Homeಮುಖಪುಟಶೇ.90ರಷ್ಟು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಇಲ್ಲ ರೋಹಿಂಗ್ಯನ್ನರಿಗೆ ಆಶ್ರಯ

ಶೇ.90ರಷ್ಟು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಇಲ್ಲ ರೋಹಿಂಗ್ಯನ್ನರಿಗೆ ಆಶ್ರಯ

- Advertisement -
- Advertisement -

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಮ್ಯಾನ್ಮಾರ್‌ನ ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರಿಗೆ ನೆಲೆ ಸಿಕ್ಕಿಲ್ಲ. ಇಂಡೋನೇಷ್ಯಾದ ಜನರು ರೋಹಿಂಗ್ಯನ್ನರು ದೇಶ ತೊರೆಯುವಂತೆ ಆಗ್ರಹಿಸಿ ತಿರುಗಿ ಬಿದ್ದಿದ್ದಾರೆ.

ಕಳೆದ ಬುಧವಾರ ಇಂಡೋನೇಷ್ಯಾದ ಅಚೆ ಪ್ರಾಂತ್ಯದ ರಾಜಧಾನಿ ಬಂದಾ ಅಚೆಯಲ್ಲಿ ಸುಮಾರು 137 ರೋಹಿಂಗ್ಯಾಗಳು ಆಶ್ರಯ ಪಡೆದಿದ್ದ ಸ್ಥಳೀಯ ಸಮುದಾಯ ಭವನದ ನೆಲಮಾಳಿಗೆಯ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಾಳಿ ನಡೆಸಿದೆ.

ದಿ ಅಸೋಸಿಯೇಟೆಡ್ ಪ್ರೆಸ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪೊಲೀಸ್‌ ಭದ್ರತೆಯನ್ನು ಬೇಧಿಸಿ ಹಸಿರು ಜಾಕೆಟ್‌ ಧರಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ರೋಹಿಂಗ್ಯಾಗಳು ಆಶ್ರಯ ಪಡೆದಿದ್ದ ಸಮುದಾಯ ಭವನಕ್ಕೆ ನುಗ್ಗಿರುವುದು ಮತ್ತು ಈ ವೇಳೆ ರಕ್ಷಣೆಗಾಗಿ ಗೋಗರೆಯುತ್ತಿದ್ದ ಮಕ್ಕಳು, ಮಹಿಳೆಯರನ್ನು ಭದ್ರತಾ ಅಧಿಕಾರಿಗಳು ಟ್ರಕ್‌ಗೆ ಹತ್ತಿಸಿ ಬೇರೆಡೆಗೆ ಕರೆದೊಯ್ದಿರುವುದನ್ನು ಕಾಣಬಹುದು.

ಈ ಘಟನೆಗೆ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ದುಖಃ ವ್ಯಕ್ತಪಡಿಸಿದೆ.

ಇಂಡೋನೇಷ್ಯಾದ ಜನತೆ ರೋಹಿಂಗ್ಯಾಗಳ ಮೇಲೆ ತಿರುಗಿಬಿದ್ದ ಕಾರಣ ಸಂಘರ್ಷ ತಪ್ಪಿಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ರೋಹಿಂಗ್ಯಾಗಳನ್ನು ಹೊತ್ತು ಇಂಡೋನೇಷ್ಯಾ ಕಡೆ ಬರುವ ದೋಣಿಗಳನ್ನು ಸಮುದ್ರದಲ್ಲೇ ತಡೆದು ವಾಪಸ್ ಕಳುಹಿಸುತ್ತಿದೆ.

ಇಂಡೋನೇಷ್ಯಾದ ನೌಕಾಪಡೆ ಗುರುವಾರ ಅಚೆ ಪ್ರಾಂತ್ಯದ ಸಮುದ್ರ ತೀರಕ್ಕೆ ಆಗಮಿಸುತ್ತಿದ್ದ ರೋಹಿಂಗ್ಯಾ ನಿರಾಶ್ರಿತರಿಂದ ತುಂಬಿದ್ದ ದೋಣಿಯನ್ನು ಬಲವಂತವಾಗಿ ಅಂತಾರಾಷ್ಟ್ರೀಯ ಜಲ ಗಡಿಯಿಂದ ಹೊರಗೆ ಕಳುಹಿಸಿದೆ.

ಸುಮಾತ್ರಾ ದ್ವೀಪದ ಭಾಗವಾಗಿರುವ ಅಚೆ ಪ್ರಾಂತ್ಯಕ್ಕೆ ನಿರಾಶ್ರಿತರನ್ನು ಹೊತ್ತ ಹೆಚ್ಚಿನ ದೋಣಿಗಳು ಆಗಮಿಸುತ್ತಿವೆ. ಎಲ್ಲಾ ದೋಣಿಗಳು ಬಾಂಗ್ಲಾದೇಶದ ಕಡೆಯಿಂದ ಬರುತ್ತಿವೆ ಎಂದು ವರದಿಗಳು ಹೇಳಿವೆ. ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ರೋಹಿಂಗ್ಯನ್ನರು ತುಂಬಿ ತುಳುಕುತ್ತಿದ್ದಾರೆ. ಪರಿಣಾಮ ಕಳೆದ ನವೆಂಬರ್‌ನಿಂದ ಅನೇಕ ಜನರು ದೋಣಿಗಳ ಮೂಲಕ ಆಳ ಸಾಗರದಲ್ಲಿ ಅಪಾಯಕಾರಿ ಪ್ರಯಾಣ ಮಾಡಿ ಮಲೇಶ್ಯಾ, ಇಂಡೋನೇಷ್ಯಾಗಳಿಗೆ ತೆರಳುತ್ತಿದ್ದಾರೆ.

