ಉತ್ತರಾಖಂಡ ಬಿಜೆಪಿಯ ಉಚ್ಛಾಟಿತ ನಾಯಕ ಮತ್ತು ರಾಜ್ಯ ಸಂಪುಟದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹರಕ್ ಸಿಂಗ್ ಅವರನ್ನು ರಾಜ್ಯ ಸಂಪುಟದಿಂದ ಇತ್ತೀಚೆಗೆ ವಜಾಗೊಳಿಸಿ, ಆರು ವರ್ಷಗಳ ಕಾಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿತ್ತು.
ಕಾಂಗ್ರೆಸ್ ಸೇರಿದ ಹರಕ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಮಾರ್ಚ್ 10 ರಂದು ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಗೆದ್ದಾಗ ಅದು ನನ್ನ ಕ್ಷಮೆಯಾಚನೆಯಾಗಿದೆ. ಬಿಜೆಪಿ ನನ್ನನ್ನು ಬಳಸಿ ಎಸೆಯುವ ವಸ್ತು ಎಂದು ಭಾವಿಸಿದ್ದು, ಇದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ನಾನು ಭರವಸೆ ನೀಡಿದಂತೆ, ಕೊನೆಯ ಕ್ಷಣದವರೆಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ನನ್ನ ಸ್ನೇಹವನ್ನು ಮುರಿದಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕೆಲವೇ ತಿಂಗಳಲ್ಲಿ ಉತ್ತರಾಖಂಡ ಚುನಾವಣೆ: ಶಂಕರಾಚಾರ್ಯ ಪ್ರತಿಮೆ ಉದ್ಘಾಟಿಸಿ ರಾಮಮಂದಿರದ ಬಗ್ಗೆ ಉಲ್ಲೇಖಿಸಿದ ಮೋದಿ
ಕಾಂಗ್ರೆಸ್‌ಗೆ 10 ಸ್ಥಾನಗಳನ್ನು ಭರವಸೆ
ಹರಕ್ ಸಿಂಗ್ ಅವರು ಬುಧವಾರದಂದು ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದರು. ತಮ್ಮ ಪ್ರಭಾವವನ್ನು ಬಳಸಿಕೊಂಡು ಪಕ್ಷದ ಬುಟ್ಟಿಗೆ ಕನಿಷ್ಠ ಹತ್ತು ಸ್ಥಾನಗಳನ್ನು ಹಾಕುವುದಾಗಿ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಭರವಸೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆದಾಗ್ಯೂ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಂದು ವಿಭಾಗವು ಗುರುವಾರ ಅವರ ಮರು ಸೇರ್ಪಡೆಯನ್ನು ವಿರೋಧಿಸಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್‌ನ ಹರೀಶ್ ರಾವತ್ ಸರ್ಕಾರದ ವಿರುದ್ಧ ಬಂಡಾಯ
2016ರಲ್ಲಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಂಡಾಯ ಎದ್ದಿದ್ದ ಹರಕ್ ಸಿಂಗ್ ಸರ್ಕಾರವನ್ನು ಅಲ್ಪಮತಕ್ಕೆ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಸರ್ಕಾರದ ವಿರುದ್ಧವೆ ಬಂಡಾಯವೆದ್ದಿದ್ದ ಅವರು ಬಿಜೆಪಿ ಸೇರಿದ್ದರು.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಇತ್ತೀಚೆಗೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಆದರೆ ಹರಕ್ ಸಿಂಗ್ ಈ ಆರೋಪವನ್ನು ನಿರಾಕರಿಸಿದ್ದಾರೆ.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.