೇರಿದ್ದ ಇವರು ಕಾಶ್ಮೀರದ ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಕಳವಳಗೊಂಡಿದ್ದಾರೆ. ಹೋರಾಟ ಮುಂದುವರೆಸಿದ್ದಾರೆ.

ಸಿನಿಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌

ಡಿಸೆಂಬರ್‌ 08ರ 1982ರಂದು ತಮಿಳುನಾಡಿನ ಚನ್ನೈ ಬಳಿಯ ಅವಡಿಯೆಂಬ ಗ್ರಾಮದಲ್ಲಿ ಜನಿಸಿದ ರಂಜಿತ್‌ ಸಿನಿಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕರಾಗಿದ್ದಾರೆ.

ಅಟ್ಟಕತ್ತಿ ಮತ್ತು ಮದ್ರಾಸ್‌ ಸಿನಿಮಾಗಳ ಮೂಲಕ ಗಮನ ಸೆಳೆದ ಅವರು ನಂತರ ರಜಿನಿಕಾಂತ್‌ ನಟಿಸಿದ ಕಬಾಲಿ ಮತ್ತು ಕಾಲಾ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುವ ಮೂಲಕ ಪ್ರಸಿದ್ದರಾದವರು. ಅದರಲ್ಲಿಯೂ ಕಾಲ ಅವರನ್ನು ಬಹುಎತ್ತರಕ್ಕೆ ಕರೆದೊಯ್ದಿತು.

ಜಾತಿ ತಾರತಮ್ಯದ ವಿರುದ್ಧ ಸದಾ ತುಡಿಯುವ ರಂಜಿತ್‌ ಸ್ವತಃ ನೀಲಂ ಪ್ರೊಡಕ್ಷನ್‌ ಮೂಲಕ ಪರಿಯೆರುಮ್ ಪೆರುಮಾಳ್ ಎಂಬ ಮಹತ್ವದ ಸಿನಿಮಾ ನಿರ್ಮಿಸುವ ಮೂಲಕ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ. ಗುಂಡು ಎಂಬ ಕಾರ್ಮಿಕ ಪ್ರಧಾನ ಸಿನಿಮಾವನ್ನು ಹೊರತಂದಿದ್ದಾರೆ.

ಕ್ಯಾಸ್ಟ್‌ಲೆಸ್‌ ಕಲೆಕ್ಟಿವ್‌ ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿರುವ ಅವರು ಹಲವು ಕಲಾವಿದರಿಗೆ ತರಬೇತಿ ನೀಡುವ ಮೂಲಕ ಸಮಾಜದ ಪ್ರಸ್ತುತ ತಲ್ಲಣಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ದಲಿತರ ಪರವಾಗಿ ಮತ್ತು ದಲಿತರ ಸಮಸ್ಯೆಗಳ ಕುರಿತು ಹಲವಾರು ಜನ ಸಿನೆಮಾಗಳನ್ನು ತೆಗೆದಿದ್ದಾರೆ. ಆದರೆ ತಾನೊಬ್ಬ ದಲಿತ ಎಂದು ಹೆಮ್ಮೆಯಿಂದ ಹೇಳಿಕೊಂಡು ದಲಿತ ಅಸ್ಮಿತೆಯನ್ನು ಬಹಿರಂಗವಾಗಿ ಸಾರುವ ಮೂಲಕ ಸಿನೆಮಾ ಮಾಡುತ್ತಿರುವ ಯುವತಾರೆ ಪ.ರಂಜಿತ್. ಜಾತಿ ವಿನಾಶ ಅವರ ಗುರಿಯಾಗಿದೆ…

