Homeಮುಖಪುಟಮಾಜಿ ಶಾಸಕ ಮುಖ್ತಾರ್ ಅನ್ಸಾರಿಯ ವ್ಯವಸ್ಥಿತ ಕೊಲೆ? ಕುಟುಂಬಸ್ಥರ ಆರೋಪಗಳೇನು?

ಮಾಜಿ ಶಾಸಕ ಮುಖ್ತಾರ್ ಅನ್ಸಾರಿಯ ವ್ಯವಸ್ಥಿತ ಕೊಲೆ? ಕುಟುಂಬಸ್ಥರ ಆರೋಪಗಳೇನು?

- Advertisement -
- Advertisement -

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಬಂದಾ ನ್ಯಾಯಾಲಯವು ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ (ಸಿಜೆಎಂ) ಗೆ ನಿರ್ದೇಶನ ನೀಡಿದೆ. ಈ ಮಧ್ಯೆ ಅನ್ಸಾರಿ ಕುಟುಂಬವು ಇದು ಹೃದಯಾಘಾತದ ನಿಧನವಲ್ಲ ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ಆರೋಪಿಸಿದೆ.

ಉತ್ತರ ಪ್ರದೇಶದ ಬಂದಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ನಿನ್ನೆ ರಾತ್ರಿ ಹೃದಯಾಘಾತದಿಂದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ನಿಧನರಾಗಿದ್ದಾರೆ ಎಂದು ಹೇಳಲಾಗಿತ್ತು. 63 ವರ್ಷದ ಅನ್ಸಾರಿ ಅವರನ್ನು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಜಿಲ್ಲಾ ಕಾರಾಗೃಹದಿಂದ ಬಂದಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಗುರುವಾರ ಸಂಜೆ ತರಲಾಗಿತ್ತು. ಅನಂತರ ಅವರು ಅಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಈ ವರ್ಷ ಮಾರ್ಚ್ 13ರಂದು ವಾರಣಾಸಿಯ ವಿಶೇಷ ನ್ಯಾಯಾಲಯವು ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಅಪಹರಣ ಪ್ರಕರಣ, ಉತ್ತರ ಪ್ರದೇಶ ದರೋಡೆಕೋರರ ಕಾಯಿದೆಯಡಿಯಲ್ಲಿನ 1999ರ ಪ್ರಕರಣ, 1991ರ ಅವಧೇಶ್ ರೈ ಹತ್ಯೆ ಪ್ರಕರಣ ಮತ್ತು 2003ರಲ್ಲಿ ಜೈಲರ್‌ಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಪ್ರಕರಣ ಸೇರಿದಂತೆ ಹಲವಾರು ಇತರ ಪ್ರಕರಣಗಳಲ್ಲಿ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್‌ ಹೇಳಿತ್ತು.

ಮಾರ್ಚ್ 21ರಂದು, ಅನ್ಸಾರಿ ಅವರು ಬಂದಾದಲ್ಲಿ ಜೈಲು ಅಧಿಕಾರಿಗಳು ನನಗೆ ವಿಷ ನೀಡುತ್ತಾರೆ ಎಂದು ಆರೋಪಿಸಿ ಮೌದಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿದ್ದರು.

ಮುಖ್ತಾರ್ ಅನ್ಸಾರಿ ಪತ್ರ:

ಮುಖ್ತಾರ್ ಅನ್ಸಾರಿಗೆ ಸ್ಲೋ ಪಾಯ್ಸನ್ ನೀಡಲಾಗಿದೆ: ಸಹೋದರನಿಂದ ಆರೋಪ

ಉತ್ತರ ಪ್ರದೇಶದ ಬಂದಾ ಆಸ್ಪತ್ರೆಯಲ್ಲಿ ಮೃತ ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲೇ  ಸ್ಲೋ ಪಾಯ್ಸನ್ ನೀಡಲಾಗಿದೆ ಎಂದು ಅವರ ಸಹೋದರ ಆರೋಪಿಸಿದ್ದಾರೆ.

