Homeಮುಖಪುಟಕೆಲಸದ ಅವಧಿ ಹೆಚ್ಚಳ: ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿ ಹಾಕಲಿದೆ

ಕೆಲಸದ ಅವಧಿ ಹೆಚ್ಚಳ: ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿ ಹಾಕಲಿದೆ

15-49 ವಯಸ್ಸಿನ ಮಹಿಳೆಯರಲ್ಲಿ 47.5%ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, 65.5% ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ದುಡಿಯುವ ಅವಧಿಯನ್ನು ಹೆಚ್ಚಿಸಿರುವುದು ಅವೈಜ್ಞಾನಿಕ.

- Advertisement -
- Advertisement -

ಸದರಿ ಬಿಜೆಪಿ ಸರ್ಕಾರದ ಕೊನೆಯ ವಿಧಾನ ಮಂಡಲ ಅಧಿವೇಶನದಲ್ಲಿ ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಆಸಕ್ತಿ ಇರುವ ಮಹಿಳೆಯರಿಗೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ’ಮಹತ್ವ’ದ ’ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023’ಕ್ಕೆ ಒಪ್ಪಿಗೆ ನೀಡಲಾಗಿದೆ. ಸದ್ಯ ಕಾರ್ಮಿಕರ ಕೆಲಸದ ಅವಧಿ 9 ಗಂಟೆ ಇದೆ. ಆದರೆ, ಮಹಿಳಾ ಕಾರ್ಮಿಕರನ್ನು ನಿಗದಿತ ಅವಧಿಯವರೆಗೆ ಮಾತ್ರವೇ ಕೆಲಸ ಮಾಡಿಸಲು ಅವಕಾಶವಿತ್ತು. ಆದರೆ ನೂತನ ವಿಧೇಯಕ ಜಾರಿಗೆ ಬಂದರೆ ದಿನದ 24 ಗಂಟೆಯ ಅವಧಿಯಲ್ಲಿ ಮಹಿಳಾ ಕಾರ್ಮಿಕರ ಒಪ್ಪಿಗೆ ಇದ್ದರೆ ಯಾವ ಸಮಯದಲ್ಲಾದರೂ ಕೆಲಸ ಮಾಡಲು ಅನುಮತಿ ಸಿಗಲಿದೆ.

ಹೊಸ ಕಾಯ್ದೆ ಪ್ರಕಾರ ದಿನಕ್ಕೆ 12 ಗಂಟೆಗಳಂತೆ 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಕಾರ್ಮಿಕನ/ಳ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ. ಹೆಚ್ಚುವರಿ ಕೆಲಸ ಮಾಡಿದರೆ, ದುಪ್ಪಟ್ಟು ಮಜೂರಿಯ ಆಮಿಷವನ್ನೂ ನೀಡಲಾಗಿದೆ. ಈ ಮಸೂದೆಗೆ ವಿಧಾನಮಂಡಳದಲ್ಲಿ ಅನುಮೋದನೆ ಸಿಕ್ಕಿದ ಕಾರಣ ಸರ್ಕಾರ ಕಾನೂನು ರೂಪಿಸುವುದಷ್ಟೇ ಬಾಕಿಯುಳಿದಿದೆ.

