Homeಮುಖಪುಟಉತ್ತರ ಪ್ರದೇಶ ಚುನಾವಣೆ ಪೂರ್ವ ವಿಶ್ಲೇಷಣೆ: ಭಾಗ-2; ತಲೆಕೆಳಗಾಗುತ್ತಿರುವ ಕೇಸರಿಕೂಟದ ಲೆಕ್ಕಾಚಾರ

ಉತ್ತರ ಪ್ರದೇಶ ಚುನಾವಣೆ ಪೂರ್ವ ವಿಶ್ಲೇಷಣೆ: ಭಾಗ-2; ತಲೆಕೆಳಗಾಗುತ್ತಿರುವ ಕೇಸರಿಕೂಟದ ಲೆಕ್ಕಾಚಾರ

- Advertisement -
- Advertisement -

ಯೋಗಿ ನೇತೃತ್ವದ ರಾಜ್ಯ ಸರ್ಕಾರವಾಗಲಿ, ಮೋದಿ ನೇತೃತ್ವದ ಒಕ್ಕೂಟ ಸರ್ಕಾರವಾಗಲಿ ತಮ್ಮ ಕೆಲಸಗಳನ್ನು ಮುಂದಿಟ್ಟು ಮತ ಪಡೆಯುವುದು ಬಹುತೇಕ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜನಾಭಿಪ್ರಾಯ ಸಂಗ್ರಹಿಸಲು ಹೋಗುವ ಪತ್ರಕರ್ತರು ಯೂಟ್ಯೂಬರ್‌ಗಳು ’ಉಚಿತ ಗ್ಯಾಸ್ ಕೊಟ್ಟಿದ್ದಾರಲ್ಲಾ?’ ಅಂತ ಪ್ರಶ್ನೆ ಕೇಳಿದ ಕೂಡಲೆ ’400 ರೂಪಾಯಿ ಇದ್ದ ಗ್ಯಾಸ್ 1000 ರೂಪಾಯಿಗೆ ಏರಿಸಿದ್ದಾರೆ, ಬಡವರು ಕೊಂಡುಕೊಳ್ಳೋದು ಹೇಗೆ? ಅಂತ ಜನ ಮರುಪ್ರಶ್ನೆ ಎಸೆಯುತ್ತಾರೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 2000 ರೂಪಾಯಿ ರೈತರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ ಅಂತ ಪ್ರಸ್ತಾಪಿಸಿದರೆ ಪೆಟ್ರೋಲ್ ಡೀಸೆಲ್ ಬೆಲೆ ದುಪ್ಪಟ್ಟು ಮಾಡಿ ದಿನಾಲೂ ಲೂಟಿ ಮಾಡ್ತಾವ್ರೆ ಎಂಬ ಪ್ರತಿಕ್ರಿಯೆ ಬರುತ್ತಿದೆ. ನಿಮ್ಮ 2000 ಬಿಕ್ಷೆ ನಮಗೆ ಬೇಕಾಗಿಲ್ಲ, ನಮ್ಮ ಬೆಳೆಗಳಿಗೆ ನ್ಯಾಯವಾದ ಬೆಲೆ ಕೊಡಿ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಆಕ್ಸಿಜನ್ ಇಲ್ಲದೆ ಜನರು ಹುಳುಗಳಂತೆ ಸತ್ತ ವಿಚಾರ, ಆಕ್ಸಿಜನ್ ಕೇಳಿದವರನ್ನೂ ಕೂಡ ದೇಶದ್ರೋಹ ಕೇಸಿನಲ್ಲಿ ಬಂಧಿಸಿದ ವಿಚಾರ, ಸುಡಲಿಕ್ಕೂ ಆಗದೆ ಗಂಗಾ ನದಿಯಲ್ಲಿ ತೇಲಿದ ಹೆಣಗಳು, ಹತ್ರಾಸ್‌ನ ಅತ್ಯಾಚಾರ ಸಂತ್ರಸ್ತೆಯ ಶವವನ್ನು ಮಧ್ಯರಾತ್ರಿ ಸುಟ್ಟುಹಾಕಿದ ಪ್ರಕರಣ, ಮಂತ್ರಿಮಗ ಜೀಪು ಹತ್ತಿಸಿ ರೈತರನ್ನು ಕೊಂದ ಪ್ರಕರಣ, ಬಿಜೆಪಿಯ ಉನ್ನಾವೊ ಶಾಸಕ ಅತ್ಯಾಚಾರ ಮತ್ತು ಕೊಲೆಗಳನ್ನು ನಡೆಸಿ ಜೈಲು ಸೇರಿರುವ ವಿಚಾರ – ಹೀಗೆ ಈ ಅವಧಿಯಲ್ಲಿ ನಡೆದ ನೂರಾರು ಅತಿರೇಕದ ಘಟನಾವಳಿಗಳು ಜನಮಾನಸದಲ್ಲಿವೆ ಎಂದು ಫೀಲ್ಡ್ ಸರ್ವೆ ನಡೆಸಿದ ಸ್ವತಂತ್ರ ಪತ್ರಕರ್ತರು ಹೇಳುತ್ತಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ’ಡಬಲ್ ಇಂಜಿನ್ ಸರ್ಕಾರ’ ಅಸ್ತಿತ್ವದಲ್ಲಿದ್ದು ಅಭಿವೃದ್ಧಿಯ ವೇಗವನ್ನು ಡಬಲ್ ಮಾಡುವುದಾಗಿ ಕೊಟ್ಟಿದ್ದ ಭರವಸೆಗಳಾಗಲಿ, ’ಹಿಂದೂರಾಷ್ಟ್ರ ನಿರ್ಮಾಣ’ ಮಾಡಿ ಅದೇನೋ ಉದ್ಧಾರ ಮಾಡ್ತೀವಿ ಅಂದ ಘೋಷಣೆಗಳಾಗಲಿ ಕೇವಲ ಬೊಗಳೆ ಎಂಬುದು ಕಟ್ಟರ್‌ಪಂಥೀಯ ಮತೀಯವಾದಿಗಳಿಗೆ ಅಥವ ಅಂಧಭಕ್ತರಿಗೆ ಹೊರತುಪಡಿಸಿ ಬಹುಜನರಿಗೆ ಅರ್ಥವಾದಂತೆ ಕಾಣುತ್ತಿದೆ. ಎಲ್ಲರನ್ನು ಎಲ್ಲಕಾಲಕ್ಕೂ ಯಾಮಾರಿಸಲು ಸಾಧ್ಯವಿಲ್ಲ ಎಂಬ ಮಾತಿದೆಯಲ್ಲಾ!