ಅನ್ಸಾರಿಯವರ ಸಹೋದರ ಮತ್ತು ಗಾಝಿಪುರದ ಸಂಸದ ಅಫ್ಜಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮುಖ್ತಾರ್‌ ಅನ್ಸಾರಿಗೆ ಜೈಲಿನಲ್ಲಿ ವಿಷ ಬೆರೆಸಿ ಆಹಾರವನ್ನು ನೀಡಲಾಗಿದೆ. ಇದು ಎರಡನೇ ಬಾರಿಗೆ ಸಂಭವಿಸಿದೆ. ಸುಮಾರು 40 ದಿನಗಳ ಹಿಂದೆ ಅವರಿಗೆ ವಿಷವನ್ನು ನೀಡಲಾಗಿತ್ತು. ಇತ್ತೀಚೆಗೆ ಮಾರ್ಚ್ 19ರಂದು ಮತ್ತು ಮಾರ್ಚ್ 22ರಂದು ಅವರಿಗೆ ಮತ್ತೆ ವಿಷ ಆಹಾರವನ್ನು ನೀಡಲಾಗಿದೆ. ಇದರಿಂದ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಜೈಲು ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆದರೆ ಅವರ ಕುಟುಂಬದ ಇತರ ಸದಸ್ಯರು ಕೂಡ “ಸ್ಲೋ ಪಾಯ್ಸನ್‌’ ಹಾಕಿರುವ ಕುರಿತು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಮುಖ್ತಾರ್ ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಮಾತನಾಡಿದ್ದು, ನನಗೆ ತಂದೆಯ ಸಾವಿನ ಬಗ್ಗೆ ಯಾರೂ ಮಾಹಿತಿ ನೀಡಿರಲಿಲ್ಲ, ಮಾಧ್ಯಮಗಳ ಮೂಲಕ ನಾನು ಈ ಬಗ್ಗೆ ತಿಳಿದಿದ್ದೇನೆ. ಆದರೆ ಈಗ ಇಡೀ ದೇಶಕ್ಕೆ ಎಲ್ಲವೂ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೇನೆ, ಆದರೆ ಅವಕಾಶ ಕೊಟ್ಟಿಲ್ಲ. ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ಈ ಹಿಂದೆಯೂ ಹೇಳಿದ್ದೆವು, ಇಂದೂ ಕೂಡ ಅದನ್ನೇ ಹೇಳುತ್ತೇವೆ. ಮಾರ್ಚ್ 19ರಂದು ರಾತ್ರಿ ಊಟದಲ್ಲಿ ವಿಷ ನೀಡಲಾಗಿದೆ. ನಾವು ನ್ಯಾಯಾಲಯಕ್ಕೆ ತೆರಳುತ್ತೇವೆ, ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಹೃದಯಸ್ತಂಭನದಿಂದ ಸಾವು?

ಮುಖ್ತಾರ್ ಅನ್ಸಾರಿ ಮೃತಪಟ್ಟಿರುವುದು ಹೃದಯಸ್ತಂಭನದಿಂದಲೇ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಖಚಿತವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಐವರು ವೈದ್ಯರ ತಂಡ ಶವಪರೀಕ್ಷೆಯಲ್ಲಿ ಪಾಲ್ಗೊಂಡಿತ್ತು. ಮುಖ್ತಾರ್ ಅನ್ಸಾರಿ ಕಿರಿಯ ಮಗ ಉಮರ್‌ ಅನ್ಸಾರಿ ಸಹ ಈ ವೇಳೆ ಹಾಜರಿದ್ದರು ಎಂದು ವೈದ್ಯರೋರ್ವರು ತಿಳಿಸಿದ್ದಾರೆ.

ಮುಖ್ತಾರ್ ಅನ್ಸಾರಿ ಯಾರು?

ಮುಖ್ತಾರ್‌ ಅನ್ಸಾರಿ ಅವರು ಉತ್ತರ ಪ್ರದೇಶದ ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಬಹುಜನ ಸಮಾಜ ಪಕ್ಷದಿಂದ ಚುನಾಯಿತರಾಗಿದ್ದರು. ಅವರ ಹುಟ್ಟೂರಾದ ಗಾಜಿಪುರದಲ್ಲಿ ಅವರು ಬಲವಾದ ಪ್ರಭಾವವನ್ನು ಹೊಂದಿದ್ದರು. ಅವರು 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದಾರೆ. ಅನ್ಸಾರಿ ಅವರ ವಿರುದ್ಧ 60 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ.

ಉತ್ತರ ಪ್ರದೇಶದ ನ್ಯಾಯಾಲಯ ಅವರಿಗೆ ಸೆಪ್ಟೆಂಬರ್ 2022ರಿಂದ ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು ಮತ್ತು ಅನ್ಸಾರಿಯನ್ನು ಬಂದಾ ಜೈಲಿನಲ್ಲಿ ಇರಿಸಲಾಗಿತ್ತು. 2023ರಲ್ಲಿ, ಎಂಪಿ ಎಂಎಲ್ಎ ನ್ಯಾಯಾಲಯವು ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಹತ್ಯೆಗೆ ಅನ್ಸಾರಿ ತಪ್ಪಿತಸ್ಥರೆಂದು ಘೋಷಿಸಿತ್ತು. ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 1990ರಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣದಲ್ಲಿ ಮಾರ್ಚ್ 13, 2024ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇದನ್ನು ಓದಿ: ‘ಪ್ರತಿಪಕ್ಷಗಳನ್ನು ಆರ್ಥಿಕವಾಗಿ ಕತ್ತು ಹಿಸುಕಲು ಮೋದಿ ಸರ್ಕಾರ ಬಯಸಿದೆ..’; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...