ಇವಿಷ್ಟು ಕಾಯ್ದೆಯ ಬಗ್ಗೆ ಆದರೆ, ಇದರ ಜೊತೆಗೆ ಮಹಿಳಾ ಸುರಕ್ಷತೆಯ ಬಾಯಿಮಾತಿನ ನಿಯಮಗಳು ಎಂದಿನಂತೆ ಇಲ್ಲೂ ಇವೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇರಬೇಕು, ರಾತ್ರಿ ಪಾಳಿಗೆ ಬರಲು ಮತ್ತು ಕೆಲಸ ಮುಗಿದ ನಂತರ ವಾಪಸ್ ಹೋಗಲು ವಾಹನದ ಸೌಲಭ್ಯ ನೀಡಬೇಕು. ವಾಹನಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಸಿಸಿಟಿವಿ ಕ್ಯಾಮೆರಾ ಜಿಪಿಎಸ್ ವ್ಯವಸ್ಥೆ ಇರಬೇಕು, ಚಾಲಕನ ವೈಯಕ್ತಿಕ ವಿವರ ಫೋನ್ ನಂಬರ್ ಪರಿಶೀಲನೆಗೆ ಒಳಪಡಬೇಕು ಇಂತಹ ಹಲವು ಮಹಿಳಾಪರ ಎಂದುಕೊಳ್ಳಬಹುದಾದ ನಿಯಮಗಳಿವೆ. ಹಾಗಿದ್ದರೆ ಇದುವರೆಗೆ ಇವೆಲ್ಲ ಇರಲಿಲ್ಲವೇ? ಇದ್ದವು, ಆದರೂ ದುಡಿಯುವ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆಯಂತಹ ಕೃತ್ಯಗಳಿಗೆ ಕಡಿವಾಣ ಬಿದ್ದಿದೆಯೇ? ದುಡಿಯುವ ಜಾಗಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಆಗಿದೆಯೇ? ಇಲ್ಲ. ಐಟಿ ಕಂಪನಿಗಳು ಇದ್ದುದರಲ್ಲಿ ಮಹಿಳಾ ಸುರಕ್ಷತೆ, ಕಾರ್ಮಿಕ ಕಾನೂನುಗಳ ಅನುಸರಣೆಯಲ್ಲಿ ಬಹಳಷ್ಟು ಮುಂದೆ ಇವೆ; ಉತ್ತಮ ವೇತನ, ಸೌಲಭ್ಯ ಇದೆ, ಬಹಳ ಆರಾಮಾಗಿದ್ದಾರೆ ಎಂದುಕೊಂಡಿರುತ್ತೇವೆ. ಆದರೆ, ಅವರ ಮೇಲೂ ಕ್ಯಾಬ್‌ಗಳಲ್ಲಿಯೇ ಅತ್ಯಾಚಾರ ನಡೆದಿರುವ ಪ್ರಕರಣಗಳು ಬಹಳಷ್ಟು ವರದಿಯಾಗಿವೆ. ಕೆಲಸದ ಒತ್ತಡದಿಂದಾಗಿ ಖಿನ್ನತೆಗೆ ಜಾರಿದವರ, ಆತ್ಮಹತ್ಯೆಗೆ ಶರಣಾದವರ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಇನ್ನು ಈ ಕಾನೂನಿನಿಂದ ಯಾವ ವರ್ಗದ ಮಹಿಳೆಯರು ಇನ್ನಷ್ಟು ಕಷ್ಟಕ್ಕೆ ಒಳಗಾಗುತ್ತಾರೆ ಎಂದು ನೋಡಿದರೆ ಗಾರ್ಮೆಂಟ್ಸ್ ಮಹಿಳೆಯರು ನೆನಪಾಗದೇ ಇರದು. ಯಾವ ಕಾರಣಕ್ಕಾಗಿ ಬಹುದೊಡ್ಡ ಹೋರಾಟ ನಡೆದು ದುಡಿಯುವ ಅವಧಿಯನ್ನು ಎಂಟು ಗಂಟೆಗೆ ನಿಗದಿಸಲಾಯಿತೋ ಆ ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿಹಾಕಲಿದೆ.

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ನೂರಾರು. ಹೋರಾಟ ನಡೆಸಿಯೇ ಅವರು ತಮ್ಮ ಹಕ್ಕುಗಳನ್ನು ಪಡೆದವರು. ದುಡಿಮೆಗೆ ಸರಿಯಾದ ವೇತನ, ಇಎಸ್‌ಐ, ಗ್ರ್ಯಾಚುಟಿ ಪಡೆಯಲು ದಶಕಗಳ ಕಾಲ ಹೋರಾಟ ನಡೆಸಿ ಹೈರಾಣವಾಗಿದ್ದಾರೆ. ದುಡಿಯುವ ಜಾಗಗಳಲ್ಲಿ ಪುರುಷ ಸಹೋದ್ಯೋಗಿಗಳಿಂದ ನಿತ್ಯ ಬೈಗುಳ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