ಈಗ ಬಿಜೆಪಿ ಕೂಟಕ್ಕೆ ತನ್ನ ಸಾಧನೆಯ ಮೇಲೆ ಓಟು ಪಡೆದು ಅಧಿಕಾರ ಹಿಡಿಯುವುದು ಅಸಾಧ್ಯ ಎಂಬುದು ಮನವರಿಕೆಯಾಗಿ ಮತ್ತೆ ಎಂದಿನ ತನ್ನ ಕೋಮು ಧ್ರುವೀಕರಣದ ರಾಜಕೀಯ ಆಟ ಶುರು ಮಾಡಿಕೊಂಡಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಸಂದರ್ಶನವೊಂದರಲ್ಲಿ ಹೇಳಿದಂತೆ “ಈಗ ಚುನಾವಣೆ ಬಂದಿರೋದರಿಂದ “ಜಿನ್ನಾ-ಪಾಕಿಸ್ತಾನ್ “ಹಿಂದೂ-ಮುಸಲ್ಮಾನ್ “ಮಂದಿರ್-ಮಸ್ಜಿದ್’ಗಳು ಅಧಿಕೃತ ಅತಿಥಿಗಳಾಗಿ ಬಂದಿದ್ದಾರೆ, ಮಾರ್ಚ್ 10ನೇ ತಾರೀಕಿನವರೆಗೂ ಇಲ್ಲೇ ತಂಗಿದ್ದು ನಂತರ ವಾಪಸಾಗುತ್ತಾರೆ”.

