ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂವರು ಯುವಕರು ಮುಸ್ಲಿಂ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿಂದ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಭಾನುವಾರ (ಸೆ. 20) ಈ ಹಲ್ಲೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹೋಟೆಲ್ ಮಾಲೀಕ ರಿಜ್ವಾನ್ ಅವರು ಮಾಂಸದೊಂದಿಗೆ ತಮ್ಮ ಅಂಗಡಿಗೆ ವಾಪಸ್ ಬರುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಜ್ವಾನ್ ಅವರು ಗೋಮಾಂಸ ಸಾಗಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೊದಲು, ಆ ಯುವಕರು ಸಾರ್ವಜನಿಕವಾಗಿ ಬೆಲ್ಟ್‌ಗಳಿಂದ ಥಳಿಸಿ ಹಲ್ಲೆ ನಡೆಸಿದ್ದಾರೆ.
ವೀಡಿಯೊದಲ್ಲಿ ರಿಜ್ವಾನ್ ಅವರನ್ನು ಹಿಡಿದು, ತಳ್ಳಿ, ನೆಲಕ್ಕೆ ಬೀಳಿಸುವುದನ್ನು ಕಾಣಬಹುದು. ಕೇಸರಿ ಪೇಟ ಧರಿಸಿದ್ದ ಗುಂಪಿನ ವ್ಯಕ್ತಿಯೊಬ್ಬ ಆತನಿಗೆ ಪದೇ ಪದೇ ಒದೆಯುತ್ತಿರುವುದು ಕಂಡುಬಂದಿದೆ. ಅವರಿಗೆ ತಲೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದ ನಂತರ ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರಿಜ್ವಾನ್ ಅವರ ದೂರು ದಾಖಲಿಸಿಕೊಂಡ ಬಳಿಕ ಪೊಲೀಸರು ರಾಣಾ ಯಾದವ್, ಶಾನು ಮತ್ತು ಸೂರಜ್ ಎಂದು ಗುರುತಿಸಲಾದ ಮೂವರು ಯುವಕರ ವಿರುದ್ಧ ಹಲ್ಲೆ, ಜೀವ ಬೆದರಿಕೆ ಹಾಗೂ “ಅಕ್ರಮ” ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಶಾಂತಿಭಂಗಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ, ಕ್ರಿಮಿನಲ್ ಬೆದರಿಕೆ, ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು ಮತ್ತು ಮೃತ್ಯುವಿಗೆ ಕಾರಣವಾಗುವ ಹತ್ಯೆಯ ಯತ್ನದ ಆರೋಪಗಳ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಶುವೈದ್ಯಾಧಿಕಾರಿಯ ಪರೀಕ್ಷಾ ವರದಿ ಬಾಕಿ ಉಳಿದಿದ್ದು, ಮಾಂಸದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಕಸಾಯಿ ಮೊಹಲ್ಲಾದ ನಿವಾಸಿ ರಿಜ್ವಾನ್ ಅವರು ಪ್ರತಿ ಭಾನುವಾರ ಮತ್ತು ಗುರುವಾರ ಬಡಾ ಮಸೀದಿ ಹತ್ತಿರದ ಮೊಹನಾದಲ್ಲಿ ಬಿರಿಯಾನಿ ಅಂಗಡಿ ನಡೆಸುತ್ತಿದ್ದರು.
ಹಲ್ಲೆಯ ವೀಡಿಯೊಗೆ ಪ್ರತಿಕ್ರಿಯಿಸಿರುವ ಲಕ್ನೋ ಪೊಲೀಸರು, ಇಟೌಂಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಂಸವನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. “ಘಟನಾ ಸ್ಥಳದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