ಮನೆ ಮಕ್ಕಳು ಸಂಸಾರ ತಾಪತ್ರಯಗಳ ನಡುವೆ ಹಾಗೋ ಹೀಗೋ ದಿನದ ಎಂಟು ಗಂಟೆ ದುಡಿದು ಬರುವ ಹತ್ತು ಹನ್ನೆರಡು ಸಾವಿರ ಸಂಬಳದಲ್ಲಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೈಯಕ್ತಿಕ ಖರ್ಚುಗಳನ್ನು ನಿಭಾಯಿಸುತ್ತ ಬಂದಿದ್ದಾರೆ. ಈಗ ಈ ಕಾನೂನಿನಿಂದಾಗಿ ಈ ಹೆಣ್ಣುಮಕ್ಕಳ ಶೋಷಣೆಗೆ ಕಾನೂನಿನ ರಕ್ಷಣೆ ನೀಡಿದಂತಾಗಿದೆ. ಇದುವರೆಗೆ ಎಂಟು ಗಂಟೆಗಳ ಅವಧಿ ಮೀರಿ ಮಾಡುವ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸಿಗುತ್ತಿತ್ತು. ಈಗ ಎಂಟು ಗಂಟೆಗಳ ಕೆಲಸದ ಅವಧಿ 12 ಗಂಟೆಗೆ ಬದಲಾದರೆ ಈ ಹೆಣ್ಣುಮಕ್ಕಳ ಬದುಕು ಹೈರಾಣವಾಗಲಿದೆ. ಹೆಚ್ಚುವರಿ ದುಡಿಮೆ ಎಂಬುದೇ ಇಲ್ಲ. ಇದು ಮಾಲೀಕರಿಗೆ ಅನುಕೂಲಕರ. ಈ ಮಹಿಳೆಯರ ವೈಯಕ್ತಿಕ ಬದುಕಿನ ಮೇಲೆ ಏನು ಪರಿಣಾಮ ಬೀರಲಿದೆ ಎಂದು ನೋಡಿದರೆ, ಅವರ ದಿನಚರಿ ಸಂಪೂರ್ಣ ಬದಲಾಗಲಿದೆ. ಅವರದಷ್ಟೇ ಅಲ್ಲ, ಅವರನ್ನು ನಂಬಿಕೊಂಡಿರುವ ಕುಟುಂಬದವರ ಎಲ್ಲರ ದಿನಚರಿ ಅಸ್ತವ್ಯಸ್ತವಾಗಲಿದೆ. ಈಗ ಅವರು ಹೇಗೋ ತಮ್ಮ ಬದುಕಿಗೊಂದು ಲಯ ದಕ್ಕಿಸಿಕೊಂಡಿರುತ್ತಾರೆ. ಒಂಬತ್ತು ಗಂಟೆಗೆ ಕಾರ್ಖಾನೆ ತಲುಪಬೇಕೆಂದರೆ ನಗರ ಪ್ರದೇಶಗಳಲ್ಲಿ ಕನಿಷ್ಠ 8 ಗಂಟೆಗೆ ಮನೆ ಬಿಡುತ್ತಾರೆ. ಅಷ್ಟರೊಳಗಾಗಿ ಮನೆ ಕೆಲಸ, ಮಕ್ಕಳ ಕೆಲಸ, ಬುತ್ತಿ ಎಲ್ಲ ಸಿದ್ಧಪಡಿಸಿ ಗಡಿಬಿಡಿಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ತಲುಪುತ್ತಾರೆ. ಅಲ್ಲಿ ಸತತವಾಗಿ ಯಂತ್ರದ ಜೊತೆಗೆ ಯಾಂತ್ರಿಕವಾಗಿ 12 ಗಂಟೆ ಕೆಲಸ ಮಾಡಿ ರಾತ್ರಿ 10 ಗಂಟೆಗೆ ಮನೆ ಸೇರಿದರೆ ಆ ಮನೆಯ ಪರಿಸ್ಥಿತಿ ಹೇಗಿರುತ್ತದೆ? ಎಲ್ಲರ ದಿನಚರಿ ಒಂದೇ ರೀತಿಯಾಗಿರುತ್ತದೆ ಎಂದಲ್ಲ, ಆದರೆ ಬಹುತೇಕ ಮಹಿಳೆಯರು ರಾತ್ರಿ ಮನೆಗೆ ಹೋದ ನಂತರ ಮನೆ ಕೆಲಸವನ್ನೂ ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ಇಷ್ಟರ ನಡುವೆ ಅವರಿಗೆ ವೈಯಕ್ತಿಕ ಬದುಕಿನ ನೋವು ನಲಿವುಗಳಿಗೆ ಅವಕಾಶವೇ ಇಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಸೇರುವುದಾಗಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಘೋಷಣೆ

