Homeಮುಖಪುಟವಿರೋಧಿಗಳ ವಾಗ್ದಾಳಿಗೆ ಹೆದರುವುದಿಲ್ಲ: ರೂಪದರ್ಶಿ, ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್

ವಿರೋಧಿಗಳ ವಾಗ್ದಾಳಿಗೆ ಹೆದರುವುದಿಲ್ಲ: ರೂಪದರ್ಶಿ, ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್

- Advertisement -
- Advertisement -

ಉತ್ತರ ಪ್ರದೇಶದ ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಟಿ ಮತ್ತು ರೂಪದರ್ಶಿ ಅರ್ಚನಾ ಗೌತಮ್ ಅವರ ಹಳೆಯ ಬಿಕಿನಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರ ಜೊತೆಗೆ ಪ್ರತಿಸ್ಪರ್ಧಿ ಬಿಜೆಪಿ ಕೂಡ ಅವರ ಆಯ್ಕೆಯನ್ನು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅರ್ಚನಾ ಅವರು ಈ ದಾಳಿಯಿಂದ ನಾನು ಭಯಪಟ್ಟಿಲ್ಲ, ಮುಂದುವರೆಯುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಧೈರ್ಯದ ಮಾತುಗಳಿಂದ ಮತ್ತಷ್ಟು ಧೈರ್ಯಶಾಲಿಯಾಗಿ ಮುಂದುವರೆಯಲಿದ್ದೇನೆ ಎಂದಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ 26 ವರ್ಷದ ನಟಿ, ರೂಪದರ್ಶಿ, ಮಿಸ್ ಬಿಕಿನಿ ಇಂಡಿಯಾ 2018 ಮತ್ತು ಮಿಸ್ ಯುಪಿ 2014 ಕೀರಿಟವನ್ನು ಮುಡಿಗೆರಿಸಿಕೊಂಡಿದ್ದಾರೆ. ಇವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಇವರ ಹಳೆಯ ಬಿಕಿನಿ ಪೋಟೋಗಳು ವೈರಲ್ ಆಗಿವೆ. ಬಿಜೆಪಿ ಮತ್ತು ಹಿಂದೂ ಮಹಾಸಭಾದಂತಹ ಗುಂಪುಗಳು ಆಕೆಯ ಚಿತ್ರಗಳನ್ನು ಬೊಟ್ಟು ಮಾಡಿ ಅವಹೇಳನಕಾರಿ ಕಾಮೆಂಟ್ ಮಾಡಿವೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್

ಕಳೆದ ವರ್ಷ ನವೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರಿರುವ ಅರ್ಚನಾ, “ನಾನು ಪ್ರಿಯಾಂಕಾ ದೀದಿಯೊಂದಿಗೆ ಮಾತನಾಡಿದಾಗ, ಅವರು ನನಗೆ ಹೇಳಿದರು, ಅರ್ಚನಾ, ನೀವು ಈ ಜಗತ್ತಿಗೆ ಕಾಲಿಡುತ್ತಿದ್ದೀರಿ ಆದರೆ ಅರೆಮನಸ್ಸಿನಿಂದ ಬರಬೇಡಿ, ನಿಮ್ಮ ಚಿತ್ರಗಳು ಮತ್ತು ವೀಡಿಯೊಗಳಿಂದ ನಿಮ್ಮನ್ನು ಟ್ರೋಲ್ ಮಾಡಲಾಗುತ್ತದೆ. ಆದರೆ ನೀವು ಭಯಪಡಬೇಕಾಗಿಲ್ಲ, ನೀವು ಧೈರ್ಯವಾಗಿರಬೇಕು ಎಂದಿದ್ದರು. ಹೀಗಾಗಿ ಪ್ರಿಯಾಂಕಾ ದೀದಿಯ ಮಾತುಗಳಿಂದ ನಾನು ಮೊದಲಿನಿಂದಲೇ ಧೈರ್ಯಶಾಲಿಯಾಗಿದ್ದೇನೆ. ನಾನು ಮುಂದೆ ಸಾಗುತ್ತೇನೆ” ಎಂದಿದ್ದಾರೆ.

“ನನ್ನ ಬಗ್ಗೆ ನಿಂದನೆ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುವ ಜನರಿಗೆ ನಾನು ಹೇಳುವುದೇನಂದರೆ, ನಾನು ಎರಡು ವೃತ್ತಿಪರ ಜೀವನವನ್ನು ಹೊಂದಿದ್ದೇನೆ. ಎರಡು ಪರಸ್ಪರ ಭಿನ್ನವಾಗಿವೆ. ನಾನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೇನೆ. ಈ ಎರಡನ್ನೂ ಬೆರೆಸಬಾರದು ಎಂದು ನಾನು ಬಯಸುತ್ತೇನೆ” ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹಸ್ತಿನಾಪುರದಲ್ಲಿ ದ್ರೌಪದಿ ಕಥನವನ್ನು ಪುನಃ ಬರೆಯುವುದಾಗಿ ಹೇಳಿರುವ ಅವರು, “ನಾನು ಈ ನಗರದಲ್ಲಿ ಹುಟ್ಟಿ ಬೆಳೆದಿರುವ ಕಾರಣ ಇಲ್ಲಿ ಬದಲಾವಣೆಯನ್ನು ತರಬಲ್ಲೆ ಎಂದು ನನಗೆ ವಿಶ್ವಾಸವಿದೆ. ನಾನು ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂಬೈನಿಂದ ಹಾರಿ ಬಂದವಳಲ್ಲ. ನನಗೆ ಇಲ್ಲೇ ಮನೆ ಇದೆ. ನಾನು ಇಲ್ಲೇ ವಿದ್ಯಾಭ್ಯಾಸ ಮಾಡಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ-2022: ಗೋರಖ್‌ಪುರದಿಂದ ಆದಿತ್ಯನಾಥ್‌‌ ಸ್ಪರ್ಧೆ

ಅರ್ಚನಾ ಗೌತಮ್ ಅವರ ಆಯ್ಕೆಯು ಕಾಂಗ್ರೆಸ್‌ಗೆ ಅಭ್ಯರ್ಥಿಗಳಿಲ್ಲ ಎಂದು ತೋರಿಸುತ್ತದೆ. ಕೀಳು ಮಟ್ಟದ ಪ್ರಚಾರಕ್ಕಾಗಿ ಯಾರನ್ನಾದರೂ ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಸಂತ ಮಹಾಸಭಾ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ, “ಮಾನಸಿಕವಾಗಿ ದಿವಾಳಿಯಾಗಿರುವ ಪಕ್ಷದಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.

ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಯುವತಿಯ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದೆ. “ಬೇರೆ ಮಹಿಳೆಯಂತೆ ಅವರು ನಮ್ಮ ಗೌರವಕ್ಕೆ ಅರ್ಹರು. ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರು ತಮ್ಮ ಮಹಿಳಾ ವಿರೋಧಿ ನಿಲುವನ್ನು ಮಾತ್ರ ಪ್ರದರ್ಶಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ನವದೆಹಲಿಯಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿ: ಯುಪಿ ಚುನಾವಣೆ: ಹೋರಾಟಗಾರರು, ಸಂತ್ರಸ್ತರು ಸೇರಿ 40% ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...