ದಮನಿತರ ಪಾಲಿನ ದನಿಯಾದ ಚಿತ್ರನಟಿ ಸ್ವರ ಭಾಸ್ಕರ್‌

ನಾನು ತೆರಿಗೆ ಪಾವತಿಸುವವಳು. ಉನ್ನತ ಶಿಕ್ಷಣವನ್ನು ಸಬ್ಸಿಡಿಯಾಗಿ ನೀಡಲು ನನ್ನ ತೆರಿಗೆಗಳನ್ನು ಬಳಸುವುದಕ್ಕೆ ನನಗೆ ಸಂಪೂರ್ಣ ಒಪ್ಪಿಗೆಯಿದೆ. ಏಕೆಂದರೆ ಶಿಕ್ಷಣವು ಹಣವುಳ್ಳ ಕೆಲವೇ ಜನರಿಗೆ ಮಾತ್ರ ಕೈಗೆಟುವಂಥ ಸರಕು ಆಗಬಾರದು ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ಎಲ್ಲಾ ಜನರಿಗೂ ಸಿಗಬೇಕೆ ಹೊರತು ಕೆಲವೇ ಜನರ ಸ್ವತ್ತಾಗಬಾರದು ಎಂದು ಸ್ವರ ಭಾಸ್ಕರ್‌ ಜೆಎನ್‌ಯು ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದ ವಿರುದ್ಧ ಹೋರಾಡುತ್ತಿದ್ದಾಗ ದನಿ ಎತ್ತಿದ್ದರು.

ಏಪ್ರಿಲ್‌ 09, 1988ರಂದು ದೆಹಲಿಯಲ್ಲಿ ಜನಿಸಿದ ಸ್ವರ, ಸದ್ಯ ಬಾಲಿವುಡ್‌ನ ಪ್ರಖ್ಯಾತ ನಟಿ. ಕೇವಲ ಸಿನಿಮಾದಲ್ಲಿ ನಟಿಸುತ್ತಾ ಹೋಗಿದ್ದರೆ ಅವರು ಕೋಟ್ಯಾಧಿಪತಿಯಾಗಿ ಐಷರಾಮಿ ಜೀವನ ಸಾಗಿಸಬಹುದಿತ್ತು. ಆದರೆ ಅವರ ಅಂತರಾಳ ಮಾತ್ರ ಶೋಷಿತರ ಪರ ತುಡಿಯುತ್ತಿತ್ತು. ಹಾಗಾಗಿ ಅವರು ವ್ಯವಸ್ಥೆಯ ವಿರುದ್ಧ ದನಿಯೆತ್ತಿದರು ಮಾತ್ರವಲ್ಲ ಜನಪರರಿಗೆ  ಬಹಿರಂಗವಾಗಿ ಬೆಂಬಲ ನೀಡಿದರು. ಆಮ್‌ ಆದ್ಮಿ ಪಕ್ಷ ಮತ್ತು ಕನ್ಹಯ್ಯ ಕುಮಾರ್‌ ಪರ ಚುನಾವಣೆಯಲ್ಲಿ ಪ್ರಚಾರ ಕೈಗೊಂಡರು, ಪರಿಣಾಮ ನಾಲ್ಕು ಚಿತ್ರಗಳಿಂದ ಅವರನ್ನು ಕೈಬಿಡಲಾಯಿತು..

ಇದರಿಂದ ಕುಗ್ಗಿದರೆ ಅಂದರೆ ಮತ್ತಷ್ಟು ಪುಟಿದೆದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ, ಎನ್‌ಆರ್‌ಸಿ ವಿರುದ್ಧ ಧೀರಾದ್ಥಾತ್ತ ದನಿಯೆತ್ತಿದ ಇವರು ಮುಂಬೈನಲ್ಲಿ ಹಲವು ಪ್ರತಿಭಟನೆಗಳನ್ನು ಮುನ್ನಡೆಸಿದರು. ಜೆಎನ್‌ಯು ಹಿಂಸೆ ಖಂಡಿಸಿ ಬೀದಿಗಿಳಿದವರು..

ಹಿಂದೂ ಮುಸ್ಲಿಂ ಐಕ್ಯತೆ ನನ್ನ ಗುರಿ : ಚಂದ್ರಶೇಖರ್‌ ಅಜಾದ್‌

ಡಿಸೆಂಬರ್‌ 02, 1986ರಲ್ಲಿ ಚಂದ್ರಶೇಖರ್ ಅಜಾದ್‌ ಜನಿಸಿದ್ದು ಸಹರಾನ್‌ಪುರದ ಚತ್ಮಾಲ್‌ಪುರದ ಬಳಿಯ ಘದ್ಕೌಲಿ ಗ್ರಾಮದಲ್ಲಿ. ಅವರು ಮೊದಲು ಸುದ್ದಿಯಾಗಿದ್ದು 2015 ರಲ್ಲಿ. ಅವರು ತಮ್ಮ ಊರಿನ ಆರಂಭದಲ್ಲಿ ‘ಮಹಾ ಚಮ್ಮಾರರನ್ನು ಘದ್ಕೌಲಿಯು ಸ್ವಾಗತಿಸುತ್ತದೆ (ಘದ್ಕೌಲಿ ವೆಲ್ಕಮ್ ಯು ದಿ ಗ್ರೇಟ್ ಚಾಮರ್ಸ್)’ ಎಂದು ಬೋರ್ಡು ಹಾಕುವ ಮೂಲಕ.