ಇತ್ತೀಚೆಗೆ ಕೇರಳದ ಕೊಚ್ಚಿ ಯೂನಿವರ್ಸಿಟಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಕೊಡುವ ನಿಯಮ ರೂಪಿಸಿತ್ತು. ಅದೇ ನಿಯಮವನ್ನು ಎಲ್ಲ ಕಾಲೇಜುಗಳಲ್ಲಿ ಅಳವಡಿಸುವ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಸರ್ಕಾರ ಮಾನ್ಯ ಮಾಡಿದೆ. ಕಾಲೇಜು ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ ಎರಡು ದಿನ ಮುಟ್ಟಿನ ರಜೆ ಕೊಡುವ ಕಾನೂನು ಜಾರಿಗೆ ಬಂದಿದೆ. ಆದರೆ, ಈ ನಿಯಮವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸುವಂತೆ ನಿರ್ದೇಶನ ನೀಡಬೇಕು ಎಂಬ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮಹಿಳೆಯರು ರಾತ್ರಿ ಪಾಳಿ ಕೆಲಸ ಮಾಡಿ, ಪುರುಷನ ಸರಿಸಮಾನವಾಗಿ ಕೆಲಸ ಮಾಡುವ ಅವಕಾಶ ನೀಡುತ್ತಿದ್ದೇವೆ ಎಂದು ಹೇಳುತ್ತಾ ಸಮಾನತೆಯ ಹರಿಕಾರರಂತೆ ವರ್ತಿಸುವ ವ್ಯವಸ್ಥೆ ಮಹಿಳೆಯರ ನಿಜ ನೋವುಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಠೋರವಾಗಿ ವರ್ತಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಮುಟ್ಟಿನ ರಜೆಯ ವಿಚಾರಕ್ಕೆ ಬಂದರೆ ಇದನ್ನು ಕೇಳಿ ಪಡೆಯುವ ಸ್ಥಿತಿ ಇನ್ನೂ ಇದೆ ಎಂಬುದೇ ಬೇಸರದ ಸಂಗತಿ. ಹೆಣ್ಣಿನ ದೈಹಿಕ ಸಂರಚನೆ, ಋತುಚಕ್ರದ ದಿನಗಳ ಯಾತನೆ, ನೋವು, ಹೆರಿಗೆಯ ನಂತರ ಉಂಟಾಗುವ ಸಮಸ್ಯೆಗಳು, ಮಧ್ಯ ವಯಸ್ಸಿನಲ್ಲಿ ಕಾಡುವ ಋತುಬಂಧದ ಸಮಸ್ಯೆಗಳು ಹೆಣ್ಣುಮಕ್ಕಳ ಕೆಲಸದ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ. ಇಂತಹ ಕಾರಣಗಳಿಂದ ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸಿ, ಮುಂಬಡ್ತಿ ಇತರ ಸೌಲಭ್ಯಗಳನ್ನು ನಿರಾಕರಿಸುವ ವಿದ್ಯಮಾನ ರೂಢಿಗತವಾಗಿ ಬಂದಿದೆ. ಅದು ಇನ್ನೂ ಹೆಚ್ಚಾಗಲಿದೆ. ಮುಟ್ಟಿನ ದಿನಗಳಲ್ಲಿ 12 ಗಂಟೆಗಳ ಕಾಲ ಒಬ್ಬ ಹೆಣ್ಣುಮಗಳನ್ನು ದುಡಿಸಿಕೊಳ್ಳುವುದು ಅಮಾನವೀಯ. ಹಾಗಾಗಿ ಈ ಕಾಯ್ದೆಯಲ್ಲಿ ಮಹಿಳಾ ಕಾರ್ಮಿಕರಿಗೆ ಎರಡು ದಿನಗಳ ಮುಟ್ಟಿನ ರಜೆ ಘೋಷಣೆ ಮಾಡಿದ್ದರೆ ಅಲ್ಪಸ್ವಲ್ಪ ಸಮಾಧಾನವಾದರೂ ಸಿಗುತ್ತಿತ್ತು.