ಹೌದು, ಈ ಮಾತು ಅಕ್ಷರಶಃ ನಿಜ. ಈ ಅಧಿಕೃತ ಅತಿಥಿಗಳು ಈಗಾಗಲೇ ವಕ್ಕರಿಸಿದ್ದಾರೆ. ಕಳೆದ ತಿಂಗಳು “ಧರ್ಮ ಸಂಸತ್” ಎಂಬ ಹೆಸರಿನಲ್ಲಿ ನಡೆದ ಕೋಮು ವಿಷಕೂಟದಲ್ಲಿ ಕಾವಿ ಧರಿಸಿದ್ದ ಉನ್ಮಾದಿಗಳು ಮುಸ್ಲಿಮರ ನರಮೇಧ ನಡೆಸುವಂತೆ ಬಹಿರಂಗ ಕರೆಕೊಟ್ಟಿದ್ದು, ಮಹಾತ್ಮ ಗಾಂಧಿಯನ್ನು ಅತ್ಯಂತ ಕೊಳಕು ಶಬ್ದಗಳಿಂದ ನಿಂದಿಸಿ, ಭಾರತದ ಪ್ರಥಮ ಭಯೋತ್ಪಾದಕ ಗೋಡ್ಸೆಯನ್ನು ಮಹಾತ್ಮ ಎಂದು ಹಾಡಿ ಹೊಗಳಿದ್ದು ಎಲ್ಲವೂ ಕೂಡ ಐದು ರಾಜ್ಯಗಳ ಚುನಾವಣೆಯ ಧ್ರುವೀಕರಣ ಷಡ್ಯಂತ್ರದ ಭಾಗವೇ. ಈ ಪ್ರಕರಣಗಳು ಸದ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಈ ಪಾಖಂಡಿ ಕಾವಿಧಾರಿಗಳು ಜೈಲಿನಲ್ಲಿದ್ದಾರೆ ಎಂಬುದು ಸಮಾಧಾನದ ಸಂಗತಿ.

ಗೃಹ ಮಂತ್ರಿ ಅಮಿತ್ ಶಾ ಚುನಾವಣೆ ಘೋಷಣೆಯಾದ ನಂತರ ತನ್ನ ಪ್ರಚಾರಕ್ಕೆ ಆಯ್ದುಕೊಂಡಿದ್ದು 2014ರ ಲೋಕಸಭಾ ಚುನಾವಣೆಗೆ ಮುನ್ನ ನಡೆದ ಕೋಮು ಗಲಭೆಗಳ ಕೇಂದ್ರವಾದ ಕೈರಾನಾವನ್ನು. ಗೃಹಮಂತ್ರಿ ಸ್ಥಾನದಲ್ಲಿದ್ದುಕೊಂಡು ಸ್ವಯಂ ದ್ವೇಷಹೆಚ್ಚಿಸುವ ಮಾತುಗಳನ್ನಾಡಿದ ಶಾ ಬಗ್ಗೆ ಜಾಲತಾಣಗಳಲ್ಲಿ ಕಟುಟೀಕೆಗಳು ಕೇಳಿಬಂದಿವೆ. ಯೋಗಿ ಆದಿತ್ಯನಾಥರದೂ ಯಥಾಪ್ರಕಾರ ಅದೇ ರಾಗ. ಈ ಚುನಾವಣೆ 20 ಪರ್ಸೆಂಟ್ ಜನರ ವಿರುದ್ಧ 80 ಪರ್ಸೆಂಟ್ ಜನರ ಹೋರಾಟ ಎಂಬ ಹೊಸ ಸೂತ್ರವೊಂದನ್ನು ಪ್ರಚಾರಪಡಿಸುತ್ತಿದ್ದಾರೆ. ಅಂದರೆ ರಾಜ್ಯದ 20% ಮುಸ್ಲಿಂ ಜನಸಂಖ್ಯೆ ವಿರುದ್ಧ 80% ಹಿಂದೂಗಳು ಒಗ್ಗೂಡಿ ಮತ ಚಲಾಯಿಸಬೇಕು ಎಂದರ್ಥ. ಈ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದು, ಚುನಾವಣಾ ಆಯೋಗಕ್ಕೂ ದೂರು ಹೋದ ನಂತರ ಆ ಮಾತಿಗೆ ಹೊಸ ಅಭಿವೃದ್ಧಿಯ ವ್ಯಾಖ್ಯಾನ ಕೊಟ್ಟು ಜಾರಿಕೊಂಡಿದ್ದಾರೆ. ಮಥುರಾದ
ಕೃಷ್ಣ ಮಂದಿರದ ವಿವಾದಕ್ಕೆ ಬೆಂಕಿಹಚ್ಚಲು ಕಳೆದ ಕೆಲವು ತಿಂಗಳುಗಳಿಂದ ವಿಫಲ ಪ್ರಯತ್ನ ನಡೆಸಿ, ಜನಸ್ಪಂದನೆ ಸಿಗದೆ ಮತ್ತೆ ಹಿಂದೆ ಸರಿದಿದ್ದಾರೆ. ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಆದಿಯಾಗಿ ಹಲವು ನಾಯಕರು ತಮ್ಮ ಭಾಷಣಗಳಲ್ಲಿ ಕೋಮು ಕಿಚ್ಚೆಬ್ಬಿಸುವ ಮಾತುಗಳನ್ನಾಡುತ್ತಿದ್ದಾರೆ. ಎಂದಿನಂತೆ ಚುನಾವಣಾ ಆಯೋಗ ಆದೇಶಗಳನ್ನು ಪಾಲಿಸುವ ಮೂಕಪ್ರೇಕ್ಷಕ ಅಷ್ಟೇ.