ಕಾನೂನು ಅಧ್ಯಯನ ಮಾಡಿದ ಇವರು 2014ರಲ್ಲಿ ಭೀಮ್‌ ಆರ್ಮಿ ಎನ್ನುವ ಸಂಘಟನೆ ಕಟ್ಟುವ ಮೂಲಕ ಮಿಲಿಟೆಂಟ್‌ ದಲಿತ ಹೋರಾಟಕ್ಕೆ ಧುಮುಕಿದರು. ದಲಿತರಿಗೆ ಶಿಕ್ಷಣ ಬೇಕು ಎಂಬುದನ್ನು ಮನಗಂಡಿರುವ ಭೀಮ್‌ ಆರ್ಮಿ ಉತ್ತರ ಪ್ರದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭೀಮ್‌ ಪಾಠಶಾಲಾಗಳನ್ನು ನಡೆಸುತ್ತಿದೆ.

ಸಹರಾನ್‌ಪುರದ ಶಬ್ಬೀರ್‌ಪುರ ಗ್ರಾಮದಲ್ಲಿ 2017 ರಲ್ಲಿ ಮೇಲ್ಜಾತಿ ಠಾಕೂರರು ದಲಿತರ ಮೇಲೆ ದೌರ್ಜನ್ಯವೆಸಗಿದ್ದರು. ತಂದನಂತರ ಮೇಲ್ಜಾತಿಗಳ ದೌರ್ಜನ್ಯಕ್ಕೆ ಭೀಮ್‌ ಆರ್ಮಿ ಹಿಂಸೆಯ ಮೂಲಕವೇ ತಿರುಗೇಟು ನೀಡಿತ್ತು. ಆಗ ಉತ್ತರ ಪ್ರದೇಶ ಸರ್ಕಾರ ಇವರನ್ನು ಒಂದೂ ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಬಂಧಿಸಿತ್ತು. ಈಗಲೂ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೆಹಲಿಯಲ್ಲಿ ಧೀರೋದ್ಧಾತ ಹೋರಾಟ ನಡೆಸಿದ ಕಾರಣಕ್ಕಾಗಿ ಅಜಾದ್‌ ಜೈಲಿನಲ್ಲಿದ್ದಾರೆ.

ಡಾ.ಬಿ.ಆರ್‌ ಅಂಬೇಡ್ಕರ್‌ ಮತ್ತು ಕಾನ್ಶಿರಾಮ್‌ರವರ ಆಶಯಗಳನ್ನು ಈಡೇರಿಸುವ ಒಬ್ಬ ಕಾರ್ಯಕರ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಅಜಾದ್‌ ದಲಿತ ಮುಸ್ಲಿಂ ಐಕ್ಯತೆಯ ಮೂಲಕ ಜಾತಿವಿನಾಶಕ್ಕಾಗಿ ತಮ್ಮ ಜೀವನ ಮುಡಿಪಿಟ್ಟಿದ್ದಾರೆ.

ಚಿಕ್ಕ ವಯಸ್ಸಿಗೆ ನೊಬೆಲ್‌ ಮುಡಿಗೇರಿಸಿಕೊಂಡ ಯೂಸೆಫ್‌ ಮಲಾಲ

ಜುಲೈ 12, 1997ರಂದು ಜನಿಸಿದ ಮಲಾಲಾ ಪ್ರಸಿದ್ದಿಯಾಗಿದ್ದು ತಾಲಿಬಾನ್‌ ಉಗ್ರರ ಗುಂಡಿಗೆ ತಲೆಯೊಡ್ಡಿದಾಗ. ಅದೃಷ್ಟವಶಾತ್‌ ಬದುಕುಳಿದ ನಂತರ ಆಕೆಯ ಮೇಲಿನ ದಾಳಿಗೆ ಕಾರಣವೇನೆಂದು ತಿಳಿದುಬಂದಿದ್ದು ಹೆಣ್ಣು ಮಕ್ಕಳ ಶಿಕ್ಷಣ, ಮಾನವ ಹಕ್ಕುಗಳ ಪರ ದನೆಯೆತ್ತಿದ್ದಕ್ಕಾಗಿ ಎಂದು..