ಹೆಣ್ಣುಮಕ್ಕಳು ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಓಡಲು ಕಾತುರರಾಗಿರುತ್ತಾರೆ; ಹೆಚ್ಚು ಸಮಯ ಕಚೇರಿಯಲ್ಲಿ ಇರುವುದಿಲ್ಲ ಎಂಬ ಭಾವನೆ ಪುರುಷರಲ್ಲಿದೆ. ಎಷ್ಟೇ ಪ್ರತಿಭೆ, ನೈಪುಣ್ಯತೆ, ಕೆಲಸದಲ್ಲಿ ತಲ್ಲೀನತೆ, ಬದ್ಧತೆ ಇದ್ದರೂ ಅಂತಹ ಮಹಿಳೆಯರನ್ನು ನಿರ್ಣಾಯಕ ಸ್ಥಾನಗಳಲ್ಲಿ ಕಾಣಲು ಪುರುಷ ಪ್ರಧಾನ ಮನಸ್ಥಿತಿ ಸುಲಭವಾಗಿ ಒಪ್ಪುವುದಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ. ಇದರ ಜೊತೆಗೆ ಅಂತಹ ಆಕಾಂಕ್ಷೆಗಳಿಲ್ಲದೇ ನೆಮ್ಮದಿಯಿಂದ ಕೆಲಸ ಮಾಡಿ ಒಂದಷ್ಟು ಸಂಪಾದನೆ ಮಾಡಿದರೆ ಸಾಕು ಎಂಬ ಮನಸ್ಥಿತಿಗೆ ಬಹಳಷ್ಟು ಮಹಿಳೆಯರು ಬಂದಿರುತ್ತಾರೆ. ಅದರಲ್ಲೇ ಸುಖ ಕಾಣುತ್ತಿದ್ದ ಮಹಿಳಾ ಕಾರ್ಮಿಕರಿಗೆ ಈಗ ಉಳಿವು ಅಳಿವಿನ ಪ್ರಶ್ನೆಯಾಗಿ ಈ ಕಾನೂನು ಕಾಡಲಿದೆ. ರಾತ್ರಿ ಪಾಳಿಯ ಕೆಲಸ ಆಯ್ಕೆಯಾಗಿದ್ದರೂ, ಸಾಮಾನ್ಯ ಅವಧಿಯಲ್ಲಿ 12ಗಂಟೆ ಕೆಲಸ ಮಾಡುವುದು ಮಹಿಳೆಯರ ಪಾಲಿಗೆ ದುಃಸ್ವಪ್ನವಾಗಿ ಕಾಡಲಿದೆ. ಮಹಿಳೆಯರನ್ನೇ ಉದ್ದೇಶಿಸಿ ಹೆಚ್ಚು ಒತ್ತು ಕೊಟ್ಟು ಹೇಳುತ್ತಿರುವ ಕಾರಣ ಮಹಿಳೆಯರಿಗೆ ಇರುವ ಹೆಚ್ಚುವರಿ ಕೌಟುಂಬಿಕ ಜವಾಬ್ದಾರಿಗಳು ಮತ್ತು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ಯಾತನೆಗಳ ಸಂಬಂಧವಾಗಿ. ಈಗ 12 ಗಂಟೆ ದುಡಿಯಬೇಕಾದ ಕಾರಣಕ್ಕೆ ಅನಿವಾರ್ಯವಾಗಿ ಉದ್ಯೋಗ ತ್ಯಜಿಸುವವರ ಸಂಖ್ಯೆ ಹೆಚ್ಚಾಗಬಹುದು. ಇದು ಮಹಿಳೆಯರನ್ನು ಸಬಲರನ್ನಾಗಿಸುವ ಬದಲು ಮತ್ತೆ ಮನೆ, ಮಕ್ಕಳು ಎಂಬ ಕೌಟುಂಬಿಕ ಬಂಧನದಲ್ಲಿ ಕಳೆಯುವಂತೆ ಮಾಡಿದರೆ ಅಚ್ಚರಿಯಿಲ್ಲ. ವೈಜ್ಞಾನಿಕವಾಗಿಯೂ ಒಬ್ಬ ವ್ಯಕ್ತಿ ನಿರಂತರವಾಗಿ 12 ಗಂಟೆ ಕೆಲಸ ಮಾಡುವುದು ದೈಹಿಕ ಮಾನಸಿಕ ಆರೋಗ್ಯಕ್ಕೆ ಹಾನಿಕರವೆನ್ನುವುದು ತಿಳಿಯದ ವಿಷಯವೇನಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5ರ ವರದಿಯಂತೆ 15-49 ವಯಸ್ಸಿನ ಮಹಿಳೆಯರಲ್ಲಿ 47.5%ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, 65.5% ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಮಹಿಳೆಯರ ಆರೋಗ್ಯದ ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ದುಡಿಯುವ ಅವಧಿಯನ್ನು ಹೆಚ್ಚಿಸಿರುವುದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಯ್ಕೆ ನೀಡಿರುವುದು ಅವೈಜ್ಞಾನಿಕವಾದದ್ದು.