“ಧರ್ಮ ಸಂಸತ್” ಎಂಬ ಕೋಮು ವಿಷಕೂಟದ ಸಭೆಗಳ ಭಾಷಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಭಾರತದ ಮಾನ ಹರಾಜಾಗಿದೆ. ತಮ್ಮ ಕೂಟದ ಷಡ್ಯಂತ್ರದ ವಿರುದ್ಧ ವ್ಯಾಪಕ ಜನಾಭಿಪ್ರಾಯ ರೂಪುಗೊಳ್ಳುತ್ತಿರುವುದನ್ನು ಮನಗಂಡ ಆರೆಸ್ಸೆಸ್ ಕೂಡ ಇದೀಗ ಖಂಡನಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ನ್ಯೂಸ್‌ಗಳ ಹೀನ ಪ್ರಚಾರಗಳು ಎಂದಿನಂತೆ ಸಾಗಿವೆ. ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ಹೆಸರಿನಲ್ಲಿ ಫೇಕ್ ಪೋಸ್ಟ್‌ಗಳನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿಬಿಡಲಾಗುತ್ತಿದೆ. “ಪಶ್ಚಿಮ ಉ.ಪ್ರ ಮತ್ತು ಪೂವಾಂಚಲದಲ್ಲಿ 2000 ಹೊಸ ಮಸೀದಿ ನಿರ್ಮಿಸಲಾಗುವುದು. ಬಾಬರಿ ಮಸೀದಿ ನಿರ್ಮಾಣಕ್ಕೆ 1000 ಕೋಟಿ ರೂಪಾಯಿ ಮುಂಜೂರು ಮಾಡಲಾಗುವುದು. ಅಯೋಧ್ಯೆಯ ಹೆಸರನ್ನು ಬದಲಿಸಲಾಗುವುದು. ದಲಿತರು ಮತ್ತು ಒಬಿಸಿಗಳ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗುವುದು” ಇತ್ಯಾದಿ ಇತ್ಯಾದಿ. ಈ ಹತಾಶ ಪ್ರಯತ್ನಗಳು, ಷಡ್ಯಂತ್ರಗಳು ಯಾವರೀತಿಯಲ್ಲಿ ಪರ್ಯಾವಸಾನಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಷ್ಟೆ.

ವಾಸ್ತವದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯ ಜನಪ್ರಿಯತೆಯ ಗ್ರಾಫ್ ಕುಸಿದಿದ್ದು ಮಾತ್ರವಲ್ಲದೆ, ಜನರ ವಿರೋಧ ಆರಂಭವಾಗಿ ಬಹಳ ದಿನಗಳೇ ಸಂದಿವೆ. ಕಳೆದ ಎಂಟು ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈ ಬಗ್ಗೆ ಸ್ಪಷ್ಟ ಸೂಚನೆ ಕೊಟ್ಟಿದ್ದವು.