2027ರಲ್ಲಿ ತಮ್ಮ ಜನ್ಮ ನಾಡು ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಬ್ಬಾಳಿಕೆ ತಡೆಯಲಾಗದೆ ಸಾವಿರಾರು ರೋಹಿಂಗ್ಯನ್ನರು ತಮ್ಮದೆಲ್ಲವನ್ನೂ ತೊರೆದು ಬಾಂಗ್ಲಾದೇಶ, ಭಾರತದಂತಹ ಕೆಲ ರಾಷ್ಟ್ರಗಳಿಗೆ ತೆರಳಿ ನೆಲೆಸಿದ್ದಾರೆ.

ಬಾಂಗ್ಲಾದಿಂದ 1,500ಕ್ಕೂ ಹೆಚ್ಚು ರೋಹಿಂಗ್ಯನ್ನರು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಅವರಿಗೆ ಆಶ್ರಯ ನೀಡಲು ಅಲ್ಲಿನ ಜನರಿಂದ ವಿರೋಧವಿರುವ ಕಾರಣ ಸರ್ಕಾರ ಹೆದರುತ್ತಿದೆ. ಜನರು ತಿರುಗಿಬಿದ್ದರೆ ನಿಭಾಯಿಸುವುದು ಕಷ್ಟ ಎಂದರಿತಿರುವ ಇಂಡೋನೇಷ್ಯಾ ಸರ್ಕಾರ, ನಮ್ಮಲ್ಲಿ ರೋಹಿಂಗ್ಯನ್ನರಿಗೆ ಆಶ್ರಯ ನೀಡಲು ಸಾಧ್ಯವಾಗುತ್ತಿಲ್ಲ. ಬೇರೆ ಯಾವುದಾದರು ದೇಶಗಳು ಅವರಿಗೆ ಆಶ್ರಯ ನೀಡಿ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

ಥೈಲ್ಯಾಂಡ್ ಮತ್ತು ಮಲೇಷಿಯಾದಂತೆ ವಿಶ್ವಸಂಸ್ಥೆಯ 1951ರ ನಿರಾಶ್ರಿತರಿಗೆ ಆಶ್ರಯ ನೀಡುವ ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ ಹಾಕಿಲ್ಲ. ಆದ್ದರಿಂದ, ಬಾಂಗ್ಲಾದೇಶದಿಂದ ಬರುವ ರೋಹಿಂಗ್ಯಾಗಳನ್ನು ಸ್ವೀಕರಿಸಲು ಅದು ಬಾಧ್ಯತೆ ಹೊಂದಿಲ್ಲ. ಇಲ್ಲಿಯವರೆಗೆ, ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಇಂಡೋನೇಷ್ಯಾ ನೀಡಿದೆ.

ಇಂಡೋನೇಷ್ಯಾದ 277 ಮಿಲಿಯನ್ ಜನ ಸಂಖ್ಯೆಯಲ್ಲಿ ಮುಸ್ಲಿಮರು ಶೇ. 90ರಷ್ಟಿದ್ದಾರೆ. ಆದರೂ, ಮುಸ್ಲಿಮರೇ ಆದ ರೋಹಿಂಗ್ಯನ್ನರಿಗೆ ಆಶ್ರಯ ನೀಡಲು ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ರೋಹಿಂಗ್ಯನ್ನರು ನಮ್ಮ ದೇಶಕ್ಕೆ ಹೊರೆ, ಅವರ ನಡವಳಿಕೆ ಸರಿಯಿಲ್ಲ, ಇತ್ಯಾದಿ ಕಾರಣಗಳನ್ನು ಇಂಡೋನೇಷ್ಯಾದ ಜನತೆ ಮುಂದಿಟ್ಟಿದ್ದಾರೆ. ಒಟ್ಟಿನಲ್ಲಿ ಅತ್ತ ಜನ್ಮ ನಾಡು, ಇತ್ತ ಅನ್ಯ ನಾಡಿನಲ್ಲೂ ನೆಲೆಯಿಲ್ಲದೆ ಸಾವಿರಾರು ಬಡ ಜೀವಗಳು ಈ ಭೂಮಿಯಲ್ಲೇ ನೆಲೆ ಕಳೆದುಕೊಂಡಂತಾಗಿದೆ.

ಫೋಟೋ ಕೃಪೆ : ಸಿಎನ್‌ಎನ್‌

ಇದನ್ನೂ ಓದಿ : ಇಸ್ರೇಲ್‌ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ದಕ್ಷಿಣ ಆಫ್ರಿಕಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....