ಈಗ ಕೆಲಸದ ಅವಧಿಯನ್ನು ಮೂರು ಗಂಟೆ ಹೆಚ್ಚಳ ಮಾಡಿದ್ದು, ಅವಧಿ ಮೀರಿ ಕೆಲಸ ಮಾಡುವ ಕೆಲಸಗಾರನಿಗೆ ದುಪ್ಪಟ್ಟು ದರ ಮಜೂರಿ ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದು ಹೆಚ್ಚುವರಿ ಕೆಲಸಕ್ಕೆ ತೋರಿಸುವ ಆಮಿಷ. ಆದರೆ ಸರ್ಕಾರಗಳಿಗೆ ಅಥವಾ ಕಾನೂನು ರೂಪಿಸುವವರಿಗೆ ದುಡಿಯುವ ಜನರ ಆರೋಗ್ಯ ಒಂದು ಕಾಳಜಿಯ ವಿಷಯವೇ ಅಲ್ಲವಾಗಿದೆ; ಆರೋಗ್ಯಕರ ಸಮಾಜ ನಿರ್ಮಾಣವಾಗಲು ದುಡಿಯುವ ವರ್ಗದ ದೈಹಿಕ, ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂಬ ನಿಟ್ಟಿನಲ್ಲಿ ನಾವಿನ್ನೂ ಚಿಂತಿಸುತ್ತಿಲ್ಲ ಎಂಬುದಕ್ಕೆ ಈ ತರಹದ ಕಾರ್ಮಿಕ ವಿರೋಧಿ ಕಾನೂನುಗಳೇ ಉದಾಹರಣೆ. ಕಾರ್ಮಿಕ ಕಾನೂನುಗಳನ್ನು ರೂಪಿಸುವಾಗ ಕಾರ್ಮಿಕರ ಸಲಹೆಗಳನ್ನು ಪಡೆಯುವಷ್ಟು ಉದಾರ ಮನಸ್ಥಿತಿ ಪ್ರಭುತ್ವಕ್ಕೆ ಬರದ ಹೊರತು ಮಾಡಿದ ಯಾವ ಕಾನೂನೂ ಕಾರ್ಮಿಕ ಪರ ಆಗಲು ಸಾಧ್ಯವಿಲ್ಲ.

ಹೇಮಾ ವೆಂಕಟ್

ಹೇಮಾ ವೆಂಕಟ್
ಪತ್ರಕರ್ತರು


ಇದನ್ನೂ ಓದಿ: 1948ರ ಕಾರ್ಖಾನೆ ಕಾಯಿದೆಯ ಕರಾಳ ತಿದ್ದುಪಡಿ: ಕಾರ್ಮಿಕರ ಮೇಲಾಗುವ ಪರಿಣಾಮಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...