ಸ್ಥಳೀಯ ಚುನಾವಣೆ ನೀಡಿದ್ದ ಮುನ್ಸೂಚನೆ

ಕಳೆದ ವರ್ಷ ಮೇ ತಿಂಗಳಲ್ಲಿ, ಅಂದರೆ ಕೇವಲ ಎಂಟು ತಿಂಗಳ ಹಿಂದೆ ನಡೆದಿದ್ದ ಪಂಚಾಯತ್ ಚುನಾವಣೆಗಳ ಫಲಿತಾಂಶ ಯೋಗಿ ನೇತೃತ್ವದ ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ (ಅದನ್ನು ಯೋಗಿಯ ದುರಹಂಕಾರ ಎಂದೂ ಕರೆಯಬಹುದು) ಸರಿಯಾದ ಪೆಟ್ಟು ಕೊಟ್ಟಿತ್ತು. ಅಲ್ಲಿನ ವ್ಯವಸ್ಥೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಪಕ್ಷದ ಚಿಹ್ನೆಯನ್ನು ಬಳಸುವಂತಿಲ್ಲ. ಇಂಥ ನಿಯಮವನ್ನು ಅಣಕಿಸುವಂತೆ ರಾಜ್ಯ ಬಿಜೆಪಿ ಮೊಟ್ಟಮೊದಲ ಬಾರಿಗೆ ಜಿಲ್ಲಾ ಪಂಚಾಯ್ತಿಗಳ 3050 ವಾರ್ಡ್‌ಳಿಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಸಿಎಂ ಯೋಗಿ, ರಾಜ್ಯ ಉಸ್ತುವಾರಿ ರಾಧಾಮೋಹನ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮೊದಲಾದವರು ಜನವರಿಯಿಂದಲೇ ರಂಗಕ್ಕಿಳಿದಿದ್ದರು. ವಿವಿಧ ಮಂತ್ರಿಗಳು ಮತ್ತು ಪದಾಧಿಕಾರಿಗಳ ನಾಯಕತ್ವದಲ್ಲಿ ಉಪಸಮಿತಿಗಳ ರಚನೆಯೂ ಆಗಿತ್ತು. ಇಷ್ಟೆಲ್ಲಾ ಆದರೂ ಫಲಿತಾಂಶ ಹೊರಬಿದ್ದ ದಿನ ಯೋಗಿ ಮತ್ತು ಬಿಜೆಪಿ ನಾಯಕರಿಗೆ ಭಾರೀ ಮುಖಭಂಗ ಕಾದಿತ್ತು. ಒಟ್ಟು 75 ಜಿಲ್ಲೆಗಳ 3050 ವಾರ್ಡ್‌ಗಳಲ್ಲಿ ಬಿಜೆಪಿಯೇ ಕ್ಲೇಮ್ ಮಾಡಿಕೊಂಡ ಪ್ರಕಾರ ಗೆದ್ದಿದ್ದು ಸುಮಾರು 900 ಸ್ಥಾನಗಳನ್ನು ಮಾತ್ರ. ಅಂದರೆ ಸುಮಾರು 30% ಗಿಂತಲೂ ಕಡಿಮೆ! ರಾಮಮಂದಿರ ನಿರ್ಮಾಣದ ಅಬ್ಬರದ ಪ್ರಚಾರದ ಹೊರತಾಗಿಯೂ ಅಯೋಧ್ಯೆಯಲ್ಲಿ ನೆಲಕಚ್ಚಿತ್ತು. ಅಷ್ಟೇ ಏಕೆ, ಮೋದಿಯ ಸ್ವಕ್ಷೇತ್ರ ವಾರಣಾಸಿಯಲ್ಲೂ ಬಿಜೆಪಿ ಮಣ್ಣುಮುಕ್ಕಿತ್ತು ಮತ್ತು ಎಸ್ಪಿ ಹೆಚ್ಚಿನ ಸ್ಥಾನ ಗಳಿಸಿ ಮುನ್ನಡೆ ಸಾಧಿಸಿತ್ತು.

ಇಂಥ ವೈಫಲ್ಯಗಳ ಹೊರತಾಗಿಯೂ ಅಕ್ರಮ ಹಾದಿಗಳನ್ನು ಬಳಸಿ ಅತಿ ಹೆಚ್ಚು ಅಧ್ಯಕ್ಷ ಗಾದಿಗಳನ್ನು ತೆಕ್ಕೆಗೆ ತೆಗೆದುಕೊಂಡಿದ್ದು ಈಗ ಇತಿಹಾಸ. ಇಂಥಾ ಅಕ್ರಮಗಳನ್ನೇ ಐತಿಹಾಸಿಕ ಗೆಲುವು, ಚಾಣಕ್ಯ ತಂತ್ರ ಮುಂತಾದಾಗಿ ಕರೆದು ಸಾಕುನಾಯಿ ಮೀಡಿಯಾಗಳು ಮಾಡುವ ಅಸಹ್ಯಕರ ಪ್ರಚಾರದ ವಿರುದ್ಧವಾಗಿ ವಾಸ್ತವ ಚಿತ್ರಣ ಬೇರೆಯೇ ಇತ್ತು. ಇನ್ನು ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ವಿರುದ್ಧದ ಫಲಿತಾಂಶ ಮತ್ತಷ್ಟು ನಿಚ್ಚಳವಾಗಿತ್ತು.