ಬಿಬಿಸಿ ಉರ್ದು ಬ್ಲಾಗ್‌ನಲ್ಲಿ ಸ್ಪಷ್ಟವಾಗಿ ಮಹಿಳೆಯರ ಕಲ್ಯಾಣದ ಪರ ಬರೆಯುತ್ತಿದ್ದ 15ವರ್ಷದ ಪುಟ್ಟ ಹುಡುಗಿಯ ಮೇಲೆ ಗುಂಡು ಹಾರಿಸಿ ತಾಲಿಬಾನ್‌ ನಗೆಪಾಟಲಿಗೆ ಹೀಡಾಯಿತು. ಇಡೀ ಪ್ರಪಂಚದ ಹಲವು ದೇಶಗಳು ತಾಲಿಬಾನ್‌ ವಿರುದ್ಧ ಮಾತಾಡಿದವು. ಮಲಾಲ ವಿಶ್ವದ ಮನೆಮಾತಾದಳು. 2014ರ ವಿಶ್ವ ಶಾಂತಿ ನೊಬೆಲ್ ಪ್ರಶಸ್ತಿ ಪಡೆಯುವುದರೊಂದಿಗೆ ಅತಿ ಚಿಕ್ಕ ವಯಸ್ಸಿಗೆ ಪ್ರಶಸ್ತಿ ಗೆದ್ದ ದಾಖಲೆಯೊಂದಿಗೆ ಆಕೆ ಮತ್ತಷ್ಟು ಮನ ಗೆದ್ದಳು.

2012-13ರಲ್ಲಿ ವಿಶ್ವದ ಪ್ರಸಿದ್ದ ಟೀನೇಜರ್‌ ಎಂದು ಹೆಸರು ಗಳಿಸಿದ ಆಕೆ ಬರೆದ ’ಐ ಆಮ್ ಮಲಾಲ’ ಅತಿ ಹೆಚ್ಚು ಮಾರಾಟ ಕಂಡಿತು. ಮಲಾಲ ಫಂಡ್‌ ಮತ್ತು ಶಿಜ್ಹಾ ಶಾಹಿದ್‌ ಎಂಬ ಎನ್‌ಜಿಓ ಗಳ ಮೂಲಕ ಆಕೆಯ ಅಕ್ಷರ ಕ್ರಾಂತಿ ಮುಂದುವರೆದಿದೆ..

ಅಸಲಿ ಗುಜರಾತ್‌ ಮಾಡೆಲ್‌ ತೋರಿಸಿದ ದಲಿತ ನಾಯಕ ಜಿಗ್ನೇಶ್‌ ಮೇವಾನಿ

ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ, ನಮ್ಮ ಪಾಲಿನ ಭೂಮಿ ನಮಗೆ ಕೊಡಿ ಎನ್ನುವ ಘೋಷಣೆಯ ಮೂಲಕ ಚಿರಪರಿಚಿತರಾಗಿದ್ದು ಗುಜರಾತಿನ ಯುವ ಹೋರಾಟಗಾರ ಜಿಗ್ನೇಶ್‌ ಮೇವಾನಿ.

