Homeಕರ್ನಾಟಕಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ; ಶಿಕ್ಷಣ ಸಚಿವರ ತವರಿನಲ್ಲೇ ಬೆಳಕಿಗೆ ಬಂತು ಮತ್ತೊಂದು ಪ್ರಕರಣ!

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ; ಶಿಕ್ಷಣ ಸಚಿವರ ತವರಿನಲ್ಲೇ ಬೆಳಕಿಗೆ ಬಂತು ಮತ್ತೊಂದು ಪ್ರಕರಣ!

- Advertisement -
- Advertisement -

ಕೋಲಾರದ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಲದ ಗುಂಡಿ ಸ್ವಚ್ಛತೆ ಹಾಗೂ ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಸ್ವಚ್ಛತೆ ಪ್ರಕರಣದ ಬಳಿಕ ಇದೀಗ ಶಿವಮೊಗ್ಗದಲ್ಲೂ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಭದ್ರಾವತಿಯ ನೇರಲೆಕೆರೆ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದೆ. ವಿಡಿಯೋ ನೋಡಿ ಆಕ್ರೋಶಗೊಂಡ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇದೇ ಮಾದರಿಯ ಅಮಾನವೀಯ ಘಟನೆ ಕಳೆದವಾರ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಬಹಿರಂಗವಾಗಿದೆ.

ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದ್ದು, ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಶಿವಮೊಗ್ಗದ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದ್ದಾರೆ. ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿರುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘಟನೆ ಮುಖಂಡರು ಮತ್ತು ಪೋಷಕರು ಆಗ್ರಹಿಸಿದ್ದಾರೆ.

ತಿಂಗಳೊಂದರಲ್ಲೇ ಇದು ಮೂರನೇ ಘಟನೆ!

ಕಳೆದ ವಾರ ರಾಜ್ಯ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಹಾಗೂ ಕಾರ್ಯಕರ್ತರು ನಗರದ ಅಂದ್ರಹಳ್ಳಿಯ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಅಂದ್ರಹಳ್ಳಿ ಪ್ರಕರಣದ ಕುರಿತು ಮಾತನಾಡಿದ್ದ ಮಧು ಬಂಗಾರಪ್ಪ, ‘ಅಮಾನವೀಯ’ ಎಂದು ಖಂಡಿಸಿದ್ದರು.

ಬೆಂಗಳೂರಿನಲ್ಲಿ ನಡೆದಿದ್ದ ಅಮಾನವೀಯ ಘಟನೆಯ ನಂತರ ಶಿಕ್ಷಣ ಇಲಾಖೆಯು ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳ ಸಭೆ ನಡೆಸಿ, ಮಕ್ಕಳನ್ನು ಅಂತಹ ಕೆಲಸಕ್ಕೆ ಒತ್ತಾಯಿಸುವವರಿಗೆ ಎಚ್ಚರಿಕೆ ನೀಡಿದರು.

‘ಎನ್ಎಸ್ಎಸ್ ಮತ್ತು ಸೇವಾದಳ ಶಿಬಿರಗಳಲ್ಲಿ ಉದ್ಯಾನವನ್ನು ಸ್ವಚ್ಛಗೊಳಿಸಲು ಅಥವಾ ಸಸಿಗಳನ್ನು ನೆಡಲು ಮಕ್ಕಳಿಗೆ ತರಬೇತಿ ನೀಡುತ್ತೇವೆ. ಆದರೆ, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ನಾವು ಮಕ್ಕಳಿಗೆ ಅನುಮತಿ ನೀಡಿರಲಿಲ್ಲ’ ಎಂದು ಹೇಳಿದ್ದರು.

ಬೆಂಗಳೂರು ಮತ್ತು ಶಿವಮೊಗ್ಗ ಘಟನೆಗಳ ಮೊದಲು, ಕೋಲಾರ ಜಿಲ್ಲೆಯ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಈಗಾಗಲೇ ಬಂಧಿಸಲಾಗಿದೆ. ನಾಲ್ವರು ಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಇದನ್ನೂ ಓದಿ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ 22 ಕಾರು ಖರೀದಿಸಿ ಅಡಗಿಸಿಟ್ಟಿದ್ದ ಕೆಸಿಆರ್: ರೇವಂತ್ ರೆಡ್ಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...