ಯೋಗಿ ಸರ್ಕಾರದ ಜನಪ್ರಿಯತೆ ಕುಸಿದಿದ್ದು ಬರಲಿರುವ ವಿಧಾನಸಭಾ ಚುನಾವಣೆಯ ಮೇಲೆ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಚುನಾವಣಾ ವಿಶ್ಲೇಷಕರು, ರಾಜಕೀಯ ಪಂಡಿತರು ಆಗಲೇ ಅಭಿಪ್ರಾಯಪಟ್ಟಿದ್ದರು. ಈಗ ಕಳೆದ ಒಂದು ವರ್ಷದಿಂದ ನಡೆದ ಯಶಸ್ವಿ ರೈತ ಚಳವಳಿ ಬಿಜೆಪಿಯ ಜನವಿರೋಧಿತನವನ್ನು ಬಯಲು ಮಾಡಿದ್ದು ಮಾತ್ರವಲ್ಲ, ಬಿಜೆಪಿ ವಿರೋಧಿ ಶಕ್ತಿಗಳಲ್ಲಿ ಹೊಸ ಹುರುಪನ್ನು ಕೂಡ ಹುಟ್ಟುಹಾಕಿದ್ದು ತಳಮಟ್ಟದಲ್ಲಿ ಬಿಜೆಪಿ ವಿರೋಧಿ ಶಕ್ತಿಗಳು ಧ್ರುವೀಕರಣಗೊಳ್ಳಲು ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.

ಹೀಗೆ ಪ್ರತಿಕೂಲಕರವಾಗಿರುವ ಸಾಮಾಜಿಕ, ರಾಜಕೀಯ ಸ್ಥಿತಿಗಳು ಒಂದೆಡೆಯಾದರೆ ಬಿಜೆಪಿಯೊಳಗೆ ಬಿಗಡಾಯಿಸಿರುವ ಆಂತರಿಕ ಭಿನ್ನಮತವನ್ನು ನಿಭಾಯಿಸುವುದು ಬಿಜೆಪಿ ಹೈಕಮಾಂಡ್‌ಗೆ ಮತ್ತೊಂದು ಕಠಿಣ ಸವಾಲು. ಈ ಬಿಕ್ಕಟ್ಟಿನ ಪ್ರಮುಖ ಸೂತ್ರಾಧಾರಿ ಹಾಗೂ ಪಾತ್ರಧಾರಿ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್! ಹೌದು, ಯೋಗಿ ಆದಿತ್ಯನಾಥ್ ಈಗ ಬಿಜೆಪಿಯ ಪಾಲಿಗೆ ನುಂಗಲಾರದ ಬಿಸಿತುಪ್ಪ.

ಸೆರಗಲ್ಲಿ ಕಟ್ಟಿಕೊಂಡ ಕೆಂಡ 2017ರ ವಿಧಾನಸಭಾ ಚುನಾವಣೆಗೆ ಮುಂಚೆ ಆಗ ಎಂಪಿಯಾಗಿದ್ದ ಕೇಶವ್ ಪ್ರಸಾದ್ ಮೌರ್ಯರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಏರಿಸಲಾಯಿತು. ಕೇಶವ್ ಮೌರ್ಯ ಇತರೆ ಹಿಂದುಳಿದ ಜಾತಿಯ (ಒಬಿಸಿ) ಹಿನ್ನೆಲೆಯಿದ್ದರೂ ಆರೆಸ್ಸೆಸ್ ಗರಡಿಯಲ್ಲಿ ಬೆಳೆದು ಹಿಂದುತ್ವದ ಹೆಸರಿನ ಸಿದ್ಧಾಂತವನ್ನು ಮೈಗೂಡಿಸಿಕೊಂಡವರು. ಮೌರ್ಯರನ್ನು ಮೇಲ್ದರ್ಜೆಗೇರಿಸಿ ಸಮಾಜವಾದಿ ಪಕ್ಷದಲ್ಲಿ ಯಾದವ್ ಜಾತಿಯ ಪ್ರಾಬಲ್ಯದಿಂದ ಅಸಮಾಧಾನಗೊಂಡಿದ್ದ ಯಾದವೇತರ ಒಬಿಸಿಗಳನ್ನು ಸೆಳೆಯುವುದು ಆರೆಸ್ಸೆಸ್-ಬಿಜೆಪಿಯ ಸೋಕಾಲ್ಡ್ ಚಾಣಕ್ಯ ತಂತ್ರವಾಗಿತ್ತು.