ಡಿಸೆಂಬರ್‌ 11, 1982ರಲ್ಲಿ ಗುಜರಾತಿನ ಅಹ್ಮದಾಬಾದ್‌ನಲ್ಲಿ ಜನಿಸಿದ ಇವರು ಪತ್ರಕರ್ತರಾಗಿ, ವಕೀಲರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದಾಗ, ದನ ಸಾಗಾಟ ಮಾಡಿದ್ದಾರೆ ಎಂಬ ಆರೋಪದಲ್ಲಿ ಊನಾದಲ್ಲಿ ದಲಿತರ ಮೇಲೆ ಸಾಮೂಹಿಕ ಬರ್ಬರ ಹಲ್ಲೆ ನಡೆಯಿತು. ಇದನ್ನು ಖಂಡಿಸಿ ದಲಿತ ಅಸ್ಮಿತಾ ಯಾತ್ರೆಯನ್ನು ಅಹ್ಮದಾಬಾದ್‌ನಿಂದ ಊನಾದವರೆಗೂ ಪಾದಯಾತ್ರೆ ನಡೆಸಿದ ಇವರು 2016ರ ಆಗಸ್ಟ್‌ 15ರಂದು ಚಲೋ ಉನಾ ಎಂಬ ಚಳವಳಿ ಸಂಘಟಿಸಿದ್ದರು. ಅಂದು 20000 ಹೆಚ್ಚು ದಲಿತರು ಭಾಗವಹಿಸಿದ್ದಲ್ಲದೇ “ಇನ್ನು ಮುಂದೆ ಸತ್ತ ದನ ಊಳುವ ಕೆಲಸ ಕೈಬಿಡುವುದಾಗಿ” ಪ್ರತಿಜ್ಞೆ ಮಾಡಿಸಿದ್ದರು.

ನಂತರ 2017 ರಲ್ಲಿ ನಡೆದ ಗುಜರಾತ್‌ ರಾಜ್ಯ ಚುನಾವಣೆಗಳಲ್ಲಿ ಸ್ವಂತತ್ರ ಅಭ್ಯಥಿ೯ಯಾಗಿ ಗೆದ್ದುಬಂದ ಇವರು ದಲಿತರಿಗೆ ಭೂಮಿ ಬೇಕು ಎನ್ನುವುದು ಹಕ್ಕೊತ್ತಾಯವನ್ನು ಸದಾ ಸದನದ ಒಳಗೆ ಮತ್ತು ಹೊರಗೆ ದ್ವನಿಸುತ್ತಿದ್ದಾರೆ…

ಕಪಟ ಅನ್ಯಾಯದ ವಿರುದ್ಧ ದಿಟ್ಟ ದನೆಯತ್ತಿದ್ದ ನೈಜ ಹೆಣ್ಣುಮಗಳು ಶೃತಿ ಹರಿಹರನ್

ಜಗತ್ತಿನಲ್ಲಿ ಬದಲಾವಣೆಗಳನ್ನು ಸಾಧಿಸಿದ ಮಹನೀಯರ್‍ಯಾರು ಸುಲಭದ ಮಾರ್ಗಗಳಲ್ಲಿ ಅದನ್ನು ಮಾಡಿಲ್ಲ, ಅದು ಯಾವಾಗಲೂ ಕಷ್ಟದ ಹಾದಿಯೇ ಆಗಿತ್ತು ಅಂತ ನನಗೆ ತಿಳಿದಿತ್ತು.. ಹಾಗಾಗಿ ನಾನು ಕಷ್ಟದ ಹಾದಿ ತುಳಿಯಲು ಮುಂದಾದೆ.. ಈಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು ಕನ್ನಡದ ಉದಯೋನ್ಮುಖ ನಟಿ ಶೃತಿ ಹರಿಹರನ್‌.. ಫೆಬ್ರವರಿ 02, 1989ರಲ್ಲಿ ಕೇರಳದ ತ್ರಿವೇಡ್ರಂನಲ್ಲಿ ಜನಿಸಿದ ಶೃತಿ ಕರ್ನಾಟಕದಲ್ಲಿ ಬೆಳೆದು ಕನ್ನಡತಿಯೇ ಆದವಳು.

ಕನ್ನಡದ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟು ನಂಬರ್‌ 1 ನಟಿಯಾಗುವತ್ತ ಹೆಜ್ಜೆ ಇಟ್ಟಿರುವಾಗಲೇ ಬಂದ ಮೀಟೂ ಆಂದೋಲನ ನೇತೃತ್ವ ವಹಿಸಿದ್ದಲ್ಲದೇ ತನಗಾದ ಅನ್ಯಾಯವನ್ನು ದಿಟ್ಟವಾಗಿ ಪ್ರಶ್ನಿಸಿದ ಇವರು ಅಂದುಕೊಂಡಂತೆಯೇ ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಲ್ಪಟ್ಟವರು. ಪುರುಷ ಪ್ರಧಾನ ಮೌಲ್ಯಗಳ ಕನ್ನಡ ಚಿತ್ರರಂಗ ನಿರ್ಲಜ್ಜವಾಗಿ ಶೃತಿ ಹರಿಹರನ್‌ ವಿರುದ್ಧ ನಡೆದುಕೊಂಡಿತು. ಆದರೂ ಅವರ ಪ್ರತಿಭೆಯನ್ನು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ.