ಕೇಶವಪ್ರಸಾದ್ ಮೌರ್ಯ

ಮೌರ್ಯ, ಮೊರಾವ್, ಕುಶ್ವಾಹ, ಸಾಖ್ಯ, ಕೋರಿ, ಕಚ್ಚಿ, ಸೈನಿ ಮುಂತಾದ ಹೆಸರುಗಳಲ್ಲಿ ಕರೆಯಲಾಗುವ ಈ ಜಾತಿಗಳು ರಾಜ್ಯದಾದ್ಯಂತ ಹರಡಿದ್ದು ಒಬಿಸಿಗಳಲ್ಲಿ ಸುಮಾರು ಶೇ.8.5% ಜನಸಂಖ್ಯೆ ಹೊಂದಿದೆ. ನೂರಾರು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತವೆ. ಹೀಗೆ ಕೇಶವ್ ಮೌರ್ಯರ ನೇತೃತ್ವದಲ್ಲೇ ಚುನಾವಣೆ ಎದುರಿಸಿದ್ದರಿಂದ ಸಹಜವಾಗಿಯೇ ಅವರು ಮುಖ್ಯಮಂತ್ರಿ ಹುದ್ದೆಯ ದಾವೇದಾರನಾಗಿದ್ದರು.

ಚುನಾವಣೆಯಲ್ಲಿ ಪ್ರಚಂಡ ಬಹುಮತ ಬಂದ ನಂತರ ಕೇಶವ್ ಮೌರ್ಯರನ್ನು ಮೂಲೆಗೆ ಸರಿಸಿ ಚುನಾವಣೆಯ ಸೀನ್‌ನಲ್ಲೇ ಇಲ್ಲದಿದ್ದ ಅಜಯ್ ಬಿಷ್ಠ್ ಅಲಿಯಾಸ್ ಯೋಗಿ ಆದಿತ್ಯನಾಥ್ ಎಂಬ ಕ್ಷತ್ರಿಯ ಠಾಕೂರ್ ಜಾತಿ ಹಿನ್ನೆಲೆಯ ಸನ್ಯಾಸಿಯನ್ನು ದಿಢೀರನೆ ಸಿಎಂ ಪಟ್ಟಕ್ಕೆ ತಂದು ಪ್ರತಿಷ್ಠಾಪಿಸಲಾಯ್ತು. ಆಗ ಅವರು ಗೋರಕ್‌ಪುರ ಕ್ಷೇತ್ರದ ಸಂಸದ ಮತ್ತು ಅಲ್ಲಿನ ಮಠದ ಮುಖ್ಯಸ್ಥರಾಗಿದ್ದರು. “ಚಾಣಕ್ಯ ತಂತ್ರ” ಎಂದು ಬಣ್ಣಿಸಲಾದ ಈ ನಡೆ ಹಿಂದುತ್ವ, ಹಿಂದುರಾಷ್ಟ್ರದ ದೇಶವ್ಯಾಪಿ ನರೇಟಿವ್‌ಗೆ ಪೂರಕವಾದದ್ದು ಎಂದು ಬಣ್ಣಿಸಿ ಹಲವು ರಾಜಕೀಯ ಪಂಡಿತರೇ ಹೌಹಾರಿದ್ದರು. ಬಲಿಷ್ಠ ಜಾತಿಯಾದ ಠಾಕೂರ್‌ಗಳ ಸಂಬಂಧವನ್ನು ಗಟ್ಟಿಗೊಳಿಸಿಕೊಂಡರೆ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಆದ ಬ್ರಾಹ್ಮಣ, ಬನಿಯಾಗಳ ಜೊತೆಗೆ ಠಾಕೂರ್‌ಗಳೂ ಕೂಡಿ ಬಲಾಢ್ಯ ಜಾತಿಗಳ ಅಬೇಧ್ಯ ಸಂಯೋಜನೆಯನ್ನು ರಚಿಸುವ ಲೆಕ್ಕಾಚಾರ ಇದು. ಜೊತೆಗೆ ಹೇಗೂ ಅಸಂಘಟಿತರಾಗಿರುವ ಒಬಿಸಿ ಮತ್ತು ದಲಿತರನ್ನು ಯಾಮಾರಿಸಿಯೋ ಅಥವಾ ಮತಗಳನ್ನು ವಿಭಜಿಸಿಯೋ ಒಂದಷ್ಟು ಮತಗಳನ್ನು ಸೆಳೆದುಕೊಂಡರೆ ಶಾಶ್ವತವಾಗಿ ಗದ್ದುಗೆಯನ್ನು ಆಕ್ರಮಿಸುವ ದೀರ್ಘಕಾಲೀನ ಯೋಜನೆಯ ಭಾಗವೇ ಈ ಸೋಕಾಲ್ಡ್ “ಮಾಸ್ಟರ್ ಸ್ಟ್ರೋಕ್”!