ಶೃತಿ ಹರಿಹರನ್‌ರವರ ಮನೋಜ್ಞ ಅಭಿನಯದ ಕಾರಣಕ್ಕಾಗಿ ಒಂದೇ ಬಾರಿಗೆ ಕನ್ನಡದ ನಾತಿಚರಾಮಿ ಚಿತ್ರಕ್ಕೆ 5 ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು. ಅತ್ಯುತ್ತಮ ಅಭಿನಯಕ್ಕಾಗಿ ಶೃತಿ ಹರಿಹರನ್ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೂ ಗೌರವ ತಂದರು.

ಶಾಂತ ಸರಳ ದೇಶಪ್ರೇಮಿ ಉಮರ್‌ ಖಾಲಿದ್‌

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 1987ರಲ್ಲಿ ಜನಿಸಿದ ಉಮರ್‌ ದೆಹಲಿಯ ನಿವಾಸಿ. Contesting claims and contingencies of the rule on Adivasis of Jharkhand ಎಂಬ ವಿಷಯದ ಮೇಲೆ ಪಿ.ಎಚ್‌.ಡಿ ಮಾಡಲು ಜೆಎನ್‌ಯು ಸೇರಿದ ಇವರ ಮೇಲೆಯೂ ದೇಶದ್ರೋಹದ ಘೋಷಣೆ ಕೂಗಿದ ಆರೋಪವೊರಿಸಿ ಜೈಲಿಗೆ ಹಾಕಲಾಗಿತ್ತು.

ಉಮರ್‌ ಮಹಾರಾಷ್ಟ್ರದವರಾದರೂ ಮಾನವ ಹಕ್ಕುಗಳ, ಅಲ್ಪಸಂಖ್ಯಾತರರ ಮೇಲಿನ ಅವರ ಹರಿತ ಭಾಷಣಗಳಿಗಾಗಿ ಅವರನ್ನು ಕಾಶ್ಮೀರದವರೆಂದು ತಿಳಿದು ಹಲವು ಕೇಸುಗಳನ್ನು ಅವರ ಮೇಲೆ ದಾಖಲಿಸಿಲಾಗಿದೆ. ಅದ್ಯಾವುದಕ್ಕೂ ಅಂಜದ ಅವರು ವಿದ್ಯಾರ್ಥಿಗಳ ಪರವಾಗಿ, ಶೋಷಿತ ಜನರ ಪರವಾಗಿ ದನಿಯೆತ್ತುತ್ತಿದ್ದಾರೆ.

ಇವರ ದಿಟ್ಟ ಹೋರಾಟಗಳ ಕಾರಣಕ್ಕಾಗಿಯೇ ಎರಡು ವರ್ಷಗಳ ಹಿಂದೆ ಇವರ ಮೇಲೆ ಕೊಲೆಯತ್ನ ನಡೆದಿತ್ತು. ಅದೃಷ್ಟವಶಾತ್‌ ಪಾರಾದ ಅವರು ಹೋರಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

(ಈ ಲೇಖನವು ಜನಪರವಾಗಿ ದನಿಯೆತ್ತಿ ಬೀದಿಗೆ ಬಂದವರನ್ನು ಮಾತ್ರ ಒಳಗೊಂಡಿದೆ. ಇವರಲ್ಲದೇ ಇನ್ನು ಲಕ್ಷಾಂತರ ಜನ ಹೋರಾಡಿದ್ದಾರೆ. ನಮ್ಮ ಗಮನಕ್ಕೆ ಬಂದ ಮತ್ತು 2010ರಿಂದ 2020ರ ಅವಧಿಯಲ್ಲಿ ಹೋರಾಡಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದವರಾಗಿದ್ದಾರೆ. ಮತ್ತು ಆ ಅವಧಿಯಲ್ಲಿ 35 ವರ್ಷದೊಳಗಿನ ಯುವತಾರೆಗಳಾಗಿದ್ದಾರೆ. ಅಭಿಪ್ರಾಯಗಳು ಲೇಖಕರರ ವೈಯುಕ್ತಿಕವಾದುದವಗಿರುತ್ತವೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...