ಆದರೆ ಬಿಜೆಪಿಯ ಪಾಲಿನ ಅಸಲಿ ಕುಸಿತ ಶುರುವಾಗಿದ್ದೇ ಅಲ್ಲಿಂದಾಚೆಗೆ. ಅಜಯ್ ಬಿಷ್ಠ್ ಅಲಿಯಾಸ್ ಯೋಗಿ ಆದಿತ್ಯನಾಥ್ ಯಾರ ಅಂಕೆಗೂ ಸಿಗದ, ಯಾರನ್ನೂ ಲೆಕ್ಕಿಸದ (ವಾಸ್ತವದಲ್ಲಿ ಪ್ರಧಾನಿ ಮೋದಿಯನ್ನೂ) ಬಹಿರಂಗವಾಗಿಯೇ ದುರಹಂಕಾರ ಪ್ರದರ್ಶಿಸುವ, ತನ್ನನ್ನು ಪ್ರಶ್ನಿಸಿದವರ, ವಿರೋಧಿಸಿದವರ ಮೇಲೆ ಹಗೆತನ ಸಾಧಿಸುವ ಸ್ವಭಾವದ ಅತ್ಯಂತ ಹಠಮಾರಿ ವ್ಯಕ್ತಿ ಎಂಬುದು ಅವರನ್ನು, ಅವರ ಈ ಐದು ವರ್ಷಗಳ ಆಡಳಿತವನ್ನು ಹತ್ತಿರದಿಂದ ಗಮನಿಸಿದವರ ಅಭಿಪ್ರಾಯ. ಈ ಸಮಸ್ಯೆ ಈಗ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಈತನನ್ನು ತಹಬಂಧಿಗೆ ತರಲು ಕೇಂದ್ರ ನಾಯಕತ್ವ ತರಹೇವಾರಿ ತಂತ್ರ ಹೂಡುತ್ತಿರುವಂತೆ ಕಾಣುತ್ತಿದೆ. ಈತನಿಂದ ಬಿಜೆಪಿಯ ಹಿಂದೂ ಇಮೇಜ್ ಪ್ರಚಾರಕ್ಕೆ ಒಂದಷ್ಟು ಪ್ರಯೋಜನವಾಗಿರಬಹುದೇ ಹೊರತು ಆಂತರಿಕವಾಗಿ ಬಿಜೆಪಿ ಪಕ್ಷಕ್ಕೂ ಮತ್ತು ಉತ್ತರಪ್ರದೇಶದ ಬಿಜೆಪಿ ರಾಜಕಾರಣಕ್ಕೂ ಸಾಕಷ್ಟು ಡ್ಯಾಮೇಜ್ ಮಾಡಿರುವುದು ಈಗೀಗ ಬೆಳಕಿಗೆ ಬರುತ್ತಿದೆ.


ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಅಯೋಧ್ಯೆಯಲ್ಲಿ ಹೆಚ್ಚು ವಿರೋಧವಿದೆ: ರಾಮ ಮಂದಿರದ ಪ್ರಧಾನ ಅರ್